»   » ಸಿರಿವಂತ : ದೇವೇಗೌಡರು ಟಾಕೀಸಿಗೆ ಬಂದ್ರು!

ಸಿರಿವಂತ : ದೇವೇಗೌಡರು ಟಾಕೀಸಿಗೆ ಬಂದ್ರು!

Posted By:
Subscribe to Filmibeat Kannada

ಒಂದು ಕಡೆ ಜನಾರ್ದನ ರೆಡ್ಡಿ ಗಣಿ ಕಪ್ಪದ ಸಿ.ಡಿ.ಗಳನ್ನು ದಿನಕ್ಕೊಂದರಂತೆ ಸಿಡಿಸಿ, ದೇವೇಗೌಡರ ಪುತ್ರ ಕುಮಾರಸ್ವಾಮಿ ಸರ್ಕಾರವನ್ನು ಅಲುಗಾಡಿಸುತ್ತಿದ್ದಾರೆ. ಇತ್ತ ದೇವೇಗೌಡರು, ವಿಷ್ಣುವರ್ಧನ್‌ ಅಭಿನಯದ ‘ಸಿರಿವಂತ’ ಸಿನಿಮಾ ನೋಡಿ, ತೃಪ್ತಿಯಿಂದ ತೇಗುತ್ತಿದ್ದಾರೆ!

ಅವರಿಗೇನು ಬಂತು, ಸಿನಿಮಾ ಶೋಕಿ ಅನ್ನುವಂತಿಲ್ಲ. ಅವರು ನೋಡಿದ ಸಿನಿಮಾಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಅವರು ನೋಡಿದ ಎಲ್ಲಾ ಸಿನಿಮಾಗಳು ಶತದಿನೋತ್ಸವದ ಸಂಭ್ರಮ ಅನುಭವಿಸಿವೆ! ತಮ್ಮ ನಿದ್ರೆ, ಆಕಳಿಕೆ.. ಕ್ಷಮಿಸಿ ಕ್ಷಮಿಸಿ, ತಮ್ಮ ರಾಜಕಾರಣ, ರೈತ ಕಾಳಜಿ ಮಧ್ಯೆ ಅವರಿಗೆ ಸಿನಿಮಾ ನೋಡೋದಕ್ಕೆ ಕಾಲದ ಅಭಾವ.

ಈ ಹಿಂದೆ ಅವರು ನೋಡಿದ್ದ ಭಕ್ತಕುಂಬಾರ ಮತ್ತು ಬಂಗಾರದ ಮನುಷ್ಯ ಸಕತ್ತು ಯಶಸ್ಸು ಪಡೆದದ್ದು ಎಲ್ಲರಿಗೂ ಗೊತ್ತು. ಆನಂತರ ದೇವೇಗೌಡರು ಸೂರ್ಯವಂಶ, ಚಂದ್ರಚಕೋರಿ(ಈ ಚಿತ್ರಗಳ ನಿರ್ಮಾಪಕರು; ಕುಮಾರಸ್ವಾಮಿ!) ನೋಡಿದರು. ಅವು ಯಶಸ್ಸಿನ ಗುರಿ ಮುಟ್ಟಿದವು. ಈಗ ‘ಸಿರಿವಂತ’ನ ಸರದಿ?

‘ಇದು ರಾಷ್ಟ್ರಪ್ರಶಸ್ತಿಗೆ ಅರ್ಹವಾದ ಕನ್ನಡದ ಮೇರು ಚಿತ್ರ. ವಿಷ್ಣುವರ್ಧನ್‌ ಅಭಿನಯ ಕಂಡು ನಾ ಸೋತು ಹೋದೆ. ರಾಜ್‌ ಕುಮಾರ್‌ರಂತೆಯೇ ವಿಷ್ಣು ಚೆನ್ನಾಗಿ ಅಭಿನಯಿಸಬಲ್ಲರು’ ಎಂದು ದೇವೇಗೌಡರು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಈ ಮಳೆಯಲ್ಲಿ ನೆಂದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ನಿರ್ದೇಶಕ ಎಸ್‌.ನಾರಾಯಣ್‌ ರೋಮಾಂಚಿತರಾಗಿದ್ದಾರೆ! ಅದು ಅವರ ಪಾಲಿನ ಅಮೃತಧಾರೆ!

ಚಿತ್ರ ಸೆ.28ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗಲಿದೆ. ‘ಸಿರಿವಂತ’, ಯಾರಿಗೆ ಸಿರಿತರುವನೋ ಟಾಕೀಸಿಗೆ ಬರಲಿ ನೋಡೋಣ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅವರ ಮರೆಯಲ್ಲಿ ಕಾಂಗ್ರೆಸ್ಸಿಗರು!

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada