For Quick Alerts
  ALLOW NOTIFICATIONS  
  For Daily Alerts

  ಅಖಂಡ ಬ್ರಹ್ಮಚಾರಿ ವಿರುದ್ಧ ಎದೆ ಸೆಟೆಸಿದ ಮಲ್ಲಿಕಾ

  By Staff
  |
  • ರಾಜು ಮಹತಿ
  ‘ನನ್ನದೊಂದೇ ಷರತ್ತು . ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳನ್ನು ನನ್ನನ್ನು ಬೆಂಬಲಿಸಬೇಕು. ಬಿಜೆಪಿಯೇತರ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣದಲ್ಲಿ ನಾನಿರಬೇಕು. ಹಾಗಾದಲ್ಲಿ ಪ್ರಧಾನಿ ವಾಜಪೇಯಿ ವಿರುದ್ಧ ಲಖನೌ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಿಂಜರಿಯುವುದಿಲ್ಲ . ಬರೀ ಸ್ಪರ್ಧೆಯಷ್ಟೇ ಅಲ್ಲ , ಗೆಲ್ಲುವ ನಂಬಿಕೆಯೂ ನನಗಿದೆ.’

  ಹೀಗೆಂದವರು ಯಾರೆಂದುಕೊಂಡಿದ್ದೀರಿ? ಕೇಂದ್ರದ ಮಾಜಿ ಸಚಿವ, ಖ್ಯಾತ ವಕೀಲ ರಾಂಜೇಠ್ಮಲಾನಿ ಎಂದುಕೊಂಡಿರಾ ? ನಿಮ್ಮ ಊಹೆ ನಿಜ. ಆದರೆ ಇದು ಜೇಠ್ಮಲಾನಿ ಹೇಳಿಕೆ ಮಾತ್ರವಲ್ಲ ! ಇನ್ನು ಈಗಷ್ಟೇ ಕಣ್ಣುಬಿಡುತ್ತಿರುವ, ನೆಲ ಕಾಣದ ವಯಸ್ಸಿನ ಬಿಂದಾಸ್‌ ಬೆಡಗಿಯಾಬ್ಬಳು ಇಂಥದೊಂದು ಮಾತು ಒಗಾಯಿಸಿದ್ದಾಳೆ. ಆಕೆಯ ಎದೆಗಾರಿಕೆಯನ್ನು ಮೆಚ್ಚಲೇಬೇಕು. ಈಕೆಯ ಹೆಸರು ಮಲ್ಲಿಕಾ; ಮಲ್ಲಿಕಾ ಷೆರಾವತ್‌.

  ಅಸಲಿಗೆ ವಾಜಪೇಯಿ ವಿರುದ್ಧ ಸ್ಪರ್ಧಿಸಿ ಗೆಲ್ಲುವ ಮಲ್ಲಿಕಾಳ ಆತ್ಮ ವಿಶ್ವಾಸದ ಹಿನ್ನೆಲೆಯಾದರೂ ಏನು ? ಬೇರೇನೂ ಅಲ್ಲ . ಆಕೆಗೆ ರಾಜಕಾರಣದ ಅ ಆ ಇ ಈ ಸರಿಯಾಗಿ ಗೊತ್ತಿಲ್ಲ . ಜೇಠ್ಮಲಾನಿ ರೀತಿ ಕಾನೂನು ಜ್ಞಾನ ಅರೆದುಕುಡಿದವಳಲ್ಲ . ಸಮಾಜದ ಸಮಸ್ಯೆಗಳ ಕಾಗುಣಿತವನ್ನೂ ಮಲ್ಲಿಕಾ ಅರಿತವಳಲ್ಲ . ಆಕೆಯದೊಂದೇ ಬಂಡವಾಳ- ಎಗ್ಗಿಲ್ಲದ ‘ಎದೆ’ಗಾರಿಕೆ.

  ಮಲ್ಲಿಕಾ ಹೇಳುತ್ತಾಳೆ : ಲಖನೌ ಕ್ಷೇತ್ರದಲ್ಲಿ ಯುವ ಜನತೆಯ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ನಾನು ಚುನಾವಣೆಗೆ ನಿಂತರೆ ಇವರೆಲ್ಲರ ವೋಟುಗಳು ನನಗಲ್ಲದೆ ಇನ್ನಾರಿಗೆ ?

  ಮಲ್ಲಿಕಾ ಲೆಕ್ಕಾಚಾರಕ್ಕೆ, ವಿಶ್ಲೇಷಣೆಗೆ ಏನನ್ನುವುದು ? ಕಾಂಗ್ರೆಸ್‌ ಹಾಗೂ ಎಡಪಕ್ಷಗಳಂತೂ ಮಲ್ಲಿಕಾಳ ಮಾತಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ . ಒಂದುವೇಳೆ ಮಲ್ಲಿಕಾ ಚುನಾವಣೆಗೆ ನಿಂತಿದ್ದರೆ, ಲಖನೌದ ರಣಾಂಗಣ ಹೇಗಿರುತ್ತಿತ್ತು ಕಲ್ಪಿಸಿಕೊಳ್ಳಿ. ಒಂದೆಡೆ ಅಖಂಡ ಅವಿವಾಹಿತ ಅಟಲ್‌ ; ಇನ್ನೊಂದೆಡೆ ಸೆಕ್ಸ್‌ ಸೆನ್ಸೇಷನ್‌ ಮಲ್ಲಿಕಾ ! ಗೆಲುವು ಯಾರದಾದರೂ ಇರಲಿ, ಜನರಿಗೆ, ಪಡ್ಡೆಗಳಿಗೆ ಒಂದಷ್ಟು ಮನರಂಜನೆಯಾದರೂ ದೊರಕುತ್ತಿತ್ತು . ಈ ಹಿನ್ನೆಲೆಯಲ್ಲಿ ಲಖನೌ ಕ್ಷೇತ್ರದ ಯುವ ಜನತೆಯ ಅದರಲ್ಲೂ ಯುವಕರ ಶಾಪ ಕಾಂಗ್ರೆಸ್‌ಗೆ ಸಲ್ಲಲೇಬೇಕು.

  ಈಕೆ ಎಲ್ಲರಂಥ ಹೆಣ್ಣುಮಗಳಲ್ಲ . ಬಾಲಿವುಡ್‌ ಪಂಡಿತರ ಪ್ರಕಾರ, ‘ಜಿಸ್ಮ್‌’ ಚಿತ್ರದಲ್ಲಿ ಕಾಮಕನ್ಯೆಯಾಗಿ ಫೂತ್ಕರಿಸಿದ್ದ ಬಿಪಾಷಳಂಥ ಬಿಚ್ಚಮ್ಮನೇ ಮಲ್ಲಿಕಾಳ ಮುಂದೆ ಮಂಕಾಗಿದ್ದಾಳೆ. ಐಶ್ವರ್ಯಾಳಂಥ ಸುರಸುಂದರಿಯೂ ಹಿಂದೆ ಬಿದ್ದಿದ್ದಾಳೆ. ಬೇಸಗೆಯ ಧಗೆಯಲ್ಲೂ ಬಾಲಿವುಡ್ಡಲ್ಲಿ ಕೊಂಚ ತಂಪು ವಾತಾವರಣ ಕಾಣಿಸುತ್ತಿದ್ದರೆ ಅದಕ್ಕೆ ಕಾರಣ ಈ ಮಲ್ಲಿಕಾ ಎಂಬ ಕಾಮ ಕಸ್ತೂರಿ. ಮಲ್ಲಿಕಾ ನಟಿಸಿರುವ ‘ಮರ್ಡರ್‌’ ಚಿತ್ರರಸಿಕರ ಹುಚ್ಚೆಬ್ಬಿಸಿದರೆ. ತನ್ನ ಅಂಗಭಂಗಿಯಿಂದಾಗಿ ಮಲ್ಲಿಕಾ ಅಕ್ಷರಶಃ ಕಿಲ್ಲರ್‌! ಹಾಗಾಗಿ ಎಲ್ಲೆಡೆಯೂ ಒಂದೇ ರಾಗ- ಮಲ್ಲಿಕಾ ಮಲ್ಲಿಕಾ !

  ‘ಮರ್ಡರ್‌’, ವಿವಾದಗಳು ಬೆಳವಣಿಗೆಯ ಒಂದಂಗ ಎಂದು ನಂಬಿಕೊಂಡಿರುವ ಮಹೇಶ್‌ಭಟ್‌ರ ಇತ್ತೀಚಿನ ಚಿತ್ರ. ಹೆಣ್ಣನ್ನು ಆಕರ್ಷಕವಾಗಿ ಚಿತ್ರಿಸುವುದು ಮಹೇಶ್‌ಭಟ್‌ಗೆ ಹೊಸತೇನೂ ಅಲ್ಲ . ಬಿಚ್ಚುವುದು ಮಲ್ಲಿಕಾಗೂ ಹೊಸತಲ್ಲ . ಈ ಮುನ್ನ ‘ಖ್ವಾಯಿಷ್‌’ನಲ್ಲೂ ಆಕೆ ಜ್ವಲಿಸಿದ್ದಳು. ಆ ಚಿತ್ರದಲ್ಲಿ ಸುಮಾರೂ ಒಂದೂವರೆ ಡಜನ್‌ ಚುಂಬನ ದೃಶ್ಯಗಳಿದ್ದವು. ಆದರೆ ‘ಮರ್ಡರ್‌’ ಚಿತ್ರದಲ್ಲಿ ಈ ರಸಿಕತೆಯ ಮಸಾಲೆ ಕೊಂಚ ಹೆಚ್ಚೆನ್ನುವಂತಿದೆ. ಎಲ್ಲವೂ ಮಲ್ಲಿಕಾಳ ‘ಸಹಕಾರ’ದ ಫಲ. ‘ಮರ್ಡರ್‌’ ಬಿಡುಗಡೆಗೆ ಮುನ್ನ ಮಲ್ಲಿಕಾ ಹತ್ತರಲ್ಲಿ ಹನ್ನೊಂದನೆಯವಳಾಗಿದ್ದಳು. ಆದರೆ, ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಆಕೆಯನ್ನು ‘ಸ್ಟಾರ್‌’ ಎಂದು ಬಾಲಿವುಡ್‌ ಹೆಮ್ಮೆಯಿಂದ ಘೋಷಿಸಿದೆ. ಪ್ರೇಕ್ಷಕರ ಮಾತಿರಲಿ, ಸ್ವತಃ ಮಹೇಶ್‌ಭಟ್‌ ಮಲ್ಲಿಕಾಳ ಎದೆಗಾರಿಕೆ ಕಂಡು ಬೆಚ್ಚಿಬಿದ್ದಿದ್ದಾನೆ. ಆತ ಹೇಳುತ್ತಾನೆ, 'Mallika is a brand'.

  ಹಾಗಿದ್ದರೆ ‘ಮರ್ಡರ್‌’ ಚಿತ್ರದಲ್ಲಿ ಏನಿದೆ ?

  ಅನುರಾಗ್‌ ಬಸು ನಿರ್ದೇಶನದ ‘ಮರ್ಡರ್‌’ ವಿವಾಹಿತೆಯಾಬ್ಬಳ ಸ್ವಚ್ಛಂದತೆಯ ಕಥಾವಸ್ತುವುಳ್ಳ ಚಿತ್ರ. ಅಶ್ವಿತಾ ಪಟೇಲ್‌ ಹಾಗೂ ಇರ್ಮಾನ್‌ ಹಶ್ಮಿ ಚಿತ್ರದ ನಾಯಕರು. ಮಲ್ಲಿಕಾ ದೆಸೆಯಿಂದಾಗಿ ಈರ್ವರೂ ಚಿತ್ರದಲ್ಲಿ ಬಿಸಿಬಿಸಿಯಾಗಿ ಕಾಣಿಸಿಕೊಂಡು ಸ್ತ್ರೀ-ಪುರುಷ ಸಮಾನತೆಯ ವ್ಯಾಖ್ಯೆ ಬರೆದಿದ್ದಾರೆ. ಆದರೆ ಚಿತ್ರದ ಯಶಸ್ಸು ಮಾತ್ರ ನೂರಕ್ಕೆ ನೂರು ಮಲ್ಲಿಕಾಳಿಗೇ ಸಲ್ಲಬೇಕು. ಗಂಡನಲ್ಲಿ ಉತ್ಸಾಹ ಕಳಕೊಂಡು, ಕಳೆದುಹೋದ ಪ್ರೇಮಕ್ಕೆ ಜೀವತುಂಬುವ ಪ್ರಣಯಿನಿಯ ಪಾತ್ರದಲ್ಲಿ ಮಲ್ಲಿಕಾ ರೋಚಕವಾಗಿ ಕಾಣಿಸಿಕೊಂಡಿದ್ದಾರೆ. ಮಾಜಿ ಪ್ರೇಮಿ ಹಾಗೂ ಹಾಲಿ ಗಂಡನೊಂದಿಗಿನ ಪ್ರಣಯ ದೃಶ್ಯಗಳು ಚಿತ್ರದ ಜೀವ ಜೀವಾಳ.

  ಚಿತ್ರ ನೋಡಿ ಬಂದವರನ್ನು ಮಾತನಾಡಿಸಿ : ಅನೇಕರಿಗೆ ಚಿತ್ರದ ಕಥೆ ಕಲಸುಮೇಲೋಗರವಾಗಿರುತ್ತದೆ. ಕೆಲವರಿಗೆ ಮಲ್ಲಿಕಾಳ ಮುಖಾರವಿಂದವೇ ಮರೆತುಹೋಗಿರುತ್ತದೆ. ಆದರೆ ಹಸಿಬಿಸಿ ದೃಶ್ಯಗಳು. ಒಂದು, ಎರಡು, ಮೂರು,......... ಎಣಿಸುತ್ತಾ ಹೋದಂತೆ ಇನ್ನೂ ಉಳಿಯುವ ಚುಂಬನದ, ಉರುಳಾಡುವ ದೃಶ್ಯಗಳು..... , ಚಿತ್ರಮಂದಿರದ ತುಂಬಾ ಉದ್ವಿಗ್ನ ವಾತಾವರಣ..... ನೆನಪಿನಲ್ಲುಳಿಯುವುದು ಇಷ್ಟೇ. ಚಿತ್ರ ನೋಡಿಬಂದವರು ಹೇಳುತ್ತಾರೆ : ಮರ್ಡರ್‌ ಮುಂದೆ ‘ಜಿಸ್ಮ್‌’ ಏನೇನೂ ಅಲ್ಲ ; ಮಲ್ಲಿಕಾ ಮುಂದೆ ಬಿಪಾಷಾ ಬೋರ್ಡಿಗಿಲ್ಲ . ಚಿತ್ರ ಗೆಲ್ಲಲಿಕ್ಕೆ ಇನ್ನೇನು ಬೇಕು !

  ಸರಿ, ಈಯಮ್ಮನ ಚಕ್ರಾಧಿಪತ್ಯ ಅದೆಷ್ಟು ದಿವಸ. ಸದ್ಯಕ್ಕೆ ಈ ಪ್ರಶ್ನೆ ಪಥ್ಯವೆನಿಸುವುದಿಲ್ಲ . ಯಶಸ್ಸಿನ ಶಿಖರದಲ್ಲಿ ನಿಂತವರಿಗೆ ಪಾತಾಳದ ಚಿಂತೆಯಿರುವುದಿಲ್ಲ . ಆದರೆ ಯೌವನ ಎಷ್ಟು ದಿನ. ಉಕ್ಕುವ ದೇಹದ ಘಮಲನ್ನು ಬಾಲಿವುಡ್‌ ಸಾಕಷ್ಟು ಕಂಡಿದೆ ; ಆಯಾ ಕಾಲಕ್ಕೆ ತಕ್ಕಂತೆ ನಾಯಕಿಯರು ಬಿಚ್ಚುತ್ತಲೇ ಬಂದಿದ್ದಾರೆ. ಮೊನ್ನೆ ಲಾರಾ, ನಿನ್ನೆ ಬಿಪಾಷಾ, ಇಂದು ಮಲ್ಲಿಕಾ ! ನಾಳೆ ಇನ್ನೊಬ್ಬಳದು. ಆದರೆ, ಕಲಾವಿದೆಯರಿರುತ್ತಾರಲ್ಲ ; ಅವರು ಇಂದು ನಾಳೆಯ ಪರಿಧಿ ಮೀರಿದವರು. ಆ ಪರಿಧಿಯನ್ನು ಮಲ್ಲಿಕಾ ಮೀರುತ್ತಾಳಾ ? ಕನಿಷ್ಠ , ಆಕೆಗೆ ಆ ಸತ್ಯದ ಅರಿವಾದರೂ ಆಗುತ್ತದಾ ? ಆಗಲೆಂದು ಹಾರೈಸೋಣ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X