ಮಲಯಾಳಂಗೆ ಸಿಕ್ಕದ ಕನ್ನಡದ ಲಕ್ಕಿ ಸ್ಟಾರ್ ರಮ್ಯಾ
ಸೂಪರ್ ಸ್ಟಾರ್ ಮಮ್ಮುಟ್ಟಿ ನಾಯಕರಾಗಿರುವ 'ತಪ್ಪನ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಮಾಡಲು ಕನ್ನಡದ ಲಕ್ಕಿ ಸ್ಟಾರ್ ರಮ್ಯಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ರಮ್ಯಾರ ಸಂಭಾವನೆ ಹಾಗೂ ಬೇಡಿಕೆಪಟ್ಟಿ ಕೇಳಿ ಮಲಯಾಳಂ ನಿರ್ಮಾಪಕರು ಮೂರ್ಛೆ ಹೋಗುವುದೊಂದೇ ಬಾಕಿ ಎನ್ನಲಾಗಿದೆ. ಆ ಜಾಗಕ್ಕೀಗ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದ ನಾಯಕಿ ಚಾರ್ಮಿ ಬಂದಿದ್ದಾರೆ.
"ನಾವು ಆರಂಭದಲ್ಲಿ ಈ ಪಾತ್ರವನ್ನು ಮಾಡಲು ರಮ್ಯಾ ಸೂಕ್ತ ಎಂದುಕೊಂಡಿದ್ದೆವು. ಆದರೆ ಅವರ ಸಂಭಾವನೆ ತುಂಬಾ ಜಾಸ್ತಿ. ಜತೆಗೆ ಇನ್ನಷ್ಟು ಬೇಡಿಕೆಗಳನ್ನು ಕೂಡ ಮುಂದಿಟ್ಟರು. ಅದು ನಮ್ಮ ಬಜೆಟ್‌ಗೆ ಹೊಂದುವುದಿಲ್ಲ. ಮಲಯಾಳಂ ಚಿತ್ರರಂಗ ನಿಭಾಯಿಸಲು ಸಾಧ್ಯವಿರದಷ್ಟು ಬೇಡಿಕೆಗಳ ಪಟ್ಟಿ ರಮ್ಯಾರಿಂದ ಬಂತು. ಅಷ್ಟಕ್ಕೂ ನಮ್ಮ ತಪ್ಪನ್ ಚಿತ್ರ ನಾಯಕ ಪ್ರಧಾನವಾಗಿರುವುದರಿಂದ ಅಷ್ಟೊಂದು ದುಬಾರಿ ನಟಿಯ ಅಗತ್ಯವಿಲ್ಲ" ಎಂದು ಚಿತ್ರದ ನಿರ್ಮಾಪಕ ಮಿಲನ್ ಜಲೀಲ್ ಹೇಳಿದ್ದಾರೆ.
ರಮ್ಯಾ ಸಿಗದಿದ್ದಾಗ ಆ ನಿರ್ಮಾಪಕರು ಸಮೀರಾ ರೆಡ್ಡಿಯನ್ನೂ ಸಂಪರ್ಕಿಸಿದ್ದರಂತೆ. "ಆಕೆಯದ್ದೂ ಅದೇ ಸಮಸ್ಯೆ. ಸಂಭಾವನೆ ಸಿಕ್ಕಾಪಟ್ಟೆ ಜೊತೆಗೆ ಡೇಟ್ಸ್ ಸಮಸ್ಯೆ. ಆದರೆ ಸಮೀರಾ ಬೇಡಿಕೆಗಳ ಪಟ್ಟಿಯನ್ನು ಮುಂದಿಡಲಿಲ್ಲ. ಹಾಗಾಗಿ ಚಾರ್ಮಿಯನ್ನು ಹಾಕಿಕೊಂಡಿದ್ದೇವೆ. ನಮಗೆ 30 ಪ್ಲಸ್ ನಟಿಯೇ ಬೇಕಿತ್ತು. ಈ ಚಿತ್ರದ ಪಾತ್ರಕ್ಕೆ ಹೊಂದುವ ನಾಯಕಿ ಸದ್ಯ ಮಲಯಾಳಂನಲ್ಲಿ ಇಲ್ಲ, ಹಾಗಾಗಿ ಬೇರೆ ಚಿತ್ರರಂಗಗಳತ್ತ ಹೊರಟಿದ್ದೇವೆ" ಎಂದಿದ್ದಾರೆ.
ತಪ್ಪನ್ ಚಿತ್ರ ನಿರ್ದೇಶಿಸುತ್ತಿರುವುದು ಸಿಐಡಿ ಮೂಸಾ, ಸೈಕಲ್, ಮಾಸ್ಟರ್ಸ್ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದ ಜಾನಿ ಆಂಟನಿ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಜತೆ ಇವರದ್ದು ಇದು ಎರಡನೇ ಚಿತ್ರ. ಎರಡು ವರ್ಷಗಳ ಹಿಂದಷ್ಟೇ 'ಈ ಪಟ್ಟಣತ್ತಿ ಭೂತಂ' ಎಂಬ ಚಿತ್ರ ಆಂಟನಿ-ಮಮ್ಮುಟ್ಟಿ ಕಾಂಬಿನೇಷನ್‌ನಲ್ಲಿ ಗೆದ್ದಿತ್ತು. ಒಟ್ಟಿನಲ್ಲಿ ರಮ್ಯಾ ದುಬಾರಿ ನಟಿಯೆಂಬುದು ಕನ್ನಡ ಚಿತ್ರರಂಗದ ಗಡಿ ದಾಟಿ ಮಲಯಾಳಂ ಚಿತ್ರರಂಗಕ್ಕೂ ಗೊತ್ತಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











