»   » ‘ದೇವದಾಸ್‌’ ಕೆಸೆಟ್‌ ಹಕ್ಕಿಗೆ 12 ಕೋಟಿ ರುಪಾಯಿ!

‘ದೇವದಾಸ್‌’ ಕೆಸೆಟ್‌ ಹಕ್ಕಿಗೆ 12 ಕೋಟಿ ರುಪಾಯಿ!

Posted By: Staff
Subscribe to Filmibeat Kannada

ಸಿನಿಮಾ ಸಂಗೀತಕ್ಕೆ ಈ ಪರಿಯ ಮೌಲ್ಯ ಜಗತ್ತಿನಲ್ಲೇ ಎಲ್ಲೂ ಇಲ್ಲ ಎಂಬ ಸದ್ದು ಬಾಲಿವುಡ್‌ ಓಣಿಗಳಲ್ಲಿ . ಯೂನಿವರ್ಸಲ್‌ ಎಂಬ ಕೆಸೆಟ್‌ ಕಂಪನಿ ದೇವದಾಸ್‌ ಹಿಂದಿ ಸಿನಿಮಾ ಸಂಗೀತದ ಹಕ್ಕು ಪಡೆಯಲು 12 ಕೋಟಿ ರುಪಾಯಿ ತೆತ್ತಿದೆ!

ಸಂಜಯ್‌ ಲೀಲಾ ಬನ್ಸಾಲಿ ಸಿನಿಮಾ ಅಂದರೆ ದುಡ್ಡು ಕಟ್ಟಿಟ್ಟ ಬುತ್ತಿ . ಹಂ ದಿಲ್‌ ದೇ ಚುಕೇ ಸನಂ ಚಿತ್ರ ಅದನ್ನು ಸಾಬೀತು ಮಾಡಿದೆ . ಆದರೆ ಕೆಸೆಟ್‌ ಹಕ್ಕು ಇಷ್ಟೊಂದು ದಾಖಲೆ ಮೊತ್ತಕ್ಕೆ ಬಿಕರಿಯಾಗಿರುವುದು ಅಚ್ಚರಿ. ಈ ಚಿತ್ರದ ಹಾಡುಗಳಲ್ಲಿ ಅಂಥದ್ದೇನಿದೆ? ಇದರ ಸಂಗೀತ ಸಂಯೋಜಕರಾರು? ಪಾತ್ರವರ್ಗದಲ್ಲೇನೋ ಶಾರುಖ್‌ ಖಾನ್‌, ಮಾಧುರಿ ದೀಕ್ಷಿತ್‌, ಐಶ್ವರ್ಯ ರೈ ಇದ್ದಾರೆ. ಆದರೆ, ಕೆಸೆಟ್‌ ಹಕ್ಕಿಗೇ ಇಷ್ಟೊಂದು ದೊಡ್ಡ ಮೊತ್ತವೇಕೆ?

ಕೆಸೆಟ್ಟಿನಲ್ಲಿ 11 ಹಾಡುಗಳಿವೆ. ಒಂದೊಂದೂ ಅನರ್ಘ್ಯ ರತ್ನ ಎನ್ನುತ್ತಿದೆ ಯೂನಿವರ್ಸಲ್‌. ಸಂಗೀತ ಸಂಯೋಜನೆ ಮಾಡಿರುವವರು ಎ.ಆರ್‌.ರೆಹ್ಮಾನ್‌ ಅಲ್ಲ, ಅನು ಮಲ್ಲಿಕ್‌ ಅಲ್ಲ, ಸಂದೀಪ್‌ ಚೌಟ ಕೂಡ ಅಲ್ಲ. ಹಂ ದಿಲ್‌ ದೇ ಚುಕೇ ಸನಂ ಚಿತ್ರಕ್ಕೂ ಸಂಗೀತ ಹೊಸೆದಿದ್ದ ಇಸ್ಮಾಯಿಲ್‌ ದರ್ಬಾರ್‌. ಲಕ್ನೋದಲ್ಲಿ ನೆಲೆಸಿರುವ ನಸ್ರತ್‌ ಬಾದರ್‌ ಸಾಹಿತ್ಯವಿದೆ. ಟಿವಿಎಸ್‌ ಸರೆಗಮ ಸ್ಪರ್ಧೆಯಲ್ಲಿ ಹಾಡಿ, ಬೆನ್ನು ತಟ್ಟಿಸಿಕೊಂಡಿರುವ ಹದಿನೆಂಟರ ಹರೆಯದ ಶ್ರೇಯ ಘೋಸಲ್‌ ಕಂಠ ಕೆಸೆಟ್‌ನ ವಿಶೇಷ!

ಬಾಲಿವುಡ್‌ ಸಿನಿಮಾ ಸಂಗೀತದಲ್ಲಿ ಹೆಸರು ಮಾಡಿದವರಾರೂ 'ದೇವದಾಸ್‌"ಗೆ ಕೆಲಸ ಮಾಡಿಲ್ಲ. ಅದೇ ಈ ಕೆಸೆಟ್‌ನ ಅನನ್ಯತೆ. ಬರೀ ಕೆಸೆಟ್‌ ಅಷ್ಟೇ ಅಲ್ಲ, ಸಿನಿಮಾ ಕೂಡ ಚಲೋ ಓಡಲಿದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಯೂನಿವರ್ಸಲ್‌ ಕೆಸೆಟ್‌ ಕಂಪನಿಯ ವಿನಯ್‌ ಸಪ್ರು.

ಅಂದಹಾಗೆ, ಇದೇ ಕಥೆಯ ಇದೇ ಹೆಸರಿನ ಚಿತ್ರ ದಶಕಗಳ ಹಿಂದೆಯೇ ಬಂದಿತ್ತು. ದಿಲೀಪ್‌ ಕುಮಾರ್‌, ಸುಚಿತ್ರ ಸೇನ್‌, ವೈಜಯಂತಿ ಮಾಲ ಅಭಿನಯಿಸಿದ್ದ ಹಳೆಯ ದೇವದಾಸ್‌ ಸಾಕಷ್ಟು ಹೆಸರು ಮಾಡಿತ್ತು. ಕಥೆ ಅದೇ ಆದರೂ, ದೇವದಾಸ್‌ಗೆ ಹೊಸ ರೂಪು ಕೊಟ್ಟಿದ್ದೇವೆ. ಜನರಿಗೆ ಯಾವುದೂ ಪುನರುಚ್ಚಾರ ಅನಿಸುವುದಿಲ್ಲ. ಅದನ್ನು ಎಲ್ಲರೂ ಸ್ವೀಕರಿಸುತ್ತಾರೆಂಬ ನಂಬಿಕೆ ನನ್ನದೆನ್ನುತ್ತಾರೆ ಸಂಜಯ್‌ ಲೀಲಾ ಬನ್ಸಾಲಿ. ದೇವದಾಸ್‌ನ ಹಾಡುಗಳನ್ನು ಕೇಳಿ, ಹೇಗಿದೆ ಅಂತ ಬರೆದು ಹೇಳಿ?

English summary
Devdas Music rights sold for a Whopping 12 Crores!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada