»   » ತಲ್ಲಂ ನಂಜುಂಡಶೆಟ್ಟಿ ಮೇಲೆ ಕನ್ನಡ ಸಿನಿಮಾಕ್ಕೆ ಮುಳ್ಳಾಗಿರುವ ಆರೋಪ

ತಲ್ಲಂ ನಂಜುಂಡಶೆಟ್ಟಿ ಮೇಲೆ ಕನ್ನಡ ಸಿನಿಮಾಕ್ಕೆ ಮುಳ್ಳಾಗಿರುವ ಆರೋಪ

Subscribe to Filmibeat Kannada

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಮಸ್ಯೆಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಸದಸ್ಯರು ಗುರುವಾರ ಗಾಂಧಿನಗರದಲ್ಲಿರುವ ವಾಣಿಜ್ಯ ಮಂಡಳಿ ಕಚೇರಿಯೆದುರು ಪ್ರತಿಭಟನೆ ನಡೆಸಿದರು.

ಹಲವಾರು ವರ್ಷಗಳಿಂದ ನಿರ್ಮಾಪಕರ ಸಮಸ್ಯೆಗಳನ್ನು ಮಂಡಳಿ ಕಡೆಗಣಿಸಿದೆ. ಬೆಂಗಳೂರಿನಲ್ಲಿನ 120 ಚಿತ್ರಮಂದಿರಗಳ ಒಡೆಯರು ಸಿನಿಮಾ ನಿರ್ಮಾಪಕರನ್ನು ಸುಲಿಯುತ್ತಿದ್ದಾರೆ ಎಂದು ಆರೋಪಿಸಿ ನಡೆದ ಧರಣಿ ಸತ್ಯಾಗ್ರಹದಲ್ಲಿ - ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕಲಾವಿದರ ಸಂಘ ಹಾಗೂ ವಿತರಕರ ಸಂಘದ ಸದಸ್ಯರು ಭಾಗವಹಿಸಿದ್ದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ್‌ ಪಾಟೀಲ್‌ ನೇತೃತ್ವದಲ್ಲಿ ನಡೆದ ಈ ಧರಣಿಯಲ್ಲಿ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ರಾಕ್‌ಲೈನ್‌ ವೆಂಕಟೇಶ್‌, ಪುನೀತ್‌ ರಾಜಕುಮಾರ್‌, ಚಿನ್ನೇಗೌಡ, ಗೋವಿಂದರಾಜು, ಕೆಸಿಎನ್‌ ಚಂದ್ರು, ಸುಂದರ್‌ ರಾಜ್‌ ಸೇರಿದಂತೆ ಸುಮಾರು 300 ಮಂದಿ ಭಾಗವಹಿಸಿದ್ದರು.

ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ ಹಾಗೂ ಪದಾಧಿಕಾರಿಗಳು ಕಚೇರಿ ಪ್ರವೇಶಿಸುವುದಕ್ಕೆ ತಡೆ ಉಂಟು ಮಾಡಿದ ಪ್ರತಿಭಟನಾಕಾರರು, ತಲ್ಲಂ ವಿರುದ್ಧ ಘೋಷಣೆಗಳನ್ನು ಕೂಗಿದರು. ಚಿತ್ರಮಂದಿರಗಳಿಗೆ ತಿಂಗಳ ಬಾಡಿಗೆ ನಿಗದಿ ಮಾಡಬೇಕೆಂದು ಧರಣಿ ಕೂತವರು ಅಗ್ರಹಿಸಿದರು. ನರ್ತಕಿ, ಅಭಿನಯ ಸೇರಿದಂತೆ 5 ಚಿತ್ರಮಂದಿರಗಳಾದ ಮಾಲೀಕರಾದ ತಲ್ಲಂ ಅವರು ಸಮಸ್ಯೆಗಳನ್ನು ಬಗೆಹರಿಸುವ ಬದಲು ಕಗ್ಗಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಿಂಗಳಿಗೆ 1.7 ಲಕ್ಷ ರುಪಾಯಿ ಬಾಡಿಗೆ ಪಡೆಯುವ ಅಭಿನಯ್‌ ಚಿತ್ರಮಂದಿರಕ್ಕೆ ಯಾವುದೇ ಕನ್ನಡ ಸಿನಿಮಾ ನೀಡದಿರಲು ನಿರ್ಧರಿಸಿದರು.

ಚಿತ್ರಮಂದಿರಗಳ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮೇ 21 ರ ನಂತರ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು- ಪರಭಾಷಾ ಚಿತ್ರಗಳು ಆಯಾ ರಾಜ್ಯಗಳಲ್ಲಿ ತೆರೆ ಕಂಡ 6 ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಉಪೇಂದ್ರ ವಿರುದ್ಧ ಧನರಾಜ್‌ ಪ್ರತಿಭಟನೆ
ಎಚ್‌ಟುಒ ಸಿನಿಮಾ ಬಿಡುಗಡೆಯ ನಂತರ ಉಪೇಂದ್ರ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಧನರಾಜ್‌ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಚಿತ್ರ ನಿರ್ಮಾಣದಲ್ಲಿ ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿದೆ ಎನ್ನುವ ಉಪೇಂದ್ರ ಅವರ ಹೇಳಿಕೆಯನ್ನು ವಿರೋಧಿಸಿದ ಧನರಾಜ್‌, ಕಾಲುದಾರಿಯಲ್ಲಿ ಕೂತು ಉಪೇಂದ್ರ ವಿರುದ್ಧ ಘೋಷಣೆ ಕೂಗಿದರು.
(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada