ಅಂಬರೀಶ್ ದ್ವಿಶತಕ, ಶೃತಿ ಶತಕ !
ಅಂತೂ ಬಹುದಿನಗಳ ನಂತರ ಅಂಬರೀಷ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಅಂಬರೀಷ್ ಪೂರ್ಣಾವಧಿ ರಾಜಕಾರಣಿಯಾದರು ಎನ್ನುವ ಅಪಸ್ವರ ಸಣ್ಣಗೆ ಕೇಳತೊಡಗಿದಾಗಲೆಲ್ಲ ಅವರ ಚಿತ್ರವೊಂದು ಬಿಡುಗಡೆಯಾಗುವುದು ಮಾಮೂಲು. ಈ ಬಾರಿಯೂ ಅದೇ ಪುನರಾವರ್ತನೆ. ಅಂಬಿ ಅಭಿನಯದ 'ಗೌಡ್ರು" ಜು.16ರ ಶುಕ್ರವಾರ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ರಸಕವಳ. ಮಂಡ್ಯದಲ್ಲಂತೂ ಊರಹಬ್ಬದ ವಾತಾವರಣ.
'ಗೌಡ್ರು" ಅಂಬರೀಷ್ ಅಭಿನಯದ ಹತ್ತರಲ್ಲಿ ಹನ್ನೊಂದನೆಯ ಚಿತ್ರವಲ್ಲ ! ಅಂಬರೀಷ್ ಅಭಿನಯದ 200ನೇ ಚಿತ್ರ ಎನ್ನುವುದು 'ಗೌಡ್ರು" ಅಗ್ಗಳಿಕೆ. ಅಷ್ಟೇ ಅಲ್ಲ , ಈ ಚಿತ್ರದ ಮೂಲಕ ನಟಿ ಶೃತಿ ಕೂಡ ಸೆಂಚುರಿ ಬಾರಿಸಿದ್ದಾರೆ. ಕನ್ನಡ ಜನರ ಪ್ರೀತಿಗೆ ಪಾತ್ರರಾದ ಇಬ್ಬರು ಕಲಾವಿದರ ಶತಕ, ದ್ವಿಶತಕದ ದಾಖಲೆ ಒಂದೇ ಚಿತ್ರದ ಮೂಲಕ ಸಾಧ್ಯವಾಗುವುದಾದರೆ, ಚಿತ್ರವೊಂದಕ್ಕೆ ಅದಕ್ಕಿಂಥ ಹೆಚ್ಚುಗಾರಿಕೆ ಇನ್ನೇನು ಬೇಕು.
ಸಂದೇಶ್ ನಾಗರಾಜ್ 'ಗೌಡ್ರು" ಚಿತ್ರದ ನಿರ್ಮಾಪಕರು. ಅಂಬರೀಷ್ ಹಾಗೂ ಸಂದೇಶ್ ಗಳಸ್ಯಕಂಠಸ್ಯ. ಹಾಗಾಗಿ ಅಂಬಿಯ 200 ನೇ ಚಿತ್ರವನ್ನು ನಿರ್ಮಿಸುವ ಅವಕಾಶ ಸಂದೇಶ್‌ಗೆ ದೊರಕಿದೆ. ಈ ಅವಕಾಶವನ್ನು ಸಂದೇಶ್ ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ ಎನ್ನುತ್ತದೆ ಉದ್ಯಮ. ಅಂಬಿ ಇಮೇಜ್‌ಗೆ ತಕ್ಕಂತೆ 'ಗೌಡ್ರು" ಸಿದ್ಧಗೊಂಡಿದೆಯಂತೆ. Voice of the People ಎನ್ನುವುದು ಚಿತ್ರದ ಬಾಟಂಲೈನ್. ರೈತಾಪಿ ಮಂದಿಯ ಸುಕದುಕ್ಕಗಳಿಗೆ 'ಗೌಡ್ರು" ಸ್ಪಂದಿಸಿದ್ದಾರಂತೆ. ಹಳ್ಳಿಕಥೆಗಳ ನಿರ್ದೇಶಿಸುವಲ್ಲಿ ಪಳಗಿದ ಎಸ್.ಮಹೇಂದರ್ 'ಗೌಡ್ರು" ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಗೀತ ಹಂಸಲೇಖಾ ಅವರದು.
ಶೃತಿ ಶತಕ !
ಅಂಬರೀಷ್‌ರದು ದ್ವಿಶತಕದ ದಾಖಲೆಯಾದರೆ ನಟಿ ಶೃತಿಯದು ಶತಕದ ಗರಿಮೆ. 'ಗೌಡ್ರು" ಚಿತ್ರದ ಮೂಲಕ ಶೃತಿ ಶತಚಿತ್ರಗಳ ನಟಿ ಎನ್ನುವ ಅಪರೂಪದ ಮನ್ನಣೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, 'ಗೌಡ್ರು" ಚಿತ್ರದಲ್ಲಿ ಶೃತಿ ನಾಯಕಿಯಲ್ಲ ; ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ, ಅಷ್ಟೇ. ಚಿತ್ರದ ನಾಯಕಿ ಮೀನಾ. ಆದರೂ ಶೃತಿಗೆ ಬೇಜಾರೇನಿಲ್ಲ . ನೂರನೇ ಚಿತ್ರಕ್ಕೆ ಪತಿ ಮಹೇಂದರ್ ನಿರ್ದೇಶನ ಇರುವುದು ನನಗೆ ಹೆಮ್ಮೆ ತಂದಿದೆ ಎನ್ನುತ್ತಾರೆ ಶೃತಿ.
'ಗೌಡ್ರು" ಗೆಲ್ಲಲಿ. ಅಂಬಿ-ಶೃತಿ ಅಜೇಯ ದಾಖಲೆ ಮುಂದುವರಿಯಲಿ.


Click it and Unblock the Notifications