»   » ‘ಅನ್ಬಾನ ರಜನಿ ಸಾರ್‌ ಅವರ್‌ಗಳೇ- ವಣಕ್ಕಂ!’

‘ಅನ್ಬಾನ ರಜನಿ ಸಾರ್‌ ಅವರ್‌ಗಳೇ- ವಣಕ್ಕಂ!’

Subscribe to Filmibeat Kannada

31 ವರ್ಷದ ಹಿಂದೆ, ಹನುಮಂತನಗರದ ಬಾಡಿಗೆ ಮನೇಲಿ ಮೂವರು ಗೆಳೆಯರೊಂದಿಗೆ ವಾಸವಿದ್ದಾತ ಶಿವಾಜಿರಾವ್‌ ಗಾಯಕ್ವಾಡ್‌. ಅವತ್ತಿಗೆ ಆತ ರೂಟ್‌ ನಂ.10ರ ಬಿ.ಟಿ. ಎಸ್‌.ಬಸ್‌ ಕಂಡಕ್ಟರ್‌. ಒಂದು ಸಂಜೆ ಗೆಳೆಯರನ್ನು ಕೂರಿಸಿಕೊಂಡು ಶಿವಾಜಿರಾವ್‌ ಹೇಳಿದ್ನಂತೆ: ನಾವು ನಾಲ್ವರ ಪೈಕಿ, ಮುಂದೆ ಯಾರೇ ದೊಡ್ಡ ಮನುಷ್ಯ ಆದ್ರೂ ಉಳಿದವರ ನೆರವಿಗೆ ಬರ್ಬೇಕು...! ಈ ಮಾತಿಗೆ ಎಲ್ಲರೂ ಒಪ್ಪಿದರು. ಕಾಲ ಉರುಳಿತು. ಕೆಲವೇ ದಿನದಲ್ಲಿ ಎಲ್ಲರೂ ಹಳೆಯ ಮಾತು ಮರೆತರು. ಆದರೆ ಶಿವಾಜಿರಾವ್‌ ಆಕಾಶದೆತ್ತರ ಬೆಳೆದ. ತಮಿಳ್ನಾಡಿನಲ್ಲಿ ಸೂಪರ್‌ ಸ್ಟಾರ್‌ ಆದ. ತಮಿಳರ ಪಾಲಿನ ದೈವವಾದ. ಇಷ್ಟಾದ ಮೇಲೂ ಆತ ಹಳೆಯ ಮಾತು, ಹಳೆಯ ಗೆಳೆಯರನ್ನು ಮರೆಯಲಿಲ್ಲ. ಈಗಲೂ ಮರೆತಿಲ್ಲ! ಆತ ಬೇರೆ ಯಾರೂ ಅಲ್ಲ -ರಜನೀಕಾಂತ್‌!

*

ಮೂರು ವರ್ಷಗಳ ಹಿಂದೆ-ಅಪ್ಪು ಸಿನಿಮಾದ ಶತದಿನೋತ್ಸವ ಸಮಾರಂಭ ನಡೀತಲ್ಲ, ಅದಕ್ಕೆ ಮುಖ್ಯ ಅತಿಥಿ ಆಗಿದ್ದುದು ರಜನೀಕಾಂತ್‌. ಅವತ್ತು, ಶುದ್ಧ, ಸ್ಪಷ್ಟ, ಅಸ್ಖಲಿತ ಕನ್ನಡದಲ್ಲಿ ರಜನಿ ಹೇಳಿದ್ದು: ದಶಕದ ಹಿಂದೆ ಅಣ್ಣಾವ್ರ ಚಿತ್ರಗಳನ್ನ ಬ್ಲಾಕ್‌ನಲ್ಲಿ ಟಿಕೆಟ್‌ ತಗೊಂಡು ನೋಡ್ತಿದ್ದವ ನಾನು. ಅಂಥ ನಾನು ಇವತ್ತು ಅಣ್ಣಾವ್ರ ಪಕ್ಕ ಕೂತಿದ್ದೀನಲ್ಲ, ನಂಗೆ ಖುಷಿಯಾಗಿದೆ. ಕಣ್ತುಂಬಿ ಬರ್ತಿದೆ. ನಾನು ಅಣ್ಣಾವ್ರ ಅಭಿಮಾನಿ. ಕನ್ನಡಿಗರ ಅಭಿಮಾನಿ!

*

ತಮಿಳಿನಲ್ಲಿ ರಜನಿಕಾಂತ್‌ರನ್ನು ಹೀರೋ ಮಾಡಿದ್ದು ಕೆ. ಬಾಲಚಂದರ್‌. ರಜನಿಯ ಬಹಳಷ್ಟು ಸಿನಿಮಾಗಳಲ್ಲಿ ಆತನ ತಂದೆಯಾಗಿ ನಟಿಸಿದ್ದು ಶಿವಾಜಿ ಗಣೇಶನ್‌. ವರ್ಷಗಳ ಹಿಂದೆ ಕೆ. ಬಾಲಚಂದರ್‌ ವಿಪರೀತ ಸಂಕಷ್ಟಕ್ಕೆ ಈಡಾದಾಗ ಗುರುವಿನ ನೆರವಿಗೆ ಧಾವಿಸಿದ ರಜನಿ ಕೇವಲ 1ರೂ. ಸಂಭಾವನೆ ಪಡೆದು ‘ಅಣ್ಣಾಮಲೈ’ ಚಿತ್ರದಲ್ಲಿ ನಟಿಸಿದರು. ಸಿನಿಮಾ ಸೂಪರ್‌ ಹಿಟ್‌ ಆಯಿತು. ಬಾಲಚಂದರ್‌ ರಜನಿಯ ಮುಂದೆ ನಿಂತು ಬಾವುಕರಾಗಿ ಹೇಳಿದರಂತೆ : ನಾನು ನಿನ್ನ ಗುರುವಲ್ಲಪ್ಪ ಇವತ್ತು ನೀನೇ ನನ್ನ ಗುರು ಮತ್ತು ದೊರೆ! ಮೊನ್ನೆ ಶಿವಾಜಿಗಣೇಶನ್‌ ಮಕ್ಕಳು ಬೀದಿಗೆ ಬಿದ್ದಾಗ ‘ಚಂದ್ರಮುಖಿ’ ಸಿನಿಮಾ ಮಾಡಿ ಎಂದು ಉಪದೇಶಿಸಿದ ರಜನಿ ಮತ್ತೆ ಒಂದು ರೂಪಾಯಿ ಸಂಭಾವನೆ ಪಡೆದರಂತೆ!

ರಜನಿ ಸೂಪರ್‌ ಸ್ಟಾರ್‌ ಆಗಿದ್ದಾಗ ತಮಿಳ್ನಾಡಿನ ಮುಖ್ಯಮಂತ್ರಿ ಆಗಿದ್ದಾಕೆ ಜಯಲಲಿತಾ. ಆಕೆ ರಜನಿಗೆ ಹೆಜ್ಜೆ ಹೆಜ್ಜೆಗೂ ಕಿರಿ ಕಿರಿ ಮಾಡ್ತಿದ್ಲಂತೆ. ಆಗಲೇ ರಂಜನಿಯ ಭಾಷಾ ಸಿನಿಮಾ ಬಂತು. ಅದರಲ್ಲಿ ರಜನಿ, ಹಲ್ಲು ಕಚ್ಚಿ, ಕಣ್ಣು ಕಿರಿದಾಗಿಸಿಕೊಂಡು, ತೋರು ಬೆರಳನ್ನು ಅತ್ತಿತ್ತ ಆಡಿಸುತ್ತ -ಭಾಷಾ, ಒರುವಾಟಿ ಸೊನ್ನ, ನೂರು ವಾಟಿ ಸೊನ್ನ ಮಾದರಿ’(ಭಾಷಾ ಒಂದು ಬಾರಿ ಹೇಳಿದ್ರೆ ಅದು ನೂರು ಬಾರಿ ಹೇಳಿದ ಹಾಗೆ!) ಅಂದಿದ್ದರು. ಈ ಮಾತಿಂದ ಜಯಲಲಿತಾ ತತ್ತರಿಸಿ ಹೋಗಿದ್ದಳು. ಕೆಲ ದಿನಗಳ ನಂತರ ಆಕೆ ಮತ್ತೆ ಕಿರಿಕಿರಿ ಶುರು ಮಾಡಿದಾಗ ತನ್ನ ‘ಅರುಣಾಚಲಂ’ ಚಿತ್ರದಲ್ಲಿ ರಜನಿ ‘ಆಂಡವ ಸೊಲ್ರ, ಅರುಣಾಚಲ ಮಡಿಕ್ಕಿರಾ’ (ದೇವರು ಹೇಳ್ತಾನೆ. ಈ ಅರುಣಾಚಲ ಮಾಡಿ ಮುಗಿಸ್ತಾನೆ!) ಎಂದು ಡೈಲಾಗ್‌ ಹೊಡೆದರು. ಅಷ್ಟೆ, ಜಯಲಲಿತಾ ಮತ್ತೆ ಬಾಲ ಬಿಚ್ಚಲಿಲ್ಲ.

ಇಂಥ‘ ಕತೆ’ಗಳ ಮೂಲಕವೇ ಮನೆ ಮಾತಾಗಿರುವ

**

ರಜನಿ ಸಾರ್‌, ಬರಾಬರ್‌ ಎರಡು ವರ್ಷದ ನಂತರ ನಿಮ್ಮ ಹೊಸಚಿತ್ರ ಚಂದ್ರಮುಖಿ ತೆರೆಗೆ ಬಂದಿದೆ. ರಜನಿ ಸಿನಿಮಾ ರಿಲೀಸ್‌ ಅನ್ನೋ ಮಾತು ಕೇಳಿದ್ದೇ ತಡ -ಹಿಂದಿ, ತೆಲುಗು, ಮಲಯಾಳಂ, ಇಂಗ್ಲಿಷ್‌, ನಮ್ಮದೇ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲ ಕಂಗಾಲಾಗಿದ್ದಾರೆ. ತಮ್ಮ ಸಿನಿಮಾಗಳು ರಿಲೀಸ್‌ ಆಗದ ಹಾಗೆ ನೋಡಿಕೊಂಡಿದ್ದಾರೆ. ಈ ಕಡೆ ಬೆಂಗಳೂರ ಚಿತ್ರಪ್ರೇಮಿಗಳು -ಅರೆ, ರಜನಿ ಸಿನಿಮಾ ಮಾರಾಯ. ಅದರಲ್ಲಿ ಸಖತ್‌ ಸ್ಟಂಟ್ಸ್‌ ಇದೆಯಂತೆ! ಅಣ್ಣಾ ರಜನಿ ಅದ್ಭುತವಾಗಿ ನಟಿಸಿದ್ದಾರಂತೆ. ಒಂದು ಹಾಡಲ್ಲಿ ನಲವತ್ತು ಡ್ರೆಸ್‌ ಹಾಕಿದ್ದಾರಂತೆ... ಎಂದೆಲ್ಲ ಹೇಳಿಕೊಂಡು ಖುಷಿಯ ಹೊಳೆಯಲ್ಲಿ ತೇಲುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಉಗ್ರ ಕನ್ನಡಿಗರೊಬ್ಬರು-‘ಒಂದು ಪ್ರೇಮದ ಕತೆ’, ‘ಮಾತು ತಪ್ಪದ ಮಗ’,‘ ಕಿಲಾಡಿ ಕಿಟ್ಟು’,‘ಗಲಾಟೆ ಸಂಸಾರ’, ‘ ಕಥಾ ಸಂಗಮ’,‘ ಸಹೋದರರ ಸವಾಲ್‌’ ಸಿನಿಮಾಗಳಲ್ಲಿ ರಜನಿಕಾಂತ್‌ ಅಭಿನಯಿಸಿದ್ದಾರೆ ಎಂದು ದ್ಡೊಡ ದನಿಯಲ್ಲಿ ಹೇಳುತ್ತಿದ್ದಾರೆ.

ಈ ಪೈಕಿ ‘ಸಹೋದರರ ಸವಾಲ್‌’ ಅಂದಾಕ್ಷಣ ಓ ನಲ್ಲನೆ ಸವಿಯಾತೊಂದ ನುಡಿವೆಯಾ/ನಾ ಏನನು ನುಡಿಯಲಿ ನಲ್ಲೆ ತಿಳಿಸೆಯಾ/ನಾ ನಿನ್ನ ಬಿಡೆನು ಎಂದಿಗೂ/ನೀ ನನ್ನ ಜೀವ ಎಂದಿಗೂ... ಎಂಬ ಅಮರಾ ಮಧುರಾ ಪ್ರೇಮದ ಹಾಡು ನೆನಪಾಗಿ ರೊಮ್ಯಾಂಟಿಕ್‌ ರಜನಿಯ ಖಡಕ್‌ ಚಿತ್ರವೊಂದನ್ನು ನಮ್ಮ ಮುಂದಿಟ್ಟಿದೆ. ರಜನಿ ಸಾರ್‌, ನೀವು ಒಬ್ಬರೇ ಇದ್ದಾಗ ಇದ್ದಕ್ಕಿದ್ದಂತೆ ‘ನಲ್ಲೆಯ ಸವಿ ಮಾತಿನ’ ಹಾಡು ನೆನಪಾಗಿ ಹ್ಯಂಗೆಂಗೋ ಆಗೋದಿಲ್ಲ ?ಆ ಕ್ಷಣಕ್ಕೆ ನೀವು ಥೇಟ್‌ ಅಮರ ಪ್ರೇಮಿಗಳು ಗೆಟಪ್ಪಿನಲ್ಲಿ ನಿಂತು‘ಹಾಲು ಜೇನು ಬೆರೆತಂತೆ/ಜೀವ ಎರಡು ಬೆರೆತಾಯ್ತು/ನೀ ಬಂದು ಬಾಳು ಬೆಳಗಿತು...’ ಅಂತ ಒಳಗೊಳಗೇ ಹಾಡಿಬಿಡಲ್ವ? ಹೇಳಿ ಸಾರ್‌...

ಎಲ್ಲರೂ ಬಲ್ಲ ಹಾಗೆ ನೀವ್‌ ಇವತ್ತು ಸೂಪರ್‌ ಸ್ಟಾರ್‌, ಸ್ಟೈಲ್‌ ಕಿಂಗ್‌, ನಮಗಂತೂ ಒಂದು ಬಾರಿ ಏಕ್‌ದಂ ಹತ್ತು ಲಕ್ಷ ಸಿಕ್ಕಿಬಿಟ್ರೆ-ಜಂಭ ಬರುತ್ತೆ. ಹೆದರಿಕೆ ಆಗುತ್ತೆ. ಆಸೆ ಹೆಚ್ಚಾಗುತ್ತೆ. ದುರಾಸೆ ಹುಟ್ಟುತ್ತೆ. ಮದ ಮೈ ತುಂಬುತ್ತೆ. ಕರುಣೆ ಕಣ್ಮರೆಯಾಗುತ್ತೆ. ನಾನುಂಟು. ಮೂರು ಲೋಕವುಂಟು ಅಂತ ಮೆರೆಯೋ ಹಾಗಾಗುತ್ತೆ. ಹಾಗಿರೋವಾಗ ಬರಾಬರ್‌ ಇಪ್ಪತ್ತು ವರ್ಷದಿಂದ ಹಣದ ಹೊಳೆಯಲ್ಲೇ ತೇಲ್ತಾ ಇದ್ರೂ ಸಾಫ್ಟ್‌ ಅಂಡ್‌ ಸಿಂಪಲ್‌ ಮ್ಯಾನ್‌ ಆಗಿಯೇ ಉಳಿದಿದೀರಲ್ಲ -ಇದು ಹ್ಯಾಗೆ ಸಾಧ್ಯವಾಯ್ತು ? ಅಸಾಧ್ಯ ಸಿರಿವಂತಿಕೆಯ ಮಧ್ಯೆಯೂ ಸಂಯುಕ್ತ ಕರ್ನಾಟಕದ ಪತ್ರಕರ್ತ ಮಿತ್ರ ರಾಮಚಂದ್ರರಾವ್‌ ನೆನಪು ಗಟ್ಟಿಯಾಗಿ ಹೇಗೆ ಉಳಿಯಿತು? ದೇವರಿಂದ ಕೂಡ ಸಾಧ್ಯವಿಲ್ಲದ ‘ಚಕಾ ಚಕ್ಕನೆ ಸಿಗರೇಟ್‌ ಸೇದುವ’ ಸ್ಟಂಟ್‌ ನಿಮಗೆ ಹ್ಯಾಗೆ ವಶವಾಯಿತು. ಹೇಳಿ ಸಾರ್‌.

ರಜನಿ ಸಾರ್‌, ಬೆಳ್ಳಿತೆರೆಯ ಮೇಲೆ ನೀವು ಯಾವತ್ತೂ ವೀರ, ಧೀರ ಮತ್ತು ಸೋಲಿಲ್ಲದ ಸರದಾರ. ರಿಯಲ್‌ ಲೈಫ್‌ನಲ್ಲೂ ನೀವು ಹಾಗೇ ಇದೀರಿ ಅಂದ್ಕೊಂಡಿದ್ವಿ ನಾವು. ಯಾಕೆ ಅಂದ್ರೆ ನಿಮ್ಮಲ್ಲಿ ಹಣದ ರಾಶಿಯೇ ಇತ್ತಲ್ಲ?ಆದ್ರೆ ನಮ್ಮ ನಂಬಿಕೆಗಳನ್ನೇ ಉಲ್ಟಾ ಮಾಡಿದ ನೀವು ವರ್ಷದ ಹಿಂದೆ ಏಕಾಏಕಿ ಋಷಿಯ ವೇಷ ಹಾಕ್ಕೊಂಡು ವೈರಾಗ್ಯದ ಮಾತಾಡಿದ್ರಲ್ಲ- ಅಸಾಧ್ಯ ಸಿರಿಮಂತಿಕೆಯ ಹಿಂದೆ ಅಸಹನೀಯ ನೋವಿರುತ್ತಾ? ಹೇಳಿ ಸಾರ್‌.

ಹೌದು. ಒಬ್ಬ ಹೀರೋ ಹೇಗಿರಬೇಕು ಅನ್ನೋ ಮಾತಿಗೆ ನೀವು ಉದಾಹರಣೆ. ಸಾಮಾನ್ಯನೊಬ್ಬ ಅಸಾಮಾನ್ಯ ಎತ್ತರಕ್ಕೆ ಏರಬಹುದು. ಅನ್ನೋದಕ್ಕೆ ನೀವು ಸಾಕ್ಷಿ, ದಾನಕ್ಕೆ ನೀವು ಸ್ಯಾಂಪಲ್‌. ನೀವು ಜನಾನುರಾಗಿ, ಛಲದಂಕಮಲ್ಲ ಅನ್ನೋದಕ್ಕೆ ಕಾವೇರಿ ಗಲಾಟೆ ಟೈಮ್‌ನಲ್ಲಿ, ಜಯಲಲಿತಾ ವಿರುದ್ಧದ ಸೆಣಸಾಟದಲ್ಲಿ ತೋರಿದ ಧೀಮಂತಿಕೆಯೇ ತೋರುಬೆರಳು. ಇಂಥ ನೀವು, ಗುರು ರಾಘವೇಂದ್ರನ ಕಟ್ಟಾ ಭಕ್ತರಾದ ನೀವು -ಇಬ್ಬರು ಮಕ್ಕಳಿಗೆ ಮಂಡೋದರಿ, ಶೂರ್ಪನಖಿ ಅಂತ ಹೆಸರಿಟ್ಟಿದ್ರಂತೆ, ಹೇಳಿ ಸಾರ್‌, ಯಾರ ಮೇಲಿನ ಸಿಡಿಮಿಡಿಗೆ ಹೀಗ್‌ ಮಾಡಿದ್ರಿ?

ಸಾರ್‌, ಒಂದು ಕಾಲದಲ್ಲಿ ಶ್ರೀಸಾಮಾನ್ಯ ಆಗಿದ್ದವರು ನೀವು. ಆದ್ರೆ ಇವತ್ತು ‘ಅಸಾಮಾನ್ಯ’ರಾಗಿ ಬೆಳೆದಿದ್ದೀರಿ. ತಮಿಳ್ನಾಡಿನ ರಾಜಕೀಯವನ್ನು ಚಿಟಿಕೆ ಹೊಡೆದು ಬದಲಿಸುವ ಸ್ಟೇಜ್‌ನಲ್ಲಿ ನಿಂತಿದ್ದೀರಿ. ಜಯಲಲಿತಾಳ ದರ್ಬಾರು, ಎಂಜಿಆರ್‌ರ ಜನಪ್ರಿಯತೆ, ಕರುಣಾನಿಧಿಯ ಸ್ಟಂಟು, ರಾಮದಾಸ್‌ರ ಚಾಣಾಕ್ಷತನವನ್ನು ಕಣ್ಣಾರೆ ಕಂಡಿದೀರಿ. ಪ್ರತಿ ಸಿನಿಮಾ ರಿಲೀಸ್‌ ಆದಾಗಲೂ ರಾಜಕೀಯಕ್ಕೆ ಬಂದೆ, ಬಂದೇ ಬಿಟ್ಟೆ ಅನ್ನೋ ಸಿಗ್ನಲ್‌ ಕೊಡ್ತೀರಿ. ಹಾಗಿದ್ರೂ ಇನ್ನೂ ರಾಜಕೀಯದಿಂದ ದೂರವೇ ಉಳಿದಿದ್ದೀರಲ್ಲ, ಯಾಕೆ ಸಾರ್‌? ನಿಮ್ಮ ಅನುಭವ ಕೈ ಹಿಡಿದು ನಡೆಸುತ್ತೆ. ತಾಳ್ಮೆ ನಿಮಗೆ ದಾರಿ ತೋರುತ್ತೆ. ಒಳ್ಳೆಯತನ ನಿಮ್ಮನ್ನ ಸದಾ ಕಾಯುತ್ತೆ. ಹಾಗಿರೋವಾಗ ಒಂದು ಬಾರಿ ತಮಿಳ್ನಾಡಿನ ಸೀಎಂ ಆಗಿ- ‘ನಾ ಒರುವಾಟಿ ಸೊನ್ನ, ನೂರು ವಾಟಿ ಸೊನ್ನ ಮಾದರಿ’ಅಂತ ಯಾಕ್‌ ಹೇಳಬಾರ್ದು? ಟ್ರೆೃ ಮಾಡಿ ಸಾರ್‌..?

ನಿಮಗೆ ರಾಜಕೀಯ ಇಷ್ಟ ಇಲ್ಲ ಅಂದ್ರೆ ಬಿಟ್ಹಾಕಿ. ವೈರಾಗ್ಯದ, ಬೇಸರದ ಮಾತಾಡದೆ ವರ್ಷಕ್ಕೊಂದು ಸಿನಿಮಾದಲ್ಲಿ ಸ್ಟೈಲ್‌ ಮಾಡ್ತಾ, ಡ್ಯಾನ್ಸ್‌ ಮಾಡ್ತಾ, ಪಂಚಿಂಗ್‌ ಡೈಲಾಗ್‌ ಹೊಡೀತಾ ಮಿಂಚ್ಕೊಂಡೇ ಇರಿ. ನಿಮ್‌ ಚಂದ್ರಮುಖಿ - ಆಕೆ ನಮ್ಮ ಪ್ರಾಣ ಸಖಿಯಾಗಲಿ. ನಿಮಗೆ ಒಳ್ಳೆಯದಾಗಲಿ. ದೊಡ್ಡ ಗೆಲುವು ಕೈಹಿಡಿದು ಡ್ಯಾನ್ಸು ಮಾಡಲಿ.

-ಎ.ಆರ್‌.ಮಣಿಕಾಂತ್‌

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada