ಶೀಘ್ರ ವಿಷ್ಣು ಸ್ಮಾರಕ ನಿರ್ಮಿಸಲು ದೇವೇಗೌಡ ಒತ್ತಾಯ
ಅಭಿನಯಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲೇ ನಿರ್ಮಿಸಬೇಕು. ಸ್ಮಾರಕ ನಿರ್ಮಿಸಲು ಉಂಟಾಗಿರುವ ತೊಡಕುಗಳನ್ನು ಪರಿಹರಿಸಿ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕವನ್ನು ನಿರ್ಮಿಸಲು ಸರ್ಕಾರ ಮುಂದಾಗ ಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಪ್ರಶಾಂತನಗರದಲ್ಲಿ ಅಭಿನಯಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ನೂತನವಾಗಿ ನಿರ್ಮಿಸಿರುವ ವಿಷ್ಣುವರ್ಧನ್ ಪುತ್ಥಳಿಯನ್ನು ಬಿಡುಗಡೆ ಮಾಡುತ್ತಾ ದೇವೇಗೌಡರು ಮಾತನಾಡುತ್ತಿದ್ದರು. ವಿಷ್ಣು ಸ್ಮಾರಕ ನಿರ್ಮಾಣ ಅಭಿಮಾನಿಗಳ ಭಾವನಾತ್ಮಕ ಪ್ರಶ್ನೆ. ಅದನ್ನು ಯಾವುದೇ ಕಾರಣಕ್ಕೂ ಮೈಸೂರಿನಲ್ಲಿ ನಿರ್ಮಿಸಬಾರದು ಎಂದರು.
ಸ್ಮಾರಕಕ್ಕೆ ಸರಕಾರ ಈಗಾಗಲೆ ರು.5 ಕೋಟಿಯನ್ನು ಬಿಡುಗಡೆ ಮಾಡಿದೆ. ಹತ್ತು ಕೋಟಿ ಆದರೂ ಪರ್ವಾಗಿಲ್ಲ ಸ್ಮಾರಕವನ್ನು ಮಾತ್ರ ಅಭಿಮಾನ್ ಸ್ಟುಡಿಯೋದಲ್ಲಿಯೇ ನಿರ್ಮಿಸಬೇಕು. ಸ್ಮಾರಕ ಸ್ಥಾಪನೆಗೆ ಸರಕಾರ ಅನುಸರಿಸುತ್ತಿರುವ ವಿಳಂಬ ನೀತಿ ಸರಿಯಲ್ಲ. ಈ ಸಂಬಂಧ ಸಿಎಂಗೆ ಪತ್ರ ಬರೆಯಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗೌಡರಿಗೆ ಒಂದು ಪ್ರಶ್ನೆ ತೂರಿಬಂತು, ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ಮಹಾನ್ ಕಲಾವಿದ ವಿಷ್ಣುವರ್ಧನ್ ಅವರ ಸ್ಮರಣೆಯ ಈ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದರು. ಸಮಾರಂಭದಲ್ಲಿ ನಟ ಅನಿರುದ್ಧ್ ಉಪಸ್ಥಿತರಿದ್ದರು.
ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣು ಸ್ಮಾರಕದ ಜಾಗ ಕೌಟುಂಬಿಕ ವ್ಯಾಜ್ಯಗಳಿಗೆ ಸಿಲುಕಿದ್ದು ಅದು ಶೀಘ್ರ ಪರಿಹಾರವಾಗುವ ಸೂಚನೆಗಳಿಲ್ಲ. ಹಾಗಾಗಿ ತಾವು ವಿಷ್ಣು ಸ್ಮಾರಕವನ್ನು ಮೈಸೂರಿನಲ್ಲಿ ಸ್ಥಾಪಿಸುತ್ತೇನೆ ಎಂದು ಭಾರತಿ ವಿಷ್ಣುವರ್ಧನ್ ಕೆಲ ದಿನಗಳ ಹಿಂದೆ ಹೇಳಿದ್ದರು. ಈಗ ದೇವೇಗೌಡರ ಅಭಿಮಾನ್ ಸ್ಟುಡಿಯೋದಲ್ಲೇ ಸ್ಥಾಪನೆಯಾಗಲಿ ಎಂದಿರುವುದು ವಿಶೇಷ. (ಏಜೆನ್ಸೀಸ್)


Click it and Unblock the Notifications











