ಶ್ರೀರಾಮ್ ಚಂದ್ರ ಮುಡಿಗೆ ಇಂಡಿಯನ್ ಐಡಲ್ 5
ಈ ಬಾರಿಯ "ಇಂಡಿಯನ್ ಐಡಲ್ 5" ಕಿರೀಟ ಹೈದರಾಬಾದ್ ಮೂಲದ ಶ್ರೀರಾಮ್ ಚಂದ್ರ ಮುಡಿಗೇರಿದೆ. ತಮ್ಮ ಸಮೀಪದ ಪ್ರತಿಸ್ಪರ್ಧಿಗಳಾದ ಬರೋಡಾದ ಭೂಮಿ ತ್ರಿವೇದಿ ಮತ್ತು ಆಗ್ರದ ರಾಕೇಶ್ ಮೈನಾ ಅವರನ್ನು ಹಿಂದಿಕ್ಕುವ ಮೂಲಕ ಈ ಟೈಟಲ್ ಶ್ರೀರಾಮ್ ಪಾಲಾಯಿತು.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಕೈಯಲ್ಲಿ ಇಂಡಿಯನ್ ಐಡಲ್ 5 ಪ್ರಶಸ್ತಿಯನ್ನು ಶ್ರೀರಾಮ್ ಸ್ವೀಕರಿಸಿದರು. ಈ ಮೂಲಕ 5 ದಶಲಕ್ಷ ರುಪಾಯಿ ನಗದು ಬಹುಮಾನ ಸೇರಿದಂತೆ ಸೋನಿ ಬಿಎಂಜಿ ಜೊತೆ ಒಂದು ವರ್ಷ ಒಪ್ಪಂದ, ಟಾಟಾ ವಿಂಜರ್ ಕಾರು ಹಾಗೂ ಯಶ್ ರಾಜ್ ಚಿತ್ರದಲ್ಲಿ ಹಾಡುವ ಅವಕಾಶ ಶ್ರೀರಾಮ್ ಗೆ ಒಲಿದಿದೆ.
ಟೈಟಲ್ ಗೆದ್ದ ಶ್ರೀರಾಮ್ ಸಂತಸಕ್ಕೆ ಪಾರವೇ ಇರಲಿಲ್ಲ. ಅವರು ಮಾತನಾಡುತ್ತಾ, ನನಗೆ ಪ್ರಶಸ್ತಿ ಬಂದಿದೆ ಎಂದು ನಂಬಲಿಕ್ಕೆ ಆಗುತ್ತಿಲ್ಲ. ನನ್ನ ಪೋಷಕರು ಇಲ್ಲೆ ಇದ್ದಾರೆ. ಇದೆಲ್ಲಾ ಒಂದು ಕನಸಿನಂತೆ ಭಾಸವಾಗುತ್ತಿದೆ. ಸ್ವಾತಂತ್ರ್ಯ ದಿನೋತ್ಸವದ ಈ ಸಂದರ್ಭದಲ್ಲಿ ನನಗೆ ಈ ಟೈಟಲ್ ವರಿಸಿದ್ದು ಹೆಚ್ಚು ಸಂತಸ ತಂದಿದೆ ಎಂದಿದ್ದಾರೆ.
ಫಿಲ್ಮಿಸ್ತಾನ್ ಸ್ಟುಡಿಯೋದಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಬಾಲಿವುಡ್ ಖ್ಯಾತ ತಾರೆಗಳಾದ ಬಿಗ್ ಬಿ ಸೇರಿದಂತೆ ಕರೀನಾ ಕಪೂರ್, ಕೈಲಾಶ್ ಖೇರ್, ರಿಚಾ ಶರ್ಮಾ, ಅಲಿನಾ ಚಿನೈ, ಶಂಕರ್ ಮಾಧವನ್ ಉಪಸ್ಥಿತರಿದ್ದರು. ಶ್ರೇಯಾ ಘೋಶಾಲ್ ಜೊತೆ ಹಾಡುವ ಅವಕಾಶವೂ ಶ್ರೀರಾಮ್ ಗೆ ದಕ್ಕಿದೆ.
ಕನ್ನಡ ಸಿನಿಮಾ sms ಎಕ್ಸ್ ಪ್ರೆಸ್


Click it and Unblock the Notifications











