»   » ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ

ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ

Subscribe to Filmibeat Kannada
  • ವಸುಧೇಂದ್ರ
ಗಾಢ ಮಸಾಲೆ ಬೆರೆಸಿದ ಆಹಾರಗಳನ್ನು ತಿನ್ನುವವನಿಗೆ ತುಂಗಾ ನೀರಿನ ರುಚಿ ತಿಳಿಯುವುದಿಲ್ಲ. ಅಬ್ಬರದ ಸಂಗೀತ ಗಳನ್ನು ರೂಢಿಸಿಕೊಂಡವನಿಗೆ ಜಲತರಂಗದ ಧ್ವನಿಗಳು ತಟ್ಟುವದಿಲ್ಲ. ಸೀಗೆಕಾಯಿ ಪುಡಿ ತಯಾರಿಸುವವನಿಗೆ ಮಲ್ಲಿಗೆಯ ಕಂಪು ಗೊತ್ತಾಗುವದಿಲ್ಲ. ಫುಟ್ಬಾಲ್‌ ಆಟಗಾರನಿಗೆ ಹೂವಿನ ಪಕಳೆಯಾಂದು ಮೈಮೇಲೆ ಬಿದ್ದಿದ್ದು ಅರಿವಾಗುವದಿಲ್ಲ. ಪಟ್ಟು ಸೀರೆಗಳನ್ನೇ ಉಡುವವಳಿಗೆ ಕೇರಳದ ಹಾಲುಬಿಳುಪಿನ ರೇಷ್ಮೆ ಸೀರೆಯ ಸೊಗಸು ಕಾಣುವದಿಲ್ಲ.

ಸಿನಿಮಾ ಎಂದರೆ ಅದಕ್ಕೊಂದು ಅದ್ಭುತವಾದ ಕತೆಯಿರಬೇಕು, ಆರ್ಭಟ ಸಂಗೀತವಿರಬೇಕು, ವಿಶಿಷ್ಟ ಪಾತ್ರಗಳಿರಬೇಕು, ದೇಶ ವಿದೇಶಗಳ ಸುಂದರ ತಾಣಗಳಲ್ಲಿ ಚಿತ್ರಿಸಿರಬೇಕು- ಹೀಗೆ ನಮ್ಮ ಮನಸ್ಸಿನಲ್ಲಿ ಸಿನಿಮಾದ ವ್ಯಾಖ್ಯಾನ ಮಾಡಿಕೊಂಡಿರುತ್ತೇವೆ. ಆದರೆ ಅಂತಹ ನಂಬಿಕೆಗಳನ್ನೆಲ್ಲಾ ಪೊಳ್ಳಾಗಿಸುವಂತೆ ಬರೀ ನಿತ್ಯ ಬದುಕಿನ ನಾಜೂಕಿನ ಸಂಗತಿಗಳನ್ನು ಹಿಡಿದಿಡುವ ಚಿತ್ರ ‘ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ’.

1951 ಮತ್ತು 1961ರ ಕಾಲಘಟ್ಟದ ವಿಯಟ್ನಾಮಿನ ಒಂದು ಮಧ್ಯಮ ವರ್ಗದ ಕುಟುಂಬದ ಚಿತ್ರಣವನ್ನು ಕೊಡುವ ಈ ಚಿತ್ರ ತನ್ನ ಸರಳತೆ ಮತ್ತು ಸೂಕ್ಷ್ಮತೆಗಳಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಇಂತಹ ಸರಳ ಸುಂದರ ಬದುಕಿನ ಮೇಲೆ ಅಮೆರಿಕನ್ನರು ಬಾಂಬಿನ ಮಳೆಗರೆದರಲ್ಲ ಎಂಬ ಸಂಕಟ ಚಿತ್ರದಲ್ಲಿಲ್ಲದಿದ್ದರೂ ನಿಮ್ಮನ್ನು ಕಾಡುತ್ತದೆ.

ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ವಿಧವೆಯಿದ್ದಾಳೆ, ಎಳೆಯ ಮಗಳನ್ನು ಕಳೆದುಕೊಂಡ ತಾಯಿಯಿದ್ದಾಳೆ, ಮನೆಯ ಹಣವನ್ನೇ ದೋಚಿಕೊಂಡು ಓಡಿಹೋಗಿ ಮಜಾ ಮಾಡುವ ಮನೆಯ ಯಜಮಾನನಿದ್ದಾನೆ, ಮುಪ್ಪಿನಲ್ಲಿಯೂ ತನ್ನ ಯೌವನದ ಹುಡುಗಿಯನ್ನು ಕಂಡು ಖುಷಿ ಪಡುವ ಮುದುಕನಿದ್ದಾನೆ. ಆದರೆ ಯಾವೊಂದು ಸಂಗತಿಯೂ ಇಲ್ಲಿ ಆರ್ಭಟವಾಗುವದಿಲ್ಲ. ಚಿತ್ರ ಮುಗುಳ್ನಗೆಯನ್ನು ಚಿತ್ರಿಸುತ್ತದೆ, ಅಟ್ಟಹಾಸವನ್ನಲ್ಲ. ಕಣ್ಣಿನ ತೇವವನ್ನು ಚಿತ್ರಿಸುತ್ತದೆ, ಕಣ್ಣೀರಧಾರೆಯನ್ನಲ್ಲ. ಮೌನಸಂಗೀತವನ್ನು ಚಿತ್ರಿಸುತ್ತದೆ, ಐಟಂ ನಂಬರನ್ನಲ್ಲ.

ಇದೇ ಭಾನುವಾರ (16ನೇ ಜುಲೈ 2006) ಬೆಳಗ್ಗೆ 11:00 ಗಂಟೆಗೆ ‘ಲೇಸ್‌ ಫಿಲ್ಮ್ಸ್‌ ’ ಸಂಸ್ಥೆಯು ಈ ಸಿನಿಮಾವನ್ನು ಸುಚಿತ್ರಾ ಸಭಾಂಗಣದಲ್ಲಿ ತೋರಿಸಲಿದ್ದಾರೆ.

ಆದರೆ ಈ ಸಿನಿಮಾ ಎಲ್ಲರಿಗೂ ಅಲ್ಲ. ಇರುವೆಯಾಂದು ತನ್ನ ಗಾತ್ರಕ್ಕಿಂತಲೂ ಹೆಚ್ಚಿನ ಆಹಾರವನ್ನು ಉರುಳಿಸಿಕೊಂಡು ಹೋಗುವದನ್ನು ಕಂಡು ಅಚ್ಚರಿಪಡುವವರಿಗೆ. ಪಪಾಯಿ ಕಾಯಿಯಲ್ಲಿ ನಾಜೂಕಿನಲ್ಲಿ ಜೋಡಿಸಿಟ್ಟಂತೆ ಕಾಣುವ ಹಾಲು ಬಿಳಿಪಿನ ಬೀಜಗಳನ್ನು ಕಂಡು ಸಂಭ್ರಮಿಸುವವರಿಗೆ. ಎಳೆಯ ಎಲೆಯ ಮೇಲೆ ಎಳೆ ಹಸಿರು ಕಪ್ಪೆಯಾಂದು ಕೆಳಗೆ ಬೀಳದೆ ಓಡಾಡುವುದನ್ನು ಕಂಡು ಖುಷಿಪಡುವವರಿಗೆ. ಮಾತಿಗಿಂತಲೂ ಮೌನದಲ್ಲಿ ಹೆಚ್ಚಿನ ಅರ್ಥವನ್ನು ಕಾಣುವವರಿಗೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಎಳೆಯ ಪಪಾಯಿ ಕಾಯಿಯ ವಾಸನೆಯನ್ನು ಗುರುತಿಸುವಂತವರಿಗೆ!

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9880636487

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada