»   » ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳ ಸಂಭ್ರಮ

ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳ ಸಂಭ್ರಮ

Subscribe to Filmibeat Kannada

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪ್ರಚಾರಕರ್ತ ದಿ.ಡಿ.ವಿ.ಸುಧೀಂದ್ರ ಆರಂಭಿಸಿದ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳನ್ನು ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಕಳೆದ ಐದು ವರ್ಷಗಳಿಂದ ಕೊಟ್ಟು ಗೌರವಿಸಲಾಗುತ್ತಿದೆ.

ದಿ.ಡಿ.ವಿ.ಸುಧೀಂದ್ರ ಹಾಕಿಕೊಟ್ಟ ಹಾದಿಯಲ್ಲಿ ಸಂಸ್ಥೆ ಕಳೆದ ವರ್ಷದಿಂದ ಪತ್ರಕರ್ತ ಬಂಧುಗಳ, ಉದ್ಯಮದ ಗಣ್ಯರ ಸಹಕಾರದಿಂದ ಈ ಸಾರ್ಥಕ ಸಮಾರಂಭವನ್ನು ನಡೆಸಿಕೊಂಡು ಬರುತ್ತಿದೆ. ವರ್ಷವರ್ಷಕ್ಕೂ ಪ್ರಶಸ್ತಿಯ ಪಟ್ಟಿ ಬೆಳೆಯುತ್ತಿದ್ದು ಈ ಬಾರಿ ಪಾರ್ವತಮ್ಮರಾಜಕುಮಾರ್ ಹಾಗೂ ಖ್ಯಾತ ನಟ ಸುದೀಪ್, ಖ್ಯಾತ ಸಾಹಿತಿ ದಿವಂಗತ ನಾಡಿಗೇರ್‌ಕೃಷ್ಣರಾಯರ ಹೆಸರಿನಲ್ಲಿ ಅವರ ಮೊಮ್ಮಗ ಚೇತನ್‌ನಾಡಿಗೇರ್ ಹಾಗೂ ಉದ್ಯಮಿ ದಿವಾಕರ್ ಅವರು ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಈ ಬಾರಿಯ ಸಮಾರಂಭವು ಜೂನ್ 1ರ ಭಾನುವಾರ ಸಂಜೆ 5ಕ್ಕೆ ನಗರದ ಸಿಟಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ದಿ ಬೆಲ್ ಹೋಟಲ್‌ನಲ್ಲಿ ನಡೆಯಲಿದೆ.

ಯಾವ ಪ್ರಶಸ್ತಿ ಯಾರ ಮಡಿಲಿಗೆ?
ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ದಿ.ಡಿ.ವಿ.ಸುಧೀಂದ್ರ ಸ್ಮರಣಾರ್ಥ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ನಿರ್ಮಾಪಕ ಕೆ.ಸಿ.ಎನ್. ಗೌಡ ಹಾಗೂ ಹಿರಿಯ ಪತ್ರಕರ್ತಎಂ.ಬಿ. ಸಿಂಗ್ ಅವರಿಗೆ ನೀಡಿ ಗೌರವಿಸಲಿದೆ. ದಿ.ಡಾ.ರಾಜಕುಮಾರ್ ಅವರ ಹೆಸರಿನಲ್ಲಿ ಪಾರ್ವತಮ್ಮರಾಜಕುಮಾರ್ ಅವರು ಚಲನಚಿತ್ರ ಹಿನ್ನಲೆ ಗಾಯನಕ್ಕೆ ನೀಡುವ ಪ್ರಶಸ್ತಿಯನ್ನು ಖ್ಯಾತ ಗಾಯಕಿ ಮಂಜುಳಾಗುರುರಾಜ್ ಅವರಿಗೆ ನೀಡಲಿದ್ದಾರೆ.

ನಿರ್ದೇಶಕ ದಿ.ಆರ್.ಶೇಷಾದ್ರಿ ಪ್ರಶಸ್ತಿ ನಿರ್ದೇಶಕ ಕೆ.ವಿ.ಜಯರಾಂ, ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ ಖ್ಯಾತ ಕಲಾವಿದೆ ಜಯಂತಿ, ದಿ.ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಆ ದಿನಗಳು ಚಿತ್ರದ ಸಂಭಾಷಣೆಗಾಗಿ ಅಗ್ನಿಶ್ರೀಧರ್, ಎಂ.ಎಸ್.ರಾಮಯ್ಯ ಚಿತ್ರಾಲಯ ಸಂಸ್ಥೆಯ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ದುನಿಯಾ ಖ್ಯಾತಿಯ ವಿ.ಮನೋಹರ್‌, ಚಿತ್ರಶಿಲ್ಪಿ ದಿ.ಪುಟ್ಟಣ್ಣಕಣಗಾಲ್ ಪ್ರಶಸ್ತಿ ದುನಿಯಾ ಚಿತ್ರದ ಕಥೆಗಾಗಿ ಸೂರಿ, ನಿರ್ದೇಶಕ ಬಿ.ಸುರೇಶ ಯುವ ನಿರ್ದೇಶಕರಿಗೆ ನೀಡುವ ಪ್ರಶಸ್ತಿ ಕೆ.ಎಂ.ಚೈತನ್ಯ (ಆ ದಿನಗಳು), ಖ್ಯಾತ ಪೋಷಕ ನಟರೊಬ್ಬರಿಗೆ ನಾಯಕ ಸುದೀಪ್ ನೀಡುವ ಪ್ರಶಸ್ತಿ ಲೋಕನಾಥ್, ಪತ್ರಕರ್ತ ಮೈಸೂರು ಹರೀಶ್ ತಮ್ಮ ಮಾತಪಿತೃಗಳಾದ ಸುಮಿತ್ರಮ್ಮ ಮತ್ತು ಬಿ. ಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ನೀಡುವ ಯುವ ಪತ್ರಕರ್ತ ಪ್ರಶಸ್ತಿ ವಿಜಯಕರ್ನಾಟಕದ ಮಹೇಶ್‌ದೇವಶೆಟ್ಟಿ ಹಾಗೂ ಲಂಕೇಶ್ ಪತ್ರಿಕೆಯ ಪರಶುರಾಮ್ ಅವರಿಗೆ ನೀಡಿ ಗೌರವಿಸಲಾಗುತ್ತದೆ.

ಖ್ಯಾತ ಸಾಹಿತಿ ದಿ.ನಾಡಿಗೇರ್ ಕೃಷ್ಣರಾಯರ ಹೆಸರಿನಲ್ಲಿ ಅವರ ಮೊಮ್ಮಗ ಚೇತನ್ ನಾಡಿಗೇರ್ ಉತ್ತಮ ಗೀತರಚನೆಕಾರರಿಗೆ ನೀಡುವ ಪ್ರಶಸ್ತಿಯನ್ನು ಗೆಳೆಯ ಚಿತ್ರದ ಈ ಸಂಜೆ ಯಾಕಾಗಿದೆ ಗೀತರಚನೆಗಾಗಿ ಜಯಂತ ಕಾಯ್ಕಿಣಿ, ಚಿತ್ರಲೋಕ ಡಾಟ್‌ಕಾಂನ ಕೆ.ಎಂ.ವೀರೇಶ್ ತಮ್ಮ ತಂದೆ ದಿ.ಕೆ.ಎಸ್.ಮಲ್ಲಪ್ಪ ಸ್ಮರಣಾರ್ಥ ಪತ್ರಿಕಾ ಛಾಯಾಗ್ರಾಹಕರೊಬ್ಬರಿಗೆ ನೀಡುವ ಪ್ರಶಸ್ತಿ ವಿಶ್ವನಾಥ ಸುವರ್ಣ ಅವರಿಗೆ ನೀಡಿ ಗೌರವಿಸಲಿದ್ದಾರೆ. ಇದರ ಜೊತೆಗೆ ಉದ್ಯಮಿ ಜಿ.ಪಿ.ದಿವಾಕರ್ ಅವರು ಕನ್ನಡ ಚಲನ ಚಿತ್ರರಂಗದಲ್ಲಿ ದುಡಿಯುವ ಕಾರ್ಮಿಕರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada