ರಜನಿ ಬೆಂಗಳೂರು ಭೇಟಿಯ ಹಿಂದಿನ ಮರ್ಮವೇನು?
ರಜನಿಕಾಂತ್ ಅಭಿನಯದ 'ಎಂಧಿರನ್' ಸೆಪ್ಟೆಂಬರ್ 24ರಂದು ಕರ್ನಾಟಕ ಸೇರಿದಂದೆ ದೇಶದಾದ್ಯಂತ ತೆರೆಕಾಣುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿದೆ. ಮೂಲಗಳ ಪ್ರಕಾರ ರು.9.75 ಕೋಟಿಗೆ ಮಾರಾಟ ಮಾಡಲಾಗಿದೆ. ರಜನಿಕಾಂತ್ ಹಾಗೂ ಐಶ್ವರ್ಯ ರೈ ಅಭಿನಯದ ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ತೆರೆ ಕಾಣುತ್ತಿರುವುದು ವಿಶೇಷ.
ಇತ್ತೀಚೆಗೆ ರಜನಿಕಾಂತ್ ಬೆಂಗಳೂರಿನ ಕಲಾಸಿಪಾಳ್ಯ ಬಾರೊಂದಕ್ಕೆ ಭೇಟಿ ನೀಡಿ ಸುದ್ದಿ ಮಾಡಿದ್ದರು. ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ರಜನಿ ಅಭಿಮಾನಿಗಳಿರುವುದು, 'ಎಂಧಿರನ್' ಬಿಡುಗಡೆ ಸಮಯಕ್ಕೆ ಅವರು ಬೆಂಗಳೂರಿಗೆ ಬಂದಿದ್ದು ಮೇಲ್ಮೊಟಕ್ಕೆ ಕಾಕತಾಳೀಯ ಅನ್ನಿಸಬಹುದು. ಆದರೆ ಅವರು ಹಾಗೆ ಬಂದಿದ್ದು ಉದ್ದೇಶಪೂರ್ವಕ ಎಂಬ ಗುಮಾನಿ ಬಾರದೆ ಇರದು.
ಹೇಳಿಕೇಳಿ ಈ ಚಿತ್ರ ಬಹುಕೋಟಿ ಬಜೆಟ್ ನದ್ದು. ಕಲಾನಿಧಿ ಮಾರನ್ ನಿರ್ಮಾಣದ ಈ ಚಿತ್ರ ಇಡೀ ಭಾರತೀಯ ಚಿತ್ರರಂಗದಲ್ಲೆ ದಾಖಲೆ ಬಜೆಟ್ ನಲ್ಲಿ ರು.190 ಕೋಟಿ ರೂಗಳಲ್ಲಿ ನಿರ್ಮಿಸಲಾಗಿದೆ(ರಜನಿಕಾಂತ್ ಸಂಭಾವನೆಯೇ ರು.45 ಕೋಟಿ). ಈ ಚಿತ್ರದ ಹೀರೋ ರಜನಿಕಾಂತ್ ಸುಖಾಸುಮ್ಮನೆ ಬೆಂಗಳೂರಿನ ಗೆಳೆಯನ ಬಾರಿಗೆ ಬಂದು ಹೋಗಲು ಸಾಧ್ಯವೆ? ಬೆಂಗಳೂರಿಗೆ ಆಗಾಗ ಸದ್ದಿಲ್ಲದಂತೆ ಬಂದು ಹೋಗುವ ರಜನಿ ಈಗ್ಯಾಕೆ ಸುದ್ದಿ ಮಾಡಿದರು?
ಈ ಎಲ್ಲಾ ಪ್ರಶ್ನೆಗಳ ಹಿಂದಿನ ಮರ್ಮವನ್ನು ಹುಡುಕಲು ಹೊರಟರೆ...ಅವರ 'ಎಂಧಿರನ್' ಚಿತ್ರ ತಕ್ಕ ಉತ್ತ್ತರ ನೀಡುತ್ತದೆ. ಬೆಂಗಳೂರಿನಲ್ಲಿ ರಜನಿ ಚಿತ್ರಗಳಿಗೆ ಮಾರುಕಟ್ಟೆ ಅಗಾಧವಾಗಿದೆ. ಕೋಟ್ಯಾಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿದಚಿತ್ರವೊಂದಕ್ಕೆ ಈ ರೀತಿ ಪ್ರಚಾರ ನೀಡದಿದ್ದರೆ ಹೇಗೆ? ಇದೇ ತಂತ್ರವನ್ನು ರಜನಿ ಚಾಚೂತಪ್ಪದೆ ಪಾಲಿಸಿದ್ದಾರೆ. ಸನ್ ಟಿವಿ ಮಾಲೀಕ ಹಾಗೂ ಮಾಧ್ಯಮ ಕ್ಷೇತ್ರದ ದಿಗ್ಗಜ ಕಲಾನಿಧಿ ಮಾರನ್ ಅವರ ಋಣ ತೀರಿಸಿಕೊಳ್ಳಲು ಇದಕ್ಕಿಂತಲೂ ಕಾರಣ ಬೇಕೆ?
ಫಿಲಂ ಚೇಂಬರ್ ಗೆ ತಲೆ ನೋವು ಕಾದಿದೆಯೇ? ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಕೇವಲ 24 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕು ಎಂಬುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮ. ಈ ನಿಯಮಗಳನ್ನು ಉಲ್ಲಂಘಿಸಿದ್ದ 'ರಾವಣ್' ಚಿತ್ರಕ್ಕೆ ಫಿಲಂ ಚೇಂಬರ್ ತಕ್ಕ ಶಾಸ್ತಿ ಮಾಡಿತ್ತು. ಇದಕ್ಕೂ ಮುನ್ನ 'ಕೈಟ್ಸ್ 'ಚಿತ್ರಕ್ಕೂ ಇದೇ ಗತಿಯಾಗಿತ್ತು.
ಈಗ 'ಎಂಧಿರನ್' ಚಿತ್ರ(ಹಿಂದಿಯಲ್ಲಿ ರೋಬೋಟ್, ತೆಲುಗಿನಲ್ಲಿ ರೋಬೋ) ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಎಷ್ಟು ಚಿತ್ರಮಂದಿರಗಳಲ್ಲಿ ಎಂಬುದು ಗೊತ್ತಿಲ್ಲ. ಒಂದು ವೇಳೆ ನಿಯಮಗಳನ್ನು ಮೀರಿ ಎಂಧಿರನ್ ಬಿಡುಗಡೆಯಾದರೆ ಕೆಎಫ್ ಸಿಸಿ ಮೂಗುದಾರ ಹಾಕುತ್ತದೆಯೇ? ರಜನಿಕಾಂತ್ ಎಂಬ ಕಾರಣಕ್ಕೆ ಸುಮ್ಮನಿರುತ್ತದೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.


Click it and Unblock the Notifications











