»   » ರಾಜ್ಯ ಪ್ರಶಸ್ತಿ ಬೆಳಕಲ್ಲಿ ರಾಧಿಕಾ ಸಂದರ್ಶನ

ರಾಜ್ಯ ಪ್ರಶಸ್ತಿ ಬೆಳಕಲ್ಲಿ ರಾಧಿಕಾ ಸಂದರ್ಶನ

Posted By:
Subscribe to Filmibeat Kannada
  • ಮಹಾಂತೇಶ ಬಹಾದುಲೆ
ಪಿಳಿಪಿಳಿ ಕಣ್ಣು ಬಿಡುತ್ತ ಈಕೆ ಎದುರಿಗೆ ಬಂದು ಕುಳಿತಾಗ ಕಾಡಿದ್ದು ಒಂದೇ ಪ್ರಶ್ನೆ. ಶೇಷ್ಠ ನಟಿ (2003-04)ಯಂಥ ರಾಜ್ಯಮಟ್ಟದ ಪ್ರಶಸ್ತಿಗೆ ದೊರೆಯುವ ಗೌರವ, ಆದರಗಳನ್ನು ಅರಗಿಸಿಕೊಳ್ಳುವ ತಾಕತ್ತು ಈ ಬಳಕುವ ಬಳ್ಳಿಯಲ್ಲಿದೆಯಾ? ನಂತರ ಆಕೆ ನೀಡಿದ ಉತ್ತರಗಳಲ್ಲಿ ‘ಹೌದು’ ಎಂಬ ಸಮರ್ಥನೆ ಸಿಕ್ಕಿದ್ದು ಬೇರೆ ಮಾತು.

ರಾಧಿಕಾ ಈಕೆ ವಾಚಾಳಿಯಲ್ಲ , ಆದರೆ ಕೊಂಚ ಕೆಣಕಿದಾಗ ಮಧುರವಾಗಿಯೇ ಮಾತಿಗಿಳಿಯುತ್ತಾಳೆ. ಆಕೆಯಾಂದಿಗಿನ ಸಂದರ್ಶನದ ಆಯ್ದಭಾಗ ಇಲ್ಲಿದೆ.

  • ಶ್ರೇಷ್ಠ ನಟಿ ಪ್ರಶಸ್ತಿ ಸಿಕ್ಕ ಈ ಸಂಭ್ರಮದಲ್ಲಿ ‘ ರಾಧಿಕಾ ಅಂದ್ರೆ ಯಾರು’ ಅಂತ ಹೇಳ್ತಿರಾ ?
ಯಾವುದೇ ಪ್ರಶಸ್ತಿ ದೊರೆತರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ನಾನು ರಾಧಿಕಾನೆ. ಸೌಮ್ಯ ಸ್ವಭಾವದ ಹುಡುಗಿ. ಸಿನಿಮಾ ರಂಗದಲ್ಲಿದ್ದರೂ ನನ್ನಲ್ಲಿ ಇನ್ನೂ ಸಂಕೋಚವಿದೆ. ನಾನು ಸೆನ್ಸಿಟಿವ್‌. ಹಾಗಂತ ಅಳುಮುಂಜಿಯಲ್ಲ. ಪ್ರಸಂಗ ಬಂದಾಗ ದಿಟ್ಟವಾಗಿ ನಿಲ್ಲುವ ತಾಕತ್ತೂ ಇದೆ.
  • ಚಿತ್ರರಂಗದ ಹಿನ್ನೆಲೆ ಇಲ್ಲದೆ ಸಿನಿಮಾ ಕ್ಷೇತ್ರಕ್ಕೆ ಬಂದವರು ನೀವು. ಏನೂ ಅರಿಯದೇ ಬಂದು, ಇಷ್ಟೊಂದು ಎತ್ತರಕ್ಕೆ ಬೆಳೆಯಲು ಅದೇಗೆ ಸಾಧ್ಯವಾಯಿತು ?
ನನಗೆ ಸಿನಿಮಾ ಹಿನ್ನೆಲೆ ಇಲ್ಲ ನಿಜ. ಆದರೆ ಬಾಲ್ಯದಿಂದಲೂ ನನ್ನಲ್ಲಿ ಚಿತ್ರರಂಗದೆಡೆ ತುಡಿತವಿತ್ತು. ಕುಣಿಯುವ ಹುಚ್ಚಿತ್ತು. ಅಭಿನಯಿಸಬೇಕೆಂಬ ಅಭಿಲಾಷೆ ಇತ್ತು. ಅದುವೇ ನನ್ನನ್ನು ಸಿನಿಮಾದೆಡೆಗೆ ಎಳೆದು ತಂದದ್ದು. ಎತ್ತರಕ್ಕೆ ಬೆಳೆದಿದ್ದೇನೆ ಅಂತ ನೀವು ಅಂದುಕೊಂಡಿದ್ದರೆ, ಅದಕ್ಕೆ ನನ್ನ ಪರಿಶ್ರಮ,ಅದೃಷ್ಟ , ನಿರ್ದೇಶಕರ ಮಾರ್ಗದರ್ಶನ, ಪೋಷಕರ ಬೆಂಬಲವೇ ಕಾರಣ.
  • ಬಣ್ಣ ಹಚ್ಚದಿದ್ದರೆ ಇನ್ನೇನಾಗುತ್ತಿದ್ದಿರಿ ?
ನಿಜ ಹೇಳಬೇಕು ಅಂದ್ರೆ, ನನಗೆ ಅಂಥ ಯಾವ ಗುರಿಯೂ ಇರಲಿಲ್ಲ. ಡಾಕ್ಟರ್‌, ಎಂಜಿನಿಯರ್‌ ಅಥವಾ ಲಾಯರ್‌ ಆಗಬೇಕು ಅಂತ ಕನಸಿನಲ್ಲೂ ಕನವರಿಸಿರಲಿಲ್ಲ. ನನ್ನ ತಂದೆಗೆ ನಾನು ಐಪಿಎಸ್‌ ಅಧಿಕಾರಿಯಾಗಬೇಕೆಂದು ಆಸೆ ಇತ್ತಂತೆ. ಬಹುಶಃ ಅದೇ ಆಗ್ತಿದ್ದೆನೋ ಏನೊ. ಅದೂ ಇಲ್ಲದೆ ಹೋಗಿದ್ರೆ ತಿಂದುಂಡು ಹಾಗೇ ಇರ್ತಿದ್ದೆ.
  • ಬಣ್ಣದ ಬದುಕು ಏನನ್ನುತ್ತೆ ? ಖುಷಿಯಾಗಿದಿರಾ ಹೇಗೆ ?
ಖುಷಿಯಾಗೇ ಇದ್ದೀನಲ್ಲ ? ಇಲ್ಲಿಗೆ ಬಂದಿದ್ದಕ್ಕೆ ನನಗೆ ಅಂಥ ಯಾವ ವಿಷಾದ, ಪಶ್ಚಾತ್ತಾಪವಿಲ್ಲ. ಚಿತ್ರರಂಗಕ್ಕೆ ಬರುವ ನನ್ನ ನಿರ್ಧಾರ ಸರಿಯಾಗೇ ಇದೆ. ಬೇರೆಯವರಿಗೆ ಎಂಥ ಅನುಭವವಾಗಿದೆಯೋ ಗೊತ್ತಿಲ್ಲ.
  • ಇಲ್ಲಿಯವರೆಗಿನ ನಿಮ್ಮ ಚಿತ್ರಗಳಲ್ಲಿ ಖುಷಿ ಕೊಟ್ಟ ಪಾತ್ರಗಳಾವುವು ?
ಒಟ್ಟು 18 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಅವುಗಳಲ್ಲಿ ‘ನಿನಗಾಗಿ’ಯಲ್ಲಿನ ಮಾಡರ್ನ್‌ ಹುಡುಗಿ ಕ್ಯಾರೆಕ್ಟರ್‌ ತುಂಬ ಇಷ್ಟವಾಯಿತು. ‘ತವರಿಗೆ ಬಾ ತಂಗಿ’ ಒಳ್ಳೆಯ ಹೆಸರು ತಂದು ಕೊಟ್ಟಿತು. ‘ತಾಯಿ ಇಲ್ಲದ ತಬ್ಬಲಿ’ಯಿಂದ ಪ್ರಶಸ್ತಿ ಬಂತು. ‘ಮಣಿ ’ಯಲ್ಲಿಯ ಪಾತ್ರ ಮನಸ್ಸಿಗೆ ಹಿಡಿಸಿತು. ಈ ಎಲ್ಲ ಪಾತ್ರಗಳೂ ನನಗೆ ತುಂಬ ಹತ್ತಿರವಾಗಿವೆ ಅಂತ ಅನಿಸಿದೆ .
  • ಎಷ್ಟು ಪರಭಾಷೆ ಚಿತ್ರಗಳಲ್ಲಿ ಅಭಿನಯಿಸಿದ್ದೀರಿ, ಇಲ್ಲಿಗೂ ಅಲ್ಲಿಗೂ ವ್ಯತ್ಯಾಸವೇನಾದರೂ ಇದೆಯಾ ?
ತಮಿಳಿನಲ್ಲಿ ಐದು. ಅವೆಂದರೆ , ಈಯರ್‌ ಕೈ, ಮೀಸೆ ಮಾಧವನ್‌, ಸೊಲ್ಲುಟುಮ್ಮಾ , ಉಲ್ಲಾಕಡತ್‌ ಹಾಗೂ ವರ್ಣಜಲಂ . ತೆಲುಗಿನಲ್ಲಿ ಭದ್ರಾದ್ರಿ ರಾಮುಡು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಕನ್ನಡಕ್ಕೂ ಅಲ್ಲಿಗೂ ನನಗೆ ಅಂಥ ವ್ಯತ್ಯಾಸವೇನೂ ಕಾಣಲಿಲ್ಲ. ಇಲ್ಲಿ ಚಿತ್ರೀಕರಣವನ್ನು ಬೇಗ (30 ದಿನ ) ಮುಗಿಸುತ್ತಾರೆ. ಆದರೆ ಅಲ್ಲಿ ದೀರ್ಘಕಾಲ (ಎರಡು ತಿಂಗಳು) ಚಿತ್ರೀಕರಣವಿರುತ್ತೆ. ಇಲ್ಲಿಯಂತೆ ಅಲ್ಲಿಯೂ ಒಳ್ಳೆಯವರಿದ್ದಾರೆ . ತುಂಬಾ ರೆಸ್ಪೆಕ್ಟ್‌ ಕೊಡ್ತಾರೆ.
  • ನಟಿಯಾಗಬೇಕಾದರೆ ಯಾವ ಅರ್ಹತೆ ಇರಬೇಕು ಅಂತ ನಿಮಗನಿಸುತ್ತದೆ ?
ಮೊದಲು ಅವಳಿಗೆ ಅಭಿನಯ ಗೊತ್ತಿರಬೇಕು. ಅದಿಲ್ಲದಿದ್ದರೆ ಎಲ್ಲವೂ ಶೂನ್ಯ. ನಟಿಗೆ ಟೈಮ್‌ ಸೆನ್ಸ್‌ ಇರಬೇಕು. ತಡವಾಗಿ ಬಂದು ಚಿತ್ರೀಕರಣಕ್ಕೆ ತೊಂದರೆ ಕೊಡುವಂಥ ಅಭ್ಯಾಸ ಖಂಡಿತ ಇರಬಾರದು. ಚಿತ್ರತಂಡದ ಎಲ್ಲರೊಂದಿಗೂ ಗೌರವದಿಂದ ವರ್ತಿಸಬೇಕು. ಇವು ಅವಶ್ಯವಾಗಿ ಇರಬೇಕು.
  • ಗೃಹಸ್ಥಾಶ್ರಮ ಪ್ರವೇಶದ ಬಗ್ಗೆ ಏನಾದರೂ ಹೇಳಿ.
ಇನ್ನೂ 10 ವರ್ಷ ಮದುವೆಯಾಗಲ್ಲ. ಅಷ್ಟೊಂದು ಅವಸರ ಮಾಡುವಷ್ಟು ವಯಸ್ಸು ನನಗಾಗಿಲ್ಲ. ಹೆಚ್ಚೆಚ್ಚು ಚಿತ್ರಗಳಲ್ಲಿ ಅಭಿನಯಿಸಬೇಕೆಂದು ಆಸೆ ಇದೆ. ಏನಿದ್ದರೂ ಅಭಿನಯದ ಕಡೆಗೆ ಗಮನ. ನನ್ನ ಭಾವಿ ಪತಿ ನನ್ನನ್ನು ಯಾವತ್ತೂ ಸೀರೆಯಲ್ಲಿಯೇ ನೋಡಲು ಇಚ್ಛಿಸಬೇಕೆ ಹೊರತು, ಮಾಡರ್ನ್‌ ಡ್ರೆಸ್‌ಗಳಲ್ಲಿ ಖಂಡಿತ ಬೇಡ ಎಂದು ಸ್ಪಷ್ಟವಾಗಿ ಹೇಳಲು ಇಚ್ಚಿಸುತ್ತೇನೆ .
  • ನಿಮಗೆ ದೊರೆತ ಶ್ರೇಷ್ಠ ನಟಿ ಪ್ರಶಸ್ತಿಯ ಕ್ರೆಡಿಟ್‌ ಅನ್ನು ಯಾರಿಗೆ ಕೊಡಲು ಇಚ್ಛಿಸುತ್ತೀರಿ ?
‘ತಾಯಿ ಇಲ್ಲದ ತಬ್ಬಲಿ’ಯ ನನ್ನ ಪಾತ್ರಕ್ಕೆ ಪ್ರಶಸ್ತಿ ದೊರೆಯಲು ಅದರ ನಿರ್ದೇಶಕ ಸಾಯಿಪ್ರಕಾಶ್‌ ಅವರೇ ಕಾರಣ. ಇದರ ಸಂಪೂರ್ಣ ಕ್ರೆಡಿಟ್‌ ಅವರಿಗೇ ಸಲ್ಲಬೇಕು. ನನ್ನ ಕುಟುಂಬದ ನಂತರ ನನ್ನ ಹಿತೈಷಿಗಳು ಯಾರಾದರೂ ಇದ್ದಿದ್ದರೆ ಅವರು ಸಾಯಿಪ್ರಕಾಶ್‌ ಸರ್‌. ಚಿತ್ರೀಕರಣ ವೇಳೆಯಲ್ಲೂ ಅವರು ನನ್ನನ್ನು ಮಗಳಂತೆ ನೋಡಿಕೊಳ್ಳುತ್ತಾರೆ. ಅವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದರೂ ಕಡಿಮೆಯೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada