For Quick Alerts
  ALLOW NOTIFICATIONS  
  For Daily Alerts

  ನೆನಪಿಗೆ ಬಂದರು ಆರ್‌.ನಾಗೇಂದ್ರರಾಯರು

  By Staff
  |

  *ನಾಡಿಗೇರ್‌ ಚೇತನ್‌

  ಖ್ಯಾತ ನಟ, ನಿರ್ದೇಶಕ ದಿವಂಗತ ಆರ್‌. ನಾಗೇಂದ್ರ ರಾವ್‌ ನೆನಪಿಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜು. 15ರ ಮಂಗಳವಾರ ಹಳೆಯ ಚಲನಚಿತ್ರ ಗೀತೆಗಳ ಗಾಯನ ಸಮಾರಂಭವನ್ನು ಮೆಲೋಡಿ ರೀ ಕ್ರಿಯೇಷನ್ಸ್‌ ಏರ್ಪಡಿಸಿದ್ದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದವರು, ಪದ್ಮಭೂಷಣ ಬಿ. ಸರೋಜಾ ದೇವಿ. ಮುಖ್ಯ ಅತಿಥಿಗಳಾಗಿ ಖ್ಯಾತ ಕಲಾವಿದರಾದ ಮುಖ್ಯ ಮಂತ್ರಿ ಚಂದ್ರು, ಜಿ.ವಿ. ಐಯ್ಯರ್‌, ವಾದಿರಾಜ್‌ ಮತ್ತು ಹಿರಿಯ ಪತ್ರಕರ್ತ ವಿ.ಎನ್‌. ಸುಬ್ಬರಾವ್‌ ಹಾಜರಿದ್ದರು.

  ಸಮಾರಂಭಕ್ಕೆ ಸನ್ಮಾನ ಸ್ವೀಕರಿಸಲು ಆರ್‌.ನಾಗೇಂದ್ರ ರಾಯರ ಮಕ್ಕಳಾದ ಖ್ಯಾತ ಛಾಯಾಗ್ರಹಕ ಆರ್‌. ಎನ್‌. ಕೃಷ್ಣ ಪ್ರಸಾದ್‌ ಮತ್ತು ನಟ ಆರ್‌. ಎನ್‌. ಸುದರ್ಶನ್‌ ಆಗಮಿಸಿದ್ದರು. ಇನ್ನೊಬ್ಬ ಸಹೋದರರಾದ ಆರ್‌. ಎನ್‌. ಜಯಗೋಪಾಲ್‌ ಗೈರು ಹಾಜರಾಗಿದ್ದರು.

  ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಪ್ಲೇಬಾಯ್‌ ರಾಮಕೃಷ್ಣ ಹಾಗೂ ಅರ್ಚನಾ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

  ನಾಗೇಂದ್ರರಾಯರು ಮತ್ತು ಅವರ ಕುಟುಂಬದೊಂದಿಗೆ ಒಡನಾಟವನ್ನು ನಟಿ ಬಿ. ಸರೋಜಾ ದೇವಿ ನೆನಸಿಕೊಂಡರು. ರಾಯರ ನಿರ್ದೇಶನದ ವಿಜಯನಗರದ ವೀರಪುತ್ರ ಚಿತ್ರದಲ್ಲಿ ಸುದರ್ಶನ್‌ ಎದುರು ಪಾತ್ರ ಮಾಡಿದ್ದು, ಆಗ 4 ಭಾಷೆಗಳ ಸುಮರು 30 ಚಿತ್ರಗಳಲ್ಲಿ ಜತೆಜತೆಗೆ ನಟಿಸುತ್ತಿದ್ದುದು, ಕಾಲ್‌ ಶೀಟ್‌ ತೊಂದರೆಯಿಂದಾಗಿ ರಾತ್ರಿ ತಡಹೊತ್ತಿನವರೆಗೆ ಕೆಲಸ ಮಾಡುತ್ತಿದುದು, ಮತ್ತು ರಾಯರು ಶಾಟ್‌ಗಳನ್ನು ಅಚ್ಚುಕಟ್ಟಾಗಿ ಪೂರ್ವತಯಾರಿ ಮಾಡಿಟ್ಟುಕೊಂಡು ಬೇಗ ಕೆಲಸ ಮುಗಿಸುತ್ತಿದ್ದುದನ್ನು ನೆನಸಿಕೊಂಡರು.

  ರಾಯರ ಚಿತ್ರಗಳಲ್ಲಿ ಜನರು ತಿಳಿಯಬೇಕಾದಂತಹ ಸಾಕಷ್ಟು ವಿಷಯಗಳಿರುತ್ತಿತ್ತು. ಅವರಲ್ಲದೆ ಅವರ ಮಕ್ಕಳೂ ಕೂಡ ಶ್ರದ್ಧೆ, ಭಕ್ತಿಯಿಂದ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಸ್ಫೂರ್ತಿ ಜನರಿಗೆ ಬೇಕಾಗಿದೆ. ರಾಯರಂತಹವರ ಜತೆ ಕೆಲಸಮಾಡುವುದೇ ಹೆಮ್ಮೆ. ನಾವೆಲ್ಲ ಒಂದೇ ಕುಟುಂಬದ ತರಹ ಇದ್ದೀವಿ. ಮನಸ್ಸಿಗೆ ಹಿತವಾಗುತ್ತದೆ. ದೇವರ ದಯೆಯಿಂದ ಇದುವರೆಗೂ ಬಹಳ ಒಳ್ಳೆಯ ಚಿತ್ರಗಳಲ್ಲಿ ನಟಿಸುದ್ದೇನೆ. ಜನ ಈಗಲೂ ನನ್ನ ಪಾತ್ರವನ್ನು ಇಷ್ಟ ಪಡುತ್ತಾರೆ ಎಂದು ಸರೋಜಾದೇವಿ ಹೇಳಿದರು.

  ಜನರ ಮೇಲೆ ಗೂಬೆ ಕೂರಿಸುತ್ತಾರೆ

  ಇಂದಿನ ಚಿತ್ರರಂಗದ ಕುರಿತು ಮಾತನಾಡಿದ ಸರೋಜಾ ದೇವಿ, ಈಗ ಚಿತ್ರಕ್ಕೆ ಕೋಟಿ ಖರ್ಚು ಮಾಡಿದರೂ ಯಾವುದನ್ನು ಸರಿಯಾಗಿ ಪ್ಲಾನ್‌ ಮಾಡುವುದಿಲ್ಲ. ಕಲಾವಿದರು ಮತ್ತು ತಂತ್ರಜ್ಞರು ಚಿತ್ರೀಕರಣಕ್ಕೆ ಬರಬೇಕಾದರೆ ಭಯ, ಭಕ್ತಿ, ಶ್ರದ್ಧೆಯಿಲ್ಲದೆ ಬರುತ್ತಾರೆ. ಕೆಲಸ ಮಾಡಬೇಕು ಎಂದು ಬರ್ತಾರೆ. ನಂತರ ಚಿತ್ರ ಸೋತರೆ ಅದಕ್ಕೆ ಸರ್ಕಾರ ಮತ್ತು ಜನರನ್ನು ಹೊಣೆಯಾಗಿಸುತ್ತಾರೆ ಎಂದು ಇಂದಿನ ಚಿತ್ರರಂಗದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

  ತಮಿಳು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಜು.16ರಂದು ಮಲೇಶಿಯಾಗೆ ತೆರಳಲಿರುವ ಸರೋಜಾದೇವಿ, ನಾವು ಕನ್ನಡ ಅಂತ ಬಾಯಲ್ಲಿ ಹೇಳುತ್ತೀವಿ, ಆದರೆ ಕನ್ನಡ ಕೆಲಸವಾಗುತ್ತಿಲ್ಲ ಎಂದರು. ನಾನು ಹೀಗೆಲ್ಲ ಮಾತಾಡಿದರೆ ಪತ್ರಿಕೆಯವರು ವ್ಯಂಗ್ಯವಾಗಿ ಬರೆಯುತ್ತಾರೆ. ನನ್ನ ಮೇಲೇಕೆ ಕೋಪ ಗೊತ್ತಿಲ್ಲ ಎಂದರು.

  ಮಾಣಿಕ್ಯಗಳ ಜತೆ ಸೇರಿ ಮಾಣಿಕ್ಯ

  ನಾಗೇಂದ್ರ ರಾಯರು ಗ್ರಂಥವಿದ್ದ ಹಾಗೆ. ಅವರಿಗೆ ಕೈ ಮುಗಿದು ಕೆಲಸ ಮಾಡಬೇಕು. ನಾನೊಂದು ಸತ್ಯ ಒಪ್ಪಿಕೊಳ್ಳಬೇಕಾಗಿದೆ. ನಾನು ಈ ಸಮಾರಂಭಕ್ಕೆ ಅರ್ಹನಲ್ಲ. ಮಂಗನ ಕೈಲಿ ಮಾಣಿಕ್ಯ ಅನ್ನುವ ಹಾಗೆ, ಮಂಗನ್ನ ಕಾರ್ಯಕ್ರಮಕ್ಕೆ ಸೇರಿಸಿಕೊಂಡಿದ್ದಾರೆ. ಇಂತಹ ಮಾಣಿಕ್ಯಗಳ ಜತೆ ಸೇರಿ ನಾನು ಮಾಣಿಕ್ಯವಾದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

  ಸಾಮನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ತಡವಾಗಿ ಬರುವುದು ವಾಡಿಕೆ. ಆದರೆ ನಾನು ಇಂದು ಬಹು ಬೇಗ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಸಿನಿಮಾ ರಂಗದಲ್ಲಿನ ಖಾಯಂ ಮುಖ್ಯಮಂತ್ರಿ- ಚಂದ್ರು ಕಿಡಿ ಹಾರಿಸಿದರು.

  ಹಣೆಬರಹ ಅನುಭವಿಸಿ, ನಾನೇನು ಮಾಡ್ಲಿ

  ತಮ್ಮ ಅಭಿನಯದ ಬಗ್ಗೆ ಲೇವಡಿ ಮಾಡಿಕೊಂಡ ಚಂದ್ರು- ನಮ್ಮದು ಭಾಷಾ ಶುದ್ಧಿಯಿಲ್ಲ, ಹಾಡುವುದಕ್ಕೆ, ಕುಣಿಯುವುದಕ್ಕೆ ಬರುವುದಿಲ್ಲ. ಅದೆಲ್ಲ ನಿಮ್ಮ ಹಣೆಬರಹ. ನಾವೇನು ಮಾಡುವುದಕ್ಕಾಗುವುದಿಲ್ಲ. ನಮ್ಮನ್ನು ಈ ಜಾಗಕ್ಕೆ ತಂದು ಕೂರಿಸಿದ್ದೀರಿ, ಅನುಭವಿಸಿ. ರಾಯರು ಬದುಕಿದ್ದಾಗ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಲಿಲ್ಲ. ಆದರೆ ಆ ಪ್ರಾಮುಖ್ಯತೆ ಜನ ನನಗೆ ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. ಆಗಿನ ಹಾಡುಗಳು ಹೃದಯ ತಟ್ಟುತ್ತಿದ್ದವು. ಈಗ ತಲೆ, ಕೈಕಾಲು ತಟ್ಟುತ್ತವೆ. ಅಂದಿನ ಸಾಹಿತ್ಯಕ್ಕೆ ಬೆಲೆ ಇತ್ತು. ಚಿಂತನೆ ಮಾಡ್ತಿದ್ರು. ಈಗ ಹಣಕ್ಕೆ ಬೆಲೆ ಇದೆ ಎಂದರು.

  ಪ್ರಸಕ್ತ ಜಾರಿಯಲ್ಲಿರುವ ಸೇವಾ ಶುಲ್ಕ ವಿವಾದದ ಬಗ್ಗೆ ಮಾತನಾಡಿದ ಚಂದ್ರು- ಸರ್ಕಾರಕ್ಕೆ ಸೇವಾ ಶುಲ್ಕ ಕಡಿಮೆ ಮಾಡುವಂತೆ ಮನವಿ ಮಾಡಿದರು. ಸೇವಾ ಶುಲ್ಕದಿಂದ ಪ್ರೇಕ್ಷಕರಿಗೆ ಹೊರೆಯಾಗಿದೆ, ಅನಗತ್ಯವಾಗಿ ಪ್ರೇಕ್ಷಕರು ಹೆಚ್ಚಿಗೆ 1.50ರೂ ತೆರಬೇಕಾಗಿದೆ ಆದ್ದರಿಂದ ಸೇವಾ ಶುಲ್ಕ ರದ್ದು ಮಾಡಬೇಕೆಂದು ಚಂದ್ರು ಅಭಿಪ್ರಾಯಪಟ್ಟರು.

  ಆರ್ಥಿಕ ತೊಂದರೆಯಲ್ಲಿದ್ದ ರಾಯರು

  ತಮ್ಮ ನಿರ್ಮಾಣದ ರಣಧೀರ ಕಂಠೀರವ ಚಿತ್ರದಲ್ಲಿ ನಟಿಸಿದ್ದ ನಾಗೇಂದ್ರ ರಾಯರನ್ನು ನೆನಪಿಸಿಕೊಂಡ ಜಿ.ವಿ.ಐಯ್ಯರ್‌- ರಾಯರು ಒಬ್ಬ ಪೂರ್ಣ ಕಲಾವಿದ. ಅವರ ಮಾತಿನಲ್ಲಿದ ಸ್ಪಷ್ಟತೆ, ಅವರ ನಟನೆ, ಬುದ್ಧಿವಂತಿಕೆ ಅಮೋಘವಾಗಿತ್ತು. ಯಾವ ಕಲಾವಿದ ಅನುಕರಣೆ ಮಾಡುವುದಕ್ಕೆ ಸಾಧ್ಯವಿಲ್ಲವೋ ಅವನು ಮೇರು ನಟ ಎಂದು ಕೊಂಡಾಡಿದರು. ಇಷ್ಟೆಲ್ಲಾ ಮಾಡಿದರೂ, ಅವರ ಮಕ್ಕಳು ಉಚ್ಛ್ರಾಯ ಸ್ಥಿತಿಯಲ್ಲಿದಾಗಲೂ ರಾಯರಿಗೆ ಆರ್ಥಿಕ ತೊಂದರೆಗಳಿದ್ದವು. ಆದರೂ ಅವರು ಎಂದೂ ಕೊರಗಲಿಲ್ಲ, ಮರುಗಲಿಲ್ಲ. ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಅವರು ಎಂದಿಗೂ ಅಜರಾಮರ ಎಂದರು.

  ಆರ್‌. ನಾಗೇಂದ್ರ ರಾವ್‌ ಮತ್ತು ಆರ್‌. ಎನ್‌ ಜಯಗೋಪಾಲ್‌ರವರ ಲೇಖನಿಯಿಂದ ಮೂಡಿಬಂದಿರುವ ಕನ್ನಡದಲ್ಲಿ ಲಭ್ಯವಿರುವ ಅತಿ ಪುರಾತನ ಹಾಡು ಎಂದೇ ಖ್ಯಾತಿಗಳಿಸಿರುವ ಹಾಗೂ ಸುಬ್ಬಯ್ಯ ನಾಯ್ಡು ಮತ್ತು ಲಕ್ಷ್ಮಿದೇವಿ ಅವರ ಕಂಠದಿಂದ ಹೊರಬಂದಿರುವ- ಇದೇ ಮಹಾ ಸುದಿನ ಎಂಬ ಹಾಡಿನಿಂದ ಪ್ರಾರಂಭವಾಗಿ, ಏಳು ಸ್ವರವು ಸೇರಿ ಸಂಗೀತವಾಯ್ತು , ಹೇ ಜಗದೀಶ ದೇವ, ನಗೆ ಮೊಗವೆ ನಲಿವ ನಲ್ಲೆ, ಮರುಳಾದ ಸಖಿಯೆ, ಹೂವು ಚೆಲುವೆಲ್ಲಾ ನಂದೆಂದಿತು, ತಾರೆಗಳ ತೋಟದಿಂದ ಚಂದಿರ ಬಂದ, ಮಲಗು ಮಗುವೇ ಹಾಯಾಗಿ ಮುಂತಾದ ಅರ್ಪೂರ್ವ ಹಾಡುಗಳನ್ನು ಚಂದ್ರಿಕಾ ಗುರುರಾಜ್‌, ಶ್ರೀವಳ್ಳಿ, ರಮೇಶ್‌ ಹಾಡಿ ರಂಜಿಸಿದರು. ಇದಲ್ಲದೆ ಸುದರ್ಶನ್‌ರವರು ಅಪಾರ ಕೀರ್ತಿಗಳಿಸಿ ಮೆರೆವ ಮತ್ತು ಹೂವೊಂದು ಬಳಿ ಬಂದು ಎಂದು ಹಾಡಿದಾಗ ಸಭಿಕರಿಂದ ಚಪ್ಪಾಳೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X