»   » ಖ್ಯಾತ ಚಿತ್ರ ನಿರ್ದೇಶಕ ಕೆ.ವಿ.ಜಯರಾಂ ವಿಧಿವಶ

ಖ್ಯಾತ ಚಿತ್ರ ನಿರ್ದೇಶಕ ಕೆ.ವಿ.ಜಯರಾಂ ವಿಧಿವಶ

Posted By:
Subscribe to Filmibeat Kannada

ಬೆಂಗಳೂರು, ಅ.16: ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಕೆ.ವಿ. ಜಯರಾಂ(58) ಅವರು ಇಂದು ಬೆಳಗ್ಗೆ 8:30 ರ ಸುಮಾರಿಗೆ ನಗರದ ರಾಮಮೋಹನಪುರಂನ ಸ್ವಂತ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅವರು, ಕೆಲಕಾಲದಿಂದ ಅಸ್ವಸ್ಥರಾಗಿದ್ದರು.

ಹೆಚ್ಚಾಗಿ ಕಾದಂಬರಿ ಆಧಾರಿತ ಚಿತ್ರಗಳನ್ನು ಜಯರಾಂ ಅವರು ನೀಡಿದ್ದಾರೆ. ಕನ್ನಡ ಚಲನಚಿತ್ರ ರಂಗಕ್ಕೆ ಅನೇಕ ಪ್ರತಿಭಾವಂತ ಕಲಾವಿದವರು ಹಾಗೂ ತಂತ್ರಜ್ಞರನ್ನು ಪರಿಚಯಿಸಿ, ಬೆಳಸಿದ ಕೀರ್ತಿಯನ್ನು ಕೆ.ವಿ.ಜಯರಾಂ ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕನ್ನಡದ ಅಪ್ಪಟ ದೇಶಿ ಪ್ರತಿಭೆ ಜಯರಾಂ
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರು ಹೊಬಳಿ ಎಲ್ಲಕೊಪ್ಪ ಗ್ರಾಮದಲ್ಲಿ ಕೆವಿಜಯರಾಂ 1950 ರಲ್ಲಿ ಜನಿಸಿದರು. ಇವರ ತಂದೆ ಕೆ. ವೈಕುಂಟೆಗೌಡ. ತಂದೆ ತೀರಿದ ಬಳಿಕ ಮೈಸೂರಿಗೆ ಬಂದು ಜಯರಾಂ ಅವರು ನೆಲೆಸಿದಾಗ ಅವರಿಗೆ ಕೇವಲ 14 ವರ್ಷ. ಬಿಎಸ್ಸಿ ಓದನ್ನು ಮುಂದುವರೆಸುತ್ತಾ, ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಜಯರಾಂ, ಬಣ್ಣದ ಜಗತ್ತಿಗೆ ಕಾಲಿರಿಸಿದಾಗ ಅವರಿಗೆ ಇನ್ನು 18 ರ ಹರೆಯ. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಕಲಾಜಗತ್ತಿನಲ್ಲಿ ಸುಮಾರು 33 ವರ್ಷ ದುಡಿದರು. ಸುಮಾರು 10 ಚಿತ್ರಗಳ ನಿರ್ಮಾಣ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದರು.

ಎಂ.ಆರ್. ವಿಠಲ್ ಅವರ ಗರಡಿ ಸೇರಿದ ಜಯರಾಂ ಅವರು ಸುಮಾರು 10 ವರ್ಷಗಳ ಕಾಲ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಕಲಿತರು. ಈ ಸಮಯದಲ್ಲಿ ಡೇವಿಡ್ ಲೀನ್, ಶಾಂತರಾಮ್, ರಾಜ್ ಕಪೂರ್ ಹಾಗೂ ವಿಜಯಾನಂದ್ ರಂತಹ ಮಹಾನ್ ತಂತ್ರಜ್ಞರ ಸಹವಾಸದಿಂದ ಚಿತ್ರ ಸಂಕಲನ, ನಿರ್ದೇಶನದ ಸೂಕ್ಷ್ಮಗಳನ್ನು ಅರಿತರು.ನಂತರ ಚಿತ್ರ ಸಂಕಲನ ವಿಭಾಗದಲ್ಲಿ ಆಸಕ್ತಿ ಬೆಳೆಸಿಕೊಂಡು, ಭಕ್ತವತ್ಸಲ, ಬಾಲ್ ಜಿ. ಯಾದವ್, ಕೃಷ್ಣ, ಚಿನ್ನಪ್ಪ, ಕೆಂಚುಮಣಿ ಮುಂತಾದ ಅಗ್ರಗಣ್ಯರ ಜತೆ 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಂಕಲನಕಾರರಾಗಿ ದುಡಿದರು. ನರಸಿಂಹ ರಾಜು ಅವರ ಪ್ರೊ. ಹುಚ್ಚುರಾಯ ಚಿತ್ರದ ಸಂಕಲನ ಇವರಿಗೆ ಹೆಸರು ತಂದು ಕೊಟ್ಟಿತು.

ಖ್ಯಾತ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಂದ ಚಿತ್ರಕಥೆ ರಚನೆ, ನಿರ್ದೇಶನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು, 'ಪರಸಂಗದ ಗೆಂಡೆತಿಮ್ಮ' ಚಿತ್ರಕ್ಕೆ ಮೊದಲ ಬಾರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಕಾದಂಬರಿಗಳನ್ನು ಬೆಳ್ಳಿತೆರೆಗೆ ತರುವ ತಮ್ಮ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮೊದಲ ಕೈಗೆತ್ತಿಕೊಂಡದ್ದು ಕಾದಂಬರಿ ನಿಗೂಢ ಹತ್ಯೆಯ ಕಥೆಯುಳ್ಳ ಟಿ ಕೆ ರಾಮರಾಯರ 'ಮರಳು ಸರಪಣಿ'. ನಂತರ ಸಾಯಿಸುತೆ ಅವರ 'ಬಾಡ ದ ಹೂ' ಮಾಡಿದರು. ಈ ಚಿತ್ರದ ಅಭಿನಯಕ್ಕೆ ಅನಂತ್ ನಾಗ್ ರಾಜ್ಯ ಪ್ರಶಸ್ತಿ ಗಳಿಸಿದರು.

ಈ ರೀತಿ 20 ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದರು. ಜಗ್ಗೇಶ್ ಸೇರಿದಂತೆ ಹಲವು ನಾಯಕ ನಟರನ್ನು ಚಿತ್ರಜಗತ್ತಿಗೆ ತಂದರು. ವಿಷ್ಣುವರ್ಧನ್, ಅನಂತ್ ನಾಗ್ ಮುಂತಾದ ಸ್ಟಾರ್ ನಟರ ಅನೇಕ ಯಶಸ್ವಿ ಚಿತ್ರಗಳನ್ನು ಕೆವಿ ಜಯರಾಂ ನಿರ್ದೇಶಿಸಿದ್ದಾರೆ. ಬೆತ್ತೆಲೆ ಸೇವೆ( ವಜ್ರಮುನಿಗೆ ರಾಜ್ಯ ಪ್ರಶಸ್ತಿ ತಂದ ಕೊಟ್ಟ ಚಿತ್ರ) ಒಲವೇ ಬದುಕು, ಹೊಸ ನೀರು, ವರ್ಣ ಚಕ್ರ, ಅರುಣ ರಾಗ, ಮುದುಡಿದ ತಾವರೆ ಅರಳಿತು, ರಂಜಿತಾ, ಇಬ್ಬನಿ ಕರಗಿತು, ಆಸೆಯಬಲೆ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಕೆಲವು ಚಿತ್ರಗಳನ್ನು ಬಿಟ್ಟು ಉಳಿದವು ರಾಜ್ಯ ಪ್ರಶಸ್ತಿಗಳಿಸಿವೆ.

ಶೃತಿ ಅಭಿನಯದ ರಂಜಿತಾ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಗಳಿಸಿದ್ದರು. ಇವರ ತಮ್ಮ ಕೆವಿ ರಾಜು ಅವರು ಕೂಡ ಪ್ರಸಿದ್ಧ ನಿರ್ದೇಶಕರಾಗಿದ್ದಾರೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗಳಲ್ಲಿ ನಿರ್ದೇಶಕ ದಿ.ಆರ್.ಶೇಷಾದ್ರಿ ಅವರ ಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನು ಇತ್ತೀಚೆಗೆ ನಿರ್ದೇಶಕ ಕೆ.ವಿ.ಜಯರಾಂ ಅವರಿಗೆ ನೀಡಿ ಗೌರವಿಸಲಾಗಿತ್ತು. 2000-01ನೇ ಸಾಲಿನ ಎಸ್.ಆರ್. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಗಳಿಸಿದ್ದಾರೆ.

ಕೆವಿ ಜಯರಾಂ ಅವರ ಮೃತದೇಹವನ್ನು ಸಾರ್ವಜನಿಕ ವೀಕ್ಷಣೆಗಾಗಿ ದೇವಯ್ಯ ಪಾರ್ಕ್ ಸಮೀಪದ ಗಣೇಶ್ ದೇಗುಲದ ಬಳಿ ಇಡಲಾಗಿದೆ. ಕೆ ಎಫ್ ಸಿಸಿ ಅಧ್ಯಕ್ಷೆ ಜಯಮಾಲಾ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಇಂದು ಸಂಜೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada