»   » ಇಂಡಸ್ಟ್ರಿಯ ಹೊಸ ಯಜಮಾನ ಎಂದು ಅಭಿಮಾನಿಗಳು ಪುಳಕ ಪಡುತ್ತಿದ್ದರೆ

ಇಂಡಸ್ಟ್ರಿಯ ಹೊಸ ಯಜಮಾನ ಎಂದು ಅಭಿಮಾನಿಗಳು ಪುಳಕ ಪಡುತ್ತಿದ್ದರೆ

Posted By: Super
Subscribe to Filmibeat Kannada

ಕೊಳಕು ರಾಜಕಾರಣದ ಕಮಲ ಎಂದೇ ಹೆಸರಾದ ಮಾದೇಗೌಡರನ್ನು ಮೂಲೆಗುಂಪು ಮಾಡಿ ಮಂಡ್ಯ ಕ್ಷೇತ್ರದಿಂದ ಸಂಸತ್ತಿಗೆ ಆರಿಸಿಬಂದ ರೆಬೆಲ್‌ಸ್ಟಾರ್‌ ಅಂಬರೀಷ್‌ ಏನು ಮಾಡುತ್ತಿದ್ದಾರೆ?
ಮಂಡ್ಯ ಮತದಾರರಿಗೆ ಅವರು ಕೊಟ್ಟಿದ್ದೇನು?
- ಉತ್ತರ ಮಂಡ್ಯ ಮತದಾರರಿಗೆ ಗೊತ್ತಿಲ್ಲ . ಬಹುಶಃ ಅಂಬರೀಶ್‌ ಅವರಿಗೂ ಗೊತ್ತಿರುವ ಸಾಧ್ಯತೆಯಿಲ್ಲ !

ರಾಜ್‌ ಅಪಹರಣದ ಸಂದರ್ಭದಲ್ಲಿ ಹಗಲಿರುಳೂ ಮಾಧ್ಯಮಗಳ ಪ್ರಖರ ಬೆಳಕಿನಲ್ಲಿ ಮಿಂಚುತ್ತಿದ್ದ ಅಂಬರೀಷ್‌, ರಾಜ್‌ ಬಿಡುಗಡೆಯಾಂದಿಗೆ ಅಜ್ಞಾತವಾಸಕ್ಕೆ ಸಂದರು. ಪತ್ರಿಕೆಗಳ ತುದಿ ಬುಡ ಸೋಸಿದರೂ, ಲೋಕಸಭೆಯಲ್ಲಿ ಅಂಬರೀಷ್‌ ಮಾತಾಡಿದ ಸಣ್ಣ ಸುದ್ದಿಯೂ ಕಾಣುವುದಿಲ್ಲ . ಆದರೂ, ಮಂಡ್ಯ ಮತದಾರರು ಅಂಬರೀಷ್‌ ವಿರುದ್ಧ ಇನ್ನೂ ತಣ್ಣಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಣ್ಣಗಿರುವುದನ್ನು ಬಿಟ್ಟರೆ ಬೇರೆ ದಾರಿ ಜನತೆಗಿಲ್ಲ . ಚುನಾವಣೆ ದೂರವಿದೆ.

ಇದು ರಾಜಕೀಯದ ಮಾತಾದರೆ, ಸಿನಿಮಾದ್ದು ಬೇರೆಯದೇ ಕಥೆ. ಮತ್ತೊಬ್ಬ ಸಂಸದ ಹಾಗೂ ಚಿತ್ರದುರ್ಗದ ವಿಲನ್‌ ಶಶಿಕುಮಾರ್‌ ಆಗೊಮ್ಮೆ ಈಗೊಮ್ಮೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಅಂಬರೀಷ್‌ ಅಭಿನಯದಿಂದ ಹೆಚ್ಚೂ ಕಮ್ಮಿ ದೂರವಿದ್ದಾರೆ. ದಿಗ್ಗಜರು ಬಕ್ಕಾ ಬೋರಲಾದ್ದರಿಂದ ಅವರಿಗೆ ಬಣ್ಣ ಬಳಿಯಲು ಸದ್ಯಕ್ಕೆ ಯಾವ ನಿರ್ಮಾಪಕರೂ ಉತ್ಸಾಹದಿಂದಿಲ್ಲ . ಇಷ್ಟಾದರೂ ಅಂಬರೀಷ್‌ ವರ್ಚಸ್ಸು ಮಾಸಿಲ್ಲ . ಅವರ ಮಾತಿನ್ನೂ ಸಿನಿಮಾರಂಗದಲ್ಲಿ ತೂಕ ಉಳಿಸಿಕೊಂಡಿದೆ. ಕಲಾವಿದರು ಅಂಬರೀಷ್‌ ಬಗ್ಗೆ ಪ್ರೀತಿಯುಳಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಸ್ಯಾಂಡಲ್‌ವುಡ್‌ನಲ್ಲಿ ಅಂಬರೀಷ್‌ ಹೆಸರು ಕಾಣಿಸಿಕೊಳ್ಳುವುದು ರಾಜಿ ಪಂಚಾಯ್ತಿ ಸಂದರ್ಭಗಳಲ್ಲಿ . ಎಣ್ಣೆ ಸೀಗೆಕಾಯಿ ವಿವಾದಗಳನ್ನು ಅಂಬರೀಷ್‌ ತಮ್ಮ ಖದರಿನಲ್ಲಿ ಪ್ರೀತಿಯ ಜೋರಿನಲ್ಲಿ ತಣ್ಣಗಾಗಿಸಬಲ್ಲರು. ಈ ಸಾಲಿಗೆ ಹೊಸ ಉದಾಹರಣೆ ಜಲ ವಿವಾದ!

ಉಪೇಂದ್ರ ಅಭಿನಯದ ಎಚ್‌ಟುಒ ಸಿನಿಮಾ ತಮಿಳು ಘಮಲನ್ನು ಹೊಂದಿದೆಯೆಂದು ಕನ್ನಡ ನಾಯಕರ ಕೋಪಕ್ಕೆ ತುತ್ತಾಗಿದ್ದುದು ಸರಿಯಷ್ಟೇ. ಚಿತ್ರದಲ್ಲಿನ ತಮಿಳು ಸಂಭಾಷಣೆಗಳನ್ನು ಧನರಾಜ್‌ ಕನ್ನಡಕ್ಕೆ ಬದಲಿಸಿದರೂ, ಕನ್ನಡ ಚಳವಳಿಕಾರರು ಎಚ್‌ಟುಒ ಹೊಸ ರೂಪದ ಕುರಿತು ತೃಪ್ತಿ ವ್ಯಕ್ತಪಡಿಸಿದರೂ- ಅಸಮಾಧಾನದ ಕಿಡಿ ಸಂಪೂರ್ಣ ಆರಿರಲಿಲ್ಲ . ಇಂಥ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಅಂಬರೀಷ್‌ ಕನ್ನಡ ಚಳವಳಿಕಾರರು ಹಾಗೂ ಧನರಾಜ್‌ ನಡುವೆ ರಾಜಿ ಸಂಧಾನ ನಡೆಸಿದ್ದಾರೆ. ಈ ಹಿಂದೆ ಡಬ್ಬಿಂಗ್‌ ವಿಷಯದಲ್ಲಿ ಧನರಾಜ್‌ ಮತ್ತು ಉಪ್ಪಿ ನಡುವೆ ವೈಷಮ್ಯ ಹುಟ್ಟಿದ್ದಾಗಲೂ ಇದೇ ಅಂಬಿ ಸಂಧಾನಕಾರರಾಗಿದ್ದರು.

ಮೊನ್ನೆಯಷ್ಟೇ, ಅಂಬರೀಷ್‌ ತಮ್ಮ ಮನೆಯಲ್ಲಿ ಜಿ.ನಾರಾಯಣ ಕುಮಾರ್‌ ನೇತೃತ್ವದ ಕನ್ನಡ ಹೋರಾಟಗಾರರ ಸಭೆ ನಡೆಸಿ ಎಚ್‌ಟುಒ ವಿವಾದಕ್ಕೆ ಕೊನೆ ಪರದೆ ಎಳೆದಿದ್ದಾರೆ. ಉಪೇಂದ್ರ ಹಾಗೂ ಡಕೋಟಾ ಎಕ್ಸ್‌ಪ್ರೆಸ್‌ನ ರಾಕ್‌ಲೈನ್‌ ವೆಂಕಟೇಶ್‌ ಕೂಡ ಸಭೆಯಲ್ಲಿ ಹಾಜರಿದ್ದರು. ಅಲ್ಲಿಗೆ ಜಲ ವಿವಾದಕ್ಕೆ ಅಂಬರೀಷ್‌ ಸೀಗೆಕಾಯಿ ಎನ್ನಬಹುದು!

ತಮಿಳುನಾಡಲ್ಲೂ ವಿವಾದ!
ಇನ್ನೂ ಬಿಡುಗಡೆಯಾಗದಿರುವ ಎಚ್‌ಟುಒ ತಮಿಳು ಆವೃತ್ತಿಯ ಕುರಿತು ಈಗಾಗಲೇ ತಮಿಳುನಾಡಲ್ಲಿ ವಿರೋಧ ವ್ಯಕ್ತವಾಗಿದೆ. ಚಿತ್ರದಲ್ಲಿನ ಕನ್ನಡ ಸಂಭಾಷಣೆಯ ಬಗ್ಗೆ ತಮಿಳು ಅಭಿಮಾನಿಗಳದು ಆಕ್ಷೇಪ. ಕರ್ನಾಟಕದಲ್ಲಿ ಬುದ್ಧಿ ಕಲಿತಿರುವ ಧನರಾಜ್‌- ತಮಿಳು ಆವೃತ್ತಿಯಲ್ಲಿನ ಎಲ್ಲ ಕನ್ನಡ ಸಂಭಾಷಣೆಗಳನ್ನೂ ತಮಿಳಿಗೆ ಬದಲಿಸಲು ನಿರ್ಧರಿಸಿದ್ದಾರೆ.

English summary
Ambarish comes to the rescue of Dhanraj!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada