»   » ಕಾಸರವಳ್ಳಿಗೆ ಹೆಚ್ಚು ತೃಪ್ತಿ ನೀಡಿದ ಚಿತ್ರ ‘ನಾಯಿನೆರಳು’!

ಕಾಸರವಳ್ಳಿಗೆ ಹೆಚ್ಚು ತೃಪ್ತಿ ನೀಡಿದ ಚಿತ್ರ ‘ನಾಯಿನೆರಳು’!

Subscribe to Filmibeat Kannada


ಎಸ್‌.ಎಲ್‌.ಭೈರಪ್ಪನವರ ನಾಯಿನೆರಳು(ಕಾದಂಬರಿ) ಮತ್ತು ಕಾಸರವಳ್ಳಿ ನಾಯಿನೆರಳು(ಸಿನಿಮಾ) -ಇವರೆಡಕ್ಕೂ ಒಂದು ಎಳೆಯಷ್ಟು ಮಾತ್ರ ಹೋಲಿಕೆಯಿದೆ! ಈ ಚಿತ್ರದ ಬಗ್ಗೆ ನೋಡುಗರಲ್ಲಿ ಮೆಚ್ಚುಗೆಯಿದೆ! ಈ ಬಗ್ಗೆ ಕಾಸರವಳ್ಳಿ ಹೇಳೋದು ಇಷ್ಟು...

ನಾನು ಇಲ್ಲಿಯವರೆಗೆ ನಿರ್ದೇಶಿಸಿರುವ ಚಿತ್ರಗಳಲ್ಲೇ ಅತ್ಯಂತ ತೃಪ್ತಿ ತಂದುಕೊಟ್ಟ ಚಿತ್ರ ‘ನಾಯಿನೆರಳು’ ಎಂದು ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಹೇಳಿದ್ದಾರೆ.

ಬಸಂತ್‌ ರೆಸಿಡೆನ್ಸಿಯಲ್ಲಿ ನಡೆದ ಸಮ್ಮಿಲನ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ನಮ್ಮ ಸಂಸ್ಕೃತಿಯಾಂದಿಗೆ ತಳಕುಹಾಕಿಕೊಂಡಿರುವ ಆಸಕ್ತಿದಾಯಕ ಚಿತ್ರವೊಂದನ್ನು ನಿರ್ಮಿಸುವಂತೆ ಬಸಂತ್‌ಕುಮಾರ್‌ ಪಾಟೀಲ್‌ ಹೇಳಿದ್ದರು. ಈ ನಿಟ್ಟಿನಲ್ಲಿ ಎಸ್‌.ಎಲ್‌.ಭೈರಪ್ಪನವರ ನಾಯಿನೆರಳು ಕಥೆ ಹೇಳಿದಾಗ ಪಾಟೀಲ್‌ ರೋಮಾಂಚಿತರಾಗಿದ್ದರು. ಅವರ ಒತ್ತಾಸೆಯಿಂದ ಈ ಚಿತ್ರ ನಿರ್ಮಾಣಗೊಂಡಿದೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

ಈ ಚಿತ್ರ ರಾಜ್ಯ ಪ್ರಶಸ್ತಿಗಳನ್ನು ಪಡೆದುದಲ್ಲದೆ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿದೆ. ಆದಾಗ್ಯೂ ಸಾರ್ವಜನಿಕ ವೀಕ್ಷಣೆಗಾಗಿ ಬಿಡುಗಡೆಯಾಗುವುದೋ ಇಲ್ಲವೋ ಎಂದುಕೊಂಡಿದ್ದೆ. ಪಾಟೀಲ್‌ ಅವರು ಚಿತ್ರ ತೆರೆಕಾಣಿಸಲು ಆಸಕ್ತಿ ತೋರಿದ ಕಾರಣ, ಪಿವಿಆರ್‌ನಲ್ಲಿ ಪ್ರತಿದಿನ ಒಂದು ಆಟ ಪ್ರದರ್ಶಿಸಲಾಗುತ್ತಿದೆ. ಒಂದು ವೇಳೆ ಜನ ಇಷ್ಟ ಪಟ್ಟಲ್ಲಿ ಇನ್ನಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಜನರು ಹಾಗೂ ಅವರ ಬದಲಾಗುವ ನಿಲುವುಗಳ ಕುರಿತು ಚಿತ್ರ ವಿಭಿನ್ನವಾಗಿ ತೆರೆದುಕೊಳ್ಳತ್ತಾ ಹೋಗುತ್ತದೆ. ಮೂವರು ಹೆಣ್ಣುಮಕ್ಕಳ ಸುತ್ತಮುತ್ತಲಿರುವ ಈ ಕಥೆ ಒಂದೇ ಸನ್ನಿವೇಶವನ್ನು ಮೂರು ದೃಷ್ಟಿಕೋನಗಳಿಂದ ನೋಡುತ್ತದೆ. ಇದು ಮತ್ತೆ ಹುಟ್ಟಿಬರುವುದು ಅಥವಾ ಪುನರ್ಜನ್ಮವಲ್ಲ. ಪಾತ್ರಗಳ ಮಿದುಳುಗಳ ಪುನರ್ಜನ್ಮ ಎಂದು ಡಾ.ಯು.ಆರ್‌.ಅನಂತಮೂರ್ತಿ ಹೇಳಿದಾಗ ನನಗೆ ನಿಜಕ್ಕೂ ಹರ್ಷವಾಯ್ತು. ನನ್ನ ಪ್ರಯತ್ನ ಸಾರ್ಥಕತೆ ಮೂಡಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ನಾನು ಸಾಂಪ್ರದಾಯಿಕ ಕುಟುಂಬಗಳಲ್ಲಿ ನಡೆಯುವ ಬಂಡಾಯದ ಬಗ್ಗೆ ವಿಶ್ಲೇಷಣೆ ಮಾಡಿದಾಗ, ನನಗೆ ಇನ್ನೂ ಹೆಚ್ಚಿನ ವಾಸ್ತವಗಳ ಪರಿಚಯವಾಯ್ತು. ಸಾಂಪ್ರದಾಯಿಕ ಕುಟುಂಬಗಳ ತಂತುಗಳಿಲ್ಲದ ವ್ಯಕ್ತಿಗಳನ್ನು ನಾನು ಇಲ್ಲಿಯವರೆಗೂ ಕಂಡಿಲ್ಲ. ವೆಂಕಟಲಕ್ಷ್ಮೀ ಪಾತ್ರದ ಮೂಲಕ ಜಾಗೃತಿ ಮೂಡಿಸುವ ಆಶಯ ನನಗಿತ್ತು ಎಂದು ಅವರು ವಿವರಿಸಿದರು.

ಈ ಚಿತ್ರದ ಎಲ್ಲ ವಿಭಾಗಗಳಲ್ಲೂ ಉತ್ತಮ ಪೋಷಣೆ ಇದೆ. ಭಾಷೆಯ ಬಳಕೆಗೆ ನಾನು ಹೊಸದೊಂದು ವಿಚಾರ ನೀಡಿದ್ದೇನೆ. ವಿವಿಧ ಶೈಲಿಯ ಕನ್ನಡ ಭಾಷೆ ಬಳಸಿಕೊಂಡು ಯಶಕಂಡಿದ್ದೇನೆ ಎಂದು ಕಾಸರವಳ್ಳಿ ಹರ್ಷ ಚಿತ್ತರಾಗಿ ನುಡಿದರು.

ಪವಿತ್ರಾ ಲೋಕೇಶ್‌, ಅನನ್ಯಾ ಕಾಸರವಳ್ಳಿ ಚಿತ್ರದ ತಾರಾಗಣದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada