For Quick Alerts
  ALLOW NOTIFICATIONS  
  For Daily Alerts

  ಭಾರತಿ ಮೇಡಂಗೊಂದು ಪ್ರೀತಿಯ ಓಲೆ

  By Staff
  |

  ಅಕ್ಕರೆಯ ಭಾರತಿ ಮೇಡಂಗೆ,

  ನೂರು ನೆನಪು, ಸಾವಿರ ನಮಸ್ಕಾರ.

  ನೀವೇ ಬಲ್ಲಂತೆ- ಬೆಂಗಳೂರಲ್ಲೀಗ ದಿನವೂ ಮಳೆ. ಮಳೆ ಇಲ್ಲದ ದಿನ ಸಿನಿಮಾ ನೋಡುವ ಮನಸ್ಸಾಗುತ್ತೆ . ಥಿಯೇಟರಿನ ಕಡೆ ತಿರುಗಿ ನಿಂತರೆ- ಎಲ್ಲರದ್ದೂ ಒಂದೇ ಮಾತು- ‘ಪಿಕ್ಚರ್ರು ಚನ್ನಾಗಿರಲ್ಲ ! ಹೀರೋ ಸ್ಮಾರ್ಟ್‌ ಆಗಿಲ್ಲ . ಹೀರೋಯಿನ್‌ಗೆ ನಗೋಕೆ ಬರಲ್ಲ ....’ ಇಂಥ ಮಾತಿಂದ ಬೇಸರಗೊಂಡು ಟೀವಿ ಮುಂದೆ ಕೂತರೆ- ಇದರಲ್ಲಿ ‘ಪ್ರೀತಿ ಪ್ರೇಮ ಪ್ರಣಯ’ದ ಹಾಡು ಬರುತ್ತೆ . ‘ಅರೆ, ಭಾರತೀ.... ಭಾರತಿ ಈಗಲೂ ಚೆನ್ನಾಗಿ ಕಾಣ್ತಾರೆ’ ಅಂದುಕೊಳ್ಳುತ್ತ ಚಾನೆಲ್‌ ಬದಲಿಸಿದರೆ- ಅಲ್ಲಿ ‘ಮೇಯರ್‌ ಮುತ್ತಣ್ಣ’ ಬರ್ತಾ ಇರುತ್ತೆ . ಅರೆ, ಇಲ್ಲೂ ಭಾರತಿ ಸಿನಿಮಾ ಬರ್ತಿದೆ ಅಂದುಕೊಂಡು ಇನ್ನೂ ಒಂದು ಚಾನೆಲ್ಲಿಗೆ ತಿರುವಿ ನೋಡಿದರೆ- ಅಲ್ಲಿ ‘ಶ್ರೀಕೃಷ್ಣ ದೇವರಾಯ’ವೋ, ‘ಶಾಂತಿ ನಿವಾಸ’ವೋ, ‘ಮನೆಯೇ ಮಂತ್ರಾಲಯ’ವೋ ಕಾಣಿಸಿಕೊಳ್ಳುತ್ತೆ . ಓಹ್‌, ಇವತ್ತು ಟೀವಿ ಪೂರಾ ಭಾರತಿ ಮೇಡಮ್ಮೇ ಅಂದುಕೊಂಡೇ- ಎಫ್‌.ಎಂ. ರೇಡಿಯೋ ಮುಂದೆ ಕೂತರೆ-

  ಹಗಲೆಲ್ಲ ಅರಸೀ, ಇರುಳೆಲ್ಲ ಬಯಸೀ
  ಬಳಲಿದೆಯೋ ಜೀವಾ, ಕೇಳೆನ್ನ ಚೆಲುವಾ
  ಬೇಡೆಂದು ಜರಿದು ನೀ ದೂರ ಹೋದರೂ
  ಬಿಡದಂತೆ ನಿನ್ನ ನೆರಳಾಗೇ ಇರುವೆ....
  ತಾನೊ ತಂದನ್ನ ತಾನೊ ತಾನೊ ತಂದನ್ನ ತಾನೊ ನಾನಯ್ಯಾ....

  ಹಾಡು ತೇಲಿ ತೇಲಿ ಬರುತ್ತೆ . ಅದನ್ನ ಕೇಳ್ತಿದ್ದ ಹಾಗೆ ಕುಣೀಬೇಕು ಅನ್ಸುತ್ತೆ . ಖುಷಿಯಿಂದ ನಲೀಬೇಕು ಅನ್ಸುತ್ತೆ . ನಾವೂ ಹಾಡಬೇಕು ಅನ್ಸುತ್ತೆ . ನಿಮ್ಮನ್ನು ನೋಡಬೇಕು ಮಾತಾಡಬೇಕು ಅಂತೆಲ್ಲ ಅನ್ನಿಸಿಬಿಡುತ್ತೆ !

  ಉಹುಂ, ನೀವು ಫೋನಿಗೆ ಸಿಕ್ಕಲ್ಲ . ಭೇಟಿಗೆ ಒಪ್ಪಲ್ಲ ! ಫಂಕ್ಷನ್‌ಗೆ ಬರೋದೇ ಇಲ್ಲ . ಪಿಕ್ಚರಿನಲ್ಲೇ ನಿಮ್ಮನ್ನು ನೋಡೋಣ ಅಂದ್ರೆ- ಜಾಸ್ತಿ ಸಿನಿಮಾದಲ್ಲಿ ನಟಿಸೋದೇ ಇಲ್ಲ . ಹೀಗಿರುವಾಗ ಪತ್ರ ಬರೀದೇ ನಿಮ್ಜೊತೆ ಸುಖ-ದುಃಖ ಅಂತ ಮಾತಾಡೋದು ಹ್ಯಾಗೆ ?

  *

  ಮೇಡಂ, ನಿಮ್ಗೂ ಗೊತ್ತಲ್ಲ , ಸಿನಿಮಾದವರು ಅಂದ್ರೆ, ಸಿನಿಮಾದ ನಟನೆ ಅಂದ್ರೆ ನಮ್ಗೆ ಈಗಲೂ ಕೆಟ್ಟ ಕುತೂಹಲ. ಕ್ಯಾಮರಾ ಮುಂದೆ ನಿಂತ ನಟ-ನಟಿಯರು ಸುಮ್ನೇ ಅಭಿನಯಿಸುತ್ತಾರಾ ಅಥವಾ ಪ್ರತಿ ಪಾತ್ರವನ್ನು ‘ಅನುಭವಿಸ್ತಾರಾ’ ? ಇದು ಹಲವರ ಪ್ರಶ್ನೆ. ಹೇಳಿ ಮೇಡಂ- ಕಾಲೇಜಿನಲ್ಲಿದ್ದಾಗಲೇ ನಿಮ್ಮನ್ನ ಅಪ್ಸರೆ, ಸುಂದರಿ, ಹೀರೋಯಿನ್‌ ಅಂತೆಲ್ಲ ಕರೀತಿದ್ರಲ್ಲ , ಆಗ ನಾಚಿಕೆಯಾಗ್ತಿತ್ತಾ ?ಚಿತ್ರರಂಗ ಕುರಿತು ಕುತೂಹಲವಿತ್ತಾ ? 15ನೇ ವರ್ಷದಲ್ಲೇ ಚಿತ್ರರಂಗಕ್ಕೆ ಬಂದು ಬಿಟ್ರಲ್ಲ- ಆಗ ನಿಮ್ಮಲ್ಲೂ ಇಂಥ ಪ್ರಶ್ನೆಯಿತ್ತಾ ? ಕ್ಯಾಮರಾ ಅಂದಾಕ್ಷಣ ಹೆದರಿಕೆ ಆಗ್ತಿತ್ತಾ ? ಡ್ಯುಯೆಟ್‌ ಸಾಂಗ್‌ನಲ್ಲಿ ಡುಮ್ಮಣ್ಣನಂತಿದ್ದ ಕಲ್ಯಾಣ್‌ಕುಮಾರ್‌ ಜತೆ ನಿಂತಾಗ ಮುಜುಗರ ಆಯ್ತಾ ? ಒಳಗೊಳಗೇ ಖುಷಿ ಆಗ್ತಿತ್ತಾ ? ಮೈಸೂರು ಕಾಲೇಜಿಂದ ಬೆಂಗಳೂರಿಗೆ ಬಂದು ‘ಲವ್‌ ಇನ್‌ ಬೆಂಗಳೂರ್‌’ ಸಿನಿಮಾದಲ್ಲಿ ನಾಯಕಿ ಆದಾಗಲೇ- ಬೆಂಗಳೂರು ನಿಮ್ಗೆ ಇಷ್ಟವಾಗಿಬಿಡ್ತಾ ?

  ಕೇಳಿ, ಭಾರತಿ ಅಂದ್ರೆ ಸಾಕು- ಕನ್ನಡದ ಜನ ಖುಷಿಯಿಂದ ಹೇಳ್ತಾರೆ. ಭಾರತಿ ಅಂದ್ರೆ ಭಾರತಿ. ಭಾರತಿ ಅಂದ್ರೆ ಬಂಗಾರದ ಜಿಂಕೆ! ಭಾರತಿ ಇರೋದು ದೇವರ ಗುಡಿ! ಭಾರತಿ ನಡೆದಾಡಿದ ಜಾಗ ದೂರದ ಬೆಟ್ಟ ! ಭಾರತಿ ಜತೆ ಹೆಜ್ಜೆ ಹಾಕಿದಾತ ಬಂಗಾರದ ಮನುಷ್ಯ ! ಆಗ ಭಾರತಿ ಹಾಡಿದ್ದು - ಸಂಧ್ಯಾರಾಗ. ಫಳಫಳಫಳ, ಲಕಲಕಲಕ ಚೆಲುವಿನ ಭಾರತಿಗೆ ಸಾಥ್‌ ನೀಡಿದ್ದು- ಶ್ರೀಕೃಷ್ಣ ದೇವರಾಯ! ಭಾರತಿ ಅಂದ್ರೆ ಮನೆ ಬೆಳಗಿದ ಸೊಸೆ, ಭಾರತಿ ಅವರಿಗೂ ‘ಪ್ರೀತಿ ಪ್ರೇಮ ಪ್ರಣಯ’ ಇಷ್ಟ . ಭಾರತಿ ಇರೋ ತಾಣ ಶಾಂತಿ ನಿವಾಸ. ಭಾರತಿ ಪಾಲಿಗೆ- ಮನೆಯೇ ಮಂತ್ರಾಲಯ.

  ಇದು ಕನ್ನಡಿಗರ ಮಾತಾಯಿತು. ನೀವು ಹಿಂದಿಯಲ್ಲಿ , ಮಲಯಾಳಂನಲ್ಲಿ ಕೂಡ ನಟಿಸಿದಿರಲ್ಲ - ಅವರು ಏನಂತಾರೋ ಅಂದುಕೊಂಡೇ ಆ ಕಾಡಿಗೆ ತಿರುಗಿದರೆ- ಬಾಲಿವುಡ್‌ನ ಜನ ಪ್ರೀತಿಯಿಂದ ಹೇಳ್ತಾರೆ : ‘ಭಾರತಿ ಅಂದ್ರೆ ಶಿಸ್ತು , ಭಾರತಿ ಅಂದ್ರೆ ಅಚ್ಚುಕಟ್ಟು . ಭಾರತಿ ಅಂದ್ರೆ ಶ್ರದ್ಧೆ . ಹಿಂದಿ ಚಿತ್ರರಂಗದ ಮಂದಿಗೆ ಸಮಯದ ಪರಿಪಾಲನೆ ಹೇಳಿಕೊಟ್ಟದ್ದೇ ಭಾರತಿ. ಆಕೆ ಹಿಂದಿಯಲ್ಲಿ ನಟಿಸಲಿಲ್ಲ , ಪಾತ್ರವೇ ತಾವಾದರು, ಆಕೆಯಿಂದ ಹಿಂದಿ ಚಿತ್ರರಂಗಕ್ಕೆ ಹೆಸರು ಬಂತು. ಖ್ಯಾತಿ ಬಂತು. ಭಾರತಿಯವರನ್ನು ಕಂಡೇ ಹಿಂದಿಯ ಮಂದಿ ಸಮಯಪಾಲನೆಯ ಪಾಠ ಕಲಿತರು.... ಅದು ಸತ್ಯ, ಅದಷ್ಟೇ ಸತ್ಯ...’

  ‘ಹೇಳಲಿಕ್ಕೆ ಪಿಚ್ಚೆನಿಸುತ್ತೆ . ಆದ್ರೂ ಹೇಳ್ತಾ ಇದೀನಿ. ನೂರಾರು ಸಿನಿಮಾಗಳಲ್ಲಿ ನಟಿಸಿದೀನಿ ನಿಜ. ಆದ್ರೂ ನಂಗೆ ಛಾಲೆಂಜಿಂಗ್‌ ಅನಿಸುವಂಥ ಪಾತ್ರ ಈವರೆಗೂ ಸಿಗಲೇ ಇಲ್ಲ . ಪುಟ್ಟಣ್ಣ ಕಣಗಾಲರ ಋಣಮುಕ್ತಳು ನಂಗೆ ತಕ್ಕಮಟ್ಟಿಗೆ ಖುಷಿ ನೀಡಿತು. ಆನಂತರದ್ದೆಲ್ಲ ಸುಮ್ನೇ ಅಭಿನಯಿಸಿದ್ದು ಅಷ್ಟೇ....’ ಹಾಗಂತ ಅಂದ್ರಂತೆ ನೀವು. ಅದು ನಿಜವಾ? ನೀವು ಹಾಗಂತ ಹೇಳಲೇ ಇಲ್ವಾ .... ಉಹುಂ, ನಮ್ಮ ಪ್ರಶ್ನೆ ಅದಲ್ಲ ಮೇಡಂ, ಹೇಳಿ- ‘ಗಂಡೊಂದು ಹೆಣ್ಣಾರು’ ಸಿನಿಮಾದಲ್ಲಿ ಅದೇ ಮೊದಲ ಬಾರಿಗೆ ಆರು ಪಾತ್ರಗಳನ್ನು ನಿರ್ವಹಿಸಿದಿರಲ್ಲ , ಆಗ ಏನನ್ನಿಸ್ತು ? ‘ದೇವರ ಗುಡಿ’, ‘ನಾಗರ ಹೊಳೆ’, ‘ಮನೆ ಬೆಳಗಿದ ಸೊಸೆ’ ಸಿನಿಮಾದಲ್ಲಿ ನಟಿಸ್ತಾ ಇದ್ದಾಗಲೇ ವಿಷ್ಣುವರ್ಧನ್‌ರ ಪ್ರೇಮದ ಬಲೆಗೆ ಬಿದ್ದಿರಲ್ಲ - ಆಗ ಹೇಗನ್ನಿಸ್ತು ? ಅಂದ್ಹಾಗೆ ಮೊದಲು ಪ್ರೊಪೋಸ್‌ ಮಾಡಿದ್ದು ಯಾರು ಮೇಡಂ? ವಿಷ್ಣುವರ್ಧನ್‌ ಅವರಿಗೆ ನೀವು ಎರಡೇ ದಿನದಲ್ಲಿ (ಎರಡೇ ಕ್ಷಣದಲ್ಲಿ !) ಉತ್ತರ ಹೇಳಿಬಿಟ್ರಾ ಅಥವಾ ಎರಡು ತಿಂಗಳು ಕಾಯಿಸಿ......

  ಹೇಳಿದೆನಲ್ಲ , ನಮ್ಮದು ಕೆಟ್ಟ ಕುತೂಹಲ. ನಿಮ್ಮ ‘ಲವ್‌’ ಹೇಗೆ ಶುರುವಾಯ್ತು ಅಂತ ಒಂದಿಷ್ಟು ಹೇಳ್ತೀರಾ ?

  *

  ಮುಖ್ಯ ವಿಷಯ ಕೇಳೋದಿದೆ. ನೀವು ನಟಿ. ವಿಷ್ಣುವರ್ಧನ್‌ ಕೂಡ ನಟರು. ನಿಮ್ಮ ಸಿನಿಮಾಗಳ, ಪಾತ್ರಗಳ ಇಬ್ರೂ ಚರ್ಚಿಸ್ತೀರಾ? ತಂದೆಯ ಪಾತ್ರದಲ್ಲಿ ವಿಷ್ಣುವರ್ಧನ್‌ ಅದ್ಭುತವಾಗಿ ನಟಿಸ್ತಾರಲ್ಲ - ಆಗೆಲ್ಲ ವೆರಿಗುಡ್‌ ಕಣ್ರೀ ಅಂತೀರಾ? ಆ ಖುಷೀಲೇ ಕಣ್ತುಂಬಿಕೊಳ್ತೀರಾ? ಟೀವೀಲಿ ಆಗಾಗ್ಗೆ ನಿಮ್ಮದೇ ಅಭಿನಯದ ಹಳೇ ಸಿನಿಮಾ ಬರ್ತಾವಲ್ಲ - ಅದನ್ನ ನೋಡ್ತೀರಾ ? ‘ಬಂಗಾರದ ಮನುಷ್ಯ’ದ ಬಾಳ ಬಂಗಾರ ನೀನು... ಹಾಡು ಕೇಳಿದರೆ- ಈಗಲೂ ಅದೇ ಥರ ಕುಣಿಯಲು ಟ್ರೆೃ ಮಾಡ್ತೀರಾ? ಹಾಗೇ ನಿಮ್ಮ ಹಳೆಯ ಫೋಟೊ, ಹಳೆಯ ಆಟ, ಹಳೆಯ ನೆನಪುಗಳನ್ನೆಲ್ಲ ಸುತ್ತ ಹರಡಿಕೊಂಡು ‘ಸವಿ ನೆನಪುಗಳು ಬೇಕು, ಸವಿಯಲೀ ಬದುಕು’ ಅಂತ ಹಾಡಿಬಿಡ್ತೀರಾ ?

  ಅಲ್ಲ ಮೇಡಂ, ನೀವು ತುಂಬ ಸಂದರ್ಭದಲ್ಲಿ ಮನೇಲೇ ಇದ್ದಾಗ- ಮನೆ ಬೋರ್‌ ಅನ್ಸಲ್ವಾ ? ಒಂಥರಾ ಬೇಜಾರಾಗಲ್ವಾ ? ‘ದುಡ್ಡೇ ದೊಡ್ಡಪ್ಪ’ ಸಿನಿಮಾ ಟೀವೀಲಿ ಬಂದಾಗ- ನೀವು ಅಭಿನಯಿಸಿದ ಮೊದಲ ಪ್ರೇಮದ ದೃಶ್ಯ ನೆನಪಾಗಿ, ಒಂಥರಾ ಖುಷಿ ಖುಷಿ ಆಗಿಬಿಡಲ್ವಾ ?

  ಹೀಗೆ ಖುಷಿಯೆಂಬ ಖುಷಿ ಮೈ ಪೂರಾ ಮೆತ್ತಿಕೊಂಡ್ರೆ ನೀವು ಹ್ಯಾಗೆ ರಿಯಾಕ್ಟ್‌ ಮಾಡ್ತೀರಿ ಮೇಡಂ? ವಿಷ್ಣುವರ್ಧನ್‌ ಹಠ ಹಿಡಿದ್ರೆ- ಅವ್ರನ್ನ ಹ್ಯಾಗೆ ರಮಿಸ್ತೀರಿ.... ಅಯ್ಯಯ್ಯೋ, ಅದೆಲ್ಲ ಸಂಸಾರದ ಗುಟ್ಟು ಅಂತ ಮಾತು ಹಾರಿಸ್ಬೇಡಿ, ಹೇಳಿ ಮೇಡಂ.....

  ಪ್ರೀತಿ ಮತ್ತು ಪ್ರೀತಿಯಿಂದ-

  - ಎ.ಆರ್‌. ಮಣಿಕಾಂತ್‌
  armanikanth@yahoo.co.in

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X