»   » ‘ಅಮೃತಧಾರೆ’ ಧ್ವನಿಸುರುಳಿ ಬಿಡುಗಡೆ

‘ಅಮೃತಧಾರೆ’ ಧ್ವನಿಸುರುಳಿ ಬಿಡುಗಡೆ

Posted By:
Subscribe to Filmibeat Kannada
  • ನಮ್ಮ ವರದಿಗಾರರಿಂದ
‘ಅಮೃತಧಾರೆ’ ಚಿತ್ರದ ಧ್ವನಿ ಸುರುಳಿ ಮತ್ತು ಸಿಡಿ ಸೋಮವಾರ ಬಿಡುಗಡೆಗೊಂಡವು. ಜಯನಗರ ಎಂಟನೇ ಬ್ಲಾಕ್‌ನಲ್ಲಿರುವ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಅಭಿವ್ಯಕ್ತಿ ಮತ್ತು ಭಾವನಾ ಪ್ರಕಾಶನಗಳ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಧ್ವನಿ ಸುರುಳಿ ಮತ್ತು ಸಿ.ಡಿ.ಗಳನ್ನು ನಟ ರಮೇಶ್‌ ಬಿಡುಗಡೆ ಮಾಡಿದರು.

ಆಗಸ್ಟ್‌ 15 ಸ್ವಾತಂತ್ರ್ಯೋತ್ಸವದ ದಿನ, ನಾಗತಿಹಳ್ಳಿ ಚಂದ್ರಶೇಖರ್‌ ಅವರ ಜನ್ಮದಿನವೂ ಮತ್ತು ವಿವಾಹದಿನವೂ ಹೌದು. ಹಾಗಾಗಿ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಮಹತ್ವ ಬಂದಿದ್ದು ಸಹಜವಾಗಿತ್ತು. ಧ್ವನಿ ಸುರುಳಿ ಬಿಡುಗಡೆಯ ರೀತಿ ಮಾತ್ರ ವಿಭಿನ್ನ ಮತ್ತು ವಿಶಿಷ್ಟ. ಚಿತ್ರದ ಐದು ಹಾಡುಗಳನ್ನು ಕೇಳುವ ಅವಕಾಶ ಸಹಾ ಅಲ್ಲಿತ್ತು.

ಕಲಾಕ್ಷೇತ್ರದ ವೇದಿಕೆಯ ಮೇಲಿದ್ದ ಪುಟ್ಟ ಪರದೆಯಲ್ಲಿ ಮೂಡಿ ಬಂದ ಹಾಡುಗಳನ್ನು ಕೇಳಿ ನೆರೆದಿದ್ದವರು ಸಂತಸದಿಂದ ಕೇಕೆ ಹಾಕಿದರು. ‘ಭೂಮಿಯೇ ಹಾಸಿಗೆ...’ ಎನ್ನುವ ಆಧುನಿಕ ಸುಪ್ರಭಾತ, ‘ಮನೆ ಕಟ್ಟಿ ನೋಡು...’ ಎನ್ನುವ ಮಧ್ಯಮವರ್ಗದವರ ಪಾಡು, ‘ಅಮೃತಧಾರೆ...’ ಎಂಬ ಗೀತೆಗಳು ಖುಷಿ ನೀಡುವಂತಿವೆ.

ನಾಗತಿಹಳ್ಳಿಚಂದ್ರಶೇಖರ್‌ ಅವರ ಸಾಹಿತ್ಯ-ಸಾಂಸ್ಕೃತಿಕ ಪ್ರಜ್ಞೆ ಹಾಡುಗಳಲ್ಲಿ ಪದರಪದರವಾಗಿ ಮೂಡಿಬರುತ್ತಿತ್ತು. ಜನಪದ ಶೈಲಿಯಲ್ಲಿ, ಆಧ್ಯಾತ್ಮಿಕ ಶೈಲಿಯಲ್ಲಿ, ಪಾಪ್‌ ಶೈಲಿಯಲ್ಲಿ ಭಾವಗೀತೆಯ ಶೈಲಿಯಲ್ಲಿ ಹಾಡುಗಳನ್ನು ಚಿತ್ರದಲ್ಲಿ ಚಿತ್ರಿಸಿದ್ದಾರೆ. ಇವುಗಳಿಗೆ ಸ್ವಲ್ಪ ಆಧುನಿಕತೆಯ ಲೇಪನ ಮಾಡಿ, ತಮ್ಮ ಶೈಲಿಯನ್ನು ನೆನಪುಮಾಡಿದ್ದಾರೆ.

ಸಮಾರಂಭದಲ್ಲಿ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಶೇಷಾದ್ರಿ, ನಟಿ ತಾರಾ, ರವಿ ಬೆಳಗೆರೆ ಮತ್ತಿತರರು ಹಾಜರಿದ್ದರು.

ಎಂದು ತೆರೆಗೆ ? : ಯುವ ಪ್ರೇಮಿಗಳ-ದಂಪತಿಗಳ ಕುರಿತ ಸೂಕ್ಷ್ಮ ಕತೆ ಹೊಂದಿರುವ ಈ ಚಿತ್ರದಲ್ಲಿ ನಾಗತೀಹಳ್ಳಿ ನಿರ್ದೇಶಕರು ಮಾತ್ರವಲ್ಲ ನಿರ್ಮಾಪಕರು ಹೌದು. ನಟ ರಮೇಶ್‌ಅವರ ಮೂಲ ಪರಿಕಲ್ಪನೆಯನ್ನು ನಾಗತಿಹಳ್ಳಿ ಚಿತ್ರಪಟವನ್ನಾಗಿ ಮಾಡಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಚಿತ್ರದಲ್ಲಿದ್ದಾರೆ. ಅಮೃತಧಾರೆಯ ಸಿಂಚನಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada