»   » ಬೆಂಗಳೂರಲ್ಲಿ ಲಗಾನ್‌ ನೆನಪು ಜೋರು, ಅಮೀರ್‌ ಕಣ್ಣಾಲಿಯಲ್ಲಿ ನೀರು

ಬೆಂಗಳೂರಲ್ಲಿ ಲಗಾನ್‌ ನೆನಪು ಜೋರು, ಅಮೀರ್‌ ಕಣ್ಣಾಲಿಯಲ್ಲಿ ನೀರು

Posted By: Staff
Subscribe to Filmibeat Kannada

'ಸ್ಪಿರಿಟ್‌ ಆಫ್‌ ಲಗಾನ್‌"ನ ಪುಟಗಳ ತಿರುವಿ ಹಾಕುತ್ತಿದ್ದಂತೆ ಅಮೀರ್‌ ಖಾನ್‌ ಕಣ್ಣಾಲಿಯಲ್ಲಿ ನೀರು. ಅದನ್ನು ಕಂಡ ಯುವ ಅಭಿಮಾನಿಯಾಬ್ಬಳು ಗೋಳೋ ಎನ್ನಲು ಶುರುವಿಟ್ಟಳು. ಒಬ್ಬರಿಗೊಬ್ಬರು ಸಾಂತ್ವನ ಹೇಳುವುದರ ಮೂಲಕ ಇಬ್ಬರ ಮೊಗದಲ್ಲೂ ನಗೆ.

ಲಗಾನ್‌ ಸಿನಿಮಾ ಮಾಡಿದ್ದರ ವಿವರಣೆ ಉಳ್ಳ ಪುಸ್ತಕ 'ಸ್ಪಿರಿಟ್‌ ಆಫ್‌ ಲಗಾನ್‌". ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಬೆಂಗಳೂರಿನ ಪಂಚತಾರಾ ಹೊಟೇಲು ಲೀಲಾದಲ್ಲಿ ಭಾನುವಾರ ಈ ಪುಸ್ತಕ ಬಿಡುಗಡೆ ಮಾಡಿದರು. ಲಗಾನ್‌ ನಿರ್ಮಾಣದ ಹಾದಿಯ ನೋವು- ನಲಿವು ಈ ಪುಸ್ತಕದಲ್ಲಿ ಯಥಾವತ್ತಾಗಿ ದಾಖಲು. ಪುಸ್ತಕ ಬರೆದವರು ಖಾನ್‌ನ ಬಾಲ್ಯ ಸ್ನೇಹಿತ ಹಾಗೂ ವಕೀಲ ಸತ್ಯಜಿತ್‌. ಸ್ಪಿರಿಟ್‌ ಆಫ್‌ ಲಗಾನ್‌ನ ಆಯ್ದ ಭಾಗಗಳನ್ನು ಮೊದಲು ಓದಿದ್ದು ಸತ್ಯಜಿತ್‌. ಆಮೇಲೆ ಖುದ್ದು ಅಮೀರ್‌ ತಮ್ಮ ನೆಚ್ಚಿನ ಅನುಭವಗಳನ್ನು ಓದಿದರು.

ಸಂತಸದ ಕ್ಷಣಗಳನ್ನು ಕೇಳುತ್ತಾ ನಗೆಗಡಲಲ್ಲಿ ಮುಳುಗಿದ ಪ್ರೇಕ್ಷಕರಲ್ಲಿ, ತನ್ನ ಪತ್ನಿ ರೀನಾ ಅನುಭವಿಸಿದ ಆತಂಕಗಳನ್ನು ಅಮೀರ್‌ ಹೇಳುತ್ತಿದ್ದಂತೆ ಮಹಾ ಮೌನ. ಅಮೀರ್‌ ಕಣ್ಣು ತುಂಬಿಬಂತು. ಕಣ್ಣೀರನ್ನು ಒರೆಸಿಕೊಂಡು ಇನ್ನಷ್ಟು ಓದುವ ಅಮೀರ್‌ ಪ್ರಯತ್ನ ವಿಫಲವಾದಾಗ, ಮತ್ತೆ ಸತ್ಯಜಿತ್‌ ಪುಸ್ತಕ ಇಸಿದುಕೊಂಡರು. ಆದರೆ, ಅಷ್ಟು ಹೊತ್ತಿಗೆ ಅಭಿಮಾನಿಗಳು ಅನುಭಾವಿಗಳಾಗಿದ್ದರು. ಎಲ್ಲರ ಕಣ್ಣಲ್ಲೂ ತೇವ.

ಇದೊಂದು ಮಹಾಸಾಧನೆ. ದೇಶಭಕ್ತಿಯ ಇಂತಹ ಇನ್ನಷ್ಟು ಚಿತ್ರಗಳನ್ನು ಅಮೀರ್‌ ಮಾಡಲಿ. ಖಾನ್‌ಗೆ ಬೆಂಗಾವಲಾಗಿ ನಿಂತ ರೀನಾರನ್ನು ಮೆಚ್ಚಲೇಬೇಕು. ಪುಸ್ತಕ ಓದಿದ ನಂತರವಂತೂ ಲಗಾನ್‌ ಚಿತ್ರವನ್ನು ಮತ್ತೆ ಮತ್ತೆ ನೋಡಿದೆ ಎಂದು ಹೇಳುವಷ್ಟರಲ್ಲಿ ಸುಧಾಮೂರ್ತಿ ಭಾವುಕರಾಗಿದ್ದರು.

ಲಗಾನ್‌ ಚಿತ್ರದ ಕಚ್‌ರಾ ಪಾತ್ರಧಾರಿ ಹಾಗೂ ಛಾಯಾಗ್ರಾಹಕ ಅನಿಲ್‌ ಮೆಹ್ತಾ ಕಾರ್ಯಕ್ರಮದ ವಿಶೇಷ. ಯಾಕೆಂದರೆ, ಅವರು ಬೆಂಗಳೂರಿನವರು. ಅಮೀರ್‌ ಹಸ್ತಾಕ್ಷರ ಪಡೆಯಲು ಭಾರೀ ನೂಕುನುಗ್ಗಲು. ಆದರೆ ಬಂದವರಿಗೆಲ್ಲಾ ಸಹಿ ಹಾಕುವಷ್ಟು ಪುರುಸೊತ್ತು ಇರಲಿಲ್ಲ. ಎಲ್ಲರಿಗೂ ಸಿಕ್ಕಿದ್ದು ಅಮೀರ್‌ ಮುಗುಳುನಗೆಯ ಆಟೋಗ್ರಾಫ್‌!

English summary
Aamir Khan cries recalling the memories of Lagaan
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada