»   » ನೀಳಕಾಯದ ವರ್ಷಾಗೆ ಕಂಕಣಬಲ, ನೆನಪಿರಲಿ!

ನೀಳಕಾಯದ ವರ್ಷಾಗೆ ಕಂಕಣಬಲ, ನೆನಪಿರಲಿ!

Subscribe to Filmibeat Kannada
Kannada actress Varsha to wed Ashwin Bharadwaj (Photo : Chitraloka)
* ಜಯಂತಿ

'ನೆನಪಿರಲಿ' ಚಿತ್ರದಲ್ಲಿ ತ್ಯಾಗಮಯಿ ತಂಗಿಯ ಪಾತ್ರದಲ್ಲಿ ನೆನಪಿನಲ್ಲಿ ಉಳಿಯುವ ಅಭಿನಯ ನೀಡಿದ್ದ ನಟಿ, ಟಿವಿ ಕಾರ್ಯಕ್ರಮ ನಿರೂಪಕಿ ವರ್ಷಾ ಮುಂದಿನ ವರ್ಷ ಫೆಬ್ರವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ವರ್ಷಾ ಕೈಹಿಡಿಯಲಿರುವ 'ಎತ್ತರ'ದ ವ್ಯಕ್ತಿ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅಶ್ವಿನ್ ಭಾರದ್ವಾಜ್. ವರ್ಷಾ ಮತ್ತು ಅಶ್ವಿನ್ ಭಾರದ್ವಾಜ್ ಅವರ ಮದುವೆ ನಿಶ್ಚಯ ಸಮಾರಂಭ ಇತ್ತೀಚೆಗೆ ವರ್ಷಾ ಅವರ ಮನೆಯಲ್ಲಿ ನಡೆಯಿತು.

'ನೆನಪಿರಲಿ' ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿ ಕನ್ನಡ ಚಿತ್ರರಂಗದ ಗಮನ ಸೆಳೆದಿದ್ದರೂ ಅವರ ಮೇಲೆ ಅವಕಾಶಗಳ 'ವರ್ಷಾ' ಸುರಿಯಲಿಲ್ಲ. ಕಾರಣ ಅವರ ಎತ್ತರ. ನಾಯಕಿಯಲ್ಲಿರುವ ಎಲ್ಲ ಲಕ್ಷಣಗಳು ಅವರಲ್ಲಿದ್ದರೂ ತಮ್ಮ ಎತ್ತರನೆಯ ವ್ಯಕ್ತಿತ್ವದಿಂದಾಗಿ ಅನೇಕ ಅವಕಾಶಗಳನ್ನು ಅವರು ಕಳೆದುಕೊಳ್ಳಬೇಕಾಯಿತು. ತಂಗಿ, ನಾದಿನಿಯ ಪಾತ್ರಗಳು ಅರಸಿ ಬಂದರೂ ಸತ್ವವಿಲ್ಲದ ಕಾರಣ ಅವುಗಳನ್ನೆಲ್ಲ ಪಕ್ಕಕ್ಕೆ ಸರಸಿದರು.

ಹಾಗಂತ ಮನೇಲಿ ಸುಮ್ಮನೆಯೂ ಕೂರಲಿಲ್ಲ. ಕೆಲಕಾಲ ಬಿಗ್ ಬಿ ರೇಡಿಯೇ ಎಫ್ಎಮ್ ಚಾನಲ್ ಮುಖಾಂತರ ಮನೆಮನೆ ತಲುಪಿದರು. ಯಾಹೂ ಯಾಹೂ ಎಂದು ಹಾಡುತ್ತ ಕಣ್ಣಿಗೆ ಹಬ್ಬವಾಗಿದ್ದ ವರ್ಷಾ ಎಫ್ಎಮ್ ಮುಖಾಂತರ ಕಿವಿಗೂ ಹಬ್ಬವಾದರು. ನಂತರ, ಝೀ ಕನ್ನಡ ಟಿವಿ ಚಾನಲ್ಲಿನಲ್ಲಿ ಬಂದ 'ಸೂಪರ್ ಹಿಟ್ ಹಾಡುಗಳಿಗೆ ನಮನ' ಕಾರ್ಯಕ್ರಮದಲ್ಲಿ ಕನ್ನಡದ ಸಮಸ್ತ ಸೂಪರ್ ಹಿಟ್ ಹಾಡುಗಳನ್ನು ಚಿತ್ರರಸಿಕರಿಗೆ ಉಣಬಡಿಸಿದರು ಮತ್ತು ಆ ಚಿತ್ರಗಳಿಗಾಗಿ ದುಡಿದ ಕೈಗಳನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಸಿಕೊಟ್ಟರು. ಉತ್ತಮವಾಗಿ ಮೂಡಿಬಂದ ಕಾರ್ಯಕ್ರಮದ ಮುಖಾಂತರ ನಿರೂಪಕಿಯಾಗಿಯೂ ವರ್ಷಾ ನಾಡಿನ ಮನೆಮಾತಾದರು.

ಎತ್ತರದ ನಿಲುವಿನಿಂದಾಗಿ ನಾಯಕಿ ಪಾತ್ರಗಳೇ ಬೇಕೆಂದೇನೂ ನೆಚ್ಚಿ ಕೂತಿರಲಿಲ್ಲ ವರ್ಷಾ. ಅಭಿನಯಕ್ಕೆ ಅವಕಾಶವಿರುವ ಎಂಥದೇ ಪಾತ್ರಗಳಲ್ಲಿ ನಟಿಸಲು ತಯಾರು ಎಂದು ಹೇಳಿದ್ದರು. ದರ್ಶನ್ ನಿರ್ಮಾಣದ 'ನವಗ್ರಹ' ಚಿತ್ರದಲ್ಲಿ ದರ್ಶನ್ ತಂಗಿಯಾಗಿ ಅಭಿನಯಿಸಿದರು. ನಾಯಕಿಯೂ ಅಲ್ಲದ ಡ್ಯೂಯೆಟ್ ಹಾಡಲು ನಾಯಕನೂ ಇರದ ಪಾತ್ರದಲ್ಲಿ ತನ್ಮಯತೆಯಿಂದ ಅಭಿನಯಿಸಿದರು. ನವಗ್ರಹಗಳಲ್ಲೊಂದಾದ ಮಂಗಳ ಗ್ರಹದ ಕೃಪಾಕಟಾಕ್ಷ ಈಗ ಅವರ ಮೇಲೆ ಬಿದ್ದಿದೆ. ವರ್ಷಾ ಅವರ ಮದುವೆಯ ಬದುಕು ಮಂಗಳಮಯವಾಗಿರಲಿ.

ವಿವಾದಗಳಿಂದ ದೂರವೇ ಇದ್ದ ವರ್ಷಾರನ್ನು ಈಗ ಅನಪೇಕ್ಷಿತ ವಿವಾದವೊಂದು ಬೆನ್ನಿಗೆ ಬಿದ್ದಿದೆ. 'ನೆನಪಿರಲಿ' ಚಿತ್ರಕ್ಕೆ ಸಂಗೀತ ನೀಡಿದ್ದ ಹಂಸಲೇಖಾ ಶಿಷ್ಯ ಮತ್ತು ಸುದೀಪ್ ಅಭಿನಯದ 'ಗೂಳಿ' ಚಿತ್ರದ ಸಂಗೀತ ನಿರ್ದೇಶನದಿಂದ ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸಿರುವ ಅನೂಪ್ ಸಿಳೀನ್ ಅವರನ್ನು ವರ್ಷಾ ಪ್ರೀತಿಸಿರುವ ಗಾಳಿಸುದ್ದಿ ಹಬ್ಬಿತ್ತು. ವರ್ಷಾ ಹಾಗೂ ಸಿಳೀನ್ ಅವರ ಮನೆಯವರು ಈ ಗಾಳಿಸುದ್ದಿಯನ್ನು ತಳ್ಳಿಹಾಕಿದ್ದಾರೆ. ಚಳಿಗಾಲದಲ್ಲಿ ಗಾಳಿಸುದ್ದಿಯನ್ನು ಹರಡುವಿರೇಕೆ ಎನ್ನುತ್ತಾರೆ ಸಿಳೀನ್ ಮತ್ತು ವರ್ಷಾ.

ವರ್ಷಾ ಅಭಿನಯದ 'ನವಗ್ರಹ' ಚಿತ್ರವಿಮರ್ಶೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada