ತೆಲುಗಿನ ಮತ್ತೊಂದು ಚಿತ್ರವನ್ನು ತಬ್ಬಿದ ಕಿಚ್ಚ ಸುದೀಪ್
ತೆಲುಗು, ತಮಿಳು ಭಾಷೆಯ ಯಶಸ್ವಿ ಚಿತ್ರಗಳನ್ನು ಕನ್ನಡಕ್ಕೆ ತರುವಲ್ಲಿ ಕಿಚ್ಚ ಸುದೀಪ್ ಅವರದು ಎತ್ತಿದ ಕೈ. ಸುದೀಪ್ ಅಭಿನಯದ ಬಹುತೇಕ ರೀಮೇಕ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಈಗಾಗಲೆ ತೆರೆಕಂಡಿರುವ 'ಕೆಂಪೇಗೌಡ' ಚಿತ್ರಕ್ಕೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಬಿಸಿಯಲ್ಲಿ ಸುದೀಪ್ ಮತ್ತೊಂದು ರೀಮೇಕ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಅನ್ಯಭಾಷಾ ಚಿತ್ರಗಳನ್ನು ಕನ್ನಡದ ಜಾಯಮಾನಕ್ಕೆ ತಕ್ಕಂತೆ ತರುವುದು ಸುದೀಪ್ ಟ್ರಿಕ್. ಈ ಬಾರಿ ತೆಲುಗಿನ ಯಶಸ್ವಿ ಚಿತ್ರ 'ಲಕ್ಷ್ಯಂ' ಕನ್ನಡಕ್ಕೆ ತರಲು ಸುದೀಪ್ ಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಚಿತ್ರಕ್ಕೆ 'ವರದನಾಯಕ' ಎಂದು ಹೆಸರಿಡಲಾಗಿದೆ. ಚಿತ್ರದ ಮುಹೂರ್ತ ಆಕಾಶ್ ಆಡಿಯೋದಲ್ಲಿ ಇತ್ತೀಚೆಗೆ ನಡೆಯಿತು.
'ಲಕ್ಷ್ಯಂ' ಚಿತ್ರವನ್ನು ಕನ್ನಡಕ್ಕೆ ತರಬೇಕು ಎಂಬುದು ನಿರ್ಮಾಪಕ ಧನರಾಜ್ ಅವರ ಬಹುದಿನದ ಕನಸು. ಸುದೀಪ್ ಮೂಲಕ ಅವರ ಕನಸು ನನಸಾಗುತ್ತಿದೆ. ಈ ಮುಂಚೆ ಚಿತ್ರಕ್ಕೆ 'ನಾಯಕ' ಎಂದಿಡಲು ತೀರ್ಮಾನಿಸಿದ್ದರು. ಈಗ 'ವರದ' ಸೇರಿ ಚಿತ್ರದ ಹೆಸರು 'ವರದನಾಯಕ' ಎಂದಾಗಿದೆ. ಈ ಬಾರಿ ಸುದೀಪ್ ನಿರ್ದೇಶನದಿಂದ ದೂರ ಉಳಿದಿದ್ದಾರೆ.
'ವರದನಾಯಕ' ನಿರ್ದೇಶನದ ಜವಾಬ್ದಾರಿಯನ್ನು ಸಾಯಿಕುಮಾರ್ ಹಾಗೂ ರವಿಶಂಕರ್ ಅವರ ಸಹೋದರ ಅಯ್ಯಪ್ಪ ಶರ್ಮ ಅವರಿಗೆ ವಹಿಸಲಾಗಿದೆ. ಇವರು ಮಲಾಶ್ರೀ ಅವರ 'ವೀರ' ಚಿತ್ರಕ್ಕೂ ಆಕ್ಷನ್, ಕಟ್ ಹೇಳುತ್ತಿದ್ದಾರೆ. 'ವೀರ' ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಇನ್ನೇನು ತೆರೆಕಾಣುವ ಹಂತದಲ್ಲಿದೆ.
ಅಂದಹಾಗೆ 'ವರದನಾಯಕ' ಚಿತ್ರಕ್ಕೆ ಅರ್ಜುನ್ ಅವರ ಸಂಗೀತ, ಎಸ್ ಕೃಷ್ಣ ಅವರ ಛಾಯಾಗ್ರಾಹಣವಿದೆ. ಚಿತ್ರದ ನಾಯಕಿ ಸೇರಿದಂತೆ ಪೋಷಕ ಪಾತ್ರಗಳ ಆಯ್ಕೆ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕು. 'ಕೆಂಪೇಗೌಡ'ನ ಗೆಲುವಿನ ನಗೆ ಬೀರಿದ್ದು ಸುದೀಪ್ ಇಮ್ಮಡಿ ಖುಷಿಯಲ್ಲಿದ್ದಾರೆ. ಈಗ ಮತ್ತೊಂದು ಗೆಲುವನ್ನು ವರದನಾಯಕ ಮೂಲಕ ನಿರೀಕ್ಷಿಸಿದ್ದಾರೆ.


Click it and Unblock the Notifications











