For Quick Alerts
  ALLOW NOTIFICATIONS  
  For Daily Alerts

  ‘ಥ್ಯಾಂಕ್ಯೂ, ಮಿಸ್ಟರ್‌ ನಾಗತೀಹಳ್ಳಿ’

  By Staff
  |
  • ನಾಡಿಗೇರ್‌ ಚೇತನ್‌
   ಚಿತ್ರಗಳು- ಮುಕುಂದ ತೇಜಸ್ವಿ

  ಯಾರಾದರೂ ಒಳ್ಳೆಯ ಚಿತ್ರ ಮಾಡಿದಾಗ ಅವರನ್ನು ಅಸೂಯೆಯಿಲ್ಲದೆ ಅಭಿನಂದಿಸುವ ನಾಗತಿಹಳ್ಳಿ ಚಂದ್ರಶೇಖರ್‌ ಪ್ರವೃತ್ತಿಯನ್ನು ಸಾಹಿತಿ ಡಾ. ಯು. ಆರ್‌. ಅನಂತ ಮೂರ್ತಿ ಮುಕ್ತವಾಗಿ ಪ್ರಶಂಸಿಸಿದ್ದಾರೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ನಾಗತಿ ಹಳ್ಳಿಯವರ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಯ ಹುಟ್ಟುಹಬ್ಬ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

  ವೇದಿಕೆಯ ಹುಟ್ಟು ಹಬ್ಬದ ಅಂಗವಾಗಿ ನಾಗತಿಹಳ್ಳಿ ಚಲನಚಿತ್ರ ಕ್ಷೇತ್ರದಲ್ಲಿ ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಳಿಸಿದ ಕನ್ನಡಿಗರನು ್ನ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಅನಂತ ಮೂರ್ತಿ ಚಲನ ಚಿತ್ರಗಳ ನಿರ್ಮಾಣದ ಬಗ್ಗೆ ಒಂದೆರಡು ಹೊಸ ಪರಿಕಲ್ಪನೆಗಳನ್ನು ಮುಂದಿಟ್ಟರು. ಅವರ ಪ್ರಕಾರ ಚಿತ್ರದಲ್ಲಿನ ಪ್ರಾದೇಶಿಕತೆಯೇ ಅದರ ಮಹತ್ವವನ್ನು ಹೆಚ್ಚಿಸುತ್ತದೆ. ಅದು ಇಂಗ್ಲಿಷ್‌ ಆಗಿರಲಿ ಅಥವಾ ಬೇರೆ ಯಾವುದೇ ಭಾಷೆಯದಾಗಿರಲಿ, ಪ್ರಾದೇಶಿಕತೆಯಿಂದ ಅದು ತನ್ನ ಮೌಲ್ಯವನ್ನು ವೃದ್ಧಿಸಿಕೊಳ್ಳುತ್ತದೆ. ಮೊದಲು ರೀಜನಲ್‌, ಆಮೇಲೆ ಇಂಡಿನಯನ್‌, ನಂತರ ಏಷ್ಯನ್‌ ಎನ್ನುತ್ತಾ ಇತ್ತೀಚೆಗೆ ಪೂನಾದಲ್ಲಿ ನಡೆದ ಏಷ್ಯನ್‌ ಸಿನೆಮಾ ಉತ್ಸವವನ್ನು ಉದಾಹರಿಸಿದರು. ಯುವ ಜನರು ಸಿನೆಮಾ ತೆಗೆಯುವಾಗ ಈ ದೃಷ್ಟಿಯನ್ನಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

  ಸಿನೆಮಾದಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದವರು ಚಂದ್ರಶೇಖರ ಕಂಬಾರ. ಅವರ ಮಾತಿನಂತೆ - ಸಿನಿಮಾ ಮಾಧ್ಯಮ 3 ಭಾಗ ಯಂತ್ರ, ಒಂದು ಭಾಗ ಮಾತ್ರ ಕಲೆ. ಹಾಲಿವುಡ್‌ ಚಿತ್ರಗಳಲ್ಲಿ ಯಾಂತ್ರಿಕತೆಗೇ ಹೆಚ್ಚು ಮಹತ್ವ. ಆದರೆ ಭಾರತೀಯ ಚಿತ್ರಗಳು ಯಾವತ್ತೂ ಮಾನವೀಯ ಮೌಲ್ಯಗಳ ಸುತ್ತವೇ ಸುತ್ತುತ್ತಿರುತ್ತವೆ. ಯಂತ್ರವನ್ನು ಗ್ಲೋರಿಫೈ ಮಾಡಿದಾಗ ಮನುಷ್ಯ ಸಂಬಂಧಕ್ಕೆ ಮಹತ್ವ ಇರಲ್ಲ. ಪ್ರಾದೇಶಿಕತೆಯನ್ನು ರೂಢಿಸಿಕೊಳ್ಳುವ ಮೂಲಕ ಪ್ರಪಂಚಕ್ಕೆ ಭಿನ್ನವಾದ ಸಂದೇಶ ಕೊಡಬಹುದು. ಯಾವುದು ಹಾಲಿವುಡ್‌ ಚಿತ್ರಗಳಿಗೆ ನೆನಪಿಲ್ಲವೋ, ಅದನ್ನು ನಾವು ಅವರಿಗೆ ನೆನಪು ಮಾಡಿಕೊಡಬೇಕು. ನಮಗೆ ಅವರ ಪ್ರಶಸ್ತಿ ಬೇಕಿಲ್ಲ. ನಮ್ಮವರೇ ನಮಗೆ ನೀಡುವ ಪ್ರಶಸ್ತಿ ಶ್ರೇಷ್ಠ ಎಂದು ಕಂಬಾರರು ಹೇಳಿದರು.

  ನನ್ನ ಅದೃಷ್ಟದಿಂದ ಅವರಿಗೆ ಪ್ರಶಸ್ತಿ ಬಂದಿದೆ ಎಂದವರು ಮುಖ್ಯಮಂತ್ರಿ ಚಂದ್ರು. ಯಾಕಂದರೆ ಪ್ರಶಸ್ತಿ ವಿಜೇತ ನಾಲ್ವರ ಜತೆಗೂ ಅವರು ಕೆಲಸ ಮಾಡಿದವರು. ಜೊತೆಗಿದ್ದವರು ಎತ್ತರಕ್ಕೆ ಏರುವುದನ್ನು ನೋಡುವ ಖುಷಿ ಲಭಿಸಿದ್ದಕ್ಕೆ ಮುಖ್ಯಮಂತ್ರಿ ಹರ್ಷ ಪಟ್ಟರು. ಅಲ್ಲದೆ ಪ್ರಶಸ್ತಿ ಪಡೆದ 4 ಜನರ ಹಿನ್ನೆಲೆ ರಂಗಭೂಮಿ. ಆದ್ದರಿಂದ ಇತ್ತೀಚೆಗೆ ಮೂಲೆಗುಂಪಾಗುತ್ತಿರುವ ರಂಗಭೂಮಿಯ ಕಡೆಗೆ ಗಮನ ಹರಿಸುವಂತೆ ಚಂದ್ರು ಮನವಿ ಮಾಡಿಕೊಂಡರು.

  ಪ್ರಶಸ್ತಿ ಸ್ವೀಕರಿಸಿದ ಪ್ರಕಾಶ್‌ ಬೆಳವಾಡಿ ತಾವು ಸ್ಟಂಬಲ್‌ ಚಿತ್ರಮಾಡಿದಾಗ ನಾಗತಿ ಹಳ್ಳಿ ನೀಡಿದ ಪ್ರೋತ್ಸಾಹವನ್ನು ನೆನೆದು, ಕೃತಜ್ಞತೆ ಸಲ್ಲಿಸಿದರು. ಮೌನಿ ಚಿತ್ರ ನಿರ್ದೇಶಕ ಲಿಂಗದೇವರು ಚಿತ್ರವನ್ನು ನೋಡುವಂತೆ ಮನವಿ ಮಾಡಿಕೊಂಡರೆ, ನಾಗಾಭರಣರೂ ಅಭಿವ್ಯಕ್ತಿ ವೇದಿಕೆಗೆ ಥ್ಯಾಂಕ್ಸ್‌ ಹೇಳಿದರು.

  ತವರಿನಲ್ಲಿ ಪ್ರಶಸ್ತಿ ಪಡೆದ ಪ್ರಕಾಶ್‌ ರೈ ತಮ್ಮ ಬೆಳವಣಿಗೆಗೆ ಕಾರಣರಾದ ಬೆಂಗಳೂರಿಗರನ್ನು, ನಿರ್ದೇಶಕರು, ಸಾಹಿತಿಗಳನ್ನು ಸ್ಮರಿಸಿಕೊಂಡರು. ನಾಗತಿಹಳ್ಳಿ ಚಂದ್ರಶೇಖರ್‌ ಅವರ ವೆಬ್‌ಸೈಟ್‌ http://www.nagathihallichandru.com/ ನ್ನು ಕ್ಲಿಕ್ಕಿಸಿ ಪ್ರಕಾಶ್‌ ರೈ ಉದ್ಘಾಟನೆ ಮಾಡಿದರು. ಆಕರ್ಷಕ ಮಾತಿನ ರಿಚರ್ಡ್‌ ಲೂಯಿಸ್‌ ಕಾರ್ಯಕ್ರಮ ನಿರೂಪಿಸಿದರು. ನಾಗತಿ ಹಳ್ಳಿ ಬದುಕಿನಲ್ಲಿ ಆಗಸ್ಟ್‌ 15 ಸ್ವಾತಂತ್ರ್ಯ ಹಬ್ಬದ ಸಂಭ್ರಮವಷ್ಟೇ ಅಲ್ಲ. ಆ ದಿನ ಅವರಿಗೆ ಬರ್ತ್‌ಡೇ ಮತ್ತು ಮದುವೆ ಆ್ಯನಿವರ್ಸರಿಯ ಸಡಗರ. ಈ ಬಾರಿ ವೇದಿಕೆಯ ಹುಟ್ಟು ಹಬ್ಬ ಆಚರಿಸಿ ಸಂತಸದ ಮೂರು ಕಾರಣಗಳನ್ನು ಅರ್ಥಪೂರ್ಣವಾಗಿ ಆಚರಿಸಿದರು.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X