»   » ‘ಮಲ್ಲ’ನ ರಾಸಲೀಲೆಗೆ ಐವತ್ತರ ಗರಿ

‘ಮಲ್ಲ’ನ ರಾಸಲೀಲೆಗೆ ಐವತ್ತರ ಗರಿ

Posted By: Staff
Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಮಟ್ಟಿಗೆ ತೆರೆಯ ಮೇಲಿನ ರಾಸಲೀಲೆಗೆ ಹೊಸ ವ್ಯಾಖ್ಯೆ ಬರೆದ 'ಮಲ್ಲ" ಚಿತ್ರದ ನಾಗಾಲೋಟ ಮುಂದುವರಿದಿದೆ. ರವಿಚಂದ್ರನ್‌ ಹಾಗೂ ಪ್ರಿಯಾಂಕ ಅಭಿನಯದ 'ಮಲ್ಲ" ನಿಗೀಗ 50, ನಾಟೌಟ್‌!

ಮೂರ್ನಾಲ್ಕು ವಾರ ಒಂದು ಚಿತ್ರ ಓಡಿದರೆ 'ಹಿಟ್‌" ಎಂದು ಪರಿಗಣಿಸಬೇಕಾದ ಸಂದರ್ಭದಲ್ಲಿ 'ಮಲ್ಲ" ಚಿತ್ರದ ದಾಖಲೆ ಅದ್ಭುತ ಅನ್ನಿಸುವಂತಿದೆ. 57 ಚಿತ್ರಮಂದಿರಗಳಲ್ಲಿ 'ಮಲ್ಲ" 50 ದಿನದ ಪ್ರದರ್ಶನ ಪೂರೈಸಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ. ಇಷ್ಟೇ ಅಲ್ಲ , ಓಪನಿಂಗ್‌ನಲ್ಲೂ ಮಲ್ಲ ಚಿತ್ರ ಹೊಸ ದಾಖಲೆ ಬರೆದಿದೆ. ನಿರ್ಮಾಪಕ ರಾಮು ಅವರ ಝಣಝಣ ಎಣಿಕೆ ಇನ್ನೂ ಮುಗಿದಿಲ್ಲ , ಹಾಗಾಗಿ ಅಂಕಿಸಂಖ್ಯೆಗಳು ನಿಖರವಾಗಿ ಸಿಗುತ್ತಿಲ್ಲ . ಚಿತ್ರ 8ರಿಂದ 10 ಕೋಟಿ ರುಪಾಯಿ ಲಾಭ ಗಳಿಸಬಹುದು ಎನ್ನುವ ಅಂದಾಜು ಗಾಂಧಿನಗರದಲ್ಲಿದೆ.

'ಮಲ್ಲ" ಚಿತ್ರ ಅನೇಕ ಕೇಂದ್ರಗಳಲ್ಲಿ ಶತ ದಿನೋತ್ಸವ ಕಾಣುವ ಬಗ್ಗೆ ರಾಮೂಗೆ ಸಂದೇಹವಿಲ್ಲ . ಬೆಂಗಳೂರು ಮಾತ್ರವಲ್ಲ , ಮುಂಬಯಿ ಕರ್ನಾಟಕದಲ್ಲೂ 'ಮಲ್ಲ" ಗೆದ್ದುದನ್ನು ರಾಮು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಆದರೆ ಮಂಗಳೂರಿನಲ್ಲಿ ಮಾತ್ರ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ದೊರೆತಿಲ್ಲ .

'ಮಲ್ಲ" ಚಿತ್ರದ ಯಶಸ್ಸು ನಿರ್ಮಾಪಕ ರಾಮು ಹಾಗೂ ನಟ ರವಿಚಂದ್ರನ್‌ಗೆ ಹೊಸ ಉತ್ಸಾಹ ತಂದುಕೊಟ್ಟಿದೆ. ಸಾಲು ಸಾಲು ಸೋಲುಗಳಿಂದ ಉಭಯತ್ರರೂ ಕಂಗೆಟ್ಟಿದರು. ಮಲ್ಲನ ಗೆಲುವಿನಿಂದ ರಾಮು ತಮ್ಮ ಹೊಸ ಚಿತ್ರ 'ದುರ್ಗಿ"ಯ ಬಗ್ಗೆ ಆಶಾಭಾವನೆ ಹೊಂದಿದ್ದಾರೆ. ಚಿತ್ರದಲ್ಲಿ ರಾಮು ಪತ್ನಿ ಮಾಲಾಶ್ರೀ ನಾಯಕಿ.

ಇನ್ನು ರವಿಚಂದ್ರನ್‌ ಕೂಡ ತಮ್ಮ ಮುಂದಿನ ಚಿತ್ರ 'ರಾಮಕೃಷ್ಣ"ದ ಬಗೆಗೆ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಈ ಚಿತ್ರದಲ್ಲಿ ರವಿ ಜೊತೆಗೆ ನಗೆ ನಾಯಕ ಜಗ್ಗೇಶ್‌ ಕೂಡ ಅಭಿನಯಿಸುತ್ತಿರುವುದೊಂದು ವಿಶೇಷ. 'ಗಡಿಬಿಡಿ ಗಂಡ" ಚಿತ್ರದಲ್ಲಿ ಈ ಜೋಡಿ ಪ್ರೇಕ್ಷಕರನ್ನು ರಂಜಿಸಿತ್ತು . 'ರಾಮಕೃಷ್ಣ" ಮೂಲಕ ಯಶಸ್ಸಿನ ಮರುಕಳಿಕೆಯನ್ನು ರವಿ-ಜಗ್ಗೇಶ್‌ ನಿರೀಕ್ಷಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada