ಬಾಕ್ಸಾಫೀಸಲ್ಲಿ ಕೆಂಪೇಗೌಡ ಭರ್ಜರಿ ಕಲೆಕ್ಷನ್
ಸುದೀಪ್ ಆಕ್ಷನ್, ಕಟ್‌ಗೆ ಪ್ರೇಕ್ಷಕರು ಮತ್ತೊಮ್ಮೆ ತಲೆದೂಗಿದ್ದಾರೆ. ಚಿತ್ರ ತೆರೆಕಂಡಿರುವ ಕೇಂದ್ರಗಳಲ್ಲಿ 'ಕೆಂಪೇಗೌಡ'ನಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ 'ಕೆಂಪೇಗೌಡ'ನಿಗೆ ಭರ್ಜರಿ ಕಲೆಕ್ಷನ್ ಆಗಿದೆ ಎಂಬುದು ಗಾಂಧಿನಗರದ ಲೇಟೆಸ್ಟ್ ಸುದ್ದಿ. ಒಂದು ವಾರದ ಗಳಿಕೆ ರು.5 ಕೋಟಿ ದಾಟಲಿದೆ ಎನ್ನುತ್ತವೆ ಮೂಲಗಳು.
ಸುದೀಪ್ ಅಭಿನಯಿಸಿದ ರೀಮೇಕ್ ಚಿತ್ರಗಳೆಲ್ಲಾ ಬಾಕ್ಸಾಫೀಸಲ್ಲಿ ಸದ್ದು ಮಾಡಿದವೆ. ಈಗ ಆ ಪಟ್ಟಿಗೆ ತಮಿಳು 'ಸಿಂಗಂ' ರೀಮೇಕ್ 'ಕೆಂಪೇಗೌಡ' ಹೊಸ ಸೇರ್ಪಡೆ. ಸುದೀಪ್ ಮತ್ತು ಸಾಯಿಕುಮಾರ್ ಅವರ ಸಹೋದರ ರವಿ ಶಂಕರ್ ನಡುವಿನ ಸಂಭಾಷಣೆ ಪ್ರೇಕ್ಷಕರಿಗೆ ಹಿಡಿಸಿದೆ. ತಾಂತ್ರಿಕವಾಗಿ ಚಿತ್ರ ಸಂಪದ್ಭರಿತವಾಗಿದ್ದು ಅರ್ಜುನ್ ಅವರ ಸಂಗೀತ ಮತ್ತೊಂದು ಪ್ಲಸ್ ಪಾಯಿಂಟ್.
ಬೆಂಗಳೂರು ನಗರದಲ್ಲೇ 'ಕೆಂಪೇಗೌಡ' 45 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಕೆಂಪೇಗೌಡ' ಚಿತ್ರ ಬೆಂಗಳೂರಿನಲ್ಲೇ ಎರಡು ಕೋಟಿ ಬಾಚಿದೆ ಎಂಬುದು ಗಾಂಧಿನಗರ ಪಂಡಿತರ ಲೆಕ್ಕಾಚಾರ. ತುಮಕೂರು, ಮಂಡ್ಯ, ಮೈಸೂರು, ದಾವಣಗೆರೆ ಕೇಂದ್ರಗಳಲ್ಲೂ 'ಕೆಂಪೇಗೌಡ' ಕಮಾಯಿ ಚೆನ್ನಾಗಿದೆಯಂತೆ.
ವಿದ್ಯಾರ್ಥಿಗಳಿಗೆ ಈಗ ಪರೀಕ್ಷಾ ಸಮಯ. ಜೊತೆಗೆ ವಿಶ್ವಕಪ್ ಸಮರ ಬೇರೆ ನಡೆಯುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡುವುದು ಹೇಗೆ ಎಂಬ ಭಯ ನಿರ್ಮಾಪಕರನ್ನು ಕಾಡುವುದು ಸಹಜ. ಆದರೆ ಶಂಕರೇಗೌಡರ ಭಯವನ್ನು 'ಕೆಂಪೇಗೌಡ' ದೂರ ಮಾಡಿದೆ.


Click it and Unblock the Notifications











