»   » ನಿರ್ಮಾಪಕರ ಬೆಂಬಲಕ್ಕೆ ರಾಜ್‌ಕುಮಾರ್‌ ?

ನಿರ್ಮಾಪಕರ ಬೆಂಬಲಕ್ಕೆ ರಾಜ್‌ಕುಮಾರ್‌ ?

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
ಸೇವಾಶುಲ್ಕದ ವಿಷಯದಲ್ಲಿ ಸಿನಿಮಾ ನಿರ್ಮಾಪಕರು ಹಾಗೂ ಸಿನಿಮಾ ಪ್ರದರ್ಶಕರ ನಡುವೆ ನಡೆಯುತ್ತಿರುವ ತಿಕ್ಕಾಟ ತಾರಕಕ್ಕೆ ಮುಟ್ಟಿದ್ದು - ವರನಟ ಡಾ.ರಾಜ್‌ಕುಮಾರ್‌ ನೇತೃತ್ವದಲ್ಲಿ ಜುಲೈ 17ರ ಗುರುವಾರ ಮುಖ್ಯಮಂತ್ರಿಗಳ ಬಳಿಗೆ ದೂರನ್ನೊಯ್ಯಲು ನಿರ್ಮಾಪಕರು ಮುಂದಾಗಿದ್ದಾರೆ.

ಕೆಂಪೇಗೌಡ ರಸ್ತೆಯಲ್ಲಿರುವ ಜನತಾ ಬಜಾರ್‌ ಎದುರು ಗುರುವಾರ ಬೆಳಗ್ಗೆ ನಿರ್ಮಾಪಕರು ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಧರಣಿಯ ನಂತರ ನಿರ್ಮಾಪಕರ ನಿಯೋಗ ಮುಖ್ಯಮಂತ್ರಿ ಕೃಷ್ಣ ಅವರನ್ನು ಭೇಟಿಯಾಗಲಿದೆ. ಡಾ.ರಾಜ್‌ಕುಮಾರ್‌ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗುವ ನಿಯೋಗದ ಮುಂದಾಳಾಗಲಿದ್ದಾರೆ ಎಂದು ನಿರ್ಮಾಪಕರ ಸಂಘದ ಮೂಲಗಳು ತಿಳಿಸಿವೆ.

ಸೇವಾಶುಲ್ಕ ಹಂಚಿಕೆ ಅಥವಾ ರದ್ದತಿ ವಿಷಯ ಕುರಿತಂತೆ ಬುಧವಾರ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಸಭೆ ನಡೆಯಿತು. ಸೇವಾಶುಲ್ಕವನ್ನು ನಿರ್ಮಾಪಕರೊಂದಿಗೆ ಹಂಚಿಕೊಳ್ಳುವುದು ಅಥವಾ ಸೇವಾಶುಲ್ಕವನ್ನು ರದ್ದು ಪಡಿಸುವುದು ಸಾಧ್ಯವಿಲ್ಲವೆಂದು ಸಭೆ ನಿರ್ಣಯ ಕೈಗೊಂಡಿತು. ಈ ನಿರ್ಣಯದಿಂದ ರೊಚ್ಚಿಗೆದ್ದಿರುವ ನಿರ್ಮಾಪಕರು ಪ್ರತಿಭಟನೆಯ ಸ್ವರೂಪವನ್ನು ಇನ್ನಷ್ಟು ಉಗ್ರಗೊಳಿಸಲು ನಿರ್ಧರಿಸಿದ್ದಾರೆ.

ಕಳೆದ ಆರು ದಿನಗಳಿಂದ ಬೆಂಗಳೂರಿನಲ್ಲಿ ಚಲನಚಿತ್ರಗಳ ಪ್ರದರ್ಶನ ರದ್ದಾಗಿದ್ದು , ಚಲನಚಿತ್ರ ಪ್ರದರ್ಶನವನ್ನು ರಾಜ್ಯಾದ್ಯಂತ ರದ್ದುಗೊಳಿಸುವ ಕುರಿತು ಪ್ರಯತ್ನ ನಡೆಸಲು ನಿರ್ಮಾಪಕರು ಮುಂದಾಗಿದ್ದಾರೆ.

ರಾಜ್‌ ಧರಣಿಗೆ ?

ಗುರುವಾರ ನಡೆಯುವ ನಿರ್ಮಾಪಕರ ಧರಣಿಯಲ್ಲಿ ರಾಜ್‌ಕುಮಾರ್‌ ಭಾಗವಹಿಸುವ ಕುರಿತು ಊಹಾಪೋಹಗಳು ಎದ್ದಿವೆ. ರಾಜ್‌ಕುಮಾರ್‌ ಅವರು ಧರಣಿಯಲ್ಲಿ ಭಾಗವಹಿಸುವುದು ಇನ್ನೂ ಅಂತಿಮವಾಗಿಲ್ಲ ಎಂದು ರಾಘವೇಂದ್ರ ರಾಜ್‌ಕುಮಾರ್‌ ತಿಳಿಸಿದ್ದಾರೆ. ಆದರೆ, ಪ್ರತಿಭಟನೆಯ ಪರೋಕ್ಷ ನಾಯಕತ್ವವನ್ನು ಪಾರ್ವತಮ್ಮ ರಾಜ್‌ಕುಮಾರ್‌ ವಹಿಸಿಕೊಂಡಿರುವುದರಿಂದ- ರಾಜ್‌ ಕೂಡ ಧರಣಿಯಲ್ಲಿ ಭಾಗವಹಿಸುವ ಸಾಧ್ಯತೆಗಳು ಹೆಚ್ಚಾಗಿವೆ.


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada