»   » ಬದುಕಿನ ಧಾರೆಯಲ್ಲಿ ಪ್ರೇಮಾಮೃತ ಇರಲಿ ...

ಬದುಕಿನ ಧಾರೆಯಲ್ಲಿ ಪ್ರೇಮಾಮೃತ ಇರಲಿ ...

Subscribe to Filmibeat Kannada
  • ಮಹಾತೇಶ ಬಹಾದುಲೆ
ಬೆಳ್ಳಿತೆರೆಯೇ ರಕ್ತ ರಂಜಿತವಾಗುತ್ತಿದೆಯೇನೊ ಎನ್ನುವಷ್ಟು ಹಿಂಸೆ ಇಂದು ಸಿನಿಮಾಗಳಲ್ಲಿ ವಿಜೃಂಭಿಸುತ್ತಿದೆ. ಇದರ ಮಧ್ಯೆಯೇ ನಾಗತಿಹಳ್ಳಿ ಚಂದ್ರಶೇಖರ ಇದ್ಯಾವುದೂ ಇಲ್ಲದ, ತಮ್ಮದೇ ಅನುಭವದ ‘ಅಮೃತಧಾರೆ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಶುಕ್ರವಾರ(ಸೆ.16) ಅದು ತೆರೆಯ ಮೇಲೆ ಹರಿದು ಬರಲಿದೆ. ಈ ಹಿನ್ನೆಲೆಯಲ್ಲಿ ಅವರು ಹಂಚಿಕೊಂಡ ವಿಚಾರಧಾರೆ ಇಲ್ಲಿದೆ.
  • ಇತ್ತೀಚೆಗೆ ಮಚ್ಚು, ಲಾಂಗುಗಳ ಕಥೆಯ ಸಿನಿಮಾಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಅಂಥದರಲ್ಲಿ ‘ಅಮೃತ ಧಾರೆ’ ಯಂಥ ನವಿರು ಪ್ರೇಮಕಥೆ ಗೆಲ್ಲುತ್ತೆ ಅಂತ ನಂಬುವುದು ಹೇಗೆ?
ಹೊಡಿ, ಬಡಿ, ಕಡಿಯಂಥ ಚಿತ್ರಗಳೇ ಸಾಲಾಗಿ ಬಂದಿರುವುದರಿಂದ ನಮ್ಮ ಚಿತ್ರಕ್ಕೆ ಅದು ವರವಾಗೇ ಪರಿಣಮಿಸಬಹುದು. ಏಕೆಂದರೆ ಅಂಥ ಸಿನಿಮಾಗಳ ಮಧ್ಯೆ ಅಪೂರ್ವ ಸಂದೇಶ ಹೊತ್ತು ಬರುವ ಅಮೃತಧಾರೆ, ಜನರಿಗೆ ವಿಶಿಷ್ಟ ಹಾಗೂ ಭಿನ್ನ ಎನಿಸಬಹುದು. ಸಹಜವಾಗೇ ಪ್ರೇಕ್ಷಕ ಇದರಲ್ಲಿ ನಿರಾಳ ಅನುಭವ ಹೊಂದುತ್ತಾನೆ ಹಾಗೂ ಅದನ್ನು ಆನಂದಿಸುತ್ತಾನೆ. ಇದು ಚಿತ್ರದ ಗೆಲುವಿಗೆ ಖಂಡಿತ ಪೂರಕ ವಾತಾರಣವೆ. ಏಕೆಂದರೆ ಜನತೆ ಬಯಸುವುದು ವೈವಿಧ್ಯತೆಯನ್ನೇ ಅಲ್ಲವೆ?
  • ಪ್ರೇಕ್ಷಕ ಇಂದು ಮನೆ ಬಿಟ್ಟು ಥಿಯೇಟರಿಗೆ ಬರುವುದು ಕಡಿಮೆಯಾಗಿದೆ. ಹೀಗಿರುವಾಗ ಪ್ರೇಕ್ಷಕರನ್ನು ಆಕರ್ಷಿಸಲು ನಿಮ್ಮ ಚಿತ್ರದಲ್ಲಿ ವಿಶೇಷವೇನಿದೆ?
ಅಮೃತಧಾರೆಯನ್ನು ನೋಡದಿದ್ದರೆ ಜನ ಅದ್ಭುತ ಅನುಭವದಿಂದ ವಂಚಿತರಾಗುತ್ತಾರೆ ಎಂದು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಇದರಲ್ಲಿ ಬದುಕಿನ ಅನ್ವೇಷಣೆಯಿದೆ. ದ್ವಂದ್ವಗಳ ವಿಶ್ಲೇಷಣೆಯಿದೆ. ಅದರ ಮಧ್ಯೆಯೇ ಜೀವನದ ಪ್ರೀತಿಯ ಸಂದೇಶವಿದೆ. ಮನರಂಜನೆಯಾಂದಿಗೆ ಜೀವನದ ಸಮಸ್ಯೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಖಂಡಿತ ಮಾಡಿದ್ದೇವೆ. ಅದನ್ನು ಜನ ಇಷ್ಟಪಡುತ್ತಾರೆ ಎಂಬ ನಂಬಿಕೆಯಿದೆ. ಏಕೆಂದರೆ ಒಳ್ಳೆಯದರಿಂದ ಒಳ್ಳೆಯದೇ ಆಗುತ್ತದೆ ಎನ್ನುವುದರಲ್ಲಿ ನನಗೆ ವಿಶ್ವಾಸವಿದೆ.
  • ಅಂಥ ಯಾವ ಸಂದೇಶವನ್ನು ಈ ಚಿತ್ರದಲ್ಲಿ ನೀಡಲು ಯತ್ನಿಸಿದ್ದೀರಾ?
ಈ ಕ್ಷಣದ ಬದುಕನ್ನು ಪ್ರೀತಿಸು. ಏಕೆಂದರೆ ಮತ್ತೆ ಅದು ಬಾರದು. ನಾಳೆಗಳ ಬಗ್ಗೆ ಕನಸು ಕಾಣುವುದು ಬೇರೆ. ಆದರೆ ವರ್ತಮಾನದ ಬದುಕನ್ನು ಜೀವಿಸು. ಅದನ್ನು ಪ್ರೀತಿಸಲು ಕಲಿತರೆ ಬದುಕನ್ನೂ ಪ್ರೀತಿಸಲು ತಾನಾಗಿಯೇ ಗೊತ್ತಾಗುತ್ತದೆ. ಇದು ನಾನು ಬದುಕಿನಲ್ಲಿ ಕಂಡುಕೊಂಡ ಅನುಭಾವಾವೃತ. ಅದನ್ನೇ‘ಅಮೃತಧಾರೆ’ ಯಲ್ಲಿ ನಾಯಕಿ ಅಮೃತಾಳಿಂದ ಹೇಳಿಸಲು ಪ್ರಯತ್ನಿಸಿದ್ದೇನೆ.
  • ಈ ಚಿತ್ರದಲ್ಲಿ ಮೇರುನಟ ಅಮಿತಾಬ್‌ ಕೂಡ ಅಭಿನಯಿಸಿದ್ದಾರೆ. ಅವರಿಂದ ನಾವು ತುಂಬ ಪ್ರಭಾವಕ್ಕೊಳಗಾದ ವಿಷಯವೇನಾದರೂ ಇದೆಯಾ?
ಅಮಿತಾಬ್‌ ಅವರ ಸರಳತೆ. ಅದು ಅವರು ತೋರಿಕೆಗೆ ತೋರಿಸುವ ಸರಳತೆಯನ್ನು ನಿಜವಾಗಿಯೂ ಆ ನಟ ಇರುವುದೇ ಹಾಗೆ. ನಾಟಕೀಯವೆನ್ನುವುದು ಒಂದಿಷ್ಟೂ ಇಲ್ಲ. ಅವರ ಮಾತು, ಮನಸ್ಸು, ನಡತೆ, ಯೋಚನೆ ಎಲ್ಲವೂ ಸರಳ. ಅಂಥ ಪಾರದರ್ಶಕವಾದ ಸರಳತೆ ಇದ್ದರೆ ಮನುಷ್ಯ ತುಂಬ ಎತ್ತರಕ್ಕೆ ಬೆಳೆಯುತ್ತಾನೆ. ಇದ್ದುದರಿಂದಲೇ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದು. ಚಿತ್ರೀಕರಣದ ವೇಳೆ ಅವರು ತೋರಿದ ಸಹಕಾರ ಮರೆಯಲಾಗದು.
  • ಅಮೃತಧಾರೆಯನ್ನು ತಾವೇ ನಿರ್ಮಿಸಲು ನಿರ್ಧರಿಸಿದ್ದೇಕೆ? ತಾವು ಮನಸ್ಸು ಮಾಡಿದ್ದರೆ ಅನೇಕ ನಿರ್ಮಾಪಕರು ಸಿಗುತ್ತಿದ್ದರಲ್ಲ ?
ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ನನ್ನ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕಿತ್ತು. ಅಷ್ಟೇ ಅಲ್ಲ, ನನ್ನದೇ ಆದ ತಂಡವೊಂದನ್ನು ಕಟ್ಟಬೇಕೆಂಬ ಕನಸು ತುಂಬ ದಿನಗಳಿಂದಲೂ ಇತ್ತು. ಹಾಗಾಗಿ ನಾನೀಗ ಸಂಸ್ಥೆಯಾಂದನ್ನು ಕಟ್ಟಿದ್ದೇನೆ. ನಾಗತಿಹಳ್ಳಿ ಈಗ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಸಂಸ್ಥೆ. ಅದರಲ್ಲಿರುವವರನ್ನು ಬೆಳೆಸುವ ಜವಾಬ್ದಾರಿಯೂ ಈಗ ನನ್ನ ಮೇಲಿದೆ. ಸ್ವಂತ ಬ್ಯಾನರಿನಲ್ಲಿ ಚಿತ್ರ ನಿರ್ಮಿಸಿದ್ದರಿಂದಲೊ ಏನೋ, ಇದು ನನ್ನ ಕಲ್ಪನೆ ಹಾಗೂ ಗ್ರಹಿಕೆಗೆ ತಕ್ಕ ಹಾಗೆಯೇ ಮೂಡಿಬಂದಿದೆ. ಇದರಿಂದ ಮನಸ್ಸಿಗೆ ತೃಪ್ತಿ ಇದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada