ಮಾಗಡಿ ರಸ್ತೆ ಪೊಲೀಸ್ ಠಾಣೆಯಾದ ಜೆಡಿಎಸ್ ಕಚೇರಿ
ರೇಸ್ ಕೋರ್ಸ್ ರಸ್ತೆಯಲ್ಲಿರುವ ಜಾತ್ಯತೀತ ಜನತಾದಳ (ಜೆಡಿಎಸ್) ಕಚೇರಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಾಗಿ ಪರಿವರ್ತನೆಯಾಗಿದೆ! ಮಾನ್ಯ ಎಚ್ ಡಿ ದೇವೇಗೌಡರು ಜೆಡಿಎಸ್ ಕಚೇರಿಯನ್ನು ಯಡಿಯೂರಪ್ಪ ಸರಕಾರಕ್ಕೆ ದತ್ತಿಯಾಗಿ ಕೊಟ್ಟುಬಿಟ್ಟರೆ? ಎಂಬ ಪ್ರಶ್ನೆ ಕ್ಷಣಕಾಲ ಜೆಡಿಎಸ್ ಕಾರ್ಯಕರ್ತರಿಗೆ ಕಾಡಿದ್ದುಂಟು.
ಸೋಮವಾರ(ಸೆ.14) ಬೆಳಗ್ಗೆ ಜೆಡಿಎಸ್ ಕಚೇರಿಗೆ ಬಂದವರು ಬೋರ್ಡು ನೋಡಿ ಕಕ್ಕಾಬಿಕ್ಕಿಯಾದರು. ಅಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆ ಎಂಬ ಫಲಕ ರಾರಾಜಿಸುತ್ತಿತ್ತು. ವಿಷಯ ಇಷ್ಟೇ..ಅಲ್ಲಿ ಕಿಚ್ಚ ಸುದೀಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಕೆಂಪೇಗೌಡ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.
ಒಂದು ಡಜನ್ ಗೂ ಅಧಿಕ ಪೊಲೀಸ್ ವೇಷಧಾರಿಗಳು ಅಲ್ಲಿದ್ದರು. ಗುಲ್ಬರ್ಗ ಮತ್ತು ಕಡೂರಿನಲ್ಲಿ ಉಪಚುನಾವಣೆ ಕಾರಣ ಪಕ್ಷದ ಕಾರ್ಯಕರ್ತರೆಲ್ಲಾ ಅಲ್ಲಿ ಬೀಡುಬಿಟ್ಟಿದ್ದರು. ಹಾಗಾಗಿ ಜೆಡಿಎಸ್ ಕಚೇರಿ ಖಾಲಿ ಖಾಲಿಯಾಗಿತ್ತು. ಕೆಂಪೇಗೌಡ ಚಿತ್ರೀಕರಣಕ್ಕಾಗಿ ಬಿಟ್ಟುಕೊಡಲಾಗಿತ್ತು.
ಈ ಹಿಂದೆಯೂ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಚಿತ್ರವೊಂದರ ಚಿತ್ರೀಕರಣಕ್ಕೆ ಜೆಡಿಎಸ್ ಕಚೇರಿಯನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದರಂತೆ. ಈಗ 'ಕೆಂಪೇಗೌಡ'ನಿಗಾಗಿ ದೇವೇಗೌಡರು ಕಚೇರಿಯನ್ನು ಬಿಟ್ಟುಕೊಟ್ಟಿದ್ದಾರೆ ಅಷ್ಟೆ.


Click it and Unblock the Notifications