»   » ಶತಕ ಪೂರೈಸಿದ ಜೀ ಕನ್ನಡದ ಕಾಮಿಡಿ ಕಿಲಾಡಿಗಳು

ಶತಕ ಪೂರೈಸಿದ ಜೀ ಕನ್ನಡದ ಕಾಮಿಡಿ ಕಿಲಾಡಿಗಳು

Subscribe to Filmibeat Kannada

ಜೀ ಕನ್ನಡದ ವಿನೂತನ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಕರ್ನಾಟಕದ ಜನತೆಯನ್ನು ನಗಿಸುತ್ತ ನೂರು ಸಂಚಿಕೆಗಳನ್ನು ತಲುಪಿದೆ. ನೂರರ ಸಂಭ್ರಮದಲ್ಲಿ 'ಕಾಮಿಡಿ ಕಿಲಾಡಿಗಳ' ತಂಡ 'ಕಾಮಿಡಿ ಟೌನ್' ನಿರ್ಮಿಸಿ ಹಾಸ್ಯ ರಸದೌತಣ ಉಣಬಡಿಸಲಿದೆ.

ಪ್ರತಿದಿನ ಸೋಮವಾರದಿಂದ ಶುಕ್ರವಾರ, ರಾತ್ರಿ 10ರಿಂದ 11 ಗಂಟೆಯವರೆಗೆ ಪ್ರಸಾರವಾಗಲಿರುವ ಈ ಹಾಸ್ಯ ಕಾರ್ಯಕ್ರಮ ಈಗ 'ಕಾಮಿಡಿ ಕಿಲಾಡಿಗಳು ಇನ್ ಕಾಮಿಡಿ ಟೌನ್' ಎಂಬ ಹೊಸ ಕಾನ್ಸೆಪ್ಟ್‌ನಲ್ಲಿ ತೆರೆಯ ಮೇಲೆ ಬರಲಿದೆ. ಈ ಹೊಸ ರೂಪಕ್ಕಾಗಿ 'ಕಾಮಿಡಿ' ತಂಡವು ಭವ್ಯವಾದ 'ಕಾಮಿಡಿ ಟೌನ್' ಸೆಟ್ ಹಾಕಿದೆ.

ಭವ್ಯವಾದ 'ಕಾಮಿಡಿ ಟೌನ್'ಗೆ ಬರುವ ಕಲಾವಿದರ ಮುಖ್ಯ ಆಶಯ ವೀಕ್ಷಕರನ್ನು ನಗಿಸುವುದು. ಪ್ರತಿದಿನ ಹೊಸ ಹೊಸ ಕಲಾವಿದರು ಈ 'ಟೌನ್'ಗೆ ಬಂದು ವೀಕ್ಷಕರನ್ನು ನಗಿಸುತ್ತಾರೆ. ಈ ಹೊಸ ಸಂಚಿಕೆಗಳಲ್ಲಿ ಹಿಂದಿನಂತೆ ಕಲಾವಿದರ ನಡುವೆ ಸ್ಪರ್ಧೆ ನಡೆಸದೆ, ಕಲಾವಿದರು ತಮಗಿಷ್ಟ ಬಂದ ಹಾಸ್ಯವನ್ನು ವೀಕ್ಷಕರಿಗಾಗಿ ಅಭಿನಯಿಸಿ ತೋರಿಸಬಹುದಾಗಿದೆ. ಕಾಮೆಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಈ ಹಿಂದೆ ಕರ್ನಾಟಕದಾದ್ಯಂತದಿಂದ ಆಯ್ಕೆಗೊಂಡ ಹಾಸ್ಯ ಕಲಾವಿದರು ಭಾಗವಹಿಸುತ್ತಿದ್ದರು. ಈಗ ಕರ್ನಾಟಕದಾದ್ಯಂತದಿಂದ ಆಯ್ಕೆಗೊಂಡ ಕೆಲವು ಕಲಾವಿದರ ತಂಡವು ಹಾಸ್ಯ ತುಣುಕುಗಳನ್ನು, ಸ್ಕಿಟ್‌ಗಳನ್ನು ಅಭಿನಯಿಸುತ್ತದೆ.

ರಿಚರ್ಡ್ ಲೂಯಿಸ್, ನಾಗರಾಜ್ ಕೋಟೆ, ತಬ್ಲಾ ನಾಣಿ, ಗೊ.ನಾ.ಸ್ವಾಮಿಯಂತಹ ಜನಪ್ರಿಯ ಕಲಾವಿದರು ಮೂರ್ನಾಲ್ಕು ಜನರ ತಂಡ ಕಟ್ಟಿಕೊಂಡು ಉತ್ತಮ ಹಾಸ್ಯ ಪ್ರಹಸನಗಳನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಪ್ರತಿ ಸಂಚಿಕೆಗೆ ಖ್ಯಾತ ಹಾಸ್ಯಗಾರರನ್ನು ಅತಿಥಿಯನ್ನಾಗಿ ಆಹ್ವಾನಿಸಿ ಅವರೂ ಕೂಡ ಒಂದು ಹಾಸ್ಯ ಸನ್ನಿವೇಶವನ್ನು ಅಭಿನಯಿಸಲು ಹೇಳಲಾಗುತ್ತದೆ.

ಕಾರ್ಯಕ್ರಮದ ಸಂಚಿಕೆಯೊಂದಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಮಂಡ್ಯ ರಮೇಶ್ "ಕಾಮಿಡಿ ಕಿಲಾಡಿಗಳು, ರೀತಿಯ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲೇ ವಿಶಿಷ್ಟ ಹಾಗೂ ಪ್ರಥಮದ್ದಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದ ನಿರೂಣೆಯನ್ನು ಅನುಶ್ರೀ ನಡೆಸಿಕೊಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಖ್ಯಾತ ಹಾಸ್ಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಸಾಧು ಕೋಕಿಲ, ಬ್ಯಾಂಕ್ ಜನಾರ್ಧನ ಮುಂತಾದವರು ಭಾಗವಹಿಸುತ್ತಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada