»   » ಭಗತ್‌ಸಿಂಗ್‌ ಸಿನಿಮಾದಲ್ಲಿ ಗಾಂಧೀಜಿಗೆ ಅವಮಾನ ತುಷಾರ್‌ಗಾಂಧಿ

ಭಗತ್‌ಸಿಂಗ್‌ ಸಿನಿಮಾದಲ್ಲಿ ಗಾಂಧೀಜಿಗೆ ಅವಮಾನ ತುಷಾರ್‌ಗಾಂಧಿ

Posted By: Staff
Subscribe to Filmibeat Kannada

ಉತ್ಕಟ ರಾಷ್ಟ್ರಪ್ರೇಮಿ ಭಗತ್‌ಸಿಂಗ್‌ ಸಿನಿಮಾದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಗೆ ಅವಮಾನ?
ಹಾಗಂತ ಗಾಂಧೀಜಿ ವಂಶದ ಕುಡಿ ಆರೋಪಿಸಿದೆ. ಇತ್ತೀಚೆಗೆ ಬಿಡುಗಡೆಯಾದ ರಾಜ್‌ ಕುಮಾರ್‌ ಸಂತೋಷಿ ಅವರ ಭಗತ್‌ಸಿಂಗ್‌ ಸಿನಿಮಾ ಮಹಾತ್ಮರಿಗೆ ಅವಮಾನ ಮಾಡುವಂತಿದೆ ಎನ್ನುವುದು ಕಟು ಟೀಕೆಯ ತಿರುಳು.

ಭಗತ್‌ಸಿಂಗ್‌ ಪಾತ್ರವನ್ನು ಬೆಳಎಸುವ ಭರದಲ್ಲಿ ಗಾಂಧಿಯವರನ್ನು ಕೆಟ್ಟ ಬೆಳಕಿನಲ್ಲಿ ಚಿತ್ರಿಸಲಾಗಿದೆ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ ಗಾಂಧಿ ಮೊಮ್ಮಗ ತುಷಾರ್‌ ಗಾಂಧಿ. ಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ಸಂಪಾದಿಸಲು ಭಗತ್‌ ಪ್ರಯತ್ನಿಸಿದರೆ, ಗಾಂಧಿಯದು ಅಹಿಂಸಾ ಮಾರ್ಗ. ಆದರೆ, ಇಬ್ಬರ ನಿಲುವೂ ಬೇರೆ ಬೇರೆಯಾಗಿದ್ದರೂ ಗುರಿ ಒಂದೇ ಆಗಿತ್ತು ಎನ್ನುತ್ತಾರೆ ತುಷಾರ್‌ ಗಾಂಧಿ. ಅಂದಹಾಗೆ, ಅವರು ಮಹಾತ್ಮ ಗಾಂಧಿ ಫೌಂಡೇಶನ್‌ನ ಮೇನೇಜಿಂಗ್‌ ಟ್ರಸ್ಟಿ.

ಭಗತ್‌ಸಿಂಗ್‌, ಸುಖ್‌ದೇವ್‌ ಹಾಗೂ ರಾಜ್‌ಗುರು ಅವರಿಗೆ ವಿಧಿಸಿದ ಮರಣ ದಂಡನೆಯನ್ನು ಬದಲಿಸುವಂತೆ ವೈಸ್‌ರಾಯ್‌ ಲಾರ್ಡ್‌ ಇರ್ವಿನ್‌ಗೆ ಗಾಂಧೀಜಿ ಪತ್ರ ಬರೆದಿದ್ದರು. ಪೂರ್ಣ ಸ್ವರಾಜ್ಯದ ಬಗ್ಗೆ ಸಿನಿಮಾದಲ್ಲಿ ಮಂಡಿಸಿರುವ ವಿಚಾರವೂ ತಪ್ಪು ; ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಆರಂಭದ ಸಂದರ್ಭದಲ್ಲೇ ಗಾಂಧಿ ಸಂಪೂರ್ಣ ಸ್ವಾತಂತ್ರ್ಯದ ಅಗತ್ಯ ಪ್ರತಿಪಾದಿಸಿದ್ದರು ಎಂದು ತುಷಾರ್‌ ಗಾಂಧಿ ಓರೆಕೋರೆಗಳ ಪಟ್ಟಿ ಮಾಡಿದರು.

ಚರಿತ್ರೆಯನ್ನು ಭಗತ್‌ಸಿಂಗ್‌ ಸಿನಿಮಾ ವಿರೂಪಗೊಳಿಸಿದೆ ಎನ್ನುವುದು ತುಷಾರ್‌ ಗಾಂಧಿ ವಿಷಾದ. ಆದರೆ, ಚಿತ್ರದ ವಿರುದ್ಧ ತಾವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. ನಾನು ಯಾವುದೇ ವಿವಾದ ಹುಟ್ಟುಹಾಕಲು ಬಯಸುವುದಿಲ್ಲ . ಯಾವುದೇ ರೀತಿಯ ನಿಷೇಧಕ್ಕೆ ನಾನು ವಿರೋಧಿ ಎನ್ನುವ ತುಷಾರ್‌, ಮಹಾತ್ಮನ ಸ್ವಾತಂತ್ರ್ಯಪ್ರೇಮವನ್ನು ತಾವೂ ಮೈಗೂಡಿಸಿಕೊಂಡಿರುವ ಸುಳಿವು ನೀಡುತ್ತಾರೆ.

ಹಾಗಾದರೆ ಮುಂದೇನು?
ಗಾಂಧೀಜಿಗೆ ರಾಷ್ಟ್ರಪಿತ ಪಟ್ಟ ನೀಡಿರುವ ಸರ್ಕಾರ ಹಾಗೂ ಸೆನ್ಸಾರ್‌ ಮಂಡಳಿಯೇ ಪ್ರಕರಣದ ಬಗ್ಗೆ ಗಮನ ಹರಿಸಲಿ ಎನ್ನುವುದು ತುಷಾರ್‌ ಗಾಂಧಿ ನಿಲುವು.
ಅಲ್ಲಿಗೆ ತುಷಾರ್‌ ಗಾಂಧಿ ಕೆಲಸ ಕರ್ತವ್ಯ ಮುಗಿಯಿತು!
(ಪಿಟಿಐ) ವಾರ್ತಾ ಸಂಚಯ

English summary
The negative portrayal of Mahatma Gandhi in the recently released film on Bhagat Singh, directed by Raj Kumar Santoshi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada