»   » ನಟ ರಾಮಕೃಷ್ಣ ಕಾಲುಗಳಲ್ಲಿ ತಾಮ್ರದ ಉಂಗುರಗಳು!

ನಟ ರಾಮಕೃಷ್ಣ ಕಾಲುಗಳಲ್ಲಿ ತಾಮ್ರದ ಉಂಗುರಗಳು!

Posted By:
Subscribe to Filmibeat Kannada
Kannada actor Ramakrishna
ದಿನೇಶ್ ಬಾಬು ನಿರ್ದೇಶನದ ಚಿತ್ರ ಹೊರತುಪಡಿಸಿ ಇತರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿದ್ದ ರಾಮಕೃಷ್ಣ ಅವರಿಗೆ ಅದೃಷ್ಠ ಲಕ್ಷ್ಮಿ ಒಲಿದಿದ್ದಾಳೆ. ಗಮನಾರ್ಹ ಪಾತ್ರಗಳು ಅರಸಿಕೊಂಡು ಬರುತ್ತಿವೆ. ಕಿಸೆಯೂ ತುಂಬುತ್ತಿದೆ. ಇದಕ್ಕೆಲ್ಲಾ ಆ ತಾಮ್ರದ ಉಂಗುರದ ಮಹಿಮೆ!

* ಜಯಂತಿ

ಅರೆ... ಹಳೆಯ ಲವರ್ ಬಾಯ್‌ಗೆ ಇದೆಂಥಾ ಕ್ರೇಜ್ ಅಂತ ಮೊದಲ ನೋಟಕ್ಕೆ ಅನ್ನಿಸಿದ್ದು ನಿಜ. ಆದರೆ, ಅದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಗಳ ಹಿಂದೆ ಹಾಕಿಕೊಂಡಿದ್ದು. ಅವನ್ನು ಹಾಕಿಕೊಂಡ ಮೇಲೆ ಒಳ್ಳೆಯದಾಯಿತು, ವಿಶ್ವ ಪರ್ಯಟನೆಯ ಯೋಗ ಒದಗಿಬಂತು, ಸಂಸಾರದಲ್ಲಿ ಶಾಂತಿ ತುಂಬಿತು... ಇದು ಉಂಗುರ ಮಹಾತ್ಮೆ.

ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ' ಸಿನಿಮಾದ ಪ್ರಮುಖ ಪಾತ್ರಧಾರಿಯಾಗಿ ರಾಮಕೃಷ್ಣ ನಟಿಸಿದ್ದಾರೆ. ಬುಲ್ ಟೆಂಪಲ್ ರಸ್ತೆಯ ಹಳೆಯ ಮನೆಯಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾಗ ಅವರ ಕಾಲುಗಳಲ್ಲಿನ ಉಂಗುರಗಳು ಕಣ್ಣಿಗೆ ಬಿದ್ದವು. ಆಗ ಹೊರಟ ಮಾತು ಬೇರೆಬೇರೆ ನೆಲೆಗಳಿಗೆ ಹೊರಳಿತು. ಈಗ ಟಿವಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿದರೆ ರಾಮಕೃಷ್ಣ ಅವರಿಗೆ ಕೆಲವೊಮ್ಮೆ ನಗು ಬರುತ್ತದಂತೆ. ಇನ್ನು ಕೆಲವೊಮ್ಮೆ ನನ್ನನ್ನು ನಾನೇ ನೋಡಿಕೊಳ್ಳುವ ಯೋಗ ಒದಗಿಸಿತಲ್ಲಾ; ಈ ಟಿವಿ' ಅಂತ ಅನ್ನಿಸುತ್ತದಂತೆ.

ಅವಕಾಶಗಳು ಈಗಲೂ ಹುಡುಕಿಕೊಂಡು ಬರುತ್ತಿವೆ. ಒಳ್ಳೆಯ ಹಣ ಸಿಗಬೇಕು ಅಥವಾ ಪಾತ್ರದಲ್ಲಿ ತೂಕ ಇರಬೇಕು ಅನ್ನೋದು ರಾಮಕೃಷ್ಣ ಆಯ್ಕೆ. ನಾಯಕರಾಗಿದ್ದಾಗ ಸಿಗುತ್ತಿದ್ದ ಸಂಭಾವನೆಗಿಂತ ಈಗ ಹೆಚ್ಚು ಹಣ ಸಿಗುತ್ತಿದೆ. ಈಗ ದಿನದ ಲೆಕ್ಕದಲ್ಲಿ ಪೇಮೆಂಟ್ ಆಗುತ್ತೆ ಸರ್' ಅಂತ ರಾಮಕೃಷ್ಣ ಸತ್ಯವನ್ನೇ ನುಡಿದರು. ಆದರೆ, ಸಂಭಾವನೆ ಎಷ್ಟು ಎಂಬ ಗುಟ್ಟು ಮಾತ್ರ ಬಿಟ್ಟುಕೊಡಲಿಲ್ಲ.

ಸಮಾಗಮ' ಚಿತ್ರದಲ್ಲಿ ಅಪ್ಪನ ಪಾತ್ರದಲ್ಲಿ ನಟಿಸಿರುವ ರಾಮಕೃಷ್ಣ, ಹೊಸ ಹುಡುಗರ ನಾಲ್ಕೈದು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅವುಗಳ ಹೆಸರು ಮಾತ್ರ ನೆನಪಿಗೆ ಬರೋದಿಲ್ಲ. ಈಗಿನ ಸಿನಿಮಾಗಳ ಹೆಸರೇ ನೆನಪಲ್ಲಿ ಇರೋದಿಲ್ಲ ರೀ...' ಅಂತ ಅವರು ಮತ್ತೆ ಮಾತನ್ನು ಸಂಸಾರದತ್ತ ಹೊರಳಿಸಿದರು. ದೊಡ್ಡ ಮಗ ಆಸ್ಟ್ರೇಲಿಯಾದಲ್ಲಿ ಎಂಐಟಿ ಮುಗಿಸಿಕೊಂಡು ಇನ್ನೊಂದು ತಿಂಗಳಲ್ಲಿ ಬಂದಿಳಿಯಲಿದ್ದಾನೆ. ಚಿಕ್ಕಮಗ ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ಓದುತ್ತಿದ್ದಾನೆ. ಭೈರಪ್ಪನವರ ಕಾದಂಬರಿಗಳನ್ನು ಓದಿದ್ದಾಗಿದೆ. ಕೆ.ಟಿ.ಗಟ್ಟಿಯವರ ನಾಲ್ಕು ಕಾದಂಬರಿಗಳು ಮುಂದಿವೆ- ಇವಿಷ್ಟು ಅವರ ಬದುಕಿನ ಈಗಿನ ಸಂಗತಿಗಳು.

ಹ್ಞಾಂ, ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ' ಸಿನಿಮಾದ ಎಲ್ಲ ಕೆಲಸಗಳೂ ಡಿಸೆಂಬರ್‌ನಲ್ಲಿ ಮುಗಿದು, ಜನವರಿ ಅಥವಾ ಫೆಬ್ರುವರಿಯಲ್ಲಿ ಚಿತ್ರ ತೆರೆಕಾಣಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada