twitter
    For Quick Alerts
    ALLOW NOTIFICATIONS  
    For Daily Alerts

    ಬಳಗ ಬೆಳಗಲಿ-ವಿಷ್ಣು , ಅನಂತಮೂರ್ತಿ

    By Staff
    |

    *ದಟ್ಸ್‌ಕನ್ನಡ ಬ್ಯೂರೊ

    ‘Better Late than Never. ಒಳ್ಳೆಯ ಉದ್ದೇಶ, ಧ್ಯೇಯದಿಂದ ಸಿನಿಮಾ ಪತ್ರಕರ್ತರು ಒಗ್ಗಟ್ಟಾಗಿದ್ದಾರೆ. ಈ ಬಳಗ ಸದಾ ಬೆಳಗಲಿ’ - ಹೀಗೆ ಹಾರೈಸಿದ್ದು ನಟ ವಿಷ್ಣುವರ್ಧನ್‌.

    ಕನ್ನಡ ಸಿನಿಮಾ ಪತ್ರಕರ್ತರು ಕಟ್ಟಿಕೊಂಡಿರುವ ಸಂಘ ‘ಬಳಗ’ವನ್ನು ಹಾರೈಕೆ ಬರಹ ಬರೆಯುವುದರ ಮೂಲಕ ವಿಷ್ಣು ಹಾಗೂ ಜ್ಞಾನಪೀಠ ಸಾಹಿತಿ ಯು.ಆರ್‌. ಅನಂತಮೂರ್ತಿ ಸೆ. 14ರ ಭಾನುವಾರ ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಉದ್ಘಾಟಿಸಿದರು. ತಣ್ಣಗೆ ನಡೆದ ಸರಳ ಸಮಾರಂಭದಲ್ಲಿ ಅನೌಪಚಾರಿಕ ರೀತಿಯಲ್ಲಿ ಸಣ್ಣ ಮಾತು ಮಂಥನ ನಡೆಯಿತು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಸಿನಿಮಾ ಪತ್ರಕರ್ತ ಮನೋಹರ ತೋಳಹುಣಸೆ ಅವರ ಸಂಸಾರಕ್ಕೆ ‘ಬಳಗ’ ಸಂಗ್ರಹಿಸಿರುವ 1, 33, 250 ರುಪಾಯಿಗಳ ಎರಡು ಠೇವಣಿ ಪತ್ರಗಳನ್ನೂ ವಿತರಿಸಲಾಯಿತು.

    ಪತ್ರಕರ್ತರ ಜೊತೆ ಕ್ರಿಕೆಟ್‌ ಆಡಿಕೊಂಡು ಬಂದು ದಣಿದಿದ್ದ ವಿಷ್ಣು ಭಾಷಣ ಹೊಡೆಯಲಿಲ್ಲ. ಪತ್ರಕರ್ತರು ನಮ್ಮ ಜೊತೆ, ನಾವು ಪತ್ರಿಕೆಗಳ ಜೊತೆ ಬೆಳೆದು ಬಂದಿದ್ದೇವೆ. ಪತ್ರಕರ್ತರು ಸಿನಿಮಾ ಕ್ಷೇತ್ರದ ಅವಿಚ್ಛಿನ್ನ ಭಾಗ. ಕ್ಷೇತ್ರ ಹಾಗೂ ಜನರ ನಡುವಿನ ಸುವರ್ಣಸೇತುವೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ ಸೌಹಾರ್ದತೆ ಇಲ್ಲದಿರುವುದು ಒಂದು ಶಾಪ. ಎಲ್ಲ ಕಳೆದುಕೊಂಡಾದ ಮೇಲೆ ಸ್ವಲ್ಪ ಉಳಿದಿದೆ. ಈ ಸಣ್ಣ ದೀಪ ಜೋರಾಗಿ ಬೆಳಗಲಿ. ಇಂಥಾ ಒಗ್ಗಟ್ಟು ಎಲ್ಲ ಕ್ಷೇತ್ರಗಳಲಲ್ಲೂ ಬರಲಿ ಎಂದು ವಿಷ್ಣು ಬಯಸಿದರು.

    ಒಬ್ಬ ಒಳ್ಳೆಯ ಪತ್ರಕರ್ತ ಸಿನಿಮಾಕ್ಕೆ ಒಳ್ಳೆಯದನ್ನು ಮಾಡಬಹುದು ಎನ್ನುವುದಕ್ಕೆ ಉದಾಹರಣೆ ವೈಎನ್ಕೆ ಎಂದು ಮಾತು ಪ್ರಾರಂಭಿಸಿದ ಚಿಂತಕ ಅನಂತಮೂರ್ತಿ, ಬರವಣಿಗೆಯ ಆರೋಗ್ಯ ಹೆಚ್ಚಿಸುವ ಕೆಲಸವನ್ನು ‘ಬಳಗ’ ಮಾಡಲಿ ಎಂದು ಆಶಿಸಿದರು.

    ಲೇಖನ ಅಥವಾ ವಿಮರ್ಶೆ ಕುರಿತು ಎಲ್ಲ ಪತ್ರಕರ್ತರಲ್ಲೂ ಒಂದೇ ಅಭಿಪ್ರಾಯ ಮೂಡಿಸುವುದೋ ಅಥವಾ ಒಬ್ಬ ನಟನನ್ನೇ ಗುರಿಯಾಗಿಸುವುದೋ ಮಾಡಿದರೆ ಅದು ಕೆಟ್ಟ ಬಳಗವಾಗುತ್ತದೆ. ಬರವಣಿಗೆ ವ್ಯಕ್ತಿಯ ಅಭಿಪ್ರಾಯವಾಗಿರಬೇಕು. ಬರವಣಿಗೆಗೆ ಬೇಕಾದ ಅನುಕೂಲವನ್ನು ಬಳಗ ಮಾಡಲಿ. ಇವತ್ತು ರಾಜಕೀಯ ಬರೆಯೋದಕ್ಕೆ ಸಾಕಷ್ಟು ಪಳಗಿದ ಕೈಗಳಿವೆ. ಆದರೆ ಕ್ರೀಡೆ, ಸಿನಿಮಾದಲ್ಲಿ ಹಾಗಿಲ್ಲ. ಸಿನಿಮಾ ಬಗ್ಗೆ ಗಾಢವಾದ ವಿಮರ್ಶೆ ಬರಬೇಕು. ಸಿನಿಮಾ ಮತ್ತು ವಿಷ್ಣುವರ್ಧನ್‌ ತರಹದ ನಟರ ಪರಿಣಾಮ ಇವತ್ತು ಜಾಸ್ತಿಯಿದೆ. ದಾರ್ಷ್ಟ್ಯವಾಗಿ ಬರೆದದ್ದನ್ನು ಪ್ರಕಟಿಸುವ ಧೈರ್ಯವನ್ನು ಪತ್ರಕರ್ತರಲ್ಲಿ ಬಳಗ ತುಂಬಬೇಕು ಎಂಬುದು ಅನಂತಮೂರ್ತಿಯವರ ಸಲಹೆ.

    ‘ಬಳಗ’ ಸಂಗ್ರಹಿಸಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಇಟ್ಟಿರುವ 1,33,250 ರುಪಾಯಿ ಒಟ್ಟು ಮೊತ್ತದ ಎರಡು ಠೇವಣಿ ಪತ್ರಗಳನ್ನು ಅಗಲಿದ ಪತ್ರಕರ್ತ ಮನೋಹರ ತೋಳಹುಣಸೆ ಅವರ ಹೆಂಡತಿ ಸುಮ ಹಾಗೂ ಪುಟ್ಟ ಮಗ ಶ್ರೀನಿಧಿಗೆ ವಿಷ್ಣು ಹಾಗೂ ಅನಂತಮೂರ್ತಿ ‘ಬಳಗ’ ಪರವಾಗಿ ನೀಡಿದರು. ಕೃತಜ್ಞತೆ ಹೇಳಿದ ಸುಮ ಅಳು ತಡೆಯಲಾರದೆ ಗದ್ಗದಿತರಾದರು.

    ನಮ್ಮದು ಟ್ರೇಡ್‌ ಯೂನಿಯನ್‌ ಅಲ್ಲ ಎಂದು ಖಚಿತ ಪಡಿಸುತ್ತ, ಸಂಘದ ಉದ್ದೇಶ ಹಾಗೂ ಧ್ಯೇಯಗಳ ಸ್ಪಷ್ಟ ರೂಪವನ್ನು ಬಿಚ್ಚಿಟ್ಟು ಸಮಾರಂಭವನ್ನು ನಿರೂಪಿಸಿದ್ದು ‘ಬಳಗ’ದ ಉಪಾಧ್ಯಕ್ಷ, ದಟ್ಸ್‌ಕನ್ನಡ ಸಂಪಾದಕ ಎಸ್ಕೆ. ಶಾಮಸುಂದರ. ‘ಬಳಗ’ದ ಹಿರಿಯ ಸಲಹೆಗಾರರಾದ ಪಿ.ಜಿ.ಶ್ರೀನಿವಾಸಮೂರ್ತಿ ಸಂಘದ ಪರಿಚಯ ಮಾಡಿಕೊಟ್ಟರು.

    ಮನೋಹರ ತೋಳಹುಣಸೆ ಕುಟುಂಬಕ್ಕೆ ಇನ್ನಷ್ಟು ಸಮಯ ತೆಗೆದುಕೊಂಡು ಹೆಚ್ಚು ಹಣ ಸಂಗ್ರಹಿಸಬಹುದಿತ್ತು. ಆದರೆ ‘ಬಳಗ’ ಇದನ್ನೇ ದಂಧೆ ಮಾಡಿಕೊಂಡುಬಿಡುತ್ತೆ ಎಂಬ ಮಾತು ಏಳುವ ಅಪಾಯವಿರುವುದರಿಂದ ಹಾಗೆ ಮಾಡಲಿಲ್ಲ. ಹಿಂದೆ ಕಂಬಾರರು ಒಂದು ನಾಟಕ ರಚಿಸಿದರೆ ಹೊಟ್ಟೆ ಕಿಚ್ಚು ಪಡುತ್ತಿದ್ದರು. ಆದರೆ ಈಗ ಹಾಗಿಲ್ಲ ಎಂದು ಹೇಳಿ, ‘ಬಳಗ’ದ ಇನ್ನೊಬ್ಬ ಹಿರಿಯ ಸಲಹೆಗಾರ ಎ.ಎಸ್‌.ಮೂರ್ತಿ ವಂದನಾರ್ಪಣೆ ಮಾಡಿದರು.

    ‘ಬಳಗ’ದ ಅಧ್ಯಕ್ಷ ಗಿರೀಶ್‌ ರಾವ್‌, ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ರೈ ವೇದಿಕೆ ಮೇಲಿದ್ದರು. ಸಮಾರಂಭದಲ್ಲಿ ಹಾಸ್ಯನಟ ಶಿವರಾಂ, ಚಿತ್ರ ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್‌, ಪ್ರಶಸ್ತಿ ವಿಜೇತ ಚಿತ್ರ ಮೌನಿಯ ನಿರ್ದೇಶಕ ಲಿಂಗದೇವರು, ನಿರ್ಮಾಪಕ ವಿಜಯಕುಮಾರ್‌, ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಮೊದಲಾದವರು ಹಾಜರಿದ್ದರು.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Saturday, April 20, 2024, 4:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X