»   » ಕನ್ನಡ ಚಿತ್ರಕ್ಕೆ ಭಟ್ಟಿ ಇಳಿಸುವ ಐಡಿಯಾ

ಕನ್ನಡ ಚಿತ್ರಕ್ಕೆ ಭಟ್ಟಿ ಇಳಿಸುವ ಐಡಿಯಾ

By: *ಅಮೆಜಾನ್‌
Subscribe to Filmibeat Kannada

ರಾಗ ಯಾರದಾದರೇನು ಹಾಡು ಮಾತ್ರ ನಮ್ಮದು!
ಸ್ಯಾಂಡಲ್‌ವುಡ್‌ನ ಈ ಹೊತ್ತಿನ ಸಾಂಸ್ಕೃತಿಕ ದುರಂತ ಇದು. ನಿರ್ಮಾಪಕರ ಸಮರ್ಥನೆಗೆ ಕಾಪಿ ರಾಗದ ಹಿಟ್‌ ಗೀತೆಗಳ ದೊಡ್ಡ ಲಿಸ್ಟೇ ಇದೆ. 'ಯಜಮಾನ"ನಿಂದ ಹಿಡಿದು 'ನಿನಗಾಗಿ"ತನಕ, 'ಕನಸುಗಾರ"ನಿಂದ ಹಿಡಿದು 'ಫ್ರೆಂಡ್ಸ್‌"ತನಕ ಕಾಪಿ ರಾಗಗಳದ್ದೇ ಕಾರುಬಾರು. ನಕಲಿಗೇ ಕಾಲ! ನಕಲಿಶಾಮರದೇ ರಾಗ!

ಸ್ವರಾಗಗಳನ್ನೇ ಹೊಸೆಯುತ್ತಿದ್ದ ಗುರುಕಿರಣ್‌ಗೂ ರಾಗಗಳನ್ನು ಕಾಪಿ ಮಾಡುವ ಹಾದಿ ಹಿಡಿಸಿದ ಖ್ಯಾತಿ ನಮ್ಮ ನಿರ್ಮಾಪಕರದ್ದು. ರಾಗ ಕಾಪಿಯಾದರೂ ಚಿಂತಿಲ್ಲ, ರೊಕ್ಕ ಬೇಕ್ರಿ ಅನ್ನುವುದು ಅವರ ಅದೇ ರಾಗ ಅದೇ ಹಾಡು. ಈ ಕಾರಣಕ್ಕೇ ನಿನಗಾಗಿ ಸಂಗೀತ ಸಂಯೋಜನೆಯ ವೇಳೆ ಗುರುಕಿರಣ್‌ ಬೇಸರದಿಂದ ಒಂದೊಮ್ಮೆ ಹೊರ ನಡೆದಿದ್ದೂ ಉಂಟು. ಚಿತ್ರದ ಮೂರು ಹಾಡುಗಳಿಗಾದರೂ ರಾಗ ಹೊಸೆಯುವ ಭಾಗ್ಯ ಉಳಿದದ್ದಕ್ಕೆ ಅವರು ಅಲ್ಪ ತೃಪ್ತರಾಗಲೇಬೇಕಾಯಿತು.

ಈ ಹೊತ್ತು ರೀಮೇಕ್‌ ಸಿನಿಮಾ ನಿರ್ಮಾಪಕರು ನೇರವಾಗಿ ಕೇಳಿಕೊಳ್ಳುತ್ತಾರೆ- ಹಾಡುಗಳ ಟ್ಯೂನು ಹಾಗೇ ಇರಲಿ. ರಾಜೇಶ್‌ ರಾಮನಾಥ್‌ ತರಹದ ಸಂಗೀತ ನಿರ್ದೇಶಕರು ನಗುನಗುತ್ತಾ ಇಂಥಾ ಆಫರ್‌ಗಳನ್ನು ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಟ್ಯೂನ್‌ ಹಾಗೇ ಇದ್ದರೂ ಅದರಲ್ಲಿ ನಮ್ಮತನವನ್ನು ತೋರಿಸಲು ಕಷ್ಟ ಪಟ್ಟಿರುತ್ತೇವೆ ಅಂತಲೂ ಅವರು ಹೇಳಿಕೊಳ್ಳುತ್ತಾರೆ. ಆದರೆ ಆ ಕಷ್ಟ ಗೌಣ. ಪಾಪ, ಕಾಣೋದೇ ಇಲ್ಲ.

ತಮ್ಮ ಹಳೆಯ ಒಡತಿ ಜಯಶ್ರೀದೇವಿಯವರಿಗೆ ಕಷ್ಟಕಾಲದಲ್ಲಿ ನೆರವಾಗಲು ಹೊರಟಿರುವ ಫ್ರೆಂಡ್ಸ್‌ ಫೇಮ್‌ನ ವಾಸು ಅವರಿಗೆ ದಿಢೀರನೆ ಹೊಸ ಯೋಚನೆಯಾಂದು ಹೊಳೆದಿದೆ. ತೆಲುಗಿನಲ್ಲಿ ಸೂಪರ್‌ ಹಿಟ್‌ ಆಗಿರುವ ಬೇರೆ ಬೇರೆ ಸಿನಿಮಾಗಳ ಹಾಡುಗಳ ರಾಗಗಳನ್ನು ಕನ್ನಡದ ಒಂದೇ ಚಿತ್ರಕ್ಕೆ ಕಾಪಿ ಮಾಡುವುದು. ಇದೊಂದು ಥರಾ ಡೈವರ್ಸಿಫೈಡ್‌ ಕಾಪಿ. ಅಂದಹಾಗೆ, ಈ ಹೊಸ ಪ್ರಯತ್ನ 'ದೇವರು ವರವನು ಕೊಟ್ರೆ" ಚಿತ್ರದಿಂದಲೇ ಶುರು. ವಾಸು ಚುರುಕುಮತಿಯ ಐಡಿಯಾಗೆ ಮೊದಲು ಬ್ರೇವೋ ಅಂದಿರುವವರು ಕಾಪಿ ಪ್ರಿಯ ರಾಜೇಶ್‌ ರಾಮನಾಥ್‌.

ದೇವರು ಇಂಥಾ ವರವನ್ನು ಕೊಡಬಾರದು.

English summary
Friends fame Vasu gives an idea : Copy the tunes of different telugu films and put it in a Kannada movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada