»   » ಬಂತು ‘ಮಿಂಚು’! : ‘ಸೀತಾರಾಮಾ’ಯಾಣ ಮತ್ತೆ ಶುರು

ಬಂತು ‘ಮಿಂಚು’! : ‘ಸೀತಾರಾಮಾ’ಯಾಣ ಮತ್ತೆ ಶುರು

Subscribe to Filmibeat Kannada


ಮತ್ತೆ ಮೆಗಾ ಸೀರಿಯಲ್‌ವೊಂದನ್ನು ಕಿರುತೆರೆಯ ಸೂಪರ್‌ ಸ್ಟಾರ್‌ ಟಿ.ಎನ್‌.ಸೀತಾರಾಮ್‌ ಹೊತ್ತು ತಂದಿದ್ದಾರೆ. ಈಟೀವಿಯಲ್ಲಿ ಫೆ.19ರಿಂದ ರಾತ್ರಿ 9ಗಂಟೆಗೆ ಮಿಂಚಿನಂತೆ, ಸೀತಾರಾಮ್‌ರ ಹೊಸ ಧಾರಾವಾಹಿ ಪ್ರತ್ಯಕ್ಷವಾಗಲಿದೆ.

ಮಯಾಮೃಗ, ಮನ್ವಂತರ, ಮುಕ್ತ ಮೂಲಕ ಮನೆಮಂದಿಯ ಹೃದಯ ಕದ್ದ ಸೀತಾರಾಮ್‌, ‘ಮ’ಕಾರದ ಮಮತೆ(ಸೀರಿಯಲ್‌ ಮಾತ್ರವಲ್ಲ ಸಿನಿಮಾಗಳಲ್ಲೂ ‘ಮ’ಕಾರವೇ ಅವರಿಗಿಷ್ಟ -ಮೀರಾ ಮಾಧವ ರಾಘವ, ಮತದಾನ ಇತ್ಯಾದಿ)ಮುಂದುವರೆಸಿದ್ದಾರೆ. ಹೀಗಾಗಿಯೇ ‘ಮಿಂಚು’ ಎಂದು ಧಾರಾವಾಹಿಗೆ ಹೆಸರಿಟ್ಟಿದ್ದಾರೆ. ‘ಮಿಂಚು’ ಕ್ಲಿಪ್ಪಿಂಗ್‌ಗಳನ್ನು ನೋಡಿದರೆ, ಇದು ಇನ್ನೊಂದು ಮುಕ್ತ, ಅಥವಾ ಇನ್ನೊಂದು ಮಾಯಾಮೃಗ ಎಂಬಂತಿದೆ.

ಸೀತಾರಾಮ್‌ ಲಕ್‌ ಕುದುರುತ್ತಿದೆ... ಅವರ ‘ಮೀರಾ ಮಾಧವ ರಾಘವ’ನಿಗೆ ಮುಹೂರ್ತದ ದಿನವೇ ಹಂಚಿಕೆದಾರರು ಸಿಕ್ಕಂತೆ, ಹೊಸ ಧಾರಾವಾಹಿಗೆ ಈಗಾಗಲೇ ಪ್ರಾಯೋಜಕರು ಮುಂದೆ ಬಂದಿದ್ದಾರೆ. ಅರ್ಧಗಂಟೆಯ ಧಾರಾವಾಹಿಗೆ, ಏಳು ನಿಮಿಷದ ಜಾಹೀರಾತುಗಳು ಈಗಾಗಲೇ ರೆಡಿ!

ಒಂದು ಕಡೆ ಧಾರಾವಾಹಿ ಹೆಣೆಯುತ್ತಲೇ, ಇನ್ನೊಂದು ಕಡೆ ಸಿನಿಮಾದ ರೀಲು ಸುತ್ತುವ ಕೆಲಸವನ್ನು ಸೀತಾರಾಮ್‌ ನಿರ್ವಹಿಸುತ್ತಿದ್ದಾರೆ. ‘ಮೀರಾ...’ ಮೇ.18ರಂದು ಬಿಡುಗಡೆಯಾಗಲಿದೆ. ಅದರ ನಂತರ ಇಂದಿರಾಗಾಂಧಿ ಮತ್ತು ಎಕ್ಸ್‌ಪ್ರೆಸ್‌ ಕಟ್ಟಿದ ರಾಮನಾಥ್‌ ಗೋಯಂಕಾ ಬಗ್ಗೆ ಸಿನಿಮಾ ಮಾಡಲು ಯೋಚಿಸುತ್ತಿದ್ದಾರೆ. ಏನೋ ಸೀತಾರಾಂಗೆ ಒಳ್ಳೆಯದಾಗಲಿ.

ನಾಗತಿಗೆ ಏನಾಗಿದೆ? : ಅವಸರಕ್ಕೆ ಬಸಿರಾದರೆ ಯಡವಟ್ಟಾಗುತ್ತೆ ಎಂಬಂತೆ ನಾಗತಿಹಳ್ಳಿ ಚಂದ್ರಶೇಖರ್‌ರ ಧಾರಾವಾಹಿ ‘ಒಲವೇ ನಮ್ಮ ಬದುಕು’ ನರಳುತ್ತಿದೆ! ಪಾತ್ರ ಮತ್ತು ಕತೆ ಆಯ್ಕೆಯಿಂದ ಹಿಡಿದು, ಯಾವೊಂದು ವಿಭಾಗವೂ ವೀಕ್ಷಕರ ಸೆಳೆಯುತ್ತಿಲ್ಲ. ಹೀಗಾಗಿಯೇ ಮೂಲಾಜಿಲ್ಲದೇ ಟೀವಿ ಚಾನೆಲ್‌ ಬದಲಿಸುತ್ತಿದ್ದಾನೆ! ಜೊತೆಗೆ ‘ಒಲವೇ...’ ಜಾಗಕ್ಕೆ ‘ಮಿಂಚು’ ಬಂದು ಕುಳಿತಿದೆ!

ನಾಗತಿಹಳ್ಳಿ ಜಾಣರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಧಾರಾವಾಹಿ ನೋಡಿದರೆ ಏನೇನೋ ಅನುಮಾನ...?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada