»   » ಬಾಲಿವುಡ್‌ಗೆ ‘ಮ’ ಮಂತ್ರ ರಕ್ಷಣೆ

ಬಾಲಿವುಡ್‌ಗೆ ‘ಮ’ ಮಂತ್ರ ರಕ್ಷಣೆ

Posted By: Staff
Subscribe to Filmibeat Kannada

ಗೆದ್ದೆತ್ತಿನ ಬಾಲ ಹಿಡಿಯುವುದು ಅಂತಾರಲ್ಲ , ಆ ಮಾತು ಬಾಲಿವುಡ್‌ನ ಇವತ್ತಿನ ನಡವಳಿಕೆಗೆ ತಕ್ಕನಾಗಿದೆ. ಸದ್ಯಕ್ಕೆ ಬಾಲಿವುಡ್‌ ಹಿಡಿದಿರುವ ಗೆದ್ದೆತ್ತಿನ ಬಾಲದ ಹೆಸರು- 'ಮ' ಮಂತ್ರ !

ದೊಡ್ಡ ಬಂಡವಾಳ ಹಾಕಿ ಅಪಾರ ದುಡ್ಡು ಮಾಡಬೇಕೆಂಬ ಹಂಬಲದಲ್ಲಿ ಚಿತ್ರ ನಿರ್ಮಿಸುವಾಗ ನಿರ್ಮಾಪಕರಿಗೆ ಒಂಥರಾ ಭಯ ಕಾಡುವುದು ಸಹಜವೇನೇ. ಭಯವೇ ಭಕ್ತಿಗೆ ಮೂಲವಯ್ಯ ಅನ್ನುವ ಹಾಗೆ. ಚಿತ್ರದ ಗುಣಮಟ್ಟ ಹೇಗಿದ್ದರೂ ನಿರ್ಮಾಪಕ-ನಿರ್ದೇಶಕನ ಭಕ್ತಿಚಿತ್ತ ಚಿತ್ರದ ಯಶಸ್ಸಿನ ಕುರಿತು ಚಿಂತಿಸುತ್ತಿರುತ್ತದೆ. ಹಾಗಾಗಿ ನಂಬಿಕೆಗಳು ಅಪನಂಬಿಕೆಗಳಿಗೆ ಚಿತ್ರಮಂದಿ ಶರಣಾಗುತ್ತಾರೆ. ಇಂಥ ನಂಬಿಕೆಗಳಿಗೆ ಹಾಲಿವುಡ್ಡು , ಬಾಲಿವುಡ್ಡು , ಸ್ಯಾಂಡಲ್‌ವುಡ್ಡು ಅನ್ನುವ ವ್ಯತ್ಯಾಸವೇನೂ ಇಲ್ಲ . ಬಾಲಿವುಡ್‌ 'ಮ' ಮಂತ್ರದ ಬೆನ್ನಿಗೆ ಬಿದ್ದಿರುವ ಹಿನ್ನೆಲೆ ಇದು.

2004ರ ಆಸುಪಾಸಿನಲ್ಲಿ 'ಮ' ಅಕ್ಷರಮಾಲೆಯಿಂದ ಆರಂಭವಾದ ಹಿಂದಿ ಚಿತ್ರಗಳೆಲ್ಲ ಹಿಟ್ಟಾಗಿವೆ. ಉದಾಹರಣೆ ನೋಡಿ : 'ಮುನ್ನಾಭಾಯಿ ಎಂಬಿಬಿಎಸ್‌' ಕಳೆದ ನವಂಬರಿನಲ್ಲಿ ಹಿಟ್‌ ಆಗಿದೆ. ಮಹೇಶ್‌ಭಟ್‌ ನಿರ್ಮಾಣದ ಮಲ್ಲಿಕಾ ಶೆರಾವತ್‌ ಅಭಿನಯದ 'ಮರ್ಡರ್‌' ಇತ್ತೀಚಿನ ಸೆನ್ಸೇಷನಲ್‌ ಹಿಟ್‌. ಕುಂಚತಜ್ಞ ಎಂ.ಎಫ್‌. ಹುಸೇನಜ್ಜರ 'ಮೀನಾಕ್ಷಿ' ಕೂಡ ಕಾಕತಾಳೀಯವಾಗಿ 'ಮ'ಕಾರದಿಂದ ಪ್ರಾರಂಭವಾಗಿದೆ. ಈ ಚಿತ್ರ ಆರ್ಥಿಕವಾಗಿ ಲಾಭ ತರದಿದ್ದರೂ ನಟಿ ತಬುವಿಗೆ ಹೆಸರು ಮತ್ತು ಕೀರ್ತಿ ತಂದಿದೆ.

'ಮಕ್‌ಬುಲ್‌' ತಬು ಅಭಿನಯದ ಇನ್ನೊಂದು ಚಿತ್ರ. 'ಮಕ್‌ಬುಲ್‌' ಚಿತ್ರ ನಿರ್ದೇಶಕ ವಿಶಾಲ್‌ ಭಾರದ್ವಜ್‌ ತಮ್ಮ ಇನ್ನೊಂದು ಸಿನಿಮಾಕ್ಕೆ 'ಮಂತ್ರ' ಎಂದು ಹೆಸರಿಟ್ಟಿದ್ದಾರೆ. ಇದನ್ನು ಕಾಕತಾಳೀಯ ಅಂತೀರಾ? 'ಮ' ಕಾರದ ಮೇಲಿನ ಮಮಕಾರ ಅಂತೀರಾ?

ಹಂಸಾಲ್‌ ಮೆಹ್ತಾ ಮಾತ್ರ 'ಮ' ನಾಮ ಪುರಾಣಕ್ಕೆ ಪ್ರಣಾಮ ಮಾಡಿಲ್ಲ ಎನ್ನುವುದು ವಿಶೇಷ. ಅವರ ಮುಂದಿನ ಚಿತ್ರಗಳೆರಡರ ಹೆಸರು 'ಹಮ್ರಾಹಿ' ಮತ್ತು 'ರಾಖ್‌'. ನೀವ್ಯಾಕೆ ನಾಮ ಭಜನೆ ಮಾಡಿಲ್ಲ ಅಂತ ಕೇಳಿದ್ರೆ ನಕ್ಕುಬಿಡ್ತಾರೆ ಈ 'ಮೆಹ್ತಾ'. ನಂಗೆ ಇಂತದೆಲ್ಲ ಕೆಡ್ರೆ ಒಂಥರಾ ಅಸಹ್ಯ, ಸಿಟ್ಟು.... ಅಂತಾರೆ.

ಕ್ಕಿ..ಕ್ಕಿ..ಕಿರಣ್‌ ಉವಾಚ ಖ್ಯಾತಿಯ ಶಾರುಕ್‌ಖಾನ್‌ ಚಿತ್ರಗಳ ಯಶಸ್ವಿ ಬೇಟೆ ಆರಂಭವಾದದ್ದೇ 'ಕ' ಅಕ್ಷರದ ಚಿತ್ರಗಳಿಂದ . ಕರಣ್‌ ಜೋಹರ್‌ ಎಂಬ ಮಾಂತ್ರಿಕನ ಮಿತ್ರತ್ವದಲ್ಲಿ 'ಕುಚ್‌ ಕುಚ್‌ ಹೋತಾಹೈ'', ಕಭಿ ಕುಶಿ ಕಭಿ ಗಮ್‌' ಮತ್ತು ಇತ್ತೀಚೆಗೆ ಬಿಡುಗಡೆಗೊಂಡ 'ಕಲ್‌ ಹೋ ನಹೋ'. ಆದ್ರೆ ಅವರ ಮುಂದಿನ ಸಿನಿಮಾ ಮಾತ್ರ 'ಮೈ ಹ್ಞೂನಾ'. ಅದು ಈಗಿರುವ ನಿರೀಕ್ಷೆಯಂತೆ ಯಶಸ್ವಿಯಾದರೆ, ಬಾಲಿವುಡ್‌ ಮೂಢನಂಬಿಕೆಯ ಜಾಡಲ್ಲಿ ಮುಳುಗಲಿದೆ. ಮತ್ತೆ 2004ರಲ್ಲಿ ಇನ್ನಷ್ಟು 'ಮ' ಚಿತ್ರಗಳು ಬರಲಿವೆ.

English summary
Film names begin with M, becomes hit in 2004?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada