»   » ದರ್ಶನ್‌ಗೆ ಹುಟ್ಟುಹಬ್ಬದ ಶುಭಾಶಯಗಳು

ದರ್ಶನ್‌ಗೆ ಹುಟ್ಟುಹಬ್ಬದ ಶುಭಾಶಯಗಳು

Subscribe to Filmibeat Kannada

ಚಾಲೇಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಇಂದು (ಫೆ.16) ಅಭಿಮಾನಿಗಳ ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ರಾಜರಾಜೇಶ್ವರೀನಗರದ ತಮ್ಮ ಹೊಸನಿವಾಸದಲ್ಲಿ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಬೆಂಗಳೂರು ಮೆಜೆಸ್ಟಿಕ್‌ನ ಗಾಂಧಿನಗರದಲ್ಲಿ ಸಾಕಷ್ಟು ಹೋರಾಟ ನಡೆಸಿದ ಈ ಅಯ್ಯ ಕನ್ನಡಿಗರ ಸ್ನೇಹವನ್ನ ಮತ್ತು ಪ್ರೀತಿಯನ್ನ ಪಡೆದು ತಮ್ಮ ಈ ಬಂಧನವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಏಳುಬೀಳುಗಳನ್ನು ಕಂಡರೂ ಗಜ ಗಾಂಭಿರ್ಯದಲ್ಲಿ ಮುಂದೆ ಹೋಗುತ್ತಿದ್ದಾರೆ. ಹೆಂಡತಿಯಿಂದ ಹುಟ್ಟುಹಬ್ಬಕ್ಕೆ ತಮ್ಮ ನೆಚ್ಚಿನ ಪ್ರಾಣಿ ಕುದುರೆಯ ಗುರುತಿರುವ ಚಿನ್ನದ ಸರವನ್ನು ಉಡುಗೊರೆಯನ್ನಾಗಿ ಪಡೆದಿದ್ದಾರೆ.

ವರ್ಷದ ಪ್ರಾರಂಭದಲ್ಲಿ ದರ್ಶನ್‌ಗೆ ಇದು ಎರಡನೇ ಸಂಭ್ರಮ. 2008ರ ಜನವರಿ, ಫೆಬ್ರವರಿಯಲ್ಲಿ ಬಿಡುಗಡೆಯಾದ ಹೆಚ್ಚುಕಡಿಮೆ ಎಲ್ಲ ಚಿತ್ರಗಳು ಏದುಸಿರು ಬಿಡುತ್ತಿದ್ದರೆ ಎಲ್ಲ ನಿರೀಕ್ಷೆ ಹುಸಿಮಾಡಿದ ದರ್ಶನ್ ಅವರ ಗಜ ಸುಂಟರಗಾಳಿ ಎಬ್ಬಿಸಿದೆ. ದರ್ಶನ್ ಅವರ ಆವೇಶಭರಿತ ಡೈಲಾಗ್ ಡೆಲಿವರಿ, ಕಾಮಿಡಿಯ ಥರಾವರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಾಂಗು, ಮಚ್ಚು, ಹೊಡೆದಾಟಗಳಿಂದ ಪ್ರವರ್ಧಮಾನಕ್ಕೆ ಬಂದ ದರ್ಶನ್ ಈಗ ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಎಂಥದೇ ಪಾತ್ರವನ್ನೂ ಲೀಲಾಜಾಲವಾಗಿ ನಿಭಾಯಿಸುವಷ್ಟು ನಟನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸ್ನೇಹಾನಾ ಪ್ರೀತಿನಾ ಚಿತ್ರದಲ್ಲಿ ತಾವು ಕಾಮಿಡಿಗೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದರ್ಶನ್ ಅವರ ಕಲೆಗಾರಿಕೆಯನ್ನು ಅನಾವರಣ ಮಾಡಿದ್ದು ಪ್ರೇಮ್‌ರ ಕರಿಯ ಚಿತ್ರ. ಈ ಚಿತ್ರದ ನಂತರ ಇತರ ನಿರ್ಮಾಪಕರೂ ದರ್ಶನ್‌ರನ್ನು ಕಾಸುಗಿಟ್ಟಿಸಿಕೊಡಬಲ್ಲ ನಟ ಅನ್ನತೊಡಗಿದರು. ಮುಂದೆ ಸಾಕಷ್ಟು ಚಿತ್ರಗಳು ತೋಪಾದರೂ ಗಜ ಅವರನ್ನು ಮತ್ತೆ ಎಬ್ಬಿಸಿ ನಿಲ್ಲಿಸಿದೆ. ನೀವು ದುಡ್ಡು ಹಾಕಿ ಕಾಸು ಹಿಂತಿರುಗಿಸುವ ಜವಾಬ್ದಾರಿ ನಂದು ಎಂದು ಅಭಯ ಹಸ್ತ ನೀಡುವ ಹಂತಕ್ಕೆ ದರ್ಶನ್ ಬಂದಿದ್ದಾರೆ.

ವಲ ಐದುವರ್ಷಗಳ ಕಾಲದಲ್ಲಿ ತಮ್ಮದೇ ಚಿತ್ರನಿರ್ಮಾಣ 'ತೂಗುದೀಪ ಪ್ರೊಡಕ್ಷನ್ಸ್' ಸಂಸ್ಥೆಯನ್ನು ಸ್ಥಾಪಿಸಿ 'ಜೊತೆ ಜೊತೆಯಲಿ' ಚಿತ್ರವನ್ನು ಬಿಡುಗಡೆಗೊಳಿಸಿದ ದರ್ಶನ್ ಕನ್ನಡದ ಪ್ರಖ್ಯಾತ ಖಳನಟರಾದ ದಿ.ತೂಗುದೀಪ ಶ್ರೀನಿವಾಸ್ ಅವರ ಪುತ್ರ. ದರ್ಶನ್ ಕನ್ನಡಿಗರಲ್ಲಿ ಛಾಪನ್ನು ಮೂಡಿಸಿ ತಮ್ಮದೇ ಆದ ಪ್ರೇಕ್ಷಕವರ್ಗ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರು ಅಡಿಗೂ ಉದ್ದವಿರುವ ದರ್ಶನ್ ಇನ್ನಷ್ಟ್ಟು ಎತ್ತರಕ್ಕೆ ಬೆಳೆಯುತ್ತಲೇ ಇದ್ದಾರೆ. ಚಿತ್ರೋದ್ಯಮದಲ್ಲಿ ಈಗ ಗೆಲ್ಲುವ ಕುದುರೆಯಲ್ಲದೆ ಗೆದ್ದ 'ಗಜ' ನೂ ಆಗಿರುವ ನಮ್ಮ ದರ್ಶನ್ ಹಾದು ಬಂದ ಪ್ರಯಾಣ ರಾಷ್ಟೀಯ ಹೆದ್ದಾರಿಯಾಗಿರಲಿಲ್ಲ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada