twitter
    For Quick Alerts
    ALLOW NOTIFICATIONS  
    For Daily Alerts

    ರಾಕ್‌ ಮ್ಯಾಜಿಕ್‌: ರವಿ- ಹಂಸ್‌ ಅಕ್ಕಪಕ್ಕ !

    By Staff
    |

    *ಶಾಮ್‌

    ‘ನಮ್ಮೆಲ್ಲರ ಈ ಪ್ರಯತ್ನವನ್ನು ಕೇವಲ ಸಿನಿಮಾ ಎಂದು ಕರೆಯುವುದಕ್ಕಿಂತ ನಿಜ ಬದುಕಿನ ಸಿನಿಮಾ ವೇಷ ಎಂದು ಕರೆಯುವುದಕ್ಕೆ ನನಗೆ ಸಂತೋಷವಾಗುತ್ತದೆ. ಕುರುಡು ಹಮ್ಮು ಬೇಟೆಯಾಡಿ ನರಳಿದ ಸಂಬಂಧಗಳಿಗೆ ಮಧುರ ಬಾಂಧವ್ಯದ ಹೊಸ ಶೃತಿ ಮೀಟಲು ನಾನಂತೂ ಯಾವತ್ತೂ ತೆರೆದ ಮನಸ್ಸನ್ನು ಇಟ್ಟುಕೊಂಡಿರುವವ. ಖಾಸಗಿ ನೋವುಗಳಿಂದ ಜರ್ಜರಿತವಾದ ನಮ್ಮ ಮನಸ್ಸುಗಳನ್ನು ಪುನಃ ಜೋಡಿಸಲು ಇಂಬುಕೊಡುವ ಸಿನಿಮಾ ಉಲ್ಲಾಸಕ್ಕಾಗಿ ನಾನು ಹಾತೊರೆಯುತ್ತಿದ್ದೇನೆ. ನನಗೆ ಮತ್ತು ನನ್ನ ಈ ಭಾವನೆಗಳನ್ನು ಹಂಚಿಕೊಳ್ಳುವವರಿಗೆ ಈ ಹೊಸ ಸಿನಿಮಾ ಹೊಸ ವೇದಿಕೆಯಂತೆ ನೆರವಾಗಲಿ ಎಂಬ ಆಶೆಯಿಂದ ಈ ಸಿನಿ- ಮಾತುಕತೆಯನ್ನು ಮುಂದುವರೆಸುತ್ತೇನೆ. ಈ ನನ್ನ ಆಸೆಗಳೇ ಪ್ರಭಾವಿ ಮಾಧ್ಯಮದ ತೆಕ್ಕೆಗೆ ತರುವುದರ ಮೂಲಕ ಪುನರ್‌ಮಿಲನದ ಆನಂದವನ್ನು ಹಂಚಿಕೊಳ್ಳುವುದಕ್ಕೆ ಹೊಸ ಚಿತ್ರ ಪ್ರೇರಕವಾಗಲಿ ಎಂದು ಮತ್ತೊಮ್ಮೆ ಆಶಿಸುತ್ತಾ ...’

    ‘ದೇಶವೇ ಒಡೆದು ಹೋಗುತ್ತದೆ, ಕುಟುಂಬಗಳು ಒಡೆದು ಛಿದ್ರ ಛಿದ್ರವಾಗುತ್ತದೆ, ಸಂಘ-ಸಂಸ್ಥೆಗಳು ವ್ಯಕ್ತಿ ಪ್ರತಿಷ್ಠೆಯ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿವೆ. ಯಾವುದೋ ಒಂದು ವಿಷ ಗಳಿಗೆಗೆ ತುತ್ತಾಗುವ ಮನಸ್ಸುಗಳು ದೂರವಾಗಿ ಬಣ್ಣನೆಗೆ ನಿಲುಕದ ವಿರಹ ವೇದನೆ ಅನುಭವಿಸುತ್ತವೆ. ನಮ್ಮನ್ನು ಆವರಿಸಿಕೊಳ್ಳುವ ಮನಸ್ತಾಪವೆಂಬ ಮುಳ್ಳು ಮುರಿದು ದೂರವಾದ ಮನಸ್ಸುಗಳು ಮತ್ತೆ ಒಂದಾಗುವುದಾದರೆ ಅದಕ್ಕಿಂತ ಹೆಚ್ಚಿನದಿನ್ನೇನು ಬೇಕು? ’

    ಇಂಥದೊಂದು ಸಂದೇಶವನ್ನು ಪ್ರತಿಪಾದಿಸುವ ಹೊಸ ಚಿತ್ರದ ಬಗ್ಗೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಮಾತನಾಡುತ್ತಿದ್ದರು. ಕಳೆದ ವಾರವಷ್ಟೆ ಅವರ ಕ್ಯಾಂಪಿನಿಂದ ಒಡೆದು ಆಚೆಹೋದ ನಿರ್ದೇಶಕ ಡಿ.ರಾಜೇಂದ್ರಬಾಬುರವರು ಮತ್ತೆ ರವಿಯವರ ಜತೆಗೆ ಒಂದಾಗುತ್ತಿದ್ದಾರೆಯೇ ಎಂದು ಓದುಗರು ಆಕಸ್ಮಾತ್‌ ಭಾವಿಸಿದರೆ ಗ್ರಹಿಕೆ ತಪ್ಪಾಗುತ್ತದೆ. ಯಾಕೆಂದರೆ ಜೂನ್‌ 15ರ ಭಾನುವಾರ ಸಂಜೆಯ ವಿಂಡ್ಸರ್‌ ಮ್ಯಾನರ್‌ ಪತ್ರಿಕಾಗೋಷ್ಠಿಯಲ್ಲಿ ಅವರ ಪಕ್ಕ ಕುಳಿತಿದ್ದವರು ಹಂಸಲೇಖಾ !

    ಭಿನ್ನಾಭಿಪ್ರಾಯವೂ ಇಲ್ಲ, ಮನಸ್ತಾಪದ ಹಂಗಂತೂ ಇಲ್ಲವೇ ಇಲ್ಲ. ಆದರೂ, ತಮ್ಮ ದಾರಿ ತಮಗೆ ಎನ್ನುವಂತೆ ವರ್ತಿಸುತ್ತಿದ್ದ ರವಿ ಮತ್ತು ಹಂಸಲೇಖಾ ಸಿನಿಮಾ ಮೂಲಕ ಪುನಃ ಒಂದಾಗುತ್ತಿರುವುದು ‘ಜನಪ್ರಿಯ ಜೋಡಿ’ಯ ಅಭಿಮಾನಿ ವೃಂದಕ್ಕೆ ಖುಷಿ ಕೊಡುವ ಸುದ್ದಿಯಂತೂ ನಿಜ. ಇವರಿಬ್ಬರೇ ಅಲ್ಲ, ಏನಕೇನ ಪ್ರಕಾರೇಣ ‘ಪ್ರೀತ್ಸೋದ್‌ ತಪ್ಪಾ ’ ಚಿತ್ರ ತಂಡ ಮತ್ತೆ ಒಂದಾಗಿ ‘ಒಂದಾಗೋಣ ಬಾ ’ ಚಿತ್ರ ನಿರ್ಮಿಸುತ್ತಿರುವುದು ರಾಕ್‌ಲೈನ್‌ ವೆಂಕಟೇಶ್‌ ಬಿಡುಗಡೆ ಮಾಡಿರುವ ಇವತ್ತಿನ ಹೆಡ್‌ಲೈನ್ಸ್‌ !

    ತೆಲುಗಿನ ‘ಕಲಿಸುಂದಾಂ ರಾ’ ಅಂದರೆ ಕನ್ನಡದ ‘ಒಂದಾಗೋಣ ಬಾ’. ಅತ್ಯುತ್ತಮ ಪ್ರಾದೇಶಿಕ ಚಿತ್ರ( ಆಂಧ್ರಪ್ರದೇಶ) ಮನ್ನಣೆಯ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ‘ಕಲಿಸುಂದಾಂ ರಾ’ ಚಿತ್ರವನ್ನು ಕನ್ನಡಕ್ಕೆ ತರಬೇಕೆನ್ನುವುದು ರಾಕ್‌ಲೈನ್‌ ಅವರ ಮೂರು ವರ್ಷಗಳ ಕನಸಾಗಿತ್ತು. ಅದನ್ನೀಗ ಅವರು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದಾರೆ. ‘ಕಲಿಸುಂದಾಂ ರಾ’ ರಾಷ್ಟ್ರ ಪ್ರಶಸ್ತಿ ಪಡೆದಿರುವುದರಿಂದ, ಅದರ ಕನ್ನಡ ರಿಮೇಕಿಗೆ ಸಬ್ಸಿಡಿ ತೊಂದರೆ ಎದುರಾಗುವುದಿಲ್ಲ .

    ಶುದ್ಧ ಸಾಂಸಾರಿಕ, ಮನೋರಂಜಕ ಚಿತ್ರವೆಂದು ತೆಲುಗರ ನಾಡಿನಲ್ಲಿ ಜನಜನಿತವಾದ ಈ ಚಿತ್ರದ ಕ್ಯಾನವಾಸ್‌ ಅವಿಭಕ್ತ ಕುಟುಂಬಕ್ಕಿಂತ ದೊಡ್ಡದಾಗಿದೆ. ಪ್ರೀತ್ಸೋದ್‌ ತಪ್ಪಾ ಚಿತ್ರದ ಚೆಲುವೆ ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಮರಳಿ ಬಂದಿದ್ದಾಳೆ. ಜತೆಗೆ ರವಿ ಇದ್ದಾರೆ. ತೆಲುಗಿನಲ್ಲಿ ಒಂದಾಗೋಣ ಬಾ ನಿರ್ದೇಶಿಸಿದ ಉದಯಶಂಕರ್‌ ಅವರನ್ನು ಕನ್ನಡ ಅವತರಣಿಕೆಯ ನಿರ್ದೇಶನಕ್ಕೂ ಉಳಿಸಿಕೊಳ್ಳಲಾಗಿದೆ.

    ತಾರಾಗಣದಲ್ಲಿ ಹಲವು ವಿಶೇಷ ವೈಶಿಷ್ಟ್ಯಗಳುಂಟು. ಶಂಕರಾಭರಣಂ ಖ್ಯಾತಿಯ ಸೋಮಯಾಜುಲು ಮತ್ತು ಬನಶಂಕರಿ ಚಿತ್ರದ ‘ದೇವಿ’ ಕೆ. ಆರ್‌.ಆರ್‌. ವಿಜಯ , ನಮ್ಮವರೇ ಆದ ತಾರಾ, ದೊಡ್ಡಣ್ಣ, ಶರಪಂಜರ ಶಿವರಾಂ ಮುಂತಾದವರನ್ನೊಳಗೊಂಡ ದೊಡ್ಡ ಸಂಸಾರವನ್ನೇ ವೆಂಕಟೇಶ್‌ ಕಲೆ ಹಾಕಿದ್ದಾರೆ.

    ಹೆಸರುಘಟ್ಟದಲ್ಲಿರುವ ರಾಕ್‌ಲೈನ್‌ ಸ್ಟುಡಿಯೋದಲ್ಲಿ ಚಿತ್ರೀಕರಣ ಸಾಗುತ್ತಿರುವುದರಲ್ಲಿ ಇನ್ನೊಂದು ಆಕರ್ಷಣೆ ಉಂಟು. ಸ್ಟೂಡಿಯೋದಲ್ಲಿ ಎರಡು ಬೃಹತ್‌ ಬಂಗಲೆಯನ್ನು ವೆಂಕಟೇಶ್‌ ನಿರ್ಮಿಸಿದ್ದಾರೆ. ಆ ಮನೆಯ ಉದ್ಘಾಟನೆ ‘ಒಂದಾಗೋಣ ಬಾ ’ ಚಿತ್ರೀಕರಣದ ಮೂಲಕ ಆಗಿದೆ.

    ಮಾಧ್ಯಮಗೋಷ್ಠಿಯ ಪ್ರಮುಖ ಆಕರ್ಷಣೆ ಆಗಿದ್ದೂ ಆಗಲಿಲ್ಲವೇನೋ ಎಂಬಂತಿದ್ದವಳೆಂದರೆ ಶಿಲ್ಪಾ. ಅವರ ತಂದೆ ನಡೆಸುವ ಉದ್ಯೋಗ ಕ್ಷೇತ್ರದಲ್ಲಿ ತಲೆದೋರಿರುವ ಮೋಸದ ಹಗರಣ ಶಿಲ್ಪಾ ಅವರ ಸೊಗಸುಗಾರಿಕೆಗೆ ಒಂದಿಷ್ಟಾದರೂ ಮಂಕು ತಂದಿರಬೇಕು. ಆದರೂ ಆಗಾಗ ಮುಖಾರವಿಂದವನ್ನು ಮುಚ್ಚುತ್ತಿದ್ದ ನೀಳ ಕೇಶವನ್ನು ಕಿವಿಯ ಹಿಂದಕ್ಕೆ ತಳ್ಳುತ್ತಲೇ ಎರಡು ಅಣಿ ಮುತ್ತುಗಳನು ್ನ ಆಕೆ ಸುರಿಸಿದಳು.

    I don't know Kannada. But I am very happy to work in a wonderful company like this. The combination is same, and the fun is as usual. I am sure this enterprise shall turn out to be a Olle Cinema

    ಸ್ನೇಹದ ಬಲೆಯಲ್ಲಿ ಸಿಕ್ಕಿಹಾಕಿಕೊಂಡರೂ ಕೂಡ ತನ್ನತನವನ್ನು ಉಳಿಸಿಕೊಂಡು ತಾನೇತಾನಾಗಿ ಮಾತನಾಡಿದವರೆಂದರೆ ಹಂಸಲೇಖಾ. ‘ನನಗೆ ಯಾರ ಬಗ್ಗೆಯೂ ವಿರಸ ಭಾವನೆ ಇಲ್ಲ. ಈ ಉದ್ಯಮದ ಪ್ರವೃತ್ತಿಯೇ ಹಾಗಿರುವುದರಿಂದ ಕಲಾವಿದರು, ತಂತ್ರಜ್ಞರು ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ಬ್ಯಾನರ್‌ಗಳಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ರಾಜ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ . ಈಗ ಇಲ್ಲ. ಈಗ ಮತ್ತೆ ರವಿ ಅವರ ಜತೆ ಕೆಲಸ ಮಾಡುವ ಸಂದರ್ಭ ಬಂದಿದೆ. ಸಂತೋಷದಿಂದ ರಾಗಸಂಯೋಜನೆ ಮಾಡುತ್ತೇನೆ. ಹಾಗೆ ನೋಡಿದರೆ ನನಗೆ ಶಸ್ತ್ರ ಚಿಕಿತ್ಸೆ ಆದಾಗ ನನ್ನನ್ನು ಮೊದಲ ಬಂದು ನೋಡಿದವರು ರವಿಚಂದ್ರನ್‌. ಸ್ನೇಹದ ಗುಣವೇ ಅಂಥದ್ದು’ ಎನ್ನುವುದರ ಮೂಲಕ ಕನ್ನಡ ಸಿನಿಮಾ ಮಂದಿಯ ಸಂಬಂಧಗಳ ಏಳು ಬೀಳು ತಿರುವುಗಳ ಸೂಕ್ಷ್ಮಗಳನ್ನು ಮೆಲಕು ಹಾಕಿದರು.

    ‘ನಾನು ರವಿ ಸ್ನೇಹಿತರಾದರೂ ಕೂಡ ಕೆಲವು ಬದ್ಧತೆಗಳ ವಿಷಯ ಬಂದಾಗ ನನ್ನ ನಿಲುವುಗಳಿಗೆ ಅಂಟಿಕೊಳ್ಳುವವನು ನಾನು. ಆದಷ್ಟೂ ಈ ರೀಮೇಕ್‌ ಚಾಳಿಯಿಂದ ದೂರವಿರಬೇಕು ಎನ್ನುವುದು ನನ್ನ ನಿಲವು. ರವಿಗೆ ಹಲವು ಬಾರಿ ತಿಳಿಯಹೇಳಿದ್ದೇನೆ. ಕನ್ನಡ ಚಲನಚಿತ್ರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಕುಟುಂಬ ಮೌಲ್ಯಗಳನ್ನು ನಮ್ಮ ಪ್ರೇಕ್ಷಕರು ಯಾವತ್ತಿನಿಂದಲೂ ಮೆಚ್ಚಿ ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ. ಆಧುನಿಕ ಸಂದರ್ಭಗಳಿಗೆ, ವಸ್ತು ವಿನ್ಯಾಸಗಳಿಗೆ ಕನ್ನಡ ಸಿನಿಮಾ ತನ್ನನ್ನು ತಾನು ತೆರೆದುಕೊಳ್ಳುವ ಭರದಲ್ಲಿ ಸಾಂಸಾರಿಕ ಚಿತ್ರಗಳಲ್ಲಿ ಮೂಡಿಬರುವ ಕೌಟುಂಬಿಕ ಮೌಲ್ಯಗಳು ತೆಳುವಾಗಬಾರದು’.

    ‘ಈಗ ನಮ್ಮ ಕೈಯಲ್ಲಿರುವ ಚಿತ್ರ ತೆಲುಗಿನದಾಗಿರಬಹುದು. ಆದರೆ, ಸಾಂಸಾರಿಕ ಕಥಾ ವಸ್ತುವಲ್ಲದೆ, ಮನರಂಜನೆಯ ದೃಷ್ಟಿಕೋನದಿಂದ ‘ಕಲಿಸುಂದಾಂ ರಾ’ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ. ಆದ್ದರಿಂದಾಗಿ ಅದನ್ನು ಕನ್ನಡಕ್ಕೆ ಆಮದು ಮಾಡಿಕೊಳ್ಳುವುದು ತಪ್ಪೇನಲ್ಲ . ರಾಕ್‌ಲೈನ್‌ ಮತ್ತು ರವಿ ನನಗೆ ಆಹ್ವಾನ ಕೊಟ್ಟರು. ಸಂತೋಷದಿಂದ ಒಪ್ಪಿಕೊಂಡೆ’ ಎಂದು ಖುಲ್ಲಂಖುಲ್ಲಾ ಮಾತಾಡಿದರು ಹಂಸ.

    ಹರಟೆ ಮುಗಿದು ಹೋಟಲಿನಿಂದ ಹೊರಡುವಾಗ ರವಿಚಂದ್ರನ್‌ ಕೊನೆಯ ಚಟಾಕಿ ಹಾರಿಸಿದರು . ‘ನಮ್ಮ ಒಗ್ಗಟ್ಟಿನ ಬಗ್ಗೆ ಸದಾ ಚಿಂತಿಸುವ ಸಿನಿಮಾ ಪತ್ರಕರ್ತರಲ್ಲೇ ಒಗ್ಗಟ್ಟಿಲ್ಲ . ನೀವೆಲ್ಲ ಒಂದಾಗಬೇಕು, ನಾವೂ ಒಂದಾಗುತ್ತೀವಿ, ಎಲ್ಲರೂ ಒಂದಾಗಿ.. ಗುನುಗುನಿಸೋಣ.. ಒಂದಾಗೋಣ ಬಾ !

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 15:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X