»   » ಗರ್ವಭಂಗದ ಜೋಡಿ ಮತ್ತೆ ಜೊತೆಯಾದಾಗ ?

ಗರ್ವಭಂಗದ ಜೋಡಿ ಮತ್ತೆ ಜೊತೆಯಾದಾಗ ?

Posted By: Super
Subscribe to Filmibeat Kannada

'ಅನಂತನಾಗ್‌ ಜೊತೆ ನಟಿಸುವುದೆಂದರೆ ನನಗೆ ಯಾವಾಗಲೂ ಖುಷಿ . ಈ ಚಿತ್ರದಲ್ಲಿ ಅನಂತ್‌ ಪತ್ನಿಯಾಗಿ ನಟಿಸುತ್ತಿದ್ದೇನೆ. ತುಂಬಾ ಚಾಲೆಂಜಿಂಗ್‌ ಪಾತ್ರ. ಅದರೆ ಅನಂತ್‌ ಪಾತ್ರಕ್ಕೇನೆ ಸ್ವಲ್ಪ ತೂಕ ಜಾಸ್ತಿ ..'

ತುಂಬಾ ದಿನಗಳ ನಂತರ ಬೆಂಗಳೂರಿಗೆ ಬಂದ ನಟಿ ಸುಹಾಸಿನಿ ಮಾತು ಶುರು ಮಾಡಿದ್ದೇ ಹೀಗೆ. ತುಸು ಗಂಭೀರ, ತುಸು ಚೇಷ್ಟೆ. ಸುಹಾಸಿನಿ ಮತ್ತೆ ಕನ್ನಡ ಸಿನಿಮಾಕ್ಕೆ ಬಂದರು ಎನ್ನುವಂತಿಲ್ಲ. ಏಕೆಂದರೆ ಅದು ಇಂಗ್ಲಿಷ್‌ ಸಿನಿಮಾ. ಕನ್ನಡ ಕಲಾವಿದರು ನಿರ್ಮಿಸುತ್ತಿರುವ ಇಂಗ್ಲಿಷ್‌ ಸಿನಿಮಾ. ಸಿನಿಮಾ ಇಂಗ್ಲಿಷ್‌ ಭಾಷೆಯಲ್ಲಿದ್ದರೂ- ಸಿನಿಮಾದಲ್ಲಿನ ಸಂಸ್ಕೃತಿ ಸೊಗಡು ಮಾತ್ರ ನೂರಕ್ಕೆ ನೂರರಷ್ಟು ಕನ್ನಡದ್ದು ಎನ್ನುವುದು ನಿರ್ದೇಶಕರ ಪ್ರಾಮಿಸ್ಸು !

ಪ್ರಕಾಶ್‌ ಬೆಳವಾಡಿ ಗೊತ್ತಲ್ಲ ?
ತಕ್ಷಣಕ್ಕೆ ನೆನಪಾಗುವುದು ಕಷ್ಟ. ಪತ್ರಕರ್ತ, ರಂಗಕರ್ಮಿ, ಕಿರುತೆರೆ ಧಾರಾವಾಹಿ ನಿರ್ದೇಶಕ ಮುಂತಾಗಿ ಬಹುಮುಖಿ ಎನ್ನುವ ಅಭಿದಾನಕ್ಕೆ ಪಾತ್ರರಾದರೂ, ಪ್ರಚಾರದ ಬೆಳಕಿಗೆ ಬೆಳವಾಡಿ ಬಂದದ್ದು ಅಷ್ಟಕ್ಕಷ್ಟೆ. ಆತ ಮಹಾನ್‌ ಸಂಕೋಚದ ಪ್ರಾಣಿ ಎನ್ನುವುದು ಕೂಡ ಅದಕ್ಕೆ ಕಾರಣವಿರಬಹುದು. ಮಾತು ಬೆಳ್ಳಿ, ಮೌನ ಬಂಗಾರ, ಕೆಲಸ ವಜ್ರ ಎನ್ನುವುದು ಬೆಳವಾಡಿಗೆ ಹೊಂದುತ್ತದೆ.

ಈ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ 'ಗರ್ವ' ಧಾರಾವಾಹಿ ನೋಡಿದ ಪ್ರೇಕ್ಷಕರು ಮಾತ್ರ ಬೆಳವಾಡಿಯನ್ನು ಯಾವತ್ತಿಗೂ ಮರೆಯಲಾರರು. ಜಾಗತೀಕರಣದ ಹಿನ್ನೆಲೆಯಲ್ಲಿ ದೇಶೀಯರು ಎದುರಿಸಬೇಕಾದ ತವಕ ತಲ್ಲಣಗಳನ್ನು ಬೆಳವಾಡಿ ಅದ್ಭುತವಾಗಿ ಚಿತ್ರಿಸಿದ್ದರು. ರೈತರ ಸಂಕಷ್ಟಗಳನ್ನು ನಗರದ ಜನತೆಗೆ ಮುಟ್ಟಿಸುವ ಪ್ರಯತ್ನ ನಡೆಸಿದ್ದರು. ಜಾಗತೀಕರಣ, ಷೇರು ಮಾರುಕಟ್ಟೆ, ಕೃಷಿ ವಿಮೆ, ಮಾಹಿತಿ ತಂತ್ರಜ್ಞಾನ, ಮುಂತಾದ ಅರಗದ ಸರಕುಗಳನ್ನು ಮನುಷ್ಯ ಸಂಬಂಧಗಳ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ತಲುಪಿಸುವ ಪ್ರಯತ್ನದ ಮೊಟ್ಟ ಮೊದಲ ಕನ್ನಡ ಧಾರಾವಾಹಿ-ಗರ್ವ. ಆದರೆ, ಈ ಟೀವಿಗೇಕೊ ಗರ್ವ ಪಥ್ಯವಾಗಲಿಲ್ಲ. ಧಾರಾವಾಹಿ ನಿಂತಿತು.

ಟೀಆರ್‌ಪಿ ರೇಟಿಂಗ್‌ ಲೆಕ್ಕಾಚಾರದ ವಿಷಸುಳಿಯಲ್ಲಿ ಗರ್ವಭಂಗವಾಯಿತು. ಆದರೆ ಬೆಳವಾಡಿ ಟೀಮು ಸೋಲೊಪ್ಪಿಕೊಂಡಿರಲಿಲ್ಲ. ಈ ಟೀವಿ ಬೇಡ ಎಂದರೇನು, ಇಂದಲ್ಲಾ ನಾಳೆ ಸಿನಿಮಾ ಮಾಡುತ್ತೇವೆ ಎಂದು ಬೆಳವಾಡಿ ತೊಡೆ ತಟ್ಟಿದ್ದರು. ಮಾತು ಉಳಿಸಿಕೊಳ್ಳುವ ಸಲುವಾಗಿ ಎಂಬಂತೆ ಈಗ ಚಿತ್ರ ನಿರ್ಮಿಸುತ್ತಿದ್ದಾರೆ.

'ಮೊದಲಿಗೆ ಕನ್ನಡದಲ್ಲೇ ಸಿನಿಮಾ ಮಾಡೋಣ ಎಂದುಕೊಂಡಿದ್ದೆ. ಆದರೆ, ಚಿತ್ರದ ಸಬ್ಜೆಕ್ಟ್‌ ಯೂನಿವರ್ಸಲ್‌ ಎನ್ನಿಸಿದ್ದರಿಂದ ಇಂಗ್ಲಿಷ್‌ನಲ್ಲಿ ಮಾಡುತ್ತಿದ್ದೇನೆ. ಸಿನಿಮಾ ಸಂಸ್ಕೃತಿ ಮಾತ್ರ ಕನ್ನಡದ್ದೇ ಆಗಿರುತ್ತದೆ' ಎಂದರು ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಬೆಳವಾಡಿ.

ವರ ಮಹಾಲಕ್ಷ್ಮಿ ಹಬ್ಬಕ್ಕೆ ಎರಡು ದಿನ ಮೊದಲು, ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಬೆಂಗಳೂರಿನ ಬಿಟಿಎಂ ಬಡಾವಣೆಯ ಮನೆಯಾಂದರಲ್ಲಿ ಚಿತ್ರದ ಷೂಟಿಂಗ್‌ ಪ್ರಾರಂಭವಾಯಿತು. ರೇಷ್ಮೆ ಪಂಚೆ ಉಟ್ಟು ಶಾಲು ಹೊದ್ದಿದ್ದ ಅನಂತನಾಗ್‌ ಹಾಗೂ ಸುಹಾಸಿನಿಯಾಂದಿಗೆ ಪೂಜಾ ಕಾರ್ಯದಲ್ಲಿ ತೊಡಗುವ ದೃಶ್ಯದೊಂದಿಗೆ ಚಿತ್ರೀಕರಣ ಪ್ರಾರಂಭ.

ಗರ್ವದ ಮುಂದಿನ ಭಾಗ ?
ಬೆಳವಾಡಿ ನಿರ್ಮಿಸುತ್ತಿರುವ ಇಂಗ್ಲಿಷ್‌ ಚಿತ್ರದ ಹೆಸರು- Stumble. ಮಾಹಿತಿತಂತ್ರಜ್ಞಾನದಂಥ ಕ್ಷೇತ್ರಗಳಿಗೆ ಮಧ್ಯಮ ವರ್ಗದ ಜನ ಒಮ್ಮೆಗೇ ಮುಗಿಬಿದ್ದರೆ ಏನಾಗುತ್ತದೆ? ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌)ಯ ಸಮಸ್ಯೆಗಳೇನು? ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಣ ಹೂಡಿದ ಮಂದಿಯ ಪೀಕಲಾಟಗಳೇನು? ಎನ್ನುವ ಸಿಕ್ಕುಗಳ ವಿಶ್ಲೇಷಿಸುತ್ತಾ ಚಿತ್ರದ ಕಥೆ ಸಾಗುತ್ತದೆ. ಬೆಳವಾಡಿ ಹೇಳಿದ ಕಥೆಯ ತಿರುಳು 'ಗರ್ವ'ದ ಲಹರಿಯಲ್ಲೇ ಸಾಗುತ್ತದೆ.ಸಮಕಾಲೀನ ಆರ್ಥಿಕ ಪರಿಸ್ಥಿತಿ ಹಾಗೂ ಅದು ಮಧ್ಯಮ ವರ್ಗದ ಮೇಲೆ ಅದು ಉಂಟು ಮಾಡುವ ಪ್ರಭಾವದ ಕುರಿತೂ ಚಿತ್ರ ಬೆಳಕು ಚೆಲ್ಲುತ್ತದೆ.

Stumbleನಲ್ಲಿನ ಪಾತ್ರದ ಬಗ್ಗೆ ಅನಂತನಾಗ್‌ಗೆ ಇನ್ನಿಲ್ಲದ ಹೆಮ್ಮೆ. 'ಇದು ಮಾಮೂಲಿ ಪಾತ್ರವಲ್ಲ, ಇದೊಂದು ಅಸಾಧಾರಣವಾದ ಪಾತ್ರ. ಚಿತ್ರದಲ್ಲಿ ಮಧ್ಯಮ ವರ್ಗದ ಬ್ಯಾಂಕ್‌ ನೌಕರನ ಪಾತ್ರ ನನ್ನದು. ನನ್ನ ಮಗ ವಿದೇಶದಲ್ಲಿರುತ್ತಾನೆ. ನಾನು ವಿಆರ್‌ಎಸ್‌ ತೆಗೆದುಕೊಂಡು, ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿ ಎಲ್ಲವನ್ನೂ ಕಳೆದುಕೊಳ್ಳುತ್ತೇನೆ. ಇದೇ ಸಮಯದಲ್ಲಿ ಲೇ ಆಫ್‌ಗೆ ಬಲಿಯಾದ ಮಗ ಮನೆ ಸೇರುತ್ತಾನೆ..' ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡ ಅನಂತ್‌, 'ಈ ರೀತಿಯ ಪಾತ್ರ ನಾನು ಯಾವಾಗಲೂ ಬಯಸುವಂಥದ್ದು' ಎಂದು ಬೀಗಿದರು.

ಇಂಗ್ಲಿಷ್‌ನಲ್ಲಿ ಸಿನಿಮಾ ನಿರ್ಮಿಸುತ್ತಿರುವುದನ್ನು ಅನಂತನಾಗ್‌ ಬಲವಾಗಿ ಸಮರ್ಥಿಸಿಕೊಂಡರು. ಕನ್ನಡದ್ದು ಸೀಮಿತ ಮಾರುಕಟ್ಟೆ. ಕರ್ನಾಟಕದಲ್ಲಿ ಮಾತ್ರ ಕನ್ನಡ. ಆದರೆ ಚಿತ್ರದ ಸಂದೇಶವನ್ನು ಭಾರತಾದ್ಯಂತ ಹಾಗೂ ವಿದೇಶದಲ್ಲೂ ತಲುಪಿಸಬೇಕೆನ್ನುವುದು ನಮ್ಮ ಉದ್ದೇಶ. ಆ ಕಾರಣದಿಂದಾಗಿಯೇ ಚಿತ್ರವನ್ನು ಇಂಗ್ಲಿಷ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತರ್ಕ ಹೂಡಿದರು ಅನಂತ್‌.

ನಟಿ ಸುಹಾಸಿನಿ ಕೂಡ ತಮ್ಮ ಪಾತ್ರದ ಬಗ್ಗೆ ಗರ್ವ ವ್ಯಕ್ತಪಡಿಸಿದರು. ಅನಂತನಾಗ್‌ ಜೊತೆ ಅವರು ನಟಿಸುತ್ತಿರುವ ನಾಲ್ಕನೇ ಚಿತ್ರ ಇದಂತೆ.

Stumble ಮೂಲಕ ಬೆಳವಾಡಿ ದೊಡ್ಡದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು ಗೆಲ್ಲಲೆಂದು ಹಾಗೂ ಮುಂದಿನ ಚಿತ್ರವನ್ನು ಕನ್ನಡದಲ್ಲೇ ನಿರ್ಮಿಸಲೆಂದು ಹಾರೈಸೋಣ.

English summary
popular Kannada theatre person and director Prakash Belawadi makes Anant Nag and Suhasini stumble

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X