»   » ಮತ್ತೊಬ್ಬ ಕನಸುಗಾರನ ನನಸು!

ಮತ್ತೊಬ್ಬ ಕನಸುಗಾರನ ನನಸು!

Posted By:
Subscribe to Filmibeat Kannada

ಬೆಂಗಳೂರು, ಡಿ.15 : ಕನ್ನಡ ಸಿನಿಮಾ, ಚಿತ್ರರಂಗ ಎಂದು ಎಲ್ಲರೂ ಮಾತನಾಡುತ್ತಾರೆ. ಗೊಣಗುತ್ತಾರೆ. ಅಬ್ಬರಿಸುತ್ತಾರೆ. ಆದರೆ ಎಲ್ಲೋ ಮರೆಯಲ್ಲಿ ಕೂತು, ಕೆಲವರು ಕೆಲಸ ಮಾಡುತ್ತಾರೆ. ಇಲ್ಲಿನ ಅಗತ್ಯಗಳ ಪೂರೈಸುತ್ತಾರೆ. ಅಂಥವರಲ್ಲಿ ಒಬ್ಬರು ರೇಣು ಕುಮಾರ್.

ಒಂದು ಸುಸಜ್ಜಿತವಾದ ಡಿಜಿಟಲ್ ಸ್ಟುಡಿಯೋ ಇಲ್ಲದೆ ಕನ್ನಡ ಚಿತ್ರರಂಗ ಧ್ವನಿಕಳೆದುಕೊಂಡಿತ್ತು. ಚಿತ್ರೀಕರಣ ಮುಗಿದ ನಂತರ ತಾಂತ್ರಿಕ ಕೆಲಸಕ್ಕಾಗಿ ಎಲ್ಲರೂ ಚೆನ್ನೈನತ್ತ ಮುಖ ಮಾಡಬೇಕಾದ ಪರಿಸ್ಥಿತಿ ಅಂದು ಇತ್ತು(ಈಗಲೂ ಇದೆ). ಈ ಮಧ್ಯೆ ಡಿಜಿಟಲ್ ಸ್ಟುಡಿಯೋವನ್ನು ನಂದಿನಿ ಬಡಾವಣೆಯಲ್ಲಿ ಸ್ಥಾಪಿಸುವ ಮೂಲಕ ಚಿತ್ರರಂಗದ ಕೊರತೆಯನ್ನು ನೀಗಿಸಿದ ಹಾಡುಗಾರ ರೇಣು ಕುಮಾರ್.

ಇಸ್ವಿ 1992, ಅಪಾರ ಕನಸುಗಳನ್ನು ಹೊತ್ತ ರೇಣು ಕುಮಾರ್ ಬೆಂಗಳೂರಿಗೆ ಹೊತ್ತು ಬಂದದ್ದು ಒಂದು ಸೀಮೆ‌ಎಣ್ಣೆ ಸ್ಟೌವ್, ಒಂದೆರಡು ಪಾತ್ರೆಪಗಡ. ಮೈಯಲ್ಲಿ ಕಸುವಿತ್ತು, ಕಣ್ಣಲ್ಲಿ ಕನಸಿತ್ತು. ಜಾಲಹಳ್ಳಿಯಲ್ಲಿ ಉಳಿದುಕೊಳ್ಳಲು 6ಅಡಿ ಉದ್ದ 6ಅಡಿ ಅಗಲದ ರೂಮಿತ್ತು. ಇವೆಲ್ಲವುಗಳ ಜತೆಗೆ ಹಾಡುವ ಹುಚ್ಚೂ ಇತ್ತು. ಈ ಹುಚ್ಚೇ ಅವರನ್ನು 'ಸೌಂಡ್ ಆಫ್ ಮೆಲೊಡಿ' ಎಂಬ ವಾದ್ಯಗೋಷ್ಠಿಯ ಬಾಗಿಲು ತಟ್ಟುವಂತೆ ಮಾಡಿತು. ಅಲ್ಲಿ ದಿನಕ್ಕೆ 20ರೂ. ಕೂಲಿ. ಮಧುರವಾದ ಕಂಠಸಿರಿ ಇದ್ದರೂ ವೇದಿಕೆಗೆ ಬರಲು ಮೂರು ವರ್ಷಗಳೇ ಬೇಕಾದವು.

ಹಾಡುಗಾರಿಕೆಯಲ್ಲಿದ್ದ ಶ್ರದ್ಧೆ, ಆಸಕ್ತಿಯನ್ನು ಗಮನಿಸಿದ ವಾದ್ಯಗೋಷ್ಠಿಯ ನಿರ್ವಾಹಕರು ನನಗೆ ಹಾಡಲು ಅವಕಾಶಕೊಟ್ಟರು. ವೇದಿಕೆಯ ಮೇಲೆ ನಾನು ಮೊದಲು ಹಾಡಿದ್ದೇ ರಾಜ್‌ಕುಮಾರ್ ಚಿತ್ರದ ಗೀತೆಯನ್ನು ಎಂದು ರೇಣು ಕುಮಾರ್ ತಮ್ಮ ಆ ದಿನಗಳನ್ನು ನೆನೆಸಿಕೊಳ್ಳುತ್ತಾರೆ. ಮುಂದೆ ಅವರು 'ಟಾಪ್ ಸ್ಟಾರ್' ಅನ್ನುವ ಸ್ವಂತ ವಾದ್ಯಗೋಷ್ಠಿಯನ್ನು ಪ್ರಾರಂಭಿಸಿ ನಾಡಿನಾದ್ಯಂತ ತಮ್ಮ ಕಂಠಸಿರಿಯ ಗಾನಸುಧೆಯನ್ನು ಹರಿಸಿದ್ದಾರೆ. ಈಗ ಅವರು ಮೂರು ಕೋಟಿ ರೂ. ವೆಚ್ಚದಲ್ಲಿ ನಂದಿನಿ ಬಡಾವಣೆಯಲ್ಲಿ 'ರೇಣು ಡಿಜಿಟಲ್ ಸ್ಟುಡಿಯೋ'ವನ್ನು ಕಟ್ಟಿದ್ದಾರೆ. ಹಾಗೆ ಕಟ್ಟಿ ಸಾಕಷ್ಟು ತಂತ್ರಜ್ಞರಿಗೆ ಕೈತುಂಬಾ ಕೆಲಸವನ್ನೂ ಕೊಟ್ಟಿದ್ದಾರೆ.

ರೇಣು ಡಿಜಿಟಲ್ ಸ್ಟುಡಿಯೋದ ವಿಭಾಗಗಳಿಗೆ ಡಾ. ರಾಜ್‌ಕುಮಾರ್, ಶಂಕರ್‌ನಾಗ್, ಜಿ.ಕೆ. ವೆಂಕಟೇಶ್ ಅವರ ಹೆಸರುಗಳನ್ನು ಇಟ್ಟಿದ್ದಾರೆ. ಇಲ್ಲಿ ಅತ್ಯಾಧುನಿಕ ಸಂಕಲನ ಕೇಂದ್ರವಿದೆ. ಈ ರೀತಿಯ ಸ್ಟುಡಿಯೋ ಬೇರೆ ಎಲ್ಲೂ ಇಲ್ಲಾ ಎನ್ನುತ್ತಾರೆ ಅವರು. ತಮ್ಮ ಸ್ಟುಡಿಯೋದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಉಚಿತ ತರಬೇತಿ ಕೊಡಲೂ ಸಿದ್ಧವಾಗಿದ್ದಾರೆ. ಸಂಗೀತದ ಹಿನ್ನಲೆ ಉಳ್ಳವರಿಗೆ, ಕಂಪ್ಯೂಟರ್ ಜ್ಞಾನ ಉಳ್ಳವರಿಗೆ ಪ್ರಾಧಾನ್ಯತೆ ಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada