Crazy Brahma: ನಾವಿಬ್ರು ಒಟ್ಟಿಗೆ ಬಂದ್ರೆ ಹಿಟ್ ಅಂತ ಗೊತ್ತಾಗಿದೆ, ನಮ್ಮ ಕಾಂಬಿನೇಷನ್ ಮುಟ್ಟೋಕು ಆಗಲ್ಲ
ಕನ್ನಡ ಚಿತ್ರರಂಗದ ಸೂಪರ್ ಹಿಟ್ ಜೋಡಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ. ಒಂದ್ಕಾಲದಲ್ಲಿ ಇವರಿಬ್ಬರು ಸೇರಿ ಮಾಡಿದ ಮ್ಯೂಸಿಕ್ ಮ್ಯಾಜಿಕ್ ಮರೆಯೋಕೆ ಸಾಧ್ಯವಿಲ್ಲ 16 ವರ್ಷಗಳ ಕಾಲ ಕೆಲ ಸಿನಿಮಾಗಳಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು.
ಬಹಳ ವರ್ಷಗಳ ನಂತರ ಹಂಸ-ರವಿ ಜೋಡಿ ಒಂದಾಗುತ್ತಿದೆ. ಮೇ 30ರಂದು ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲು ಮುಂದಾಗಿದ್ದಾರೆ. ಮೇ 30ರಂದು ರವಿಚಂದ್ರನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕ್ರೇಜಿಬ್ರಹ್ಮ' ಹೆಸರಿನಲ್ಲಿ ಲೈವ್ ಕಾನ್ಸರ್ಟ್ ನಡೆಯಲಿದೆ. ಇವರಿಬ್ಬರ ಕಾಂಬಿನೇಷನ್ ಸಿನಿಮಾ ಹಾಡುಗಳ ಗಾಯನ, ಡ್ಯಾನ್ಸ್, ಮಾತು-ಹರಟೆ ಎಲ್ಲವೂ ಇರಲಿದೆ. ಕೆಂಗೇರಿ ಬಳಿಯ ಜೆಕೆ ಗ್ರ್ಯಾಂಡ್ ಅರೆನಾ ರೆಸಾರ್ಟ್‌ನಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ರವಿಚಂದ್ರನ್ ಹಾಗೂ ಹಂಸೇಖ ಮಾಹಿತಿ ನೀಡಿದ್ದಾರೆ.

ಮತ್ತೊಮ್ಮೆ ತಮ್ಮಿಬ್ಬರ ಸ್ನೇಹ ಹಾಗೂ ಭಿನ್ನಾಭಿಪ್ರಾಯದ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ. ನಾವಿಬ್ಬರು ಜೊತೆಯಾಗಿ ಬಂದ್ರೆ ಹಿಟ್ ಎನ್ನುವುದು ಗೊತ್ತಾಗಿದೆ ಎಂದಿದ್ದಾರೆ. ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಬಹುದು ಎನ್ನುತ್ತಿದ್ದಾರೆ. ನೋಡೊಣ ಬನ್ನಿ, ಮಳೆ ಬಂದರೆ ಸ್ವಲ್ಪ ಹೊತ್ತಿಗೆ ಹೋಗುತ್ತೆ. ನಾವಿಬ್ಬರು ಎಷ್ಟು ಮಳೆ ಹಾಡುಗಳನ್ನು ಮಾಡಿಲ್ಲ ಎಂದು ರವಿಚಂದ್ರನ್ ಹೇಳಿರುವುದು ವೈರಲ್ ಆಗುತ್ತಿದೆ.
'ಪ್ರೇಮಲೋಕ' ಚಿತ್ರದಿಂದ ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ ಮೋಡಿ ಶುರುವಾಗಿತ್ತು. ರವಿ ನಿರ್ದೇಶಿಸಿ ನಟಿಸುವ ಸಿನಿಮಾಗಳಿಗೆ ಹಂಸಲೇಖ ತಮ್ಮ ಸಂಗೀತ ಹಾಗೂ ಸಾಹಿತ್ಯದ ಮೂಲಕ ಬಲ ತುಂಬುತ್ತಿದ್ದರು. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ಅಂತಹ ಎವರ್‌ಗ್ರೀನ್ ಹಾಡುಗಳನ್ನು ಕಾನ್ಸರ್ಟ್‌ನಲ್ಲಿ ಹಾಡಲಾಗ್ತಿದೆ. ಜೊತೆಗೆ ಇಬ್ಬರ ಮಾತುಕತೆ ಕೂಡ ಇರುತ್ತದೆ. ಪ್ರತಿ ಹಾಡು ಹುಟ್ಟಿಕೊಂಡ ಬಗೆಯನ್ನು ಹಂಚಿಕೊಳ್ಳುತ್ತಾರೆ.
ನಟ, ನಿರ್ದೇಶಕ ರವಿಚಂದ್ರನ್ ಮಾತನಾಡಿ "ನಾನು, ಹಂಸಲೇಖ ಜೊತೆಯಾಗಿ ಬಂದ್ರೆನೇ ಹಿಟ್ಟು.. ಅದನ್ನು ಪದೇ ಪದೆ ಹೇಳಬೇಕಿಲ್ಲ. ನಾವಿಬ್ಬರು ಬಂದ್ರೆ, ಆ ಕಾಂಬಿನೇಷನ್ ಮುಟ್ಟೋಕು ಆಗಲ್ಲ, ಮುರಿಯೋಕು ಸಾಧ್ಯವಿಲ್ಲ. ನಮ್ಮದು ಎರಡು ದೇಹ ಒಂದು ಮನಸ್ಸು. ಇದು ಕಾನ್ಸರ್ಟ್ ಅಲ್ಲ. ಇದರ ನಡುವೆ ನಮ್ಮ ಮಾತುಕತೆ ಇರುತ್ತೆ. ಅದು ಬಹಳ ಮುಖ್ಯ. ನಮ್ಮಿಬ್ಬರದ್ದು ಒಟ್ಟಿಗೆ 16 ವರ್ಷಗಳ ಪಯಣ. ಆಮೇಲೆ ಬಿರುಕಾಗಿದೆ, ಬಳಿಕ ಒಂದಾದ್ವಿ. ಆ ಹಿಟ್, ಬಿರುಕು ಎಲ್ಲವನ್ನು ಹಂಚಿಕೊಂಡಾಗ ಇವತ್ತಿನ ಜನರೇಷನ್‌ಗೆ ನಮ್ಮ ಜರ್ನಿ ಏನು ಎನ್ನುವುದು ಗೊತ್ತಾಗುತ್ತದೆ. ಆ ಮಾತುಕತೆಗೆ ನಾನು ಕಾಯ್ತಿದ್ದೀನಿ" ಎಂದಿದ್ದಾರೆ.
'ಪ್ರೇಮಲೋಕ' ಹಾಗೂ 'ಏಕಾಂಗಿ' ನಡುವಿನ ಆ ಮಾತು ಮಜಾ ಕೊಡುತ್ತೆ ಎಂದು ರವಿಚಂದ್ರನ್ ತಿಳಿಸಿದ್ದಾರೆ. ನಮ್ಮ ನಡುವೆ ಸ್ನೇಹ ಮಾತ್ರವಲ್ಲ, ಪ್ರೀತಿ ಸಂಬಂಧ ಎಲ್ಲವೂ ಇದೆ. ನಮ್ಮದು ಲಾಂಗ್ ಜರ್ನಿ ಹಾಗೂ ಶಾರ್ಟ್ ಮೆಮೊರೀಸ್. ನಾವಿಬ್ಬರು ದೂರ ಆಗಿರಬಹುದು. ಆದ್ರೆ ಈವರೆಗೆ ಜಗಳ ಆಡಿಲ್ಲ, ಕೋಪಿಸಿಕೊಂಡಿಲ್ಲ. ಕೋಪ ಒಳಗಿತ್ತು. ತೋರಿಸಿಕೊಳ್ಳಲು ಧೈರ್ಯ ಇರಲಿಲ್ಲ. ಆ ಸ್ನೇಹವನ್ನು 25 ವರ್ಷಗಳ ಬಳಿಕ ಮೆಲುಕು ಹಾಕುವುದು ಬಹಳ ವಿಶೇಷ. ಆ ಸ್ನೇಹಕ್ಕೆ ಜೀವ ತುಂಬಲು ಈ ಕಾನ್ಸರ್ಟ್ ವೇದಿಕೆ ಆಗ್ತಿದೆ ಎಂದು ವಿವರಿಸಿದ್ದಾರೆ.
ಹಂಸಲೇಖ ಮಾತನಾಡಿ "ನಮ್ಮ ಯಜಮಾನರದ್ದು ಮುನ್ನಲೆ, ನನ್ನದು ಹಿನ್ನೆಲೆ. ಅವ್ರು ತೆರೆಮೇಲೆ ಕೆಲಸ ಮಾಡಿದವರು. ನಾನು ತೆರೆಹಿಂದೆ ಇದ್ದವನು. ಈಗ ನಮ್ಮ ಯಜಮಾನ್ರು ಮೊದಲಿನ ರೀತಿ ಕನಸುಗಾರ ಮಾತ್ರವಲ್ಲ ಒಳ್ಳೆ ಮಾತುಗಾರ ಕೂಡ. ಸಾಮಾನ್ಯವಾಗಿ ಅವರ ಹುಟ್ಟುಹಬ್ಬದ ದಿನ ಸಣ್ಣದಾಗಿ ಮಳೆ ಬಂದು ಹೋಗುವುದನ್ನು ನೋಡಿದ್ದೇವೆ. ಈ ಶನಿವಾರ ಕೂಡ ಹಾಗೆ ಸಣ್ಣ ಮಳೆ ಬಂದು ಹೋಗಬಹುದು. ಹಾಗಾಗಿ ಸಂಗೀತರಸಿಕರು ಯಾವುದೇ ಭಯ ಇಲ್ಲದೇ ಕಾರ್ಯಕ್ರಮಕ್ಕೆ ಬನ್ನಿ" ಎಂದು ಮನವಿ ಮಾಡಿದ್ದಾರೆ.


Click it and Unblock the Notifications