»   » ಬಾಕ್ಸಾಫೀಸ್ : ಗಜ 'ದರ್ಶನ್ ಮುಂದೆ, 'ಸತ್ಯ' ಶಿವು ಹಿಂದೆ

ಬಾಕ್ಸಾಫೀಸ್ : ಗಜ 'ದರ್ಶನ್ ಮುಂದೆ, 'ಸತ್ಯ' ಶಿವು ಹಿಂದೆ

Subscribe to Filmibeat Kannada

ದರ್ಶನ್ ತೂಗುದೀಪ ಮತ್ತೆ ಯಶಸ್ಸಿನ ಹಾದಿ ಹಿಡಿದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅವರ ಅಭಿನಯದ ವರ್ಷದ ಪ್ರಥಮ ಬಿಡುಗಡೆ 'ಗಜ' ಚಿತ್ರ ಶತದಿನೋತ್ಸವದ ಹೊಸ್ತಿಲಲ್ಲಿದೆ. ಜತೆಗೆ ಹಣಗಳಿಕೆಯಲ್ಲೂ ಕಳೆದ ಹಲವು ವಾರಗಳಿಂದ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ. ಹಣಗಳಿಕೆಯಲ್ಲಿ ಸತ್ಯಾ ಇನ್ ಲವ್ ಕುಸಿತ ಕಂಡಿರುವುದು ಅಚ್ಚರಿಯಾಗಿದೆ. ಈ ಐದು ಟಾಪ್ ಚಿತ್ರಗಳಲ್ಲಿ ಗಾಳಿಪಟ ಬಿಟ್ಟರೆ ಉಳಿದ ನಾಲ್ಕು ಚಿತ್ರಗಳು ಹೊಡೆದಾಟವನ್ನು ನಂಬಿಕೊಂಡಂಥ ಚಿತ್ರಗಳು.

1.ಗಜ : ಈ ವರ್ಷ ಮೊದಲ ಪ್ರಮುಖ ಚಿತ್ರ ಎಂಬ ಹೆಗ್ಗಳಿಕೆ ಹೊತ್ತುಕೊಂಡು ಬಿಡುಗಡೆಯಾದ ದರ್ಶನ್ ಅಭಿನಯದ ಚಿತ್ರ ಗಜ. ದರ್ಶನ್ ಅವರ ಎಲ್ಲಾ ಚಿತ್ರಗಳಂತೇ ಆರಂಭಿಕ ಗಳಿಕೆಯಲ್ಲಿ ಯಶಕಂಡರೂ, ನಂತರ ದಿನಗಳಲ್ಲಿ ಕುಸಿತ ಕಾಣುತ್ತದೆ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿ, ಭರ್ಜರಿ ಹಣಗಳಿಕೆಯತ್ತ ದಾಪುಗಾಲಿಟ್ಟಿದೆ. ಬಾಕ್ಸಾಫಿಸಿನ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರ ಹಲವು ವಾರಗಳ ಕಾಲ ಪ್ರಥಮ ಸ್ಥಾನದಲ್ಲಿ ಉಳಿದಿದೆ. ಹರಿಕೃಷ್ಣ ಅವರ ಸಂಗೀತ, ನಾಯಕಿ ನವ್ಯಾ ನಾಯರ್ ಅಭಿನಯ ಕೂಡ ಜನ ಮೆಚ್ಚುಗೆಯನ್ನು ಗಳಿಸಿದೆ.

2.ಗಾಳಿಪಟ : ರಾಜ್ಯದ ಇತರೆಡೆಗಳಲ್ಲಿ ಗಾಳಿಪಟದ ಹಾರಾಟ ತಗ್ಗಿದ್ದರೂ, ನಗರ ಪ್ರದೇಶಗಳಲ್ಲಿ ಹಾರಾಟ ಅವಿರತವಾಗಿ ಸಾಗಿರುವ ಹಿನ್ನೆಲೆಯಲ್ಲಿ ಗಣೇಶ್ ಅಭಿನಯದ ಗಾಳಿಪಟ ಚಿತ್ರ ಎರಡನೇ ಸ್ಥಾನದಲ್ಲಿದೆ. ಯೋಗರಾಜಭಟ್ಟರ ನಿರ್ದೇಶನ, ಗಣೇಶ್ ಅಭಿಮಾನಿಗಳ ಶ್ರೀರಕ್ಷೆಯ ನೆರವಿನಿಂದ ಚಿತ್ರ ಶತದಿನದ ಭಾಗ್ಯ ಕಾಣುವ ಹುಮ್ಮಸ್ಸಿನಲ್ಲಿದೆ. ಜಯಂತ್ ಕಾಯ್ಕಿಣಿ ಬರೆದ ಮನಬೆಚ್ಚಗಾಗಿಸುವ ಹಾಡು, ಹರಿಕೃಷ್ಣ ಸುಶ್ರಾವ್ಯ ಸಂಗೀತ ಚಿತ್ರವನ್ನು ನಿಧಾನವಾದರೂ ಮೇಲಕ್ಕೆತ್ತಿವೆ.

3 .ಗೂಳಿ: ಸುದೀಪ್ ಅಭಿನಯದ ಗೂಳಿ ಚಿತ್ರ ಮೊದಲ ವಾರದ ಭರ್ಜರಿ ಗಳಿಕೆ ನಂತರ ಸ್ವಲ್ಪ ಡಲ್ ಆದರೂ, ನಂತರ ಚೇತರಿಕೆ ಕಂಡಿದೆ. ದರ್ಶನ್ ಅವರಿಗೆ ಕಮರ್ಷಿಯಲ್ ಯಶಸ್ಸು ತಂದು ಕೊಟ್ಟಿದ್ದ ನಿರ್ದೇಶಕ ಪಿ.ಸತ್ಯಾ ಅವರು ಸುದೀಪ್ ಕೈಗೆ ಲಾಂಗ್ ಕೊಟ್ಟು, ಯುವಜನರಿಗೆ ಮೆಚ್ಚುಗೆಯ ಚಿತ್ರ ಮಾಡಿದ ಖುಷಿಯಲ್ಲಿದ್ದಾರೆ. ಕೋಟಿ ನಿರ್ಮಾಪಕ ರಾಮು ಅವರಿಗೂ ಈ ಚಿತ್ರ ಹಲವು ಸೋಲುಗಳ ನಂತರ ಕೊಂಚ ಗೆಲುವಿನ ರುಚಿ ತೋರಿಸಿದೆ. ಯಶಸ್ಸಿನಲ್ಲಿ 'ಸುಮ್ ಸುಮ್ನೆ ಯಾಕೊ ನೀ ತುಟಿಯಾ ಚುಂಬಿಸಿದೆ' ಹಾಡಿನ ಪಾಲೂ ಇದೆ.

4.ನಂದಾ ಲವ್ಸ್ ನಂದಿತಾ : ಕಡಿಮೆ ಬಜೆಟ್‌ನಲ್ಲಿ ಚಿತ್ರಮಾಡಿ, ತಾವೇ ನಿರ್ಮಿಸಿ ಬಿಡುಗಡೆ ಮಾಡಿದ ನಾಯಕ ಯೋಗೀಶ್ ಅವರ ಕುಟುಂಬದವರಿಗೆ, ಈ ಚಿತ್ರ ಕೈಕೊಟ್ಟಿಲ್ಲ ಎನ್ನಬಹುದು. ಒಂದು ಹಿಟ್ ಸಾಂಗ್, ರೌಡಿಸಂ ಪ್ರಧಾನತೆಯುಳ್ಳ ಚಿತ್ರ ಯುವಪೀಳಿಗೆಯ ನೆರವಿನಿಂದ ಟಾಪ್ ಐದರ ಪಟ್ಟಿಯಲ್ಲಿ ಸ್ಥಾನಗಳಿಸಿದೆ. ದುನಿಯಾ ಚಿತ್ರದ ಉತ್ಪನ್ನಗಳಾದ ವಿಜಯ್‌ ಅವರಂತೆ, ಯೋಗೀಶ್ ಕೂಡ ಚಿತ್ರದ ಪ್ರಧಾನ ಕೇಂದ್ರಬಿಂದುವಾಗಿದ್ದಾರೆ. ನಟನಾ ಕೌಶಲ್ಯದ ಮುಂದೆ ಲುಕ್ಸ್ ಎಲ್ಲಾ ನಗಣ್ಯ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ.

5. ಸತ್ಯಾ ಇನ್ ಲವ್ : ಭರ್ಜರಿ ಪ್ರಚಾರದೊಂದಿಗೆ ಪ್ರಾರಂಭವಾದ ಶಿವರಾಜ್ ಕುಮಾರ್ ಅವರ ಅಭಿನಯದ ಈ ಚಿತ್ರ, ತನ್ನ ಜಾದೂ ತೋರುವಲ್ಲಿ ವಿಫಲವಾಗಿದೆ. ಗುರುಕಿರಣ್ ಸಂಗೀತ, ಜೆನಿಲಿಯಾ ಮೋಡಿ ಪ್ರೇಕ್ಷಕ ಸ್ವೀಕರಿಸಿದಂತೆ ಕಂಡುಬಂದಿಲ್ಲ. ವಾರದಿಂದ ವಾರಕ್ಕೆ ಜನರ ಪ್ರತಿಕ್ರಿಯೆ ನಿರಾಶೆ ಮೂಡಿಸುತ್ತಿದೆ. ಒಂದೇ ಬಾರಿಗೆ 90 ಕೇಂದ್ರಗಳಲ್ಲಿ ಬಿಡುಗಡೆಗೊಂಡ ಈ ಚಿತ್ರ ಹಣಗಳಿಕೆಯಲ್ಲಿ ನಿರೀಕ್ಷಿತ ಮಟ್ಟವನ್ನು ಇನ್ನೂ ತಲುಪಿಲ್ಲ. ಬೇಸಿಗೆ ರಜೆಯಲ್ಲಿ ಚಿತ್ರದ ಓಟ ಮುಂದುವರೆಯುವುದೋ ಅಥವಾ ಸುಸ್ತಾಗಿ ಕುಸಿಯುವುದೇ ಶಿವನೇ ಬಲ್ಲ. ಹಾಳೂರಿನಲ್ಲಿ ಉಳಿದವನೇ ಊರ ಗೌಡ ಎಂಬಂತೆ ಈ ಚಿತ್ರ ಐದನೇ ಸ್ಥಾನ ಕಾಪಾಡಿಕೊಂಡಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ನಾಯಕಿಯರ ಗ್ಯಾಲರಿ : ಗಜ : ನವ್ಯಾ ನಾಯರ್, ಗಾಳಿಪಟ : ಡೈಸಿ ಬೋಪಣ್ಣ, ಗೂಳಿ : ಮಮತಾ ಮೋಹನದಾಸ್, ಸತ್ಯ ಇನ್ ಲವ್ : ಜೆನಿಲಿಯಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada