ಗಣೇಶನಿಗೆ ಕೊನೆಗೂ ಸಿಕ್ಕ ಮೈನಾ ಹಕ್ಕಿ ಸನುಶಾ
ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂಬರುವ ಕುತೂಹಲಕಾರಿ ರಿಮೇಕ್ ಚಿತ್ರಕ್ಕೆ ಅಂತೂ ಹೀರೋಯಿನ್ ಸೆಲೆಕ್ಟ್ ಆಗಿದ್ದಾಳೆ. ಗಣೇಶ್ ಗೆ ಜೋಡಿಯಾಗಿ ಮಲೆಯಾಳಿ ತಾರೆ ಸನುಶಾ ಸಂತೋಷ್ ರನ್ನು ಕಲಾ ಸಾಮ್ರಾಟ್ ಎಸ್ ನಾರಾಯಣ್ ತಂದು ನಿಲ್ಲಿಸಿದ್ದಾರೆ. ಈ ಮುಂಚೆ ಅಮಲಾ ಪೌಲ್ ಗಣೇಶ್ ಫೋಟೋ ಪಕ್ಕ ಪಕ್ಕ ಹಿಡಿದು ನೋಡಿ ಓಕೆ ಎಂದಿದ್ದ ನಾರಾಯಣ್ ಈಗ ಸನುಶಾರನ್ನು ಮೆಚ್ಚಿದ್ದಾರೆ.
ತಮಿಳಿನ ಬಿಗ್ ಹಿಟ್ ಚಿತ್ರ ಮೈನಾ ಕನ್ನಡ ಅವತರಣಿಕೆಯಾದ ಶೈಲೂ ಚಿತ್ರದಲ್ಲಿ ಆಲ್ ರೌಂಡರ್ ನಾರಾಯಣ್ ಅವರು ಯಥಾವತ್ತು ಕಾಪಿ ಮಾಡುವುದಿಲ್ಲ. ಸ್ಕ್ರಿಪ್ಟ್ ಇಲ್ಲಿ ನೆಟಿವಿಟಿಗೆ ಹತ್ತಿರವಾಗಿರುತ್ತದೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಹೇಳಿ ಮಾಡಿಸಿದ ಜೋಡಿಯಾಗಿ ಗಣೇಶ್ ಹಾಗೂ ಸನುಶಾ ಕಾಣುತ್ತಿದ್ದಾರೆ ಜೂ 24 ರಂದು ಕುಂಬಳಕಾಯಿ ಒಡೆದು ಗಣೇಶ(ಕ್ಷಮಿಸಿ ಗೋಲ್ಡನ್ ಸ್ಟಾರ್ ಅಲ್ಲ ವಿನಾಯಕ ದೇವರು)ನಿಗೆ ಜೈ ಎಂದು ಶೂಟಿಂಗ್ ಶುರು ಮಾಡಿಬಿಡ್ತೀನಿ ಎಂದು ತಮ್ಮ ಎಂದಿನ ಕೋಲ್ಗೇಟ್ ಸ್ಮೈಲ್ ಕೊಡ್ತಾರೆ ನಾರಾಯಣ್.
ಕುಂಬಳ ಕಾಯಿ ಎಂದಾಗ ನೆನಪಿಗೆ ಬಂತು. ನಮ್ಮ ಗನಿ ಕೂಡಾ ಇತ್ತೀಚೆಗೆ ಕುಂಬಳ ಕಾಯಿ ಹೊಡೆದಿದ್ದಾನೆ. ಬನಶಂಕರಿಯಲ್ಲಿ ನೆಲೆಸಿದ್ದ ಗಣೇಶ್ ಶಿಲ್ಪಾ ಕುಟುಂಬ ಈಗ ಜೆಪಿ ನಗರಕ್ಕೆ ಶಿಫ್ಟ್ ಆಗಿದೆ. ಜೆಪಿನಗರ ನಮ್ಮ ಶಿಲ್ಪಾ ಮೇಡಂ ತವರು ಮನೆ ಇದ್ದಂಗೆ. ಗಣೇಶ್ ಹೊಸ ಮನೆ ಗೃಹಪ್ರವೇಶ ಸದ್ದಿಲ್ಲದೆ ಮುಗಿದಿದೆ. ಗೋಲ್ಡನ್ ಸ್ಟಾರ್ ಸ್ವಲ್ಪ ಹಾಗೆ ಅಲ್ವ, ಸದ್ದಿಲ್ಲದೆ ಮದುವೆ ಆದ್ರೂ.. ಸದ್ದಿಲ್ಲದೆ ಹೋಮ್ ಪ್ರೊಡೆಕ್ಷನ್ ನಲ್ಲಿ ಎರಡೆರಡು ಹಿಟ್ ಚಿತ್ರ ಕೊಟ್ಟು ಕೂಲ್ ಕೂಲ್ ಎನ್ನುತ್ತಿದ್ದಾರೆ. ಗಣೇಶ್ ಗೆ ಮತ್ತೆ ಗೋಲ್ಡನ್ ಡೇಸ್ ಶುರುವಾದ ಆಗಿದೆ ಗುಡ್ ಲಕ್.
ಯಾರಿದು ಸನುಶಾ ಸಂತೋಷ್?: 2000ರಲ್ಲಿ ಇನ್ನೂ ಬಾಲನಟಿಯಾಗಿ ಮಲೆಯಾಳಂನ ದಾದಾ ಸಾಹೇಬ್ ಚಿತ್ರದಲ್ಲಿ ಓಡಾಡಿ ಕೊಂಡಿದ್ದಳು. ಮುಮ್ಮೂಟಿ ಚಿತ್ರ ಕಳ್ಚದಲ್ಲಿ ಬಾಲನಟಿಯಾಗಿ ಶ್ರೇಷ್ಠ ಬಾಲನಟಿ ಪ್ರಶಸ್ತಿಯನ್ನು ಗಳಿಸಿದಾಕೆ. ಈಗ ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ನಟಿಸಿಯಾಗಿದೆ. ಕನ್ನಡ ಚಿತ್ರರಂಗದತ್ತ ಮುಖ ಮಾಡಿ ನಿಂತಿದ್ದಾರೆ. ಗಣೇಶ್ ಜೋಡಿಯಾಗಿ ಕನ್ನಡ ಸಿನಿರಸಿಕರಿಗೆ ಯಾವ ರೀತಿ ಮೋಡಿ ಹಾಕಲಿದ್ದಾರೆ ಕಾದು ನೋಡಬೇಕಿದೆ.


Click it and Unblock the Notifications











