ಉಪ್ಪಿ ಸೂಪರ್ ನಲ್ಲಿ ರಕ್ತಕಣ್ಣೀರು ಮಾದರಿ ಡೈಲಾಗ್
ಹತ್ತು ವರ್ಷಗಳ ನಂತರ ಆಕ್ಷನ್, ಕಟ್ ಹೇಳುತ್ತಿರುವ ಉಪೇಂದ್ರ ಹೊಸ ಹೊಸ ಸಿಂಬಲ್ ಗಳನ್ನಿಟ್ಟು ಚಿತ್ರ ಮಾಡುವುದರಲ್ಲಿ ನಿಸ್ಸೀಮರು. ಈಗ ಬರುತ್ತಿರುವ ಅವರ ಚಿತ್ರವನ್ನ್ನು ಎಲ್ಲರೂ 'ಸೂಪರ್' ಎಂದೇ ಅರ್ಥೈಸಿಕೊಂಡಿದ್ದಾರೆ. ಮೂರು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಚಿತ್ರದ ಬಜೆಟ್ ಹೆಚ್ಚುಕಮ್ಮಿ ಹತ್ತು ಕೋಟಿ. ಸದ್ಯದ ಮಟ್ಟಿಗೆ ಕನ್ನಡದ ಅತಿ ಹೆಚ್ಚು ಬಜೆಟ್ಟಿನ ಚಿತ್ರ.
ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿರುವ ಈ ಚಿತ್ರದ 15 ದಿನಗಳ ಶೂಟಿಂಗ್ ಲಂಡನ್ ನಲ್ಲಿ ಮುಗಿಸಿ ಬಂದಿದೆ ಚಿತ್ರತಂಡ. ಕಳೆದ ವಾರ ಎಒಎಲ್ ಕಂಪೆನಿಯ ಆವರಣದಲ್ಲಿ ಚಿತ್ರೀಕರಣ ನಡೆಸಿತು. ಇನ್ನು 15 ದಿನಗಳ ಶೂಟಿಂಗ್ ಚೆನ್ನೈ, ಹೈದರಾಬಾದ್ ಮತ್ತು ಮೈಸೂರಿನಲ್ಲಿ ಬಾಕಿಯಿದೆ.
ಮಿಲಿಯನೇರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಉಪ್ಪಿ ಮಾಧ್ಯಮದವರ ಬಳಿ ಚಿತ್ರದ ಬಗ್ಗೆ ಮಾತನಾಡುತ್ತಾ, 'ರಕ್ತಕಣ್ಣೀರು' ಚಿತ್ರದ ಹಾಗೆ ಡೈಲಾಗ್ ಗಳಿಗೆ ಏನೂ ಕೊರತೆಯಿಲ್ಲ. ಇದುವರೆಗೆ ನಮ್ಮ ಪ್ಲಾನಿಂಗ್ ಪ್ರಕಾರವೇ ಚಿತ್ರೀಕರಣ ನಡೆದುಕೊಂಡು ಬಂದಿದೆ ಎಂದರು.
ನಯನತಾರ ಅಭಿನಯದ ದೃಶ್ಯದ ಚಿತ್ರೀಕರಣ ಈಗಾಗಲೇ ಮುಗಿದಿದೆ. ನಯನತಾರಾ ಸಹಕಾರವಿಲ್ಲದಿದ್ದರೆ ಲಂಡನ್ ನಲ್ಲಿ ಶೂಟಿಂಗ್ ಅಷ್ಟು ಬೇಗ ಮುಕ್ತಾಯಗೊಳ್ಳುತ್ತಿರಲಿಲ್ಲ. ಅಲ್ಲಿ ಎರಡು ಹಾಡು ಮತ್ತು ಮಾತಿನ ಚಿತ್ರೀಕರಣ ಮುಗಿಸಿ ಬಂದಿದ್ದೇವೆಂದು ಉಪ್ಪಿ ವಿವರಿಸಿದರು.
ಅಕ್ಟೋಬರ್ ಅಂತ್ಯದ ವೇಳೆಗೆ ಚಿತ್ರ ಬಿಡುಗೊಡೆಗೊಳ್ಳಲಿದೆ. ಆಡಿಯೋ ಸೆಪ್ಟೆಂಬರ್ ತಿಂಗಳು ರಿಲೀಸ್ ಮಾಡುತ್ತೇವೆ. ಉಪೇಂದ್ರ ಹುಟ್ಟುಹಬ್ಬದ ದಿನ ಸೆಪ್ಟೆಂಬರ್ 18ರಂದು ಆಡಿಯೋ ಬಿಡುಗಡೆಯಾಗಲಿದೆ ಎನ್ನುತ್ತವೆ ಮೂಲಗಳು. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಐದು ಹಾಡುಗಳು ಅದ್ಭುತವಾಗಿ ಮೂಡಿಬಂದಿವೆಯಂತೆ.
ಚಿತ್ರದ ಪ್ರತಿಯೊಂದು ದೃಶ್ಯವು ಶ್ರೀಮಂತಿಕೆಯಿಂದ ಕೂಡಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಉತ್ತಮ ಸಹಕಾರ ನೀಡಿದ್ದಾರೆ. ಬಜೆಟ್ ಅಂದಾಜು ಮೀರಬಾರದೆಂದು ಇಬ್ಬರೂ ಕುಳಿತು ಪ್ಲಾನಿಂಗ್ ಮಾಡಿ ಶೂಟಿಂಗ್ ನಡೆಸಿದ್ದೇವೆ. ಚಿತ್ರವನ್ನು ಹೇಗೆ ತರಬೇಕೆಂದು ಯೋಚಿಸಿದ್ದೇನೋ ಅದೇ ರೀತಿ ಚಿತ್ರ ಬಂದಿದೆ ಎನ್ನುವ ತೃಪ್ತಿ ನನಗಿದೆ ಎಂದಿದ್ದಾರೆ ಉಪೇಂದ್ರ.


Click it and Unblock the Notifications











