twitter
    For Quick Alerts
    ALLOW NOTIFICATIONS  
    For Daily Alerts

    ಬಾಬಾ ಬಂದ ಬಾಬಾ : ಭಕುತರಿಗೆ ಸಡಗರದ ಹಬ್ಬ

    By *ದಟ್ಸ್‌ಕನ್ನಡ ಬ್ಯೂರೊ
    |

    Rajnikathಮೋಡ ಮುಸುಕಿದ ವಾತಾವರಣ. ತುಂತುರು ಮಳೆ. ನೆಲಮಟ್ಟ ಬೀಸುವ ಗಾಳಿ... 'ಬಾಬಾ' ಭಕ್ತರ ಉತ್ಸಾಹಕ್ಕೆ ಯಾವುದೂ ಅಡ್ಡಿಯಾಗಿಲ್ಲ . 'ಬಾಬಾ' ದರ್ಶನಕ್ಕಾಗಿ ನೂಕು ನುಗ್ಗಲು. ದರ್ಶನ ಸಿಕ್ಕವರ ಮೊಗದಲ್ಲಿ ಜೀವನ ಸಾರ್ಥಕವಾದಂಥ ಧನ್ಯತೆ. ದರ್ಶನ ಭಾಗ್ಯ ವಂಚಿತರಾದವರ ಮೊಗದಲ್ಲಿ ಮಡುಗಟ್ಟಿದ ಹತಾಶೆ.

    ಇದು ಸಾಯಿ ಭಕ್ತರ ಉತ್ಸಾಹ ದುಮ್ಮಾನವಲ್ಲ - ರಜನಿ'ಬಾಬಾ' ಭಕುತರ ಕತೆ.

    ಆಗಸ್ಟ್‌ 15 ರ (ಗುರುವಾರ) ಸ್ವಾತಂತ್ರ್ಯ ದಿನಾಚರಣೆಯಂದು ತಮಿಳು ಚಿತ್ರರಂಗದ ಜನಪ್ರಿಯ ನಟ ಸ್ಟೈಲ್‌ಕಿಂಗ್‌ ರಜನಿಕಾಂತ್‌ ಅಭಿನಯದ ಬಹು ನಿರೀಕ್ಷೆಯ ಚಿತ್ರ 'ಬಾಬಾ' ತೆರೆಕಂಡಿದೆ. ತಮಿಳುನಾಡು ಹಾಗೂ ಬೆಂಗಳೂರಲ್ಲಿ ಏಕ ಕಾಲದಲ್ಲಿ ತೆರೆಕಂಡಿರುವ ಈ ತಮಿಳುಚಿತ್ರ ರಜನಿ ಅಭಿಮಾನಿಗಳಲ್ಲಿ ಉತ್ಸಾಹದ ಸಂಚಲನೆ ಉಂಟುಮಾಡಿದೆ.

    ಬೆಂಗಳೂರಲ್ಲೇ ನೋಡಿ : 'ಬಾಬಾ' ಬಿಡುಗಡೆಯಾದ ಹತ್ತೂ ಚಿತ್ರಮಂದಿರಗಳ ಮುಂದೆ ಜನ ಜಾತ್ರೆ. ಟಿಕೇಟಿಗಾಗಿ ರಾತ್ರಿಯಿಡೀ ಥಿಯೇಟರ್‌ ಕೌಂಟರ್‌ಗಳ ಬಳಿ ಜಾಗರಣೆ ಮಾಡಿದ ಭಕುತರೇ ಹೆಚ್ಚು . ಇಷ್ಟಾಗಿಯೂ ಟಿಕೆಟ್‌ ಸಿಗದೆ ನಿರಾಶರಾದವರ ಸಂಖ್ಯೆಯೇ ದೊಡ್ಡದು. ಎಲ್ಲ ಥಿಯೇಟರ್‌ಗಳಲ್ಲೂ ಮುಂಗಡ ಬುಕ್ಕಿಂಗ್‌. ಆದರೆ, ಅರ್ಧಂಬರ್ಧ ಟಿಕೇಟ್‌ಗಳನ್ನು ಥಿಯೇಟರ್‌ನವರೇ ಬ್ಲಾಕ್‌ ಮಾರ್ಕೆಟ್‌ಗೆ ಬಿಟ್ಟಿದ್ದಾರೆ ಎನ್ನುವ ಆರೋಪ ಅಭಿಮಾನಿಗಳದು.

    ಅಭಿಮಾನಿ ಸಂಘಗಳ ಪದಾಧಿಕಾರಿಗಳು ಸಂಘದ ಟಕೆಟ್‌ ಒದಗಿಸಲಾಗದೆ ಸದಸ್ಯರ ಕೆಂಗಣ್ಣಿಗೆ ತುತ್ತಾದ ಪ್ರಸಂಗಗಳೂ ನಡೆದವು. ಥಿಯೇಟರ್‌ ಆಡಳಿತ ವರ್ಗದ ವಿರುದ್ಧವೂ ಧಿಕ್ಕಾರ ಮೊಳಗಿತು. ಅಹಿತಕರ ಘಟನೆಗಳನ್ನು ನಿರೀಕ್ಷಿಸಿದ್ದ ಪೊಲೀಸ್‌ ಇಲಾಖೆ, ಥಿಯೇಟರ್‌ ಬಳಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಎಲ್ಲೂ ಶಾಂತಿ ಕದಡಲಿಲ್ಲ.

    'ಬಾಬಾ' ಕೃಪೆಗೆ ಸಂಪೂರ್ಣ ರೀತಿಯಲ್ಲಿ ಪಾತ್ರರಾದವರೆಂದರೆ ಬ್ಲಾಕ್‌ ಟಿಕೇಟ್‌ ವಾಲಾಗಳು. ಬಾಲ್ಕನಿ ಟಿಕೇಟ್‌ 1200 ರುಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತು. ಉಳಿದ ಟಿಕೇಟ್‌ಗಳು ಕೂಡ 500-800 ರುಪಾಯಿಗೆ ಬಿಕರಿಯಾದವು.

    ತಮಿಳರು ಮಾತ್ರವಲ್ಲ, ಕನ್ನಡ ಚಿತ್ರರಸಿಕರೂ ಕೂಡ 'ಬಾಬಾ' ದರ್ಶನಕ್ಕೆ ಮುಗಿ ಬಿದ್ದದ್ದು ವಿಶೇಷ. ಇತ್ತೀಚೆಗೆ ನಡೆದ 'ಅಪ್ಪು' ಚಿತ್ರದ ಶತದಿನ ಸಮಾರಂಭಕ್ಕೆ ಆಗಮಿಸಿದ್ದ ರಜನಿಕಾಂತ್‌ ಬೆಂಗಳೂರಿನಲ್ಲಿ ದೊಡ್ಡ ರೀತಿಯ ಪ್ರಚಾರವನ್ನೇ ಪಡೆದದ್ದು ಚಿತ್ರಕ್ಕೆ ಸಹಕಾರಿಯಾಗಿದೆ. ರಜನಿಕಾಂತ್‌ ರಾಜಕೀಯ ಪ್ರವೇಶಕ್ಕೆ 'ಬಾಬಾ' ಚಿತ್ರ ಪೂರ್ವ ವೇದಿಕೆ ಎನ್ನುವ ವದಂತಿಗಳು ಕೂಡ ಅಭಿಮಾನಿಗಳ ಕುತೂಹಲ ಕೆರಳಿಸಿವೆ.

    ಕೆಲವು ದಿನಗಳ ಹಿಂದೆ ಬಿಡುಗಡೆಯಾದ ತೆಲುಗಿನ 'ಇಂದ್ರ' ಚಿತ್ರ ಕೂಡ ಕರ್ನಾಟಕದಲ್ಲಿ ಸಂಚಲನೆ ಎಬ್ಬಿಸಿತ್ತು . ತೆಲುಗು-ತಮಿಳು ಚಿತ್ರಗಳು ಈ ರೀತಿ ಸದ್ದು ಮಾಡುತ್ತಿದ್ದರೂ ಕನ್ನಡ ಚಿತ್ರಗಳು ಮಕಾಡೆಯಾಗಿಯೇ ಇವೆ. ಜಯನಗರದ ಪುಟ್ಟಣ್ಣ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವ ಪಿ.ಶೇಷಾದ್ರಿ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ 'ಅತಿಥಿ' ಚಿತ್ರಕ್ಕೆ ಪ್ರೇಕ್ಷಕರೇ ಇಲ್ಲ.

    ಕರ್ನಾಟಕದಲ್ಲಿ ಕನ್ನಡಿಗರು ಅಲ್ಪ ಸಂಖ್ಯಾತರು ಎನ್ನುವುದಕ್ಕೆ ಆತಂಕಕ್ಕೆ ಇದು ಸಮರ್ಥನೆಯಾ?

    English summary
    The muchawaited Superstar Rajnikath's film 'Baba runs to packed houses in as many as 10 theatres in Bangalore
    Wednesday, July 10, 2013, 15:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X