For Quick Alerts
  ALLOW NOTIFICATIONS  
  For Daily Alerts

  ‘ಸಿನಿಮಾ ನಿರ್ದೇಶನ, ಸಂಗೀತಕ್ಕೆ ಪಂಚವಾರ್ಷಿಕ ಯೋಜನೆ’

  By *ಚರಣ್‌ ಸಿ.ಎಸ್‌
  |

  'ಮುಂದಿನ ವರ್ಷ ಸಿನಿಮಾ ನಿರ್ದೇಶಿಸುವ ಇರಾದೆಯಿದೆ!
  ನಾನಾಗಿ ಬಯಸಿ ಬಂದ ಸಿನಿಮಾ ಕ್ಷೇತ್ರಕ್ಕೆ ಏನಾದರೂ ಒಳ್ಳೆಯ ಕೃತಿ ನೀಡಬೇಕೆಂಬ ಅದಮ್ಯ ಆಸೆಯೇ ಸಿನಿಮಾ ನಿರ್ದೇಶನಕ್ಕೆ ಇಂಬು ಕೊಟ್ಟಿದೆ. ಹಿಂದಿಯ ಖ್ಯಾತ ದಿಗ್ದರ್ಶಕ ಶಾಂತಾರಾಂ ರೀತಿಯಲ್ಲಿ ಹಾಗೂ ಪ್ರೇಕ್ಷಕರಿಗೆ ಸಮರ್ಥವಾಗಿ ಸಿನಿಮಾ ತಲುಪಿಸುತ್ತಿದ್ದ ಗುರುದತ್‌ರ ಸಮ್ಮಿಳಿತ ಶೈಲಿಯಲ್ಲಿ ಸ್ವತಃ ಚಿತ್ರವೊಂದನ್ನು ನಿರ್ದೇಶಿಸಬೇಕು. ಅದು ನನ್ನಾಸೆ."

  ಸಂಗೀತ ನಿರ್ದೇಶಕ ಹಂಸಲೇಖಾ ತಮ್ಮ ಸಿನಿಮಾ ನಿರ್ದೇಶನದ ಆಸೆಯನ್ನು ಹೊರಹಾಕಿದ್ದು- ಬೆಂಗಳೂರಿನ 'ರೇಡಿಯೋ ಸಿಟಿ"ಯ ಚೈತನ್ಯ ಹೆಗ್ಡೆ ಭಾನುವಾರ ಬೆಳಿಗ್ಗೆ "ಚೌಚೌ ಭಾತ್‌" ಕಾರ್ಯಕ್ರಮದಲ್ಲಿ ನಡೆಸಿ ಕೊಟ್ಟ ಸಮಗ್ರ ಸಂದರ್ಶನದಲ್ಲಿ . ಸಂಗೀತದ ಮೂಲಕ ಸಿನಿಮಾ ನಿರೂಪಿಸುವ ಬಯಕೆ ತಮ್ಮದು ಎಂದರು ಹಂಸಲೇಖ.

  ಸಿನಿಮಾ ರಂಗಕ್ಕೆ ಬರುವ ಮುಂಚೆ ಹಂಸಲೇಖ ಏನು ಮಾಡುತ್ತಿದ್ದರು? ಸಿನಿಮಾ ರಂಗಕ್ಕೆ ಬರಲು ಪ್ರೇರಣೆ ಏನು? ಸದ್ಯ ಯಾವ-ಯಾವ ಕಾರ್ಯಗಳಲ್ಲಿ ಹಂಸಲೇಖಾ ವ್ಯಸ್ತರು ?
  - ಎಲ್ಲವನ್ನೂ ಹಂಸಲೇಖಾ ಶೋತೃಗಳಿಗಾಗಿ ಬಿಚ್ಚಿಟ್ಟರು.

  ಎಂ.ಎ. ವಿದ್ಯಾರ್ಥಿ
  ಸದ್ಯ ತಾವು ಯಾವುದರಲ್ಲಿ ಬ್ಯುಸಿಯಾಗಿದ್ದೀರಿ ಅನ್ನುವ ಪ್ರಶ್ನೆಗೆ ಹಂಸಲೇಖ ಅತ್ಯುತ್ಸಾಹದಿಂದ ತಮ್ಮ ಎಂ.ಎ. ಓದಿನ ಬಗ್ಗೆ ಹೇಳಿಕೊಂಡರು. ತಮ್ಮ ಬಹಳ ದಿನಗಳದ್ದು ಹಾಗೂ ಇದನ್ನು ಈ ವರ್ಷದಲ್ಲಿ ಮುಗಿಸಲೇಬೇಕೆಂದು ನಿರ್ಧರಿಸಿದ್ದನ್ನು ತಿಳಿಸಿದರು. ಹುಡುಗರ ಜೊತೆ ಹುಡುಗನಾಗಿ ಟೀನೇಜಿನ ಹುರುಪಿನಲ್ಲಿ ತಮ್ಮ ನೆಚ್ಚಿನ ಕುಮಾರವ್ಯಾಸನ ಕೃತಿಗಳನ್ನು ಅಭ್ಯಾಸಮಾಡುವುದು ಬಹಳ ಒಳ್ಳೆಯ ಅನುಭವ ಎನ್ನುವುದನ್ನು ಒಂದೆರಡು ಘಟನೆಗಳ ಸಹಿತ ವರ್ಣಿಸಿದರು. ಎಂ.ಎ. ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಸಾಹಿತ್ಯಾತ್ಮಕ ಉತ್ತರಗಳನ್ನು ಬರೆದುದನ್ನು ವಿವರಿಸಿದ ಹಂಸಲೇಖ, ತಮ್ಮ ಉತ್ತರ ಪತ್ರಿಕೆ 'ರೋಲ್‌ಮಾಡೆಲ್‌ ಉತ್ತರ ಪತ್ರಿಕೆ " ಅನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಉತ್ತರಿಸಿದ ಸಂತೃಪ್ತಿಯಿದೆ ಎಂದರು.

  'ಪ್ರೇಮಲೋಕ"ದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನೆ ಮೂಡಿಸಿದ ಹೊಸತರಲ್ಲಿ ಸಿಕ್ಕ ಜನಪ್ರಿಯತೆ ತಮ್ಮ ಮುಂದಿನ ಚಿತ್ರಗಳ ಮೇಲೆ ಯಾವ ರೀತಿ ಪ್ರಭಾವ ಬೀರಿತು ಎನ್ನುವ ಪ್ರಶ್ನೆಗೆ, 'ಜನಪ್ರಿಯತೆಯ ಜೊತೆ ಜವಾಬ್ದಾರಿಯೂ ಹೆಗಲೇರಿತು. ತೆಂಡೂಲ್ಕರ್‌ಗೆ ಪ್ರತಿ ಮ್ಯಾಚಲ್ಲೂ ಸೆಂಚುರಿ ಹೊಡೆಯಲು ಯಾವ ರೀತಿ ಪ್ರೆಷರ್‌ ಇರುತ್ತೋ ಅದೇ ರೀತಿ ನನ್ನಿಂದಲೂ expectations ಇತ್ತು. ಮೊದಮೊದಲು ಆ ವಿಷಯದಲ್ಲಿ ಸ್ವಲ್ಪ ಭಯವಿತ್ತು . ಆನಂತರ ಅಭ್ಯಾಸವಾಯಿತು", ಎಂದರು.

  ಪ್ರೇಮಲೋಕದಿಂದ ಬಂದ ಜನಪ್ರಿಯತೆ ರಾತ್ರೋರಾತ್ರಿಯದಲ್ಲ ಎಂದ ಹಂಸಲೇಖ, ಇದಕ್ಕೂ ಮೊದಲು ತಾವೇ ಕಟ್ಟಿ ಬೆಳೆಸಿದ್ದ 'ವಿವೇಕರಂಗ" ಎಂಬ ನಾಟಕ ಕಂಪನಿಯ ಒಡನಾಟ ನೆನಪಿಸಿಕೊಂಡರು.

  'ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯ ಸಂಗಮದಂತಿದ್ದ ಆ ಕಂಪನಿಯ ನಾಟಕಗಳಿಗೆ ತಾವು ಸಂಯೋಜಿಸಿದ್ದ ಸಂಗೀತಕ್ಕೆ ಕರ್ನಾಟಕದ ಅನೇಕ ಭಾಗಗಳಲ್ಲಿ ಅಭಿಮಾನಿಗಳಿದ್ದರು. ಆ ಎಲ್ಲಾ ಅಭಿಮಾನಿಗಳು ರಂಗಗೀತೆಗಳ ಸಂಯೋಜಕ ಹಂಸಲೇಖರ 'ಪ್ರೇಮಲೋಕ"ದ ಸಂಗೀತಕ್ಕೆ ಓಟುಹಾಕಿದರು.

  'ಅದಕ್ಕೂ ಮೊದಲು ನಾನು ನನ್ನ ಅಣ್ಣ ಜಿ.ಬಾಲಕೃಷ್ಣರ (ನೀನಾ ಭಗವಂತಾ..ಖ್ಯಾತಿ) ಗಾನಶಾರದ ವಾದ್ಯವೃಂದದಲ್ಲಿ ಎಲೆಕ್ಟ್ರಿಕ್‌ ಮ್ಯಾಂಡೋಲಿನ್‌ ನುಡಿಸುತ್ತಿದ್ದೆ. ಅದೇ ಸಂದರ್ಭದಲ್ಲಿ ಎ.ಶಿವರಾಂ ಹಾಗೂ ದಾಸ್‌ ಅವರ ಬಳಿ ಕರ್ನಾಟಿಕ್‌ ಹಾಗೂ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದೆ. ನಂತರ ಜೋಸೆಫ್‌ ಬಳಿ ಪಾಶ್ಚಾತ್ಯ ಸಂಗೀತ ಹಾಗೂ ಸೆಬಾಸ್ಟಿಯನ್‌ ಬಳಿ ಅನೇಕ ವಾದ್ಯಗಳನ್ನು ನುಡಿಸುವುದನ್ನು ಕಲಿತೆ" ಎಂದು ಹಂಸಲೇಖ ತಮ್ಮ ನಾಲ್ವರು ಗುರುಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು.

  ಬ್ಯಾಲೆ ರೀತಿಯ ಸಂಗೀತ ಪ್ರಧಾನ ನಾಟಕಗಳಿಗೆ ಸಂಗೀತ ಸಂಯೋಜಿಸುವ ಬಯಕೆ ಹೊಂದಿದ್ದ ಹಂಸಲೇಖ, ಸಿನಿಮಾರಂಗಕ್ಕೆ ಬರಲು ಯಾರ ಪ್ರೇರಣೆ?
  ಹಂಸಲೇಖಾ ಫ್ಲಾಶ್‌ಬ್ಯಾಕ್‌ಗೆ ಜಾರಿದರು-
  'ನಮ್ಮ ನಾಟಕ ಕಂಪನಿ ಒಮ್ಮೆ ನಂಜನಗೂಡಿನಲ್ಲಿದ್ದಾಗ ಬೆಂಕಿಗೆ ಆಹುತಿಯಾಯಿತು. ಮುಂದೇನು ಅನ್ನುವ ಚಿಂತೆಯಲ್ಲಿದ್ದಾಗ ಕೆಲವರು ಸಿನಿಮಾರಂಗ ಸೇರು ಅಂದರು. 'ಸಿನಿಮಾ ಸೇರಿದರೆ ಮನರಂಜನೆಗೋಸ್ಕರ ಯಾರ್ಯಾರನ್ನೋ ಹೊಗಳಬೇಕಾಗುತ್ತದೆ, ಅದು ನನ್ನ ಕೈಲಾಗುವುದಿಲ್ಲ" ಅಂದಿದ್ದಕ್ಕೆ ಕೆಲವರು ನಿನ್ನ ಪ್ರತಿಭೆ ಹೊರಬರುವುದಕ್ಕೆ ಇಷ್ಟಾದರೂ ಹೊಂದಾಣಿಕೆ ಮಾಡಿಕೋ ಅಂದರು. ನಂತರ ಅವರೇ ನನ್ನನ್ನು ರವಿಚಂದ್ರನ್‌ಗೆ ಪರಿಚಯಿಸಿದರು. ಆಗ ನಾನು ರೈಟರ್‌ ಆಗಿ ಸಿನಿಮಾಕ್ಕೆ ಬಂದೆ."

  ರೈಟರ್‌ ಹಂಸಲೇಖ ಗಿಟಾರ್‌ ಹಿಡಿದದ್ದು
  'ಅದು ಕನ್ನಡ ಸಿನಿಮಾ ಸಂಗೀತದ ಮನ್ವಂತರ ಕಾಲ. ಆಗ ಇದ್ದ ಸುಮಾರು ಸಂಗೀತ ನಿರ್ದೇಶಕರಿಗೆ ವಯಸ್ಸಾಗಿತ್ತು ಹಾಗೂ ಸಿನಿಮಾ ರಂಗ ಹೊಸತನ ಬಯಸುತ್ತಿತ್ತು. ಈ ನಿಟ್ಟಿನಲ್ಲಿ ಏನಾದರೂ ಸಾಧಿಸಬಹುದು ಅಂದುಕೊಂಡೆ. ಹಾಗಂದುಕೊಂಡ ಕೂಡಲೇ ಪೆನ್‌ ಮುಚ್ಚಿಟ್ಟು ಗಿಟಾರ್‌ ಕೈಗೆತ್ತಿಕೊಂಡೆ.

  'ಬಂದ ಹೊಸತರಲ್ಲಿ ಹೊಸ ರೀತಿಯ ವಾದ್ಯಗೊಷ್ಠಿ ಪ್ರಾರಂಭಿಸಬೇಕಾಗಿ ಬಂತು. ಸುಮಾರು 450 ವಾದ್ಯಗಾರರನ್ನು ಹಾಕಿಕೊಂಡು 'ಸಂಸಂ" ಅನ್ನು ವ ತಂಡ ಕಟ್ಟಿದೆ. ಸುಮಾರು ವಾದ್ಯಗಾರರನ್ನು ಬೆಳೆಸಿದೆ. ಇವತ್ತು ಅವರು ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ."

  ಗಂಗರಾಜು ಹಂಸಲೇಖರಾದದ್ದು ಹೇಗೆ ?
  'ಲಾವಣಿ ನೀಲಕಂಠಪ್ಪನವರು ನನ್ನ ಗುರುಗಳು. ಎಲ್ಲರಿಗೂ ಅರ್ಥವಾಗುವಂತಹ ಆಡುಭಾಷೆಯಲ್ಲಿ ಸಾಹಿತ್ಯ ಬರೆಯುವಂತೆ ನನ್ನನ್ನು ಪ್ರೇರೇಪಿಸಿದವರು ಅವರೇ. ಅವರು ನನಗೆ ಸ್ವಾನ್‌ ಕಂಪನಿಯ ಪೆನ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಏಳನೇ ಕ್ಲಾಸಿನಲ್ಲಿದ್ದಾಗ ಶಾಲಾ ಉತ್ಸವಕ್ಕೆ ನಾನು 'ಬೆಳಕಿನ ಮನೆ" ಎಂಬ ನಾಟಕ ಬರೆದಾಗ ಕಾವ್ಯನಾಮ ಇಟ್ಟುಕೊಳ್ಳೋಣ ಅನ್ನಿಸಿತು. ಅದಕ್ಕೆ ಸ್ವಾನ್‌ ಪೆನ್‌ ಅನ್ನು ಕನ್ನಡದಲ್ಲಿ 'ಹಂಸಲೇಖನಿ" ಅಂತ ತರ್ಜುಮೆ ಮಾಡಿ ಅದನ್ನೇ ಕಾವ್ಯನಾಮವನ್ನಾಗಿಟ್ಟುಕೊಂಡೆ. ನನ್ನ ಹೆಡ್‌ಮಾಸ್ತರರು ಹಂಸಲೇಖನಿಯ ಕಡೆಯ ಅಕ್ಷರವನ್ನು ತೆಗೆದು ಹಾಕಿದ ಮೇಲೆ "ಹಂಸಲೇಖ" ಆದೆ.

  ಮಕ್ಕಳಿಗೆ ಜೀವನ ದರ್ಶನ ಮಾಡಿಸಲು ಸಂಗೀತ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿಕೊಳ್ಳಬಹುದೆಂದ ಹಂಸಲೇಖ, ಸಂಗೀತ ಒಂದು ಆಕರ್ಷಣೆ ಹಾಗೂ ಸಂಗೀತದ ಮುಖಾಂತರ ಹೇಳಿದ್ದನ್ನು ಚೆನ್ನಾಗಿ ನೆನಪಿಡಬಹುದಾದ್ದರಿಂದ ಮಕ್ಕಳಿಗೆ ಕಲಿಸಬೇಕಾದ್ದನ್ನು ಹಾಡಿನ ಮೂಲಕ ಸುಲಭವಾಗಿ ಕಲಿಸಬಹುದೆಂದರು. ಈ ವಿಷಯದಲ್ಲಿ ಹಿಂದಿನ ಹಾಗೂ ತಾವೂ ಸೇರಿದಂತೆ ಇಂದಿನ ಸಂಗೀತಗಾರರು ಮಕ್ಕಳ ಸಂಗೀತಕ್ಕೆ ಸಾಕಷ್ಟು ಗಮನನೀಡಿಲ್ಲವೆಂದೂ ವಿಷಾದಿಸಿದರು. ಜೊತೆಗೆ ಮಕ್ಕಳಿಗಾಗಿ ತಾವು ಸಂಯೋಜಿಸಿರುವ 'ಹಕ್ಕಿನ ಹಾಡು" ಆಲ್ಬಂ ಬಗ್ಗೆ ತಿಳಿಸಿದರು-'ಮಾಧ್ಯಮ್‌ ಎಂಬ ಸಂಸ್ಥೆಯಾಡಗೂಡಿ ಹಕ್ಕಿನ ಹಾಡನ್ನು ತಂದಿದ್ದೇನೆ. ಇದಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಬೇಕೆಂದುಕೊಂಡಿದ್ದೇವೆ.'

  250- ಇನ್ನೂ ಇದೆ
  ತಮ್ಮ 250ನೇ ಚಿತ್ರವಾದ 'ನಂಜುಂಡಿ" ಚಿತ್ರದ ವಿಶೇಷತೆಯ ಬಗ್ಗೆ ಮಾತನಾಡಿದ ಹಂಸಲೇಖ, ಇದರಲ್ಲಿನ ಒಂಭತ್ತು ಹಾಡುಗಳಿಗೂ ಲೈವ್‌ ಆರ್ಕೆಸ್ಟ್ರಾ ಬಳಸಿದ್ದೇನೆ ಹಾಗೂ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಿ ಹಳ್ಳಿಯ ಸೊಗಡು ಎದ್ದು ಕಾಣುವಂತೆ ಮಾಡಿದ್ದೇನೆ ಎಂದರು. 'ನಂಜುಂಡಿ" ಚಿತ್ರದ ಸಂಗೀತ ಒಂದು ಲ್ಯಾಂಡ್‌ ಮಾರ್ಕ್‌ ಆಗುವ ಬಗ್ಗೆಯೂ ಭರವಸೆಯಿತ್ತರು.

  ದಿನಕ್ಕೆ 18 ಗಂಟೆ ದುಡಿವ ಹಂಸಲೇಖರಿಗೆ ಬಿಡುವು ದೊರೆತರೆ ಹೇಗೆ?
  'ಬಿಡುವಿನಲ್ಲಿ ನಗುತ, ನಗಿಸುತ ಇರುವುದೇ ನನಗೆ ಇಷ್ಟ . ಅಪಹಾಸ್ಯವಿಲ್ಲದ ಹಾಸ್ಯವನ್ನು ಹಂಚಿಕೊಳ್ಳಲು ನನಗೆ ಅನೇಕ ಗೆಳೆಯರಿದ್ದಾರೆ. ನಾನು ಲೈವ್ಲಿಯಾಗಿರಲು ಇದು ಸಹಕಾರಿಯಾಗಿದೆ."

  'ಜೀವನದ ಆಗು-ಹೋಗುಗಳನ್ನು ಅನುಭವಿಸಿ ಅದರ ಸಾರವನ್ನು ಸಂಗೀತದಲ್ಲಿ ಅಳವಡಿಸಿಕೊಂಡು ಅದನ್ನು (ಸಿನಿಮಾ) ದೃಶ್ಯಗಳಿಗೆ ಸರಿಯಾಗಿ ಅಳವಡಿಸಿದರೆ ಯಶಸ್ಸು ಗ್ಯಾರಂಟಿ. ಮುಂದಿನ ಐದು ವರ್ಷಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸಂಗೀತ ನೀಡುವ ಆಸೆಯಿದೆ. ಅದಕ್ಕಾಗಿಯೇ ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ . ಆಯ್ಕೆಯಲ್ಲಿ ಚ್ಯೂಸಿಯಾಗಿದ್ದೇನೆ" ಎಂದು ಹಂಸಲೇಖಾ ತಮ್ಮ ಪಂಚವಾರ್ಷಿಕ ಯೋಜನೆಯ ಬಗ್ಗೆ ಹೇಳಿಕೊಂಡರು.

  ಹಂಸಲೇಖಾ ಅವರ ಯೋಜನೆಗೆ ಸರ್ಕಾರಿ ಪಂಚವಾರ್ಷಿಕ ಯೋಜನೆಗಳ ಗತಿ ಬರದಿರಲಿ. ಹಾಗೆಂದು ಹಾರೈಸೋಣ.

  English summary
  An interview with kannada film music director Hamsalekha

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X