»   » ಅಹಲ್ಯೆ : ಪೌರಾಣಿಕ ಧಾರಾವಾಹಿಯ ಇತ್ಯೋಪರಿ

ಅಹಲ್ಯೆ : ಪೌರಾಣಿಕ ಧಾರಾವಾಹಿಯ ಇತ್ಯೋಪರಿ

Subscribe to Filmibeat Kannada

ರಾಮಾಯಣ, ಮಹಾಭಾರತ ವಿವಿಧ ಭಾಷೆಗಳಲ್ಲಿ ಧಾರಾವಾಹಿಗಳಾಗಿ ಯಶಸ್ಸು ಪಡೆದಿವೆ. ಆದರೆ ಯಾವುದೇ ಭಾಷೆಯಲ್ಲಿಯೂ ಇಲ್ಲಿಯವರೆಗೆ ಧಾರಾವಾಹಿಯಾಗಿ ಚಿತ್ರಿತವಾಗದಿರುವ ಅಹಲ್ಯೆ ಇದೀಗ ಕನ್ನಡದಲ್ಲಿ ಧಾರಾವಾಹಿಯಾಗಿ ರೂಪು ಹೊಂದಿ ಅಪಾರ ಜನಪ್ರಿಯತೆ ಗಳಿಸಿದೆ. ಪ್ರತಿ ಭಾನುವಾರ ಬೆಳಿಗ್ಗೆ 9.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ 17 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಈ ಧಾರಾವಾಹಿಯ ವಿಶೇಷವೆಂದರೆ, ಅರಣ್ಯ ಪ್ರದೇಶದಲ್ಲಿ ನಡೆಯುವ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಲು ಶಿವಮೊಗ್ಗ, ಮುತ್ತತ್ತಿ ಮುಂತಾದ ಅರಣ್ಯ ಪ್ರದೇಶದಲ್ಲೇ ಚಿತ್ರೀಕರಣ ನಡೆಸಿ ಅದಕ್ಕೆ ಸಹಜತೆಯ ಸ್ಪರ್ಶ ನೀಡಲಾಗಿದೆ.

ಈಗಾಗಲೇ ಕನ್ನಡದಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಯನ್ನು ಅನುವಾದಿಸಿ ಪ್ರಸಾರ ಮಾಡಲು ವಿವಿಧ ಭಾಷೆಗಳ ನಿರ್ಮಾಪಕರಿಂದ ಬೇಡಿಕೆ ಬಂದಿದೆ ಎಂದು ಧಾರಾವಾಹಿಯ ನಿರ್ಮಾಪಕರಲ್ಲಿ ಒಬ್ಬರಾದ ಡಿ.ವೆಂಕಟೇಶ ರೆಡ್ಡಿ ಹೇಳುತ್ತಾರೆ.

ಈ ಧಾರಾವಾಹಿಯ ಸಂಕ್ಷಿಪ್ತ ಕಥೆ ಹೀಗಿದೆ: ಬ್ರಹ್ಮನ ಮಾನಸಪುತ್ರಿ ಅಹಲ್ಯೆ ಗೌತಮಮುನಿಯ ಪತ್ನಿ. ಗೌತಮಮುನಿ ಸಂಸಾರ ಸುಖದಲ್ಲಿ ಮುಳುಗಿ ಹೋಗಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾನೆ. ಸಂಸಾರ ಸುಖವನ್ನು ತ್ಯಜಿಸಿ ಜಪತಪಗಳಲ್ಲಿ ಮೈ ಮರೆಯುತ್ತಾನೆ. ಗಂಡನ ನಿರಾಸಕ್ತಿಯಿಂದ ಅಹಲ್ಯೆಗೆ ಉಂಟಾಗುವ ಬೇಸರವನ್ನು ಪ್ರಕೃತಿಯ ನಡುವಿನಲ್ಲಿ ಮರೆಯುವ ಪ್ರಯತ್ನ ಮಾಡುತ್ತಿರುತ್ತಾಳೆ.

ದೇವಲೋಕದಲ್ಲಿರುವ ಇಂದ್ರನಿಗೆ ದೇವಲೋಕದಲ್ಲಿದ್ದ ಅಹಲ್ಯೆಯ ನೆನಪು ಕಾಡುತ್ತಿರುತ್ತದೆ. ಒಮ್ಮೆ ಭೂಲೋಕ ವಿಹಾರಕ್ಕೆ ಬಂದಾಗ ಅವಳನ್ನು ಕಂಡು ಮೋಹಪರವಶನಾಗುತ್ತಾನೆ. ಆದರೆ ಋಷಿಪತ್ನಿಯಾದ ಕಾರಣ ಅವಳನ್ನು ಗೌತಮನ ಋಷಿಯ ವೇಷದಲ್ಲೇ ಬಂದು ಅವಳನ್ನು ಸೇರುತ್ತಾನೆ. ನಿಜವಾದ ಗೌತಮ ಮುನಿ ಅವಳತ್ತ ಆಸಕ್ತಿ ವಹಿಸುವುದಿಲ್ಲ. ಮತ್ತೊಮ್ಮೆ ಇಂದ್ರ ಗೌತಮಮುನಿಯ ರೂಪದಲ್ಲಿ ಬಂದಾಗ ಅಹಲ್ಯೆಗೆ ಅವನು ಇಂದ್ರನೇ ಎಂದು ಗೊತ್ತಾಗುತ್ತದೆ. ಆಗ ಅವಳು ನಿರಾಕರಿಸುತ್ತಾಳೆ. ಆದರೆ ಮುನಿಯ ನಿರ್ಲಕ್ಷ್ಯಕ್ಕೆ ಒಳಗಾಗಿರುವುದರಿಂದ ಅದರಲ್ಲಿ ತಪ್ಪೇನೂ ಇಲ್ಲ ಎಂದು ಅವಳನ್ನು ಇಂದ್ರ ಸಮಾಧಾನ ಮಾಡಿ ಅವಳನ್ನು ಸೇರುತ್ತಾನೆ. ಆದರೆ ಅವನು ಹೊರಡುವ ಮುನ್ನವೇ ಗೌತಮಮುನಿ ಅಲ್ಲಿಗೆ ಬಂದು ಕೋಪಗೊಂಡು ಇಂದ್ರನಿಗೆ ಸಹಸ್ರಾಕ್ಷನಾಗುವಂತೆ, ಅಹಲ್ಯೆಗೆ ಶಿಲೆಯಾಗುವಂತೆ ಶಾಪ ನೀಡುತ್ತಾನೆ. ಆದರೆ ನಂತರ ಆಶ್ರಮವಾಸಿಗಳ ಬೇಡಿಕೆಯನ್ನು ಮನ್ನಿಸಿ ತ್ರೇತಾಯುಗದಲ್ಲಿ ರಾಮನ ಪಾದಸ್ಪರ್ಶದಿಂದ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳುತ್ತಾನೆ.

ಸೋದರ ಲಕ್ಷ್ಮಣ ಹಾಗೂ ವಿಶ್ವಾಮಿತ್ರ ಮುನಿಯೊಂದಿಗೆ ಅಲ್ಲಿಗೆ ಬರುವ ರಾಮನಿಗೆ ಹೆಣ್ಣಿನ ಅಳು ಕೇಳುತ್ತದೆ. ಅದರ ಕುರಿತು ವಿಶ್ವಾಮಿತ್ರರಲ್ಲಿ ಪ್ರಶ್ನಿಸಿದಾಗ ಅವರು ಹಿನ್ನೆಲೆಯನ್ನು ರಾಮನಿಗೆ ವಿವರಿಸುತ್ತಾರೆ. ರಾಮನ ಪಾದಸ್ಪರ್ಶದಿಂದ ಅಹಲ್ಯೆ ಶಾಪಮುಕ್ತಳಾಗುತ್ತಾಳೆ. ಮತ್ತೊಂದು ಕಡೆ ಹಿಮಾಲಯದಲ್ಲಿ ತಪಸ್ಸು ಆಚರಿಸುತ್ತಿದ್ದ ಗೌತಮಮುನಿ ಅಹಲ್ಯೆಯ ತಪ್ಪಿಗೆ ತಾನೂ ಕಾರಣ ಎಂಬ ಅರಿವುಂಟಾಗಿ ಪಶ್ಚಾತ್ತಾಪದಿಂದ ಹಿಂದಿರುಗುತ್ತಾನೆ. ಇಬ್ಬರೂ ಒಂದುಗೂಡುತ್ತಾರೆ. ತಪ್ಪು ಮಾಡಿದರೂ ಪ್ರಾಯಶ್ಚಿತ್ತದಿಂದ ದೈವತ್ವ ಪ್ರಾಪ್ತಿಯಾಗುತ್ತದೆ ಎಂದು ವಿಶ್ವಾಮಿತ್ರ ಹೇಳುತ್ತಾನೆ.

ಇಂಥದೊಂದು ವಿಶಿಷ್ಟ ಕಥೆಯನ್ನು ಧಾರಾವಾಹಿಯಾಗಿ ರೂಪಿಸಲು ಸು.ರುದ್ರಮೂರ್ತಿಶಾಸ್ತ್ರಿ ಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸಿದ್ದಾರೆ. ಚಿತ್ರಕಥೆ ರಚಿಸಿ ಧಾರಾವಾಹಿಯನ್ನು ನಿರ್ದೇಶಿಸಿರುವವರು ಕೆ.ಪುರುಷನಾಥ್. ಧಾರಾವಾಹಿಯ ಕಲಾ ನಿರ್ದೇಶಕ ಭಾಸ್ಕರ್ ಆಗಿದ್ದು ಸಂಗೀತ ಮಾರುತಿ ಮೀರಜ್‌ಕುಮಾರ್ ನೀಡಿದ್ದು ಪ್ರೇಮ್ ಕುಮಾರ್ ಛಾಯಾಗ್ರಹಣವಿದೆ. ಈ ಭಕ್ತಿಪ್ರಧಾನ, ಪೌರಾಣಿಕ ಧಾರಾವಾಹಿಯ ನಿರ್ಮಾಪಕರು ಡಿ.ವೆಂಕಟೇಶ್‌ರೆಡ್ಡಿ ಮತ್ತು ಎಚ್.ಆರ್.ಶ್ರೀಪಾದರಾವ್

ಕಲಾವಿದರಲ್ಲಿ ಭರತ್ ಭಾಗವತರ್, ಟಿ.ಎಂ.ಬಾಲಕೃಷ್ಣ, ಲಂಬು ನಾಗೇಶ್, ಅನಂತವೇಲು, ಪ್ರದೀಪ್, ಮಣಿಕಂಠಸೂರ್ಯ, ವಿ.ಗಿರೀಶ್, ನಾಗು, ಸಂಗೀತ, ಸೌಮ್ಯಲತ, ಆಶಾರಾಣಿ, ಪದ್ಮಾ ಕುಮಟಾ, ಸಾರಿಕಾ, ಉಮಾ ವಿಶ್ವನಾಥ್, ರೇಖಾದಾಸ್ ಮುಂತಾದವರಿದ್ದಾರೆ.

ಕಿರುತೆರೆಯ ಮತ್ತಷ್ಟು ಸುದ್ದಿ:
ಕಾಮಿಡಿ ಕಿಲಾಡಿಗಳು' ಕಾಮಿಡಿ ಕಪ್
ಕಿರುತೆರೆಯಲ್ಲಿ ಜೋಗಿ ಜೋಗುಳ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada