ಎಚ್ಡಿಕೆಗೆ 'ಲಕ್ಕಿ' ರಾಧಿಕಾ ಜನ್ಮ ದಿನದ ಶುಭಾಶಯಗಳು
ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ (53) ಅವರಿಗೆ 'ಲಕ್ಕಿ' ಚಿತ್ರದ ನಿರ್ಮಾಪಕಿ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಅವರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಅವರು ಶುಭಾಶಯಗಳನ್ನು ಕೋರಿರುವುದು ಸತ್ಯವಾಗಿಯೂ ಒನ್‌ಇಂಡಿಯಾ ಕನ್ನಡಲ್ಲಂತೂ ಅಲ್ಲವೇ ಅಲ್ಲ!
ಕನ್ನಡ ಅತ್ಯಧಿಕ ಪ್ರಸಾರದ ದಿನಪತ್ರಿಕೆಗಳಲ್ಲಿ ಶುಭ ಶುಕ್ರವಾರ 'ಲಕ್ಕಿ' ಚಿತ್ರ ತಂಡ ಅರ್ಧಪುಟದಷ್ಟು ಜಾಹೀರಾತನ್ನು ನೀಡಿ ಸನ್ಮಾನ್ಯ ಎಚ್ ಡಿ ಕುಮಾರಸ್ವಾಮಿ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರಲಾಗಿದೆ. ಒಂದು ಬದಿಯಲ್ಲಿ ಎಚ್ಡಿಕೆ ಫೋಟೋ ಮತ್ತೊಂದು ಬದಿಯಲ್ಲಿ ರಾಧಿಕಾ ಅವರ ಫೋಟೋಗಳು ರಾರಾಜಿಸುತ್ತಿವೆ.
ಯಶ್ ಮತ್ತು ರಮ್ಯಾ ಮುಖ್ಯಭೂಮಿಕೆಯಲ್ಲಿರುವ 'ಲಕ್ಕಿ' ಚಿತ್ರದ ಆಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 'ಲಕ್ಕಿ' ಚಿತ್ರವನ್ನು ಎಚ್ ಡಿ ಕುಮಾರಸ್ವಾಮಿ ಅರ್ಪಿಸುತ್ತಿದ್ದು ಶಮಿಕಾ ಎಂಟರ್‌ಪ್ರೈಸಸ್ ಬ್ಯಾನರಿನಡಿ ನಿರ್ಮಿಸಲಾಗಿದೆ. ಡಾ.ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.
ವಿಶೇಷ ಎಂದರೆ ಈ ಚಿತ್ರಕ್ಕೆ ಯೋಗರಾಜ್ ಭಟ್, ಶಶಾಂಕ್, ಜಯಂತ ಕಾಯ್ಕಿಣಿ ಅವರ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಅತೀವ ಕುತೂಹಲ ಕೆರಳಿಸಿರುವ ಚಿತ್ರಗಳಲ್ಲಿ 'ಲಕ್ಕಿ' ಚಿತ್ರವೂ ಒಂದಾಗಿದೆ. (ಒನ್‌ಇಂಡಿಯಾ ಕನ್ನಡ)
* ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಅವರಿಗೆ 53 ನೇ ಹುಟ್ಟುಹಬ್ಬದ ಅನೇಕ ಶುಭಾಶಯಗಳು - ಒನ್ ಇಂಡಿಯ ಕನ್ನಡ


Click it and Unblock the Notifications











