For Quick Alerts
  ALLOW NOTIFICATIONS  
  For Daily Alerts

  ಶ್ರೀನಿವಾಸಮೂರ್ತಿ ಅಂತರಂಗದ ಆಲಾಪ

  By Staff
  |
  • ನಾಡಿಗೇರ್‌ ಚೇತನ್‌, ಮುಕುಂದ ತೇಜಸ್ವಿ
  ಡಾ. ರಾಜ್‌ಕುಮಾರ್‌ರ ಚಿತ್ರಗಳಲ್ಲಿ ಖಾಯಂ ಆಗಿದ್ದ ನಟ ಶ್ರೀನಿವಾಸ ಮೂರ್ತಿಗೆ ಮೊದಲಿಂದಲೂ ಬಸವಣ್ಣನವರ ಕಂಡರೆ ಭರ್ತಿ ಅಭಿಮಾನ. ಬಸವಣ್ಣ ಒಂದು ರಾಷ್ಟ್ರಕ್ಕೆ ಸೀಮಿತವಲ್ಲ. ಆತ ವಿಶ್ವ ಮಾನವ. ಗಾಂಧಿ, ನೆಲ್ಸನ್‌ ಮಂಡೇಲಾ, ಕಾರ್ಲ್‌ ಮಾರ್ಕ್ಸ್‌ ಮುಂತಾದವರು ಆತನಿಂದ ಪ್ರೇರಣೆ ಪಡೆದವರು. ಅವರೆಲ್ಲ ಬಹಳ ಬೆಳೆದರು. ಆದರೆ ಬಸವಣ್ಣ ಹಾಗೇ ಇದ್ದಾರೆ... ಅಂತಲೇ ಮಾತಿಗೆ ವೇಗ ಕೊಡುವ ಮೂರ್ತಿಗೆ ಹಿಂದೆ ಬಸವಣ್ಣನ ಪಾತ್ರ ಕೂಡ ಸಿಕ್ಕಿತ್ತು. ಆಗ ಬಂತು ಮೂಗು ಮೂಗು ಮೂಗು... ಮಾತು.
  ಅದೇನು ದುರದೃಷ್ಟವೋ ಏನೋ, ಬಸವಣ್ಣನವರಿಗೆ ಉದ್ದ ಮೂಗು ಇತ್ತು , ಶ್ರೀನಿವಾಸ ಮೂರ್ತಿಯವರ ಮೂಗು ತುಂಬಾ ಚಿಕ್ಕದಾಯಿತು ಎಂದು ಯಾರೋ ಮೂಗು ತೂರಿಸಿದ ಕಾರಣ ಬಸವಣ್ಣನ ಪಾತ್ರ ತಪ್ಪಿ ಹೋಯಿತು. ಬಿಜ್ಜಳನ ಪಾತ್ರ ಸಿಕ್ಕಿತು. ಉದ್ದ ಮೂಗಿದ್ದ ಡಾ.ರಾಜ್‌ಕುಮಾರ್‌ ಮತ್ತು ಅಶೋಕ್‌ ಈ ಪಾತ್ರಕ್ಕೆ ಸರಿ ಅಂತ ತೀರ್ಮಾನಿಸಲಾಯಿತು. ಕೊನೆಗೆ ಬಸವಣ್ಣನ ಪಾತ್ರವನ್ನು ನಟ ಅಶೋಕ್‌ಗೆ ನೀಡಲಾಯಿತು. ಇದರಿಂದ ಬಹಳವಾಗಿ ನೊಂದ ಶ್ರೀನಿವಾಸ ಮೂರ್ತಿ, ‘ಸುಧಾ’ ವಾರ ಪತ್ರಿಕೆಯಲ್ಲಿ ಆಗ ವರದಿಗಾರರಾಗಿದ್ದ ಗಂಗಾಧರ ಮೊದಲಿಯಾರ್‌ರೊಂದಿಗೆ ತಮ್ಮ ಬೇಜಾರು ತೋಡಿಕೊಂಡರು. ಮರು ವಾರವೇ ‘ಸುಧಾ’ದಲ್ಲಿ ಈ ವಿಷಯ ಕುರಿತು ‘ಕೈಕೊಟ್ಟ ಮೂಗು’ ಎಂಬ ವರದಿಯೂ ಪ್ರಕಟವಾಯಿತು. ವರದಿ ಬರೆದ ಮೊದಲಿಯಾರ್‌ ಹಲ್ಲೆಗೊಳಗಾದರು !

  ಕೊನೆಗೂ ಆದೇ ಆದರು ಬಸವಣ್ಣ
  ಇದಾಗಿ ಬಹಳ ವರ್ಷಗಳ ನಂತರ ಈ- ಟೀವಿ ಪ್ರಾರಂಭವಾದ ಮೇಲೆ ‘ಅಣ್ಣ ಬಸವಣ್ಣ’ ಎಂಬ ಧಾರಾವಾಹಿಯನ್ನು ತಾವೇ ನಿರ್ಮಿಸಿ, ನಿರ್ದೇಶಿಸಿ, ಬಸವಣ್ಣನವರ ಪಾತ್ರ ವಹಿಸಿದರು. ಇಲ್ಲೂ ಅದೃಷ್ಟ ಕೈಕೊಟ್ಟಿತು. ಆ ಧಾರಾವಾಹಿಗೆ ಒಂದೂಮುಕ್ಕಾಲು ವರ್ಷ ವ್ಯಯಿಸಿ, ಸುಮಾರು 14 ಚಲನಚಿತ್ರಗಳನ್ನು ಕೈಬಿಟ್ಟ ಶ್ರೀನಿವಾಸ ಮೂರ್ತಿ, 70 ಎಪಿಸೋಡ್‌ ಚಿತ್ರೀಕರಣ ನಡೆಸಿದರು. ಬಸವಣ್ಣನವರ ಕುರಿತು ಭಕ್ತಿ ಹರಿಯುವುದು ಸೋಮವಾರದ ದಿನ. ಅವತ್ತೇ ಧಾರಾವಾಹಿ ಪ್ರಸಾರ ಮಾಡಿ ಅಂತ ಕೇಳಿಕೊಂಡರು. ಆದರೆ ಈ- ಟೀವಿ ಭಾನುವಾರ ಎಲ್ಲರಿಗೂ ರಜ, ಅವತ್ತೇ ಅಲ್ಲವೇ ರಾಮಾಯಣ, ಮಹಾಭಾರತ ಕ್ಲಿಕ್ಕಾಗಿದ್ದು ಅಂತ ವಾದ ಮಾಡಿ, ಬಸವಣ್ಣ ಧಾರಾವಾಹಿಗೂ ಭಾನುವಾರದ ಸ್ಲಾಟನ್ನೇ ಕೊಟ್ಟಿತು. ಶ್ರೀನಿವಾಸಮೂರ್ತಿ ಅಂದುಕೊಂಡಷ್ಟು ಧಾರಾವಾಹಿ ಪ್ರಖ್ಯಾತವಾಗಲಿಲ್ಲ. ಕರ್ನಾಟಕದಾದ್ಯಂತ ಹೊಸ ಕಲಾವಿದರನ್ನು ಹುಡುಕಿ, ಅವರಿಗೆ ಮಹತ್ವದ ಪಾತ್ರ ನೀಡಿದ್ದು ಯಾರ ಗಮನಕ್ಕೂ ಬರಲಿಲ್ಲ. ಹತಾಶರಾದ ಶ್ರೀನಿವಾಸ ಮೂರ್ತಿ ಧಾರಾವಾಹಿಯನ್ನು ಭಾನುವಾರ ಹಾಕಿ ಕೊಲೆ ಮಾಡಿದರು ಅಂತಲೇ ಅಲವತ್ತುಕೊಳ್ಳುತ್ತಾರೆ. ಪ್ರತಿಭೆ, ಚೆಂದದ ಮುಖಭಾವ, ಸ್ಪಷ್ಟ ಮಾತು, ನಟನಾ ಕೌಶಲ್ಯ... ಇಷ್ಟೆಲ್ಲ ಇಟ್ಟುಕೊಂಡೂ ಚಿತ್ರಲೋಕದಲ್ಲಿ ಪರಿ ಪಾಟಲು ಪಟ್ಟಿರುವ ಶ್ರೀನಿವಾಸ ಮೂರ್ತಿ ನಿರ್ಮಾಪಕ, ನಿರ್ದೇಶಕನಾಗಿಯೂ ಕೈಚಳಕ ತೋರಿದವರು. ಅವರೇ ಹೇಳಿಕೊಳ್ಳುವಂತೆ ಅವರಿಗೆ ಕೈಕೊಟ್ಟಿದ್ದು ಅದೃಷ್ಟ.

  ಓವರ್‌ ಟು ಶ್ರೀನಿವಾಸ ಮೂರ್ತಿ....
  ನಂಗೆ 6 ವರ್ಷ ಆಗಿದ್ದಾಗಿನಿಂದ ನಾಟಕಗಳಲ್ಲಿ ಅಭಿನಯಿಸಲು ಶುರುಮಾಡಿದೆ. ಮೊದಲಿನಿಂದ ಸಿನಿಮಾದ ಹುಚ್ಚು. 8ನೇ ಕ್ಲಾಸಿನಲ್ಲಿದಾಗ ಚಿತ್ರರಂಗ ಸೇರುವ ಕನಸು ಕಂಡು ಮನೆ ಬಿಟ್ಟು ಮದರಾಸು ಸೇರಿದೆ. ಅಲ್ಲಿ 8 ದಿವಸ ಹಾಗೂ ಹೀಗೂ ಅಲೆದು ಕನ್ನಡ ಚಿತ್ರ ನಿರ್ದೇಶಕರಾದ ಜಿ.ವಿ. ಐಯ್ಯರ್‌, ಬಿ.ಆರ್‌. ಪಂತಲು, ಹುಣಸೂರು ಕೃಷ್ಣಮೂರ್ತಿ ಮುಂತಾದವರ ಮನೆಗೆ ಪಾತ್ರಕ್ಕಾಗಿ ಎಡತಾಕಿದೆ. ಸಿನಿಮಾ ಹುಚ್ಚು ಬಿಟ್ಟು ಇನ್ನೂ ಓದುವಂತೆ ಅವರೆಲ್ಲ ಉಪದೇಶ ಕೊಟ್ಟರು. ಕೈಲಿದ್ದ ದುಡ್ಡು ಖರ್ಚಾದ ಮೇಲೆ ಮನೆಗೆ ವಾಪಸ್ಸು ಬಂದೆ.

  ಮಾತಿನ ಶೈಲಿಗೆ ಮೆಚ್ಚಿಗೆ ಸಿಕ್ಕಿದ್ದು : ನಮ್ಮದು ಮೂಲತಃ ಚಿಕ್ಕಬಳ್ಳಾಪುರ. ಅಲ್ಲೆಲ್ಲಾ ಹೆಚ್ಚಾಗಿ ತೆಲುಗು ಚಿತ್ರಗಳು ಪ್ರದರ್ಶನವಾಗುತ್ತಿತ್ತು. ಕನ್ನಡ ಚಿತ್ರಗಳು ಅಪರೂಪ. ಹೀಗಾಗಿ ನಾನು ಮತ್ತು ಗೆಳೆಯರು, ಸಂಘ ಕಟ್ಟಿಕೊಂಡು ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ಏರ್ಪಡಿಸುತ್ತಿದ್ದೆವು. ಆ ಸಂಘದಿಂದಲೇ ಅನೇಕ ನಾಟಕಗಳನ್ನು ಆಡಿಸುತ್ತಿದ್ವಿ. ಅದರಲ್ಲಿ ಪ್ರಮುಖವಾದುದು ದೇವದಾಸಿ ನಾಟಕ. ನಾನದರಲ್ಲಿ ನಾಜೂಕಯ್ಯನ ಪಾತ್ರ ಮಾಡುತ್ತಿದ್ದೆ. ಒಮ್ಮೆ ನಮೂರಲ್ಲಿ ಯೋಗಾನರಸಿಂಹರ ನಾಟಕದ ಕಂಪೆನಿ ಕ್ಯಾಂಪ್‌ ಮಾಡಿದ್ದಾಗ, ಸದಾರಮೆ ನಾಟಕ ನೋಡಲು ನಾವೆಲ್ಲಾ ಹೋಗಿದ್ದೆವು. ಸಖಾರಾಮನ ಪಾತ್ರ ಮಾಡುವವ ಕೈಕೊಟ್ಟ ಕಾರಣ, ನಾನು ಆ ಪಾತ್ರ ಮಾಡಬೇಕಾಗಿ ಬಂತು. ಅವರು ಹತ್ತು ತಿಂಗಳ ಕಾಲ ಕ್ಯಾಂಪ್‌ ಹಾಕಿದ್ದರು. ಅವರ ಅನೇಕ ನಾಟಕಗಳಲ್ಲಿ ನಾನು ನಾಯಕನ ಪಾತ್ರ ಮಾಡಿದೆ. ನಂತರ ಕರ್ನಾಟಕದಾದ್ಯಂತ ಅನೇಕ ನಗರಗಳಲ್ಲಿ ನಟಿಸಿ ಬೆಂಗಳೂರಿಗೆ ಬಂದೆ. ಗುರುರಾಜಲು ನಾಯ್ಡುರವರ ಕಂಪೆನಿಯಲ್ಲೂ ಪಾತ್ರ ಮಾಡಿದೆ. ಬೆಂಗಳೂರಿನ ನವರಂಗ್‌ ಬಾರ್‌, ಕಾಫೀ ಬೋರ್ಡ್‌ ಮುಂತಾದ ಕಡೆ ಕೆಲಸ ಮಾಡುತ್ತಾ ಮಾಡುತ್ತಾ ನಾಟಕಗಳಲ್ಲೂ ಪಾತ್ರ ಮಾಡಿದೆ. ಒಮ್ಮೆ ಆಲ್‌ ಇಂಡಿಯಾ ರೇಡಿಯೋದವರು ಆಡಿಷನ್‌ ನಡೆಸಿದಾಗ ನಾನು ಕೂಡ ಆಯ್ಕೆಯಾದೆ. ನನ್ನ ಮಾತಿನ ಶೈಲಿ ಮೆಚ್ಚುಗೆಯಾಗಿ ಕೆಲಸ ಸಿಕ್ಕಿತು. ಅಲ್ಲಿ ಕೆಲಸ ಮಾಡುವಾಗ ಕಲಾವಿದನಿಗೆ ಬೇಕಿರುವ ಮಾತಿನ ಏರಿಳಿತ, ಭಾಷೆ, ಸ್ಪಷ್ಟತೆ, ಶೈಲಿ ಅರ್ಥವಾಯಿತು.

  ರಣಧೀರ ಕಂಠೀರವನಾದೆ : ಬೆಂಗಳೂರಿಗೆ ಬಂದಾಗಿಂದ ನನಗೆ ಕಲಾಕ್ಷೇತ್ರದ ನಾಟಕಗಳಲ್ಲಿ (ಹವ್ಯಾಸಿ ನಾಟಕಗಳು) ಅಭಿನಯಿಸಬೇಕೆಂದು ಬಹಳ ಆಸೆಯಿತ್ತು. ಒಮ್ಮೆ ಹಾಸ್ಯ ನಟ ಉಮೇಶ್‌ ಒಂದು ನಾಟಕಕ್ಕೆ ಕರೆದುಕೊಂಡು ಹೋದರು. ರಣಧೀರ ಕಂಠೀರವನ ಕುರಿತಾದ ನಾಟಕದಲ್ಲಿ ನನಗೂ ಒಂದು ಪಾತ್ರ ಸಿಕ್ಕಿತು. ಕ್ರಮೇಣ ನನಗೂ ರಣಧೀರ ಕಂಠೀರವನ ಪಾತ್ರ ಸಿಕ್ಕಿತು. ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ನನ್ನ ಪಾತ್ರ ನೋಡಿದ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ 1977ರಲ್ಲಿ ‘ಹೇಮಾವತಿ’ ಚಿತ್ರದಲ್ಲಿ ನನಗೆ ನಾಯಕನ ಪಾತ್ರ ನೀಡಿದರು.

  ಆ ಚಿತ್ರಕ್ಕೆ ಮೊದಲ ಆಯ್ಕೆ ನಾನಾಗಿರಲಿಲ್ಲ. ಲೋಕೇಶ್‌ ಮಾಡಬೇಕಾಗಿದ್ದ ಪಾತ್ರ ಕೊನೆಗೆ ಅವರು ನಿರಾಕರಿಸಿದ್ದರಿಂದ ನನಗೆ ಸಿಕ್ಕಿತು. ಚಿತ್ರ ತೋಪಾಯ್ತು. ಆ ಚಿತ್ರದಲ್ಲಿ ಜಿ.ವಿ.ಅಯ್ಯರ್‌, ಉದಯಕುಮಾರ್‌ ಬಿಟ್ಟರೆ ಎಲ್ಲರೂ ಹೊಸಬರು. ಆ ಚಿತ್ರವಾದ ಮೇಲೆ ಬೇರೆ ಅವಕಾಶಗಳಿರಲಿಲ್ಲ. ಹೇಗೂ ಬೇರೆ ಕೆಲಸವಿತ್ತು. 1978ರಲ್ಲಿ ‘ಬಾಳಿನ ಗುರಿ’ ಚಿತ್ರದಲ್ಲಿ ಜಯಂತಿ ಎದುರು ನಾಯಕ ನಟನಾಗಿ ಅವಕಾಶ ಸಿಕ್ಕಿತು. ಮತ್ತೊಮ್ಮೆ ಬೇರೆಯವರು ಮಾಡಬೇಕಾದ ಪಾತ್ರ ನನಗೆ ಬಂತು.

  ಥ್ಯಾಂಕ್ಸ್‌ ಟು ಸಿದ್ಧಲಿಂಗಯ್ಯ : ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಸಿದ್ಧಲಿಂಗಯ್ಯರಿಗೆ ನನ್ನ ಮೇಲೆ ಏನೋ ಪ್ರೀತಿ. ‘ಬಿಳಿಗಿರಿಯ ಬನದಲ್ಲಿ’ ಚಿತ್ರದಲ್ಲಿ ಮತ್ತೊಮ್ಮೆ ಪ್ರಮುಖವಾದ ನೀಡಿದರು. ರಾಜೇಶ್‌, ಶ್ರೀನಾಥ್‌ ಮುಂತಾದವರು ನಿರಾಕರಿಸಿದ ಆ ಪಾತ್ರ ಕೊನೆಗೆ ನನಗೆ ಸಿಕ್ಕಿತು. ಆದರೆ ಚಿತ್ರ ಮತ್ತೆ ತೋಪು. ಹೀಗೆ ನಾಯಕನಾಗಿ 10-15 ಚಿತ್ರ ಮಾಡಿದೆ. ಯಾವುದರಲ್ಲೂ ಯಶಸ್ಸು ಸಿಗಲಿಲ್ಲ. ಬೇರೆ ನಾಯಕರಿಗೆ ಸಿಕ್ಕಂತಹ ಯಾವ ಅವಕಾಶಗಳೂ ಸಿಗಲಿಲ್ಲ. ಪೋಷಕ ಪಾತ್ರಗಳತ್ತ ತಿರುಗಲೇಬೇಕಾಯಿತು. ಡಾ ರಾಜ್‌ಕುಮಾರ್‌ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ ಮೇಲೆ, ಅನೇಕ ಚಿತ್ರಗಳು ಯಶಸ್ಸಾದವು. ಕ್ರಮೇಣ ಒಳ್ಳೆಯ ಚಿತ್ರಗಳು, ಪಾತ್ರಗಳು ಸಿಕ್ಕವು. ವಸಂತಗೀತ, ಕೆರಳಿದ ಸಿಂಹ, ಕವಿರತ್ನ ಕಾಳಿದಾಸ, ಹೊಸ ಬೆಳಕು ಮುಂತಾದ ಚಿತ್ರಗಳು ಯಶಸ್ವಿಯಾಗಿ ಜನ ನನ್ನನ್ನು ಗುರುತಿಸುವಂತಾಯ್ತು. ಇತ್ತೀಚೆಗಿನ ಚಿತ್ರಗಳು ತೃಪ್ತಿ ಕೊಡುತ್ತಿವೆ ಅನ್ನುವುದಕ್ಕಿಂತ ಓಕೆ ಅನ್ನಬಹುದು. ಹೇಗೋ ನಡೆದುಕೊಂಡು ಹೋಗುತ್ತಿದೆ.

  ಪುಟ್ಟಣ್ಣ ಕಣಗಾಲ್‌ ಜತೆ ಕೆಲಸ ಮಾಡಬೇಕು ಎಂದು ಬಹಳ ಆಸೆಯಿತ್ತು. ನನಗೆ ಒಂದು ಪಾತ್ರ ಕೊಡ್ತೀನಿ ಅಂತ ಸಾಯುವ ಹಿಂದಿನ ದಿನ ಕೂಡ ಹೇಳಿದ್ದರು. ಆದರೆ ಆಗಲಿಲ್ಲ. ಪ್ರತಿ ಕಲಾವಿದನಿಗೂ ಕೊರತೆ ಇದ್ದೇ ಇರುತ್ತದೆ. ಪಾತ್ರ ಚೆನ್ನಾಗಿರಬಹುದು. ಆದರೆ ಜನ ಆ ಪಾತ್ರ ಇಷ್ಟಪಡಬೇಕು. ಚಿತ್ರ ಯಶಸ್ಸಾಗಬೇಕು.

  ಇಷ್ಟಪಟ್ಟ ಪಾತ್ರಕ್ಕೆ ಪ್ರಶಸ್ತಿ ಸಿಗಲಿಲ್ಲ : ನನಗೆ ಅನೇಕ ಪ್ರಶಸ್ತಿಗಳೇನೋ ಲಭಿಸಿದೆ. ಆದರೆ ಯಾವುದು ಇಷ್ಟಪಟ್ಟ ಪಾತ್ರಗಳಿಗೆ, ಚಿತ್ರಗಳಿಗೆ ಬಂದಿಲ್ಲ. ರಾಜ್ಯ ಸರ್ಕಾರದಿಂದ ‘ನಾರಿ ಸ್ವರ್ಗಕ್ಕೆ ದಾರಿ’ ಮತ್ತು ‘ಶ್ರೀರಸ್ತು ಶುಭಮಸ್ತು’ ಚಿತ್ರಗಳಿಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ಕವಿರತ್ನ ಕಾಳಿದಾಸ, ಬಿಳಿಗಿರಿಯ ಬನದಲ್ಲಿ, ಜೋಡಿ ಜೀವ, ಜಮೀನ್ದಾರ್ರು ಚಿತ್ರಗಳಿಗೆ ಪ್ರಶಸ್ತಿ ಬರಬಹುದು ಎಂದು ಎಣಿಸಿದ್ದೆ. ಆದರೆ ಆಸೆ ಈಡೇರಲಿಲ್ಲ. ಇದಲ್ಲದೆ ಚಿತ್ರರಸಿಕರ ಸಂಘ, ಹಲೋ ಗಾಂಧಿನಗರ ಮತ್ತು ಸೂರ್ಯೋದಯ ಪ್ರತಿಷ್ಠಾನದ ಪ್ರಶಸ್ತಿಗಳು ಕೂಡ ದೊರೆತಿವೆ.

  90 ಲಕ್ಷ ಕಳಕೊಂಡೆ : ಒಂದು ಕಾಲದಲ್ಲಿ ಜೈಜಗದೀಶ್‌ ಜತೆ ಸೇರಿ ಚಿತ್ರ ನಿರ್ಮಾಣ ಕೂಡ ಪ್ರಾರಂಭ ಮಾಡಿದೆ. ತಾಯಿಗೊಬ್ಬ ತರ್ಲೆ ಮಗ, ನಂಬಿದ್ರೆ ನಂಬಿ ಬಿಟ್ರೆ ಬಿಡಿ ಚಿತ್ರ ಮಾಡಿದೆವು. ನಾನೊಬ್ಬನೇ ನಿರ್ಮಾಪಕನಾಗಿ ‘ಹೊಸಮನೆ ಅಳಿಯ’ ಮತ್ತು ‘ದೇವರ ಮಕ್ಕಳು’ ಚಿತ್ರ ನಿರ್ಮಿಸಿ, ಸುಮಾರು 90 ಲಕ್ಷ ಕಳೆದು ಕೊಂಡೆ. ದೇವರ ಮಕ್ಕಳು ಚಿತ್ರವೊಂದರಲ್ಲೇ ಸುಮಾರು 65 ಲಕ್ಷ ಲಾಸಾಯಿತು. ಚಿತ್ರ ಚೆನ್ನಾಗಿದ್ದರೂ ಜನ ಬರಲಿಲ್ಲ. ಅವರಿಗೆ ಹಿಡಿಸಲಿಲ್ಲವೇನೋ? Operation success, Patient died ಅನ್ನುವ ಹಾಗಾಯಿತು. ಮಕ್ಕಳ ಚಿತ್ರವೆಂಬ ಕಾರಣಕ್ಕೆ ಹೈದರಾಬಾದ್‌, ಕೋಲ್ಕತ್ತಾ, ಮುಂಬಯಿ ಮತ್ತು ಡೆನ್ಮಾರ್ಕ್‌ ಚಲನಚಿತ್ರೋತ್ಸವಕ್ಕೆ ದೇವರ ಮಕ್ಕಳು ಚಿತ್ರವನ್ನು ಕಳುಹಿದ್ದೇನೆ. ಈ ವರ್ಷದ ಕರ್ನಾಟಕ ರಾಜ್ಯ ಚಲನಚಿತ್ರೋತ್ಸವಕ್ಕೆ ಕೂಡ ಚಿತ್ರವನ್ನು ಕಳುಹಿಸುತ್ತೇನೆ. ಮಕ್ಕಳ ಚಿತ್ರಗಳ ಸಾಲಿನಲ್ಲಿ ಈ ವರ್ಷ ಇನ್ನೂ ಎರಡು ಚಿತ್ರಗಳಾದ ‘ಬಿಂಬ’ ಮತ್ತು ‘ಕಲರವ’ ಇರುವ ಕಾರಣ ಪ್ರಶಸ್ತಿಯ ಬಗ್ಗೆ ಅಂತಹ ಆಸೆ ಇಲ್ಲ. ಹಾಗೂ ಸಿಕ್ಕರೆ ಅದಕ್ಕಿಂತ ಸಂತೋಷ ಇನ್ನೊಂದಿಲ್ಲ.

  ಕನ್ನಡದಲ್ಲೇನೋ ಬಹಳ ಒಳ್ಳೆಯ ಕಥೆಗಳಿವೆ. ಆದರೆ ಒಳ್ಳೆಯ ಚಿತ್ರಕಥೆಗಳಿಲ್ಲ. ತೆಲುಗು ಮತ್ತು ತಮಿಳು ಚಿತ್ರಗಳಿಂದ ದೃಶ್ಯಗಳನ್ನು ಕದ್ದು ಇಲ್ಲಿ ಹಾಕುತ್ತಾರೆ. ನಮಗೂ ಅದು ಗೊತ್ತಿರುತ್ತದೆ. ಆದರೆ ಪಾತ್ರ ಬೇಡ ಎನ್ನುವುದಕ್ಕಾಗುವುದಿಲ್ಲ. ಕೇಳಿದರೆ ಪಾತ್ರ ಸಿಗುವುದಿಲ್ಲ. ಜನರಿಗೂ ಕೂಡ ಚಿತ್ರ ನೋಡುತ್ತಾ ನೋಡುತ್ತಾ ಇದು ಯಾವ ಚಿತ್ರದ ದೃಶ್ಯ ಎಂದು ಗೊತ್ತಾಗಿಬಿಟ್ಟಿರುತ್ತದೆ. ಆದರೂ ಅಂತಹ ಚಿತ್ರಗಳು ಓಡುತ್ತವೆ. ಹಾಗಿರುವಾಗ ದೇವರ ಮಕ್ಕಳು ತರಹದ ಶುದ್ಧ ಚಿತ್ರ ಎಲ್ಲಿ ಓಡುತ್ತದೆ ಹೇಳಿ?

  ಎರಡು ಕನಸುಗಳು

  ...ಶ್ರೀನಿವಾಸ ಮೂರ್ತಿ ಪುಂಖಾನುಪುಂಖ ಮಾತಾಡಿದ ನಂತರ ಒಂದು ನಿಟ್ಟುಸಿರಿಟ್ಟರು. ಸದ್ಯಕ್ಕೆ ಸದ್ಯಕ್ಕೆ ತಮ್ಮ ದೊಡ್ಡಮಗ ನವೀನ್‌ ಕೃಷ್ಣನನ್ನು ಹೀರೋ ಮಾಡುವುದು ಅವರ ಯೋಚನೆ. ಆತ ತಮಗಿಂತ ಒಳ್ಳೆಯ ನಟ ಎಂದು ಬಣ್ಣಿಸುವ ಶ್ರೀನಿವಾಸಮೂರ್ತಿ, ಅದು ದುರಹಂಕಾರದ ಮಾತಲ್ಲ ಅಂತ ಕೊಸರನ್ನೂ ಹಾಕುತ್ತಾರೆ. ಆತನಿಗೆ ಒಳ್ಳೆಯ ಭಾಷೆ, ಡಿಕ್ಷನ್‌ ಇದೆ. ನಡವಳಿಕೆ ಚೆನ್ನಾಗಿದೆ. ಡ್ಯಾನ್ಸ್‌ ಎಕ್ಸಪರ್ಟ್‌ ಎಂದು ತಮ್ಮ ಮಗನನ್ನು ಬಾಯಿತುಂಬಾ ಹೊಗಳುತ್ತಾರೆ. ‘ನಾನು ಶ್ರೀಮಂತ ನಟನಾಗಲಿಲ್ಲ. ನಟನೆಯಲ್ಲಿ ಶ್ರೀಮಂತನಿರಬಹುದು. ದುಡ್ಡಿನಲ್ಲಿ ಆಗ್ಲಿಲ್ಲ. ಆದರೆ ಬಹಳ ಖರ್ಚು ಮಾಡಿ ಪ್ರಮೋಟ್‌ ಮಾಡಲಿಕ್ಕಾಗುವುದಿಲ್ಲ. ನಾನೇ ಚಿತ್ರ ನಿರ್ಮಾಣ ಮಾಡಬೇಕು. ಒಳ್ಳೆಯ ಕಮರ್ಷಿಯಲ್‌ ಚಿತ್ರ ಮಾಡಬೇಕು ಎನ್ನುವ ಆಸೆ ಇದೆ. ಎಲ್ಲವೂ ತಯಾರಿಯ ಹಂತದಲ್ಲಿದೆ’ ಅಂದಾಗ ಅವರ ಕಣ್ಣಲ್ಲಿ ಭರವಸೆ ಬತ್ತಿಲ್ಲದಿರುವುದು ಸ್ಪಷ್ಟವಾಗುತ್ತಿತ್ತು.

  ಶ್ರೀನಿವಾಸಮೂರ್ತಿ ಮತ್ತೊಂದು ಕನಸು- ಕನಕದಾಸರ ಬಗ್ಗೆ ಧಾರಾವಾಹಿ ಮಾಡುವುದು. ವಚನಗಳನ್ನೇನೋ ಅನೇಕ ಜನ ಬರೆದಿದ್ದಾರೆ. ಆದರೆ ಬಸವಣ್ಣ ಮತ್ತು ಕನಕದಾಸರಷ್ಟು ಸರಳವಾಗಿ ಬೇರೆಯವರು ಬರೆಯಲಿಲ್ಲ. ಕನಕದಾಸರು ಜೀವನಕ್ಕೆ ಬಹಳ ಹತ್ತಿರವಾಗಿರುವ ವ್ಯಕ್ತಿ. ಅವರ ಸಾಹಿತ್ಯ ತುಂಬಾ ಸರಳ ಮತ್ತು ಶ್ರೇಷ್ಠ ಎಂಬುದು ಮೂರ್ತಿ ಕಂಡುಕೊಂಡಿರುವ ಸತ್ಯ.

  ಇತ್ತೀಚಿಗೆ ಬರುವ ಧಾರಾವಾಹಿಗಳೆಲ್ಲ ಒಂದೇ ರೀತಿಯದ್ದಾಗಿರುತ್ತವೆ ಎಂದು ಅಭಿಪ್ರಾಯಪಡುವ ಶ್ರೀನಿವಾಸ ಮೂರ್ತಿ , ಹೊಸತನ್ನು ಹೊಸೆಯಲು ಈಗಾಗಲೇ ತೊಡಗಿದ್ದಾರೆ. ಮಕ್ಕಳಿಗಾಗಿ ವಿಕ್ರಮ್‌ ಮತ್ತು ಬೇತಾಳ ಶೈಲಿಯಲ್ಲಿ ‘ಪಾತಾಳ ಭೈರವಿ’ ಎಂಬ ಧಾರಾವಾಹಿ ಸಿದ್ಧಪಡಿಸಲು ಈ- ಟೀವಿ ಸಮ್ಮತಿಸಿದೆ. ಸದ್ಯಕ್ಕೆ ಮೂರ್ತಿ ಮನಸ್ಸಿನಲ್ಲಿ ಪಾತಾಳ ಭೈರವಿ ಮಂಡಿಗೆಯಾಗುತ್ತಿದೆ. ಅದರ ಜೊತೆಜೊತೆಗೇ ಮಗ ಹೀರೋ ಆಗುವ ಅಮೃತ ಘಳಿಗೆಯ ನಿರೀಕ್ಷೆ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X