»   » ಸುಹಾಸಿನಿ ಜೊತೆ ಒಂದು ಮಾತುಕತೆ

ಸುಹಾಸಿನಿ ಜೊತೆ ಒಂದು ಮಾತುಕತೆ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
ಈಕೆ ನಗು ಮೊಗದ ಚೆಲುವೆ, ‘ಸುಹಾಸಿನಿ’. ಸೌಂದರ್ಯದಲ್ಲಿ ದಕ್ಷಿಣದ ನೂತನ್‌. ಮಣಿರತ್ನಮ್‌ರ ಬದುಕಿನ ಸಹ ನಿರ್ದೇಶಕಿ , ಬಿಚ್ಚಮ್ಮ ಪಾತ್ರಗಳನ್ನು ನಿರಾಕರಿಸಿದ ಮಂದಹಾಸಿನಿ. ಆಕೆಯ ಅಭಿನಯ, ಲುಕ್‌, ಮುಗುಳ್ನಗೆ ಎಂದರೆ ಅದೊಂದು ಮ್ಯಾಜಿಕ್ಕು ! ಈ ಮ್ಯಾಜಿಕ್ಕಿಗೆ ಸೋಲದವರಾರು ? ಪ್ರೇಕ್ಷಕರ ಪಾಡು ಬಿಡಿ, ನಿರ್ದೇಶಕ ಮಣಿರತ್ನಂ ಕೂಡ ಸುಹಾಸಿನಿ ನಗೆಗೆ ಕ್ಲೀನ್‌ ಬೋಲ್ಡು !

ಮೊನ್ನೆ , ‘ಓ ಗುಲಾಬಿಯೇ’ ಚಿತ್ರದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸುಹಾಸಿನಿ ಪತ್ರಕರ್ತರೊಂದಿಗೆ ಕೂತು ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ನಗೆಮಲ್ಲಿಗೆ ಚೆಲ್ಲಾಪಿಲ್ಲಿ .

‘ಮನೆಯಲ್ಲಿ ಗೃಹಿಣಿಯ ಪಾತ್ರ ಹಾಗೂ ಅಂಗಣದಲ್ಲಿ ನಟಿಯ ಪಾತ್ರ ನಿರ್ವಹಿಸುವುದು ಕೊಂಚ ಕಷ್ಟ. ಗಂಡಸರಂತಲ್ಲ ನಮ್ಮ ಬದುಕು. ಅವರಿಗಾದರೆ ಕೆಲಸವಾಗಿ ಮನೆಗೆ ಬಂದರೆ ಆರಾಮ. ನಮಗೋ ಮನೆಗೆಲಸದ ಕರ್ಮ ಎಂದು ಸುಹಾಸಿನಿ ಗೃಹಿಣಿಯ ಗೃಹಕೃತ್ಯದ ಸಂಕಟಗಳ ತೋಡಿಕೊಂಡರು. ಮನೆಯಿಂದ ಮಾತು ಹೊರಳಿದ್ದು ಮನೆಯಾಡೆಯನ ಬಗೆಗೆ.

ನಾನು ಮಣಿರತ್ನಂಗೆ ತೋರಿಸಿದ ಒಂದು ಪತ್ರಿಕೆಯ ತುಣಿಕಿನಿಂದ ‘ಕಣ್ಣತ್ತಿಲ್ಲ್‌ ಮುತ್ತಮಿತ್ತಾಲ್‌’ ಚಿತ್ರಕತೆ ಹೆಣೆದರು. ಆದರೆ ನನಗೆ ಅಭಿನಯದಲ್ಲಿ ಸಹಾಯ ಮಾಡ್ತಾರ?... ಉಹುಂ, ನಾನೇ ಮಾಡ್ಬೇಕು ಎಂದು ನಕ್ಕರು. ಮಣಿರತ್ನಂರ ಚೊಚ್ಚಲ ಚಿತ್ರ ‘ಪಲ್ಲವಿ ಅನುಪಲ್ಲವಿ’ಯ ನಾಯಕಿಯಾಗಿ ಅಭಿನಯಿಸಲು ಮಣಿರತ್ನಂ ತಮ್ಮನ್ನು ಆಹ್ವಾನಿಸಿದುದನ್ನು, ಲಕ್ಷ್ಮಿಯ ಮಟ್ಟಕ್ಕೆ ಅಭಿನಯಿಸಲು ಸಾಧ್ಯವಾಗದೆಂದು ಆ ಚಿತ್ರವನ್ನು ನಿರಾಕರಿಸಿದುದನ್ನು ಸುಹಾಸಿನಿ ನೆನಪಿಸಿಕೊಂಡರು.

ನಾನು ಸದಾಕಾಲ ಸಿನಿಮಾ ವಿದ್ಯಾರ್ಥಿ ಎಂದು ಸುಹಾಸಿನಿ ಸದಾ ಹೇಳುತ್ತಲೇ ಇರುತ್ತಾರೆ. ‘ಓ ಗುಲಾಬಿಯೇ’ ಚಿತ್ರದಲ್ಲಿ ಮಾತ್ರ ಆಕೆಗೆ ಪ್ರಿನ್ಸಿಪಾಲರ ಪಾತ್ರ. ಈಗೀಗ ಹೆಚ್ಚಾಗಿ ಪ್ರಿನ್ಸಿಪಾಲರ ಪಾತ್ರವೇ ಸಿಕ್ಕುತ್ತಿದೆ ಎಂದು ಸುಹಾಸಿನಿ ಮತ್ತೆ ನಕ್ಕರು.

ಸುಹಾಸಿನಿ ಚೆನ್ನೈ ಸೇರಿದರೂ, ಆಕೆಗೂ ಬೆಂಗಳೂರಿಗೂ ಇರುವ ಅವಿನಾಭಾವ ಸಂಬಂಧ ಬಿಟ್ಟು ಹೋಗಿಲ್ಲ. ಆರ್‌.ಟಿ. ನಗರದಲ್ಲಿ ಮನೆಯಿದೆ. ತಮ್ಮ ಚೊಚ್ಚಲ ಚಿತ್ರ ‘ನಂಜತ್ತೆೈ ಕೀಳತ್ತೆೈ‘ ತಮಿಳಾದರೂ,ಚಿತ್ರಕ್ಕೆ ಕೆಮರಾ ಮುಂದೆ ನಿಂತಿದ್ದೇ ಕಬ್ಬನ್‌ ಪಾರ್ಕಿನಲ್ಲಿ. ಚಿಕ್ಕಪ್ಪ ಚಾರುಹಾಸನ್‌ ಶ್ರೇಷ್ಠನಟ ರಾಷ್ಟ್ರಪ್ರಶಸ್ತಿ ಪಡೆದದ್ದು ಕನ್ನಡದ ಮೂಲಕವೇ. ಕಮಲ್‌ಹಾಲನ್‌ ಜೊತೆ ‘ಬೆಂಕಿಯಲ್ಲಿ ಅರಳಿದ ಹೂ’ ಚಿತ್ರದಲ್ಲಿ ಮುಂದೆ ಬನ್ನಿ ಎಂದು ಬಿಎಮ್‌ಟಿಸಿ ಬಸ್ಸಿನಲ್ಲಿ ಹೋದದ್ದು ಇದೇ ಸ್ಯಾಂಡಲ್‌ವುಡ್‌ನಲ್ಲಿ . ಹ್ಹೂಂ! ಎಷ್ಟೊಂದು ನೆನಪು.....

ಬೆಂಗಳೂರಿಗೆ ಬಂದರೆ ಮನೆಯಲ್ಲೇ ಇದ್ದಂತಹ ಅನುಭವವಾಗುತ್ತದೆ. ಬೆಂಗಳೂರೇ ಹೀಗೆ ಕರವಿಡಿದು ಕರೆದ ಹಾಗೆ ಎಂದರು ಸುಹಾಸಿನಿ.

ಕನ್ನಡಿಗ ಪ್ರಕಾಶ್‌ ಬೆಳವಾಡಿಯ ಇಂಗ್ಲೀಷ್‌ ಚಿತ್ರ ‘ಸ್ಟಂಬಲ್‌’ನಲ್ಲಿ ಸುಹಾಸಿನಿ ಇತ್ತೀಚೆಗೆ ನಟಿಸಿದ್ದಾರೆ. ಮೊನ್ನೆ ಬಿಡುಗಡೆಯಾದ ‘ಅಣ್ಣಾವ್ರು’ ಚಿತ್ರದಲ್ಲೂ ಸುಹಾಸಿನಿ ನಟಿಸಿದ್ದರು.

ಸುಹಾಸಿನಿ, ಸದ್ಯ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ಕಿರುತೆರೆಗೊಂದು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ‘ಓ ಗುಲಾಬಿಯೇ ’ ಚಿತ್ರತಂಡದ ಸೃಜನಶೀಲತೆ ಕಂಡು ಇನ್ನಷ್ಟು ದಿನ ಡೇಟ್ಸ್‌ ನೀಡಿದ್ದಾರೆ.

ಸುಹಾಸಿನಿ ಪ್ರವರ ಆಕೆಯ ಮುಗುಳುನಗೆಯಂತೆಯೇ ಮುಂದುವರೆಯುತ್ತದೆ...

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada