»   » ಜನಪ್ರಿಯ ಮೆಗಾಧಾರಾವಾಹಿ ಮನ್ವಂತರದ ಕೊನೇ ಸಂವಾದದಲ್ಲಿ ಅನಂತ ಮೂರ್ತಿ ಇದ್ದರು. ಅದಕ್ಕೂ ಮಿಗಿಲಾಗಿ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಸೀತಾರಾಂ ಅಭಿಮಾನಿಗಳು ಖಚಾಖಚಿ ತುಂಬಿದ್ದರು. ಅಭಿಮಾನ ಹೊಳೆಯಾಗಿ ಹರಿಯಿತು.

ಜನಪ್ರಿಯ ಮೆಗಾಧಾರಾವಾಹಿ ಮನ್ವಂತರದ ಕೊನೇ ಸಂವಾದದಲ್ಲಿ ಅನಂತ ಮೂರ್ತಿ ಇದ್ದರು. ಅದಕ್ಕೂ ಮಿಗಿಲಾಗಿ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಸೀತಾರಾಂ ಅಭಿಮಾನಿಗಳು ಖಚಾಖಚಿ ತುಂಬಿದ್ದರು. ಅಭಿಮಾನ ಹೊಳೆಯಾಗಿ ಹರಿಯಿತು.

Subscribe to Filmibeat Kannada

*ಶಂಕರ ಮೂರ್ತಿ, ಬೆಂಗಳೂರು

‘ಮಧ್ಯಮ ವರ್ಗದ ಆಶಯ, ಮೋಸ, ಭ್ರಾಂತಿ ಹಾಗೂ ಕನಸುಗಳನ್ನು ನಡೆಸಬಲ್ಲ ಶಕ್ತಿ ಸೀತಾರಾಂ ಅವರಿಗಿದೆ. ಜನರ ನಿರೀಕ್ಷೆ ಮತ್ತು ಅಪೇಕ್ಷೆಯ ಅರಿವಿದ್ದಾಗ ಮಾತ್ರ ಬರವಣಿಗೆ ಜನಪ್ರಿಯವಾಗಲು ಸಾಧ್ಯ. ನಿರ್ದೇಶಕರಿಗೆ ಇದೊಂದು ಸವಾಲು. ಸೀತಾರಾಂ ಈ ಸವಾಲಿನಲ್ಲಿ ಗೆದ್ದಿದ್ದಾರೆ’.

ಜ್ಞಾನಪೀಠಿ ಡಾ. ಯು.ಆರ್‌.ಅನಂತ ಮೂರ್ತಿ ಹೀಗೆ ಶಹಬ್ಬಾಸ್‌ ಹೇಳಿದಾಗ ಟಿ.ಎನ್‌. ಸೀತಾರಾಂ ಮುಖದಲ್ಲಿ ಸಾರ್ಥಕದ ನಗು ಮನೆಮಾಡಿತ್ತು. ‘ಮನ್ವಂತರ’ ಮೆಗಾ ಧಾರಾವಾಹಿಯ ಕೊನೆ ಸಂವಾದವನ್ನು ಕಣ್ಣು- ಕಿವಿಗೆ ತುಂಬಿಕೊಂಡು, ಸೀತಾರಾಂ ಜತೆ ಒಂದೆರಡಾದರೂ ಮಾತಾಡಲು ತುಡಿಯುತ್ತಿದ್ದ ಅಭಿಮಾನಿಗಳ ದಂಡು ಬೆಂಗಳೂರಿನ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಮಂಗಳವಾರ ಸಂಜೆ ಜಮಾಯಿಸಿತ್ತು.

ಯಥಾ ಪ್ರಕಾರ ಹೀಗೇಕೆ, ಹಾಗ್ಯಾಕಲ್ಲ ? ಆ ಪಾತ್ರವನ್ನು ಹೀಗೆ ಮಾಡಿದ್ದರೆ ಚೆನ್ನಾಗಿರುತ್ತಿತ್ತಲ್ಲ ? ಕೋರ್ಟಿನ ಸೀನೊಂದೇ ಬಂಡವಾಳವಾಯಿತಲ್ಲ ?ಅಂಥಾ ಧಾರಾವಾಹಿಯನ್ನೇ ಯಾಕೆ ಮಾಡಿದಿರಿ?- ವಗೈರೆ ಪ್ರಶ್ನೆಗಳು ಸಂವಾದದಲ್ಲಿ ಎರಗಿ ಬಂದವು. ಕೋರ್ಟಿನ ಸೀನುಗಳನ್ನು ನಿಭಾಯಿಸಿದಷ್ಟೇ ಅಚ್ಚುಕಟ್ಟಾಗಿ ಸೀತಾರಾಂ ಅವಕ್ಕೆ ಉತ್ತರ ಕೊಟ್ಟರು.

‘ಮನ್ವಂತರ’ದ ಕೋರ್ಟಿನ ಸೀನುಗಳು ತಮಗೆ ಪರಿಚಿತವೇ ಅಲ್ಲವೇನೋ ಎಂಬಂತಿದ್ದ ಅನಂತಮೂರ್ತಿ ಮಾತು ಮಾತ್ರ ಅಮೆರಿಕ- ಇರಾಕ್‌ ಯುದ್ಧದ ಸುತ್ತಲೇ ಗಿರಕಿ ಹೊಡೆಯಿತು. ಬಿಬಿಸಿ, ಸಿಎನ್‌ಎನ್‌ನ ಯುದ್ಧ ವಾರ್ತೆಯನ್ನೇ ಒಂದು ಧಾರಾವಾಹಿ ಎಂದು ಬಣ್ಣಿಸಿದ ಅನಂತ ಮೂರ್ತಿ, ಈ ಧಾರಾವಾಹಿ ನೋಡಿದರೆ ಟೀವಿಯೇ ಇರಬಾರದಿತ್ತು ಅನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಂದೊಂದು ದಿನ ಅಮೆರಿಕ ಅಧ್ಯಕ್ಷ ಬುಷ್‌ ಭಾರತಕ್ಕೂ ಬರಬಹುದು. ವಾಜಪೇಯಿ ಆಡಳಿತ ಸಾಕು ಅಂತ ಕಾಂಗ್ರೆಸ್‌ ಕೈಗೆ ಅಧಿಕಾರ ಕೊಡಬಹುದು. ಅದೇ ಥರ ಬೆಂಗಳೂರಿಗೂ ಬಂದು, ಒಕ್ಕಲಿಗರು ಆಳಿದ್ದು ಸಾಕು ಅಂತ ಹೇಳಿ ಲಿಂಗಾಯಿತರ ಕೈಗೆ ಆಡಳಿತ ಕೊಡಬಹುದು. ತಮಿಳುನಾಡಿಗೆ ಹೋಗಿ, ಜಯಲಲಿತಾರನ್ನು ಕೆಳಗಿಳಿಸಿ ಕರುಣಾನಿಧಿಯವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು ಎಂದು ಅನಂತಮೂರ್ತಿ ವ್ಯಂಗ್ಯದ ಚಾಟಿ ಬೀಸಿದಾಗ ಸಭೆಯಲ್ಲಿ ಗೊಳ್ಳನೆ ನಗೆ.

ಸಿನಿಮಾ ಕೋರ್ಟು ಸೀನುಗಳು ಸರಿಯಿಲ್ಲ : ಸಿನಿಮಾಗಳಲ್ಲಿ ಕೋರ್ಟು ಸೀನುಗಳನ್ನು ಕೆಟ್ಟದಾಗಿ ತೋರಿಸುತ್ತಾರೆ. ಮೇಯರ್‌ ಗೌನ್‌ ಹಾಕಿಕೊಂಡು ನ್ಯಾಯವಾದಿಗಳು ವಾದ ಮಾಡೋದನ್ನ ನೋಡಿದರೆ ನಗು ಬರುತ್ತೆ. ನ್ಯಾಯಾಲಯದ ಪರಿಸರದ ಗಂಧ- ಗಾಳಿಯಿಲ್ಲದವರು ನಿರ್ದೇಶನ ಮಾಡಿದರೆ ಹೀಗೇ ಆಗೋದು. ಇದು ತಮಾಷೆಯ ಸಂಗತಿಯಲ್ಲ , ನ್ಯಾಯಾಂಗ ವೃತ್ತಿಗೆ ಮಾಡುವ ಅವಮಾನ ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಕಿಡಿ ಕಾರಿದರು.

ಪುಸ್ತಕ ರೂಪದಲ್ಲಿ ಜಂಗಮ ವಚನಗಳು : ‘ಮನ್ವಂತರ’ದಲ್ಲಿ ಶಿವಲಿಂಗಮೂರ್ತಿ ಪಾತ್ರದ ಮೂಲಕ ಹೇಳಿಸುವ ನೀತಿಬೋಧೆಗಳನ್ನು ಬರೆದಿರುವವರು ಖುದ್ದು ಸೀತಾರಾಂ. ಈಗ ಈ ವಚನಗಳು ಪುಸ್ತಕ ರೂಪದಲ್ಲಿ ಸಿದ್ಧವಾಗಿದೆ. ಈ ಜಂಗಮ ವಚನಗಳ ಪುಸ್ತಕವನ್ನು ಈ ಟೀವಿ ಮುಖ್ಯಸ್ಥ ಪ್ರೊ. ಮಾನ್ವಿ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

ನ್ಯಾಯಮೂರ್ತಿ ಮಂಜುಳ ಚೆಲ್ಲೂರ್‌, ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಪ್ರಕಾಶ್‌ ಮೊದಲಾದವರು ವೇದಿಕೆ ಮೇಲೆ ಕೂತಿದ್ದರು.

ಸಂವಾದ, ವಿಮರ್ಶೆ ಹಾಗೂ ಅಭಿನಂದನೆ ಕಾರ್ಯಕ್ರಮದ ಮಧುರ ಕ್ಷಣಗಳನ್ನು ಹೊತ್ತು ಹೊರಬಂದ ಅನೇಕರು ‘ಮನ್ವಂತರ’ದ ನಂತರ ಮುಂದೇನು ಎಂಬ ಪ್ರಶ್ನೆಯನ್ನು ಸೀತಾರಾಂ ಮುಂದೆ ಇಡುತ್ತಿದ್ದರು. ಸೀತಾರಾಂ ಮಾತ್ರ ಸದ್ಯಕ್ಕೇನೂ ಇಲ್ಲ ಎಂಬಂತೆ ನಗುತ್ತಿದ್ದರು. ಸೀತಾರಾಂ ಮನದಲ್ಲಿ ಇನ್ನಾವ ಧಾರಾವಾಹಿ ಪಾಕ ಎರಕಗೊಳ್ಳುತ್ತಿದೆಯೋ, ಕಾದು ನೋಡಬೇಕು.

ಇನ್ನೊಂದು ಮಾತು- ‘ಮನ್ವಂತರ’ದ ಜನಪ್ರಿಯತೆ ಯಾವ ಮಟ್ಟಕ್ಕಿದೆಯೆಂದರೆ, ಪ್ರತಿನಿತ್ಯ ರಾತ್ರಿ 8ರಿಂದ 8.30 ಗಂಟೆವರೆಗೆ ಪ್ರಸಾರವಾಗುವ ಧಾರಾವಾಹಿಯನ್ನು ಕರೆಂಟು ಕಿರಿಕ್ಕಿನಿಂದ ಅನೇಕರು ನೋಡೋಕಾಗುತ್ತಿಲ್ಲ. ಈ ಕಾರಣಕ್ಕೇ ರಾತ್ರಿ 11.30ಕ್ಕೆ ಅದೇ ದಿನದ ಕಂತಿನ ಮರು ಪ್ರಸಾರವಾಗುತ್ತಿದೆ. ಈ ರೀತಿ ಎರಡು ಸ್ಲಾಟನ್ನು ಒಂದೇ ದಿನ ಗಿಟ್ಟಿಸಿಕೊಂಡ ಮೊದಲ ಕನ್ನಡ ಧಾರಾವಾಹಿ ಇದು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada